ಸುಮಾರು ಎಂಟು ತಿಂಗಳ ನಂತರ ಕಳೆದ ಶನಿವಾರ ಜಿಎಸ್‌ಟಿ ಕೌನ್ಸಿಲ್ ಮೊದಲ ಬಾರಿಗೆ ಮುಖತಃ ಸಭೆ ಸೇರಿತು. ೨೦೧೭ರಲ್ಲಿ ಪರಿಚಯಿಸಿದ ಜಿಎಸ್‌ಟಿ ತೆರಿಗೆ ಪದ್ಧತಿಯಡಿ ವಿವಾದಗಳನ್ನು ಪರಿಹರಿಸಲು ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸುವ ಬಗ್ಗೆ ಒಮ್ಮತ ಮೂಡಿತು. ರಾಜ್ಯಗಳೊಂದಿಗೆ ಸಮಾಲೋಚನೆಯಲ್ಲಿ ಕೆಲವು ಸಣ್ಣ ಬದಲಾವಣೆಗಳೊಂದಿಗೆ ಮುಂದಿನ ತಿಂಗಳು ಸಂಸತ್ತಿನಲ್ಲಿ ಪರಿಚಯಿಸುವ ಹಣಕಾಸು ಮಸೂದೆಯಲ್ಲಿ ನ್ಯಾಯಮಂಡಳಿಗಳಿಗೆ ಕಾನೂನಾತ್ಮಕ ಮಾನ್ಯತೆ ಒದಗಿಸಲು ಸಚಿವಾಲಯ ಆಶಿಸಿದೆ. ಇದು ಸದ್ಯ ನ್ಯಾಯಾಯಲಯಗಳ ಹೊರೆ ಹೆಚ್ಚಿಸುತ್ತಿರುವ ಜಿಎಸ್‌ಟಿ ವಿವಾದಗಳ ತ್ವರಿತ ವಿಲೇವಾರಿಯ ಭರವಸೆ ಹುಟ್ಟುಹಾಕುತ್ತದೆ. ಆದರೆ ‘ಒಂದು ರಾಷ್ಟ್ರ, ಒಂದು ತೆರಿಗೆ’ ಭರವಸೆಯ ಪ್ರಮುಖ ಭಾಗವಾದ ಈ ನ್ಯಾಯಮಂಡಳಿಯ ರಚನೆಯನ್ನು ಇಷ್ಟು ವರ್ಷ ವಿಳಂಬಿಸಿದ ಕಾರಣವೇ ಅರ್ಥವಾಗುವುದಿಲ್ಲ. ಈ ಸಭೆಯ ನಿರ್ಧಾರದ ನಂತರ ಪೆನ್ಸಿಲ್ ಶಾರ್ಪನರ್‌ಗಳೂ ಸೇರಿದಂತೆ ಕೆಲ ವಸ್ತುಗಳ ಮೇಲಿನ ತೆರಿಗೆ ಕಡಿತದಿಂದ ಅವು ಅಗ್ಗವಾಗಲಿವೆ. ಸಣ್ಣ ತೆರಿಗೆದಾರರಿಂದ ವಿಳಂಬವಾದ ಫೈಲಿಂಗ್‌ಗಳಿಗೆ ದಂಡ ಕಡಿತಗೊಳಿಸಲಾಗಿದೆ. ಗುಟ್ಖಾದಂತಹ ತೆರಿಗೆ-ವಂಚನೆ ಹೆಚ್ಚಿರುವ ವಲಯಗಳಿಗೆ ಹೊಸ ವ್ಯವಸ್ಥೆಯ ಪರಿಣಾಮಗಳನ್ನು ಅಳೆಯಲು, ಅವುಗಳ ಬಗೆಗಿನ ಅಧಿಸೂಚನೆಗೆ ಕಾಯಬೇಕಷ್ಟೆ. ಆನ್‌ಲೈನ್ ಗೇಮಿಂಗ್ ಮತ್ತು ಕ್ಯಾಸಿನೊಗಳ ಮೇಲಿನ ತೆರಿಗೆಯ ವಿಷಯದ ಚರ್ಚೆ ಬಹುದಿನಗಳಿಂದ ಬಾಕಿ ಉಳಿದಿದೆ. ಈ ಬಾರಿ ಈ ಕುರಿತು ಪರಿಶೀಲನೆ ನಡೆಸುತ್ತಿರುವ ಸಚಿವರ ಗುಂಪಿನ ಅಧ್ಯಕ್ಷರಿಗೆ ವಿಧಾನಸಭೆ ಚುನಾವಣೆ ಎದುರಾಗಿರುವುದರಿಂದ ಅವರು ಈ ಕುರಿತು ಇನ್ನೂ ಕೆಲಸ ಮಾಡಲಾಗಿಲ್ಲ ಎಂಬ ಕಾರಣ ನೀಡಲಾಗಿದೆ. ಹೀಗಾದರೆ, ಈ ವರ್ಷ ಒಂಬತ್ತು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು ಜಟಿಲ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದು ಸುಲಭವಲ್ಲ ಎಂದು ತೋರುತ್ತದೆ.
ಸಂಕೀರ್ಣ ಜಿಎಸ್‌ಟಿ ದರದ ಸರಳೀಕರಣವು ತಡವಾಗುತ್ತಿರುವುದು ಕಳವಳಕಾರಿಯಾಗಿದೆ. ೨೦೨೧ರ ಕೊನೆಯಲ್ಲಿ ಜಿಎಸ್‌ಟಿ ಸುಂಕ ವ್ಯವಸ್ಥೆಯ ವೈಪರೀತ್ಯಗಳನ್ನು ಪರಿಷ್ಕರಿಸಿ ಕಡಿಮೆ ದರಗಳ ನೂತನ ವ್ಯವಸ್ಥೆಯನ್ನು ಸೂಚಿಸಲು ಸಚಿವರ ಗುಂಪನ್ನು ರಚಿಸಲಾಗಿತ್ತು. ೨೦೧೭-೨೧ರ ನಡುವೆ ತಿಳಿದೋ ತಿಳಿಯದೆಯೋ ಮಾಡಿದ ತೆರಿಗೆ ದರ ಕಡಿತದಿಂದ ಜಿಎಸ್‌ಟಿಯ ಒಟ್ಟು ಆದಾಯ ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂದು ಕೌನ್ಸಿಲ್ ಗೆ ತಿಳಿಸಲಾಯಿತು. ಆದಾಯ ತಟಸ್ಥ ತೆರಿಗೆ ದರ ಶೇ. ೧೫.೫ ಆದರೆ, ಸದ್ಯ ಸರಾಸರಿ ತೆರಿಗೆ ದರ ಶೇ. ೧೨ರಷ್ಟಿದೆ. ಕಳೆದ ಜೂನ್‌ನಲ್ಲಿ ಸಚಿವರ ಗುಂಪು ಸೂಚಿಸಿದಂತೆ ಕೆಲವು ವೈಪರೀತ್ಯಗಳನ್ನು ಸರಿಪಡಿಸಲಾಯಿತು. ಆದರೆ ಹೆಚ್ಚುತ್ತಿರುವ ಹಣದುಬ್ಬರದ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಯು ಹೆಚ್ಚಿನ ತೆರಿಗೆ ಹೊರೆ ಹೊರಿಸುವುದರಿಂದ ಅದನ್ನು ಮುಂದೂಡುತ್ತಾ ಬರಲಾಗಿದೆ. ದರ ಸುಧಾರಣೆಗಳ ಕುರಿತಾದ ಅಂತಿಮ ವರದಿಯು ಇನ್ನೂ ಬಂದಿಲ್ಲ. ಏತನ್ಮಧ್ಯೆ ಹಣದುಬ್ಬರ ತಲೆ ನೋವಾಗಿ ಪರಿಣಮಿಸಿದೆ. ಒಂಬತ್ತು ರಾಜ್ಯ ಚುನಾವಣೆಗಳೊಂದಿಗೆ ಈ ವರ್ಷವೇ ಚುನಾವಣಾ ಪರ್ವ ಆರಂಭವಾಗಿದ್ದು, ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗಳವರೆಗೆ ದರ ಪರಿಷ್ಕರಣೆಗೆ ಕೈ ಹಾಕುವುದು ಅನುಮಾನ. ಉತ್ತಮ ಅನುಸರಣೆ ಮತ್ತು ಹಣದುಬ್ಬರವು ಸರಾಸರಿ ಜಿಎಸ್‌ಟಿ ಆದಾಯವನ್ನು ಹೆಚ್ಚಿಸಿದ್ದು, ದರ ಸರಳೀಕರಣದ ತುರ್ತು ಇಲ್ಲವಾಗಿಸಿರಬಹುದು. ಆದರೆ ಮನೆ ಅಥವಾ ರಸ್ತೆ ನಿರ್ಮಿಸಲು ಬಳಸುವ ಸಿಮೆಂಟಿನಂತಹ ಅತ್ಯಗತ್ಯ ವಸ್ತುವಿನ ಮೇಲೆ ಶೇ. ೨೮ರಷ್ಟು ಜಿಎಸ್‌ಟಿ ಕಟ್ಟುತ್ತಿರುವ ತೆರಿಗೆದಾರರಿಗೆ ದರ ಸರಳೀಕರಣ ತುರ್ತು ಅಗತ್ಯವಾಗಿದೆ. ಆದರೆ ಅದಕ್ಕೆ ಬಹುಶಃ ೨೦೨೫ರವೆರೆಗೆ ಕಾಯಬೇಕಾಗಬಹುದು.
This editorial has been translated from English, which can be read here.
Published - February 21, 2023 10:39 am IST