ಫೆಬ್ರವರಿಯಲ್ಲಿ ಭಾರತದ ಸರಕು ರಫ್ತುಗಳ ಬಿಲ್ $೩೩.೮ ಬಿಲಿಯನ್ ಆಗಿದ್ದು ಇದು ಒಂದು ವರ್ಷದ ಹಿಂದಕ್ಕೆ ಹೋಲಿಸಿದರೆ ಶೇ. ೮.೮ರಷ್ಟು ಕುಸಿದಿದೆ. ಕಳೆದ ಐದು ತಿಂಗಳಲ್ಲಿ ರಫ್ತು ಕುಸಿಯುತ್ತಿರುವುದು ಇದು ಮೂರನೇ ಬಾರಿ. ಇದಕ್ಕಿಂತಲೂ ತೀವ್ರವಾದ ಕುಸಿತ ದಾಖಲಾಗಿದ್ದು ಅಕ್ಟೊಬರ್ ೨೦೨೨ರಲ್ಲಿ ಮಾತ್ರ. ತೈಲ ರಫ್ತುಗಳಲ್ಲಿ ಶೇ. ೨೯ರಷ್ಟು ಕುಸಿತ, ರಾಸಾಯನಿಕ ಸಾಗಣೆಯಲ್ಲಿ ಶೇ. ೧೨ರಷ್ಟು ಕುಸಿತ ಮತ್ತು ಎಂಜಿನಿಯರಿಂಗ್ ಸರಕುಗಳ ಹೊರಹರಿವುಗಳಲ್ಲಿ ಶೇ. ೧೦ರಷ್ಟು ಸಂಕೋಚನವು ಒಟ್ಟು ಕುಸಿತದ ಅರ್ಧಕ್ಕೆ ಕಾರಣವಾದರೆ, ಜಾಗತಿಕ ಬೇಡಿಕೆಯ ಕುಂಠಿತದ ಪರಿಣಾಮಗಳು ಭಾರತದ ಪ್ರಮುಖ ೩೦ ರಫ್ತು ವಸ್ತುಗಳ ಪೈಕಿ ಇನ್ನೂ ೧೩ ವಲಯಗಳಲ್ಲಿ ಕುಸಿತಕ್ಕೆ ಕಾರಣವಾಗಿದೆ. ಇದೆಲ್ಲವೂ ಸೇರಿ ಫೆಬ್ರವರಿಯಲ್ಲಿ ಭಾರತದ ರಫ್ತು ತೀವ್ರ ಕುಸಿತ ದಾಖಲಿಸಿತು. ಇದರ ಹೊರತಾಗಿಯೂ ಫೆಬ್ರವರಿಯ ರಫ್ತುಗಳು ಅಕ್ಟೋಬರ್‌ಗಿಂತಲೂ ಶೇ. ೭.೩ರಷ್ಟು ಹೆಚ್ಚು ಇದೆ. ಆದರೆ ತಕ್ಷಣದ ದೃಷ್ಟಿಕೋನವು ೨೦೨೨ರ ಕೊನೆಯ ತ್ರೈಮಾಸಿಕದಲ್ಲಿ ಚಾಲ್ತಿಯಲ್ಲಿದ್ದ ‘ಪ್ರಪಂಚದ ಬಹುಭಾಗಗಳು ಆರ್ಥಿಕ ಹಿಂಜರಿತಕ್ಕೆ ಜಾರುತ್ತಿದೆ’ ಎಂಬ ನಿರಾಶಾದಾಯಕ ನಿಲುವಿಗೆ ಹತ್ತಿರವಿದೆ. ಕಳೆದ ಎರಡು ತಿಂಗಳುಗಳಲ್ಲಿ ಪ್ರಮುಖ ಮಾರುಕಟ್ಟೆಗಳಿಂದ ಬಂದ ಆರ್ಥಿಕತೆಯ ದತ್ತಾಂಶಗಳು ಆಶಾದಾಯಕವಾಗಿದ್ದು, ಜಗತ್ತು ೨೦೨೩ರಲ್ಲಿ ಬಂದಪ್ಪಳಿಸಲಿದೆ ಎಂದು ಅಂದಾಜಿಸಲಾಗಿದ್ದ ಆರ್ಥಿಕ ಹಿಂಜರಿತದಿಂದ ತಪ್ಪಿಸಿಕೊಂಡುಬಿಡಬಹುದು ಎಂಬ ಆಸೆ ಮೂಡಿತ್ತು. ಆದರೆ ಮಾರ್ಚ್ ೧೫ರ ದತ್ತಾಂಶಗಳು ಈ ಆಸೆಯನ್ನು ಸದ್ಯಕ್ಕಂತೂ ಚಿವುಟಿ ಹಾಕಿದಂತಿದೆ.
ಭಾರತದ ಅತಿ ದೊಡ್ಡ ರಫ್ತು ತಾಣವಾದ ಯುಎಸ್ ಅಲ್ಲಿ ಚಿಲ್ಲರೆ ಮಾರಾಟವು ಜನವರಿಯಲ್ಲಿ ಆಶ್ಚರ್ಯಕರವಾಗಿ ಶೇ. ೩ರಷ್ಟು ಏರಿಕೆ ಕಂಡು ಆಸೆ ಮೂಡಿಸಿತ್ತಾದರೂ ಫೆಬ್ರವರಿಯಲ್ಲಿ ಕುಸಿತ ಕಂಡಿದೆ. ಹಣದುಬ್ಬರವನ್ನು ನಿಯಂತ್ರಿಸಲು ಯುಎಸ್ ಫೆಡರಲ್ ರಿಸರ್ವ್ ಹೆಣಗಾಡುತ್ತಿರುವುದರ ಮಧ್ಯೆ ದೇಶದ ಎರಡು ಬ್ಯಾಂಕುಗಳು ದಿವಾಳಿಯೆದ್ದಿರುವುದು ಮತ್ತು ಯುರೋಪಿನ ಬ್ಯಾಂಕ್ ಕ್ರೆಡಿಟ್ ಸ್ಯುಸ್ಸಿ ಅಮೆರಿಕಾದ ಆರ್ಥಿಕತೆಯ ದುರ್ಬಲತೆಗಳನ್ನು ಬಹಿರಂಗಪಡಿಸಿರುವುದು, ಈ ಕುಸಿತವು ಈ ಕೂಡಲೇ ಆವೇಗ ಕಳೆದುಕೊಳ್ಳುವುದಿಲ್ಲ ಎಂದು ಸೂಚಿಸುತ್ತದೆ. ಬುಧವಾರ ಬ್ರೆಂಟ್ ಕಚ್ಚಾ ತೈಲ ಬೆಲೆ ಸುಮಾರು ಶೇ. ೫ರಷ್ಟು ಕುಸಿಯಿತು. ಈ ಹೊಸ ವರ್ಷ ಆಶ್ಚರ್ಯಕರವಾಗಿ ಆಶಾದಾಯಕವಾಗಿ ಶುರುವಾದರೂ ಆರ್ಥಿಕ ಹಿಂಜರಿತದ ಅಪಾಯಗಳು ಸ್ಪಷ್ಟ ಗೋಚರ. ಈಗಾಗಲೇ ಎರಡು ತ್ರೈಮಾಸಿಕಗಳಿಂದ ಉತ್ಪಾದನೆಯು ಕುಗ್ಗುತ್ತಿದ್ದು ಸರಕು ರಫ್ತು ಕೂಡಾ ಹೀಗೆ ಕುಸಿಯುತ್ತಾ ಸಾಗಿದರೆ ಕಾರ್ಖಾನೆಗಳಲ್ಲಿ ಉದ್ಯೋಗ ನಷ್ಟ ಮತ್ತು ದೇಶೀಯ ಬಳಕೆಯಲ್ಲಿ ಕುಸಿತ ಕಟ್ಟಿಟ್ಟ ಬುತ್ತಿ. ಈಗಾಗಲೇ ಮೂರು ತಿಂಗಳ ಸಂಕೋಚನದ ಪ್ರವೃತ್ತಿಯನ್ನು ಮುಂದುವರೆಸುತ್ತಾ ಫೆಬ್ರವರಿಯಲ್ಲಿ ಆಮದುಗಳು ಶೇ. ೮.೨ರಷ್ಟು ಕುಸಿತವನ್ನು ದಾಖಲಿಸಿದ್ದು ಇದು ಮೂರು ತಿಂಗಳಲ್ಲೇ ಅತಿ ತೀಕ್ಷ್ಣ ಕುಸಿತ. ಒಟ್ಟು ಆಮದು ಬಿಲ್ $೫೧.೩ ಶತಕೋಟಿ ಇದ್ದು ಇದು ಕಳೆದ ಒಂದು ವರ್ಷದಲ್ಲೇ ಅತಿ ಕಡಿಮೆ. ಇದು ಜಾಗತಿಕ ಆಘಾತಗಳಿಂದ ದೇಶದ ಆರ್ಥಿಕತೆಯನ್ನು ರಕ್ಷಿಸುತ್ತದೆ ಎಂದು ಬಯಸಿದ್ದ ದೇಶೀಯ ಬೇಡಿಕೆಯ ಪರಿಸ್ಥಿತಿಯೂ ಉತ್ತಮವಾಗಿಲ್ಲ ಎಂದು ಸೂಚಿಸುತ್ತದೆ. ಯುಕ್ರೇನ್ ಯುದ್ಧದ ನಂತರ ತೈಲ ಮತ್ತು ಅಡುಗೆ ಎಣ್ಣೆಯ ಬೆಲೆಗಳು ಗಗನಕ್ಕೇರಿದ್ದು ಅದು ಕಡಿಮೆ ಆಗಿರುವ ಪರಿಣಾಮವೂ ಆತಿ ಕಡಿಮೆ ಮೊತ್ತದ ಆಮದಿಗೆ ಕಾರಣವಾಗಿರಬಹುದು. ದುರ್ಬಲ ರಫ್ತುಗಳ ನಡುವೆ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಡಲು ಸರ್ಕಾರವು ಅನಿವಾರ್ಯವಲ್ಲದ ಆಮದುಗಳನ್ನು ತಡೆಯಲು ನೋಡುತ್ತಿದೆ. ಆದರೆ ಇದು ಅಷ್ಟು ಸುಲಭ ಅಲ್ಲ. ಇದರಲ್ಲಿ ಗುಣಮಟ್ಟ, ಬೆಲೆ ಮತ್ತು ಪೂರೈಕೆ ಸರಪಳಿ ಸಂಪರ್ಕಗಳಂತಹ ಅಂಶಗಳು ಸಹ ಮುಖ್ಯವಾಗುತ್ತವೆ ಮತ್ತು ಯಾವುದೇ ತಪ್ಪು ಹೆಜ್ಜೆಗಳು ಗ್ರಾಹಕರ ಮತ್ತು ಹೂಡಿಕೆದಾರರ ಆಯ್ಕೆಯನ್ನು ನಿರ್ಬಂಧಿಸುತ್ತದೆ. ಕಳೆದ ಸೆಪ್ಟೆಂಬರ್‌ನ ದಾಖಲೆಯ $೨೯.೨ ಶತಕೋಟಿ ಮಟ್ಟದಿಂದ ವಿತ್ತೀಯ ಕೊರತೆಯು ಜನವರಿ ಮತ್ತು ಫೆಬ್ರವರಿಯಲ್ಲಿ ಇಳಿಕೆ ಆಗಿರುವುದರಿಂದ ರಫ್ತುದಾರರಿಗೆ ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು ಮತ್ತು ವೇಗವಾಗಿ ಬದಲಾಗುವ ಜಾಗತಿಕ ಮಾರುಕಟ್ಟೆಗಳಿಗೆ ಚುರುಕಾಗಿ ಸ್ಪಂದಿಸಲು ಅನುವಾಗುವಂತೆ ಸರ್ಕಾರದ ನೀತಿ ಇರಬೇಕು. ೨೦೧೫-೨೦ರ ವಿದೇಶಿ ವ್ಯಾಪಾರ ನೀತಿಯ ತಿದ್ದುಪಡಿಗಳನ್ನು ಯಾವುದೇ ಕಾರಣಕ್ಕೂ ಇನ್ನು ವಿಳಂಬ ಮಾಡಬಾರದು.
This editorial has been translated from English, which can be read here.
COMMents
SHARE