ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ಬಹುಬಾರಿ ಅಧಿವೇಶನದ ಮುಂದೂಡಿಕೆಗೆ ಕಾರಣವಾದ ಪ್ರತಿಪಕ್ಷಗಳ ೧೨ ಸದಸ್ಯರ ನಡವಳಿಕೆಯ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರು ಉಪ ಸಭಾಪತಿ ಮತ್ತು ಜೆಡಿಯು ಸಂಸದ ಹರಿವಂಶ್ ನೇತೃತ್ವದ ಹಕ್ಕು ಭಾಧ್ಯತಾ ಸಮಿತಿಗೆ ಸೂಚಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ೮೫ ನಿಮಿಷಗಳ ಭಾಷಣದ ಉದ್ದಕ್ಕೂ, ಪ್ರತಿಪಕ್ಷ ಸದಸ್ಯರು ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಆದರೆ ಕಲಾಪಗಳ ನೇರ ಪ್ರಸಾರ ಮಾಡುವ ಸಂಸದ್ ಟಿವಿ ಪ್ರತಿಪಕ್ಷಗಳನ್ನು ತೋರಿಸಲೇ ಇಲ್ಲ. ಇದಕ್ಕೂ ಮುನ್ನ ಬಿಜೆಪಿ ಸಂಸದರೊಬ್ಬರ ದೂರಿನ ಮೇರೆಗೆ ಸಂಸತ್ ನಡಾವಳಿಗಳನ್ನು ರೆಕಾರ್ಡ್ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅವರನ್ನು ಧಂಖರ್ ಅವರು ಅಮಾನತುಗೊಳಿಸಿದ್ದರು. ಸಂಸದರಿಗೆ ತಮ್ಮ ನಿಲುವನ್ನು ವಿವರಿಸಲು ಅವಕಾಶ ನೀಡದೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಇದನ್ನು ವಿರೋಧಿಸಿತು. ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ೮೮ ನಿಮಿಷಗಳ ಭಾಷಣವನ್ನು ಧಂಖರ್ ಅವರು ಹಲವು ಬಾರಿ ಮಧ್ಯಪ್ರವೇಶಿಸಿ ತಡೆದರು. ಭಾಷಣದಲ್ಲಿ ಮಾಡಿದ ಟೀಕೆಗಳಿಗೆ ಸಾಕ್ಷ್ಯ ಒದಗಿಸುವಂತೆ ಹೇಳಿದ ಅಧ್ಯಕ್ಷರ ಪುನರಾವರ್ತಿತ ನಿರ್ದೇಶನವನ್ನು ಪ್ರತಿಪಕ್ಷಗಳು ಪ್ರತಿಭಟಿಸಿವೆ. ವಿರೋಧ ಪಕ್ಷದ ಸದಸ್ಯರು ಸಂಪೂರ್ಣ ತನಿಖೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರವೇ ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಬೇಕು ಎಂದರೆ ಅದು ಆಡಳಿತ ವ್ಯವಸ್ಥೆಯ ವಿಲೋಮವಾಗುತ್ತದೆ ಎಂದು ಖರ್ಗೆ ಹೇಳಿದ್ದಾರೆ.
ಇತ್ತ ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಭಾಷಣದ ಆರು ಭಾಗಗಳನ್ನು ಕಡತದಿಂದ ತೆಗೆದುಹಾಕಲಾಗಿದ್ದರೆ, ಅತ್ತ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾಷಣದ ೧೮ ಭಾಗಗಳನ್ನು ಕಡತದಿಂದ ತೆಗೆದುಹಾಕಲಾಗಿದೆ. ಸಂಸತ್ತು ಪ್ರತಿಪಕ್ಷಗಳು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುವ, ಮಂತ್ರಿಮಂಡಲವು ಅವುಗಳಿಗೆ ಉತ್ತರಿಸುವ ವೇದಿಕೆಯಾಗಿದೆ. ಇದನ್ನು ಸಾಧಿಸಲು ಸಂಸದೀಯ ನಿಯಮಗಳು ಮತ್ತು ರೂಢಿಗಳಿವೆ. ಅತ್ತ ಸರ್ಕಾರದಿಂದ ಉತ್ತರದಾಯಿತ್ವ ಆಗ್ರಹಿಸಿದ್ದಕ್ಕೆ ಪ್ರತಿಪಕ್ಷಗಳನ್ನು ಶಿಸ್ತು ಕ್ರಮಕ್ಕೆ ಗುರಿಪಡಿಸಿ ಇತ್ತ ಉತ್ತರ ನೀಡಬೇಕಾದ ಸರ್ಕಾರವು ನಿಯಮಗಳ ಹಿಂದೆ ಅವಿತಿಟ್ಟುಕೊಂಡು ವಿಷಯಾಂತರ ಮಾಡಲು ಅವಕಾಶ ನೀಡುವುದು ಸಂಸದೀಯ ಪ್ರಜಾಪ್ರಭುತ್ವದ ಅಪಹಾಸ್ಯವಾಗುತ್ತದೆ. ಎಲ್ಲ ಮಾಹಿತಿ ಇರುವುದು ಸರ್ಕಾರದ ಬಳಿ. ಅದರ ಕುರಿತು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಸಂಸದರು ಸದನದಲ್ಲಿ ನೀಡುವ ಹೇಳಿಕೆಯ ಸತ್ಯಾಸತ್ಯತೆ ಅಥವಾ ಅದರ ಕೊರತೆಯನ್ನು ಸರ್ಕಾರ ಸ್ಪಷ್ಟಪಡಿಸಬೇಕು, ಅದು ಅದರ ಕರ್ತವ್ಯವಾಗಿದೆ. ಸಾರ್ವಜನಿಕ ಹಿತಾಸಕ್ತಿ ಪಣಕ್ಕಿಟ್ಟು ಖಾಸಗಿ ಉದ್ಯಮಿಗಳ ಬೆನ್ನಿಗೆ ನಿಂತಿದೆ ಎಂಬ ಗಂಭೀರ ಆರೋಪಗಳಿಗೆ ಸರ್ಕಾರ ಉತ್ತರಿಸುತ್ತಿಲ್ಲ, ಬದಲಿಗೆ ಈ ಬಗ್ಗೆ ಪ್ರಶ್ನೆ ಮಾಡುತ್ತಿರುವವರೆಲ್ಲರನ್ನೂ ಸಂಸತ್ತಿನಲ್ಲಿ ಶಿಸ್ತುಕ್ರಮದ ಹೆಸರಿನಲ್ಲಿ ಅಮಾನತುಗೊಳ್ಳುತ್ತಿರುವುದು ವಿಚಿತ್ರ ಸನ್ನಿವೇಶವಾಗಿದೆ. ಸಂಸತ್ತಿನಲ್ಲಿ ಶಿಸ್ತು ಅವಶ್ಯಕ ನಿಜ, ಆದರೆ ಅದು ಚರ್ಚೆಗೆ ಅಡ್ಡಿಯಾಗಬಾರದು. ಸರ್ಕಾರ ಪ್ರತಿಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವಂತಿರಬೇಕು.
This editorial has been translated from English, which can be read here.
COMMents
SHARE