ಫೆಬ್ರವರಿ ೨೭ ರ ಚುನಾವಣೆಯ ಹೊಸ್ತಿಲಲ್ಲೂ ನ್ಯಾಷನಲ್ ಪೀಪಲ್ಸ್ ಪಾರ್ಟಿಯ (ಎನ್‌ಪಿಪಿ) ಅಭ್ಯರ್ಥಿ ಒಬ್ಬರು ಪಕ್ಷ ಬದಲಿಸಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ನಿಂತಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಹಾರಿದರು. ೨೦೧೮ರಲ್ಲಿ ಕಾಂಗ್ರೆಸ್ ೨೧ ಸ್ಥಾನಗಳನ್ನು, ಎನ್‌ಪಿಪಿ ೨೦, ಬಿಜೆಪಿ ೨ ಮತ್ತು ಉಳಿದ ಸ್ಥಾನಗಳನ್ನು ಪ್ರಾದೇಶಿಕ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದರು. ಸದ್ಯ ಚುನಾವಣೆ ನಡೆಯಲಿರುವ ಮೂರು ಈಶಾನ್ಯ ರಾಜ್ಯಗಳ ಪೈಕಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇರುವುದು ಮೇಘಾಲಯದಲ್ಲಿ ಮಾತ್ರ. ಒಂದು ಕಾಲದಲ್ಲಿ ರಾಜ್ಯದ ಪ್ರಮುಖ ರಾಜಕೀಯ ಶಕ್ತಿ ಆಗಿದ್ದ ಕಾಂಗ್ರೆಸ್ ಇಂದು ದಯನೀಯ ಸ್ಥಿತಿಯಲ್ಲಿದೆ. ೨೦೧೮ರಲ್ಲಿ ಕೂಡ ೨೧ ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ ಇಂದು ಕಾಂಗ್ರೆಸ್ಸಿನಲ್ಲಿ ಒಬ್ಬ ಶಾಸಕರೂ ಇಲ್ಲ. ಬಿಜೆಪಿ ಎರಡಂಕಿ ಸ್ಥಾನಗಳನ್ನಾದರೂ ಗೆಲ್ಲುವ ಉದ್ದೇಶದಿಂದ ಎಲ್ಲಾ ೬೦ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ನವೆಂಬರ್ ೨೦೨೧ ರಲ್ಲಿ ೧೨ ಕಾಂಗ್ರೆಸ್ ಶಾಸಕರ ಪಕ್ಷಾಂತರದಿಂದ ರಾತ್ರೋರಾತ್ರಿ ರಾಜ್ಯದ ವಿರೋಧ ಪಕ್ಷದ ಸ್ಥಾನ ಗಿಟ್ಟಿಸಿದ ಟಿಎಂಸಿ, ೫೫ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಅತ್ಯಂತ ಪ್ರಭಾವಿ ಪ್ರಾದೇಶಿಕ ಪಕ್ಷವಾದ ಯುನೈಟೆಡ್ ಡೆಮಾಕ್ರಟಿಕ್ ಪಕ್ಷವು ೪೬ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ರಾಜ್ಯದ ರಾಜಕೀಯದಲ್ಲಿ ಮೂರು ಮಾತೃಪ್ರಧಾನ ಬುಡಕಟ್ಟುಗಳಾದ ಖಾಸಿ, ಜೈನ್ತಿಯಾ ಮತ್ತು ಗಾರೋಗಳದೇ ಪ್ರಾಬಲ್ಯ. ಜನಾಂಗೀಯವಾಗಿ ಖಾಸಿ ಮತ್ತು ಜೈನ್ತಿಯಾ ಬುಡಕಟ್ಟುಗಳು ಹತ್ತಿರವಾಗಿದ್ದು, ಗಾರೋಗಳು ರಾಜ್ಯ ರಚನೆಯ ನಂತರದ ಈ ೫೦ ವರ್ಷಗಳಲ್ಲಿ ೩೪ ವರ್ಷ ಮುಖ್ಯಮಂತ್ರಿ ಗದ್ದುಗೆಯ ಮೇಲೆ ಕೂತಿದ್ದಾರೆ.
ಗಾರೋಗಳು ಆಗಾಗ್ಗೆ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮುಂದಿಟ್ಟಿದ್ದರಾದರೂ, ಈ ಬಾರಿ ಆ ದನಿ ಕ್ಷೀಣಿಸಿದೆ. ಖಾಸಿ-ಜೈನ್ತಿಯಾ ಬೆಟ್ಟಗಳು ರಾಜ್ಯದ ೬೦ ಸ್ಥಾನಗಳಲ್ಲಿ ೩೬ ಮತ್ತು ಗಾರೋ ಬೆಟ್ಟಗಳು ೨೪ ಸ್ಥಾನಗಳನ್ನು ಒಳಗೊಂಡಿವೆ. ಗಾರೋ ಬೆಟ್ಟಗಳಲ್ಲಿ ಆಡಳಿತಾರೂಢ ಎನ್‌ಪಿಪಿ ಮತ್ತು ಪ್ರತಿಪಕ್ಷ ಟಿಎಂಸಿ ಮುಖಾಮುಖಿಯಾಗಲಿದ್ದು, ಇಲ್ಲಿ ಸ್ಪರ್ಧೆ ತೀವ್ರವಾಗಿರಲಿದೆ. ಅಸ್ಸಾಂ ಚುನಾವಣೆಯ ಪ್ರಮುಖ ವಿಷಯವಾದ ಬಾಂಗ್ಲಾದೇಶಿ ವಲಸಿಗರ ಸಮಸ್ಯೆಯು ಈ ಬಾರಿ ಮೇಘಾಲಯದಲ್ಲೂ ಸದ್ದು ಮಾಡುತ್ತಿದೆ. ಎನ್‌ಪಿಪಿ ಮತ್ತು ಬಿಜೆಪಿ ಪಕ್ಷಗಳು ಟಿಎಂಸಿಯನ್ನು ವಲಸಿಗರ ಪರ ಸಹಾನುಭೂತಿ ಹೊಂದಿರುವ ಬಂಗಾಳಿ ಪಕ್ಷವೆಂದು ಬಿಂಬಿಸಲು ಪ್ರಯತ್ನಿಸುತ್ತಿವೆ. ಟಿಎಂಸಿ ಮತ್ತು ಅದರ ಮಿತ್ರಪಕ್ಷಗಳು ಎನ್‌ಪಿಪಿಯು ದುರಾಡಳಿತ, ವಿದ್ಯುತ್, ಆರೋಗ್ಯ, ಶಿಕ್ಷಣ, ಆಹಾರ ಪೂರೈಕೆ ಮತ್ತಿತರೆ ಕ್ಷೇತ್ರಗಳಲ್ಲಿ ಬೃಹತ್ ಭ್ರಷ್ಟಾಚಾರ ಎಸಗಿದೆ ಎಂದು ಅರೋಪಿಸುತ್ತಿದ್ದಾರೆ. ಎನ್‌ಪಿಪಿ ಸರ್ಕಾರವು ಅಸ್ಸಾಂನೊಂದಿಗಿನ ಗಡಿ ಸಮಸ್ಯೆ ಪರಿಹರಿಸಲು ರಾಜ್ಯದ ಹಿತಾಸಕ್ತಿಗೆ ಮಾರಕವಾದ ಒಪ್ಪಂದ ಮಾಡಿಕೊಂಡಿದೆ ಎಂದು ಸಹ ಆರೋಪಿಸಿವೆ. ಸರ್ಕಾರದ ಭಾಗವಾಗಿದ್ದ ಮಿತ್ರಪಕ್ಷಗಳು ಆಡಳಿತಾವಧಿಯಿಂದ ಅಂತರ ಕಾಯ್ದುಕೊಳ್ಳುತ್ತಿವೆ. ಎನ್‌ಪಿಪಿ ತಮ್ಮೊಟ್ಟಿಗೆ ಯಾವುದೇ ಚರ್ಚೆ ನಡೆಸದೆ ಆಡಳಿತ ನಡೆಸಿದೆ ಎಂದು ಆರೋಪಿಸುತ್ತ ಎಲ್ಲ ಹೊಣೆಯನ್ನೂ ಎನ್‌ಪಿಪಿ ತಲೆಗೆ ಕಟ್ಟಲು ಹವಣಿಸುತ್ತಿವೆ. ಸರ್ಕಾರದ ಭಾಗವಾಗಿದ್ದ ಮಿತ್ರಪಕ್ಷಗಳೇ ಇಂದು ಅದರ ವಿರುದ್ಧ ಸ್ಪರ್ಧಿಸುತ್ತಿವೆ. ಈ ಪಕ್ಷಗಳು ಬರುವ ವಿಧಾನಸಭೆಯಲ್ಲಿ ತಮ್ಮ ಬಲ ಹೆಚ್ಚಿಸಿಕೊಂಡು ಚುನಾವಣೋತ್ತರ ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಿವೆ.
This editorial has been translated from English, which can be read here.
COMMents
SHARE