ಕಪ್ಪು ಸಮುದ್ರದ ಮೇಲೆ ರಷ್ಯಾದ ಎರಡು ಫೈಟರ್ ಜೆಟ್‌ಗಳು ಮತ್ತು ಅಮೇರಿಕೆಯ ಡ್ರೋನ್ ನಡುವಿನ ಎತ್ತರದ ಸೆಣಸಾಟದ ಕಾರಣ ಮಂಗಳವಾರ ಬೆಳಿಗ್ಗೆ ಅಮೆರಿಕಾದ ಎಂಕ್ಯು -೯ ರೀಪರ್ ಡ್ರೋನ್ ಉರುಳಿ ಬಿದ್ದಿದ್ದು, ಇದು ಯುಕ್ರೇನ್ ಯುದ್ಧದ ಅಪಾಯಗಳನ್ನು ಒತ್ತಿಹೇಳಿದೆ. ಸಹಜವಾಗಿಯೇ ಈ ಘಟನೆಯ ಬಗ್ಗೆ ಅಮೆರಿಕಾ ಮತ್ತು ರಷ್ಯಾ ವಿರುದ್ಧಾತ್ಮಕ ನಿರೂಪಣೆಗಳನ್ನು ಮುಂದಿಟ್ಟಿವೆ. ರಷ್ಯಾದ ಸು-೨೭ ವಿಮಾನಗಳು ಅಂತರಾಷ್ಟ್ರೀಯ ವಾಯುಪ್ರದೇಶದಲ್ಲಿದ್ದ ಅಮೆರಿಕಾದ ಕಣ್ಗಾವಲು ಡ್ರೋನ್ ಅನ್ನು ತಡೆದು ಅದರ ಮೇಲೆ ಇಂಧನ ಸುರಿದು, ಡಿಕ್ಕಿ ಹೊಡೆದು ಅದನ್ನು ಬಲವಂತವಾಗಿ ಉರುಳಿಸಿದವು ಎಂದು ಪೆಂಟಗನ್ ಹೇಳಿದೆ. ಆದರೆ ರಷ್ಯಾದ ರಕ್ಷಣಾ ಸಚಿವಾಲಯವು ಅಮೆರಿಕಾದ ಡ್ರೋನ್ ಯುಕ್ರೇನ್ ಯುದ್ಧಕ್ಕಾಗಿ ತಾನು ತನ್ನ “ತಾತ್ಕಾಲಿಕ ವಾಯುಪ್ರದೇಶ” ಎಂದು ಘೋಷಿಸಿದ್ದ ಕ್ರೈಮಿಯಾದ ಪರ್ಯಾಯ ದ್ವೀಪದ ಮೇಲೆ ಹಾರುತ್ತಿತ್ತು ಮತ್ತು ತೀಕ್ಷ್ಣವಾದ ಕಾರ್ಯಾಚರಣೆಯಲ್ಲಿ ಅದೇ ಎತ್ತರವನ್ನು ಕಳೆದುಕೊಂಡಿತು ಎಂದು ಹೇಳಿದೆ. ಉರುಳಿ ಬೀಳುವ ಮೊದಲು ಎಂಕ್ಯು -೯ ಇಡೀ ಘಟನೆಯನ್ನು ತನ್ನ ಕಾಮೆರಾದಲ್ಲಿ ಸೆರೆ ಹಿಡಿಡಿದ್ದು ಈ ದೃಶ್ಯಾವಳಿಯನ್ನು ಅಮೆರಿಕಾ ಬಿಡುಗಡೆ ಮಾಡಲಿದೆ. ಇದು ಸತ್ಯಾಂಶ ಅರಿಯಲು ಸಹಾಯ ಮಾಡುತ್ತದೆ. ಆದರೆ ಕಾರಣವೇನೇ ಇರಲಿ ತನ್ನ ನೌಕಾಪಡೆಯ ನೆಲೆ ಇರದ ಕಪ್ಪು ಸಮುದ್ರದಲ್ಲಿ ಅಮೆರಿಕಾ ತನ್ನ ಡ್ರೋನ್ ಅನ್ನು ಕಳೆದುಕೊಂಡಿರುವುದು ಪರಮಾಣು ಶಕ್ತಿಗಳು ಸಂಘರ್ಷಕ್ಕೆ ಎಷ್ಟು ಹತ್ತಿರ ಬಂದಿವೆ ಎಂಬುದರ ಗಂಭೀರ ಸೂಚನೆಯಾಗಿದೆ. ಈ ಘಟನೆಗೆ ಎರಡೂ ದೇಶಗಳು ಪ್ರಬುದ್ಧತೆಯಿಂದ ಪ್ರತಿಕ್ರಿಯಿಸಿವೆಯಾದರೂ ಈ ಬಿಕ್ಕಟ್ಟನ್ನು ಪ್ರಚೋದಿಸಿದ ಮೂಲ ಕಾರಣ ಹಾಗೆ ಉಳಿದಿದೆ.
ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ ಯುಕ್ರೇನ್‌ಗೆ ಸುಧಾರಿತ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನೂ ಒಳಗೊಂಡಂತೆ ಅಮೆರಿಕಾ $೩೦ ಶತಕೋಟಿ ಮಿಲಿಟರಿ ಸಹಾಯವನ್ನು ಒದಗಿಸಿದೆ ಮತ್ತು ಮಾಸ್ಕೋದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಇತ್ತ ವಾಷಿಂಗ್ಟನ್ ತಾನು ನೇರವಾಗಿ ಯುದ್ಧದಲ್ಲಿ ಭಾಗಿಯಾಗಿಲ್ಲ ಮತ್ತು ಯುಕ್ರೇನಿಗೆ ತನ್ನ ಭೂಪ್ರದೇಶಗಳನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತಿದ್ದೇನೆ ಅಷ್ಟೇ ಎಂದು ಹೇಳಿದರೆ, ಅತ್ತ ಇಡೀ ಪಶ್ಚಿಮವು ಅದನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಎಂದು ರಷ್ಯಾ ಆರೋಪಿಸಿದೆ. ತ್ವರಿತ ವಿಜಯವನ್ನು ದಕ್ಕಿಸಿಕೊಳ್ಳಲು ರಷ್ಯಾ ವಿಫಲವಾಗಿರುವುದರಿಂದ ಯುದ್ಧವು ಲಂಬಿಸುತ್ತಿದ್ದಂತೆ ಅಮೆರಿಕಾ ರಷ್ಯಾಗಳ ನಡುವಿನ ಸಂಬಂಧವು ಮುರಿದುಬಿದ್ದಿದೆ. ಕಳೆದ ತಿಂಗಳು ರಷ್ಯಾ ಸ್ಟಾರ್ಟ್ ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದದಿಂದ ಹೊರಬಂದಿತು. ಇದು ಈ ಎರಡು ದೇಶಗಳ ನಡುವಿನ ಶೀತಲ ಸಮರ ಕಾಲದ ಕಡೆಯ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದವಾಗಿತ್ತು. ಸಂಘರ್ಷದ ಕಾಲದಲ್ಲಿ ಎರಡು ಜಾಗತಿಕ ಶಕ್ತಿಗಳ ನಡುವೆ ಅಪನಂಬಿಕೆ ವೃದ್ಧಿಸುವುದು ವಿಪತ್ತಿಗೆ ಹಾದಿಯೇ ಸರಿ. ಬೈಡೆನ್ ಆಡಳಿತವು ರಷ್ಯಾದೊಂದಿಗೆ ನೇರ ಸಂಘರ್ಷವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರೂ ಸಹ, ಬೇಜವಾಬ್ದಾರಿಯುತ ಹೆಜ್ಜೆಗಳು ಕೆಲವೊಮ್ಮೆ ಅಪಘಾತಗಳೂ ಕೂಡಾ ಪೆಂಟಗನ್ ಹೇಳಿದಂತೆ “ತಪ್ಪಾದ ಲೆಕ್ಕಾಚಾರ ಮತ್ತು ಸಂಘರ್ಷದ ಅನಪೇಕ್ಷಿತ ಉಲ್ಬಣಕ್ಕೆ” ಕಾರಣವಾಗಬಹುದು. ಅಮೆರಿಕಾ ಮತ್ತು ರಷ್ಯಾ ಸಂಘರ್ಷವನ್ನು ತಡೆಯಲು ಹಾಟ್‌ಲೈನ್ ಹೊಂದಿವೆ. ಕಪ್ಪು ಸಮುದ್ರದ ಮೇಲಿನಂತಹ ಘಟನೆಗಳ ಪುನರಾವರ್ತನೆಯನ್ನು ತಪ್ಪಿಸಲು ಅವು ಯುಕ್ರೇನ್ ವಿಷಯವಾಗಿಯೂ ಹಾಟ್‌ಲೈನ್ ಬಳಸಬೇಕು. ಆದರೆ ಶೀತಲ ಸಮರದ ಮೊದಲ ಎರಡು ದಶಕಗಳ ಹಗೆತನವನ್ನು ನೆನಪಿಸುತ್ತಿರುವ ಅವರ ಇಂದಿನ ದ್ವಿಪಕ್ಷೀಯ ಸಂಬಂಧವು ಮತ್ತಷ್ಟು ಹದಗೆಡುವುದನ್ನು ತಡೆಯುವುದು ಈಗಿನ ದೊಡ್ಡ ಸವಾಲಾಗಿದೆ. ಯುಎಸ್ ಮತ್ತು ರಷ್ಯಾ ಈ ಸಮಸ್ಯೆಯನ್ನು ಪರಿಹರಿಸಿಕೊಂಡು ತಮ್ಮ ಸಂಬಂಧದಲ್ಲಿ ಸ್ಥಿರತೆಯನ್ನು ಗಳಿಸಿದರೆ ಯುಕ್ರೇನ್ ಯುದ್ಧಕ್ಕೆ ಕೊನೆ ಹಾಡಬಹುದು.
This editorial has been translated from English, which can be read here.
COMMents
SHARE