ಭಾರತದಲ್ಲಿ ಇಂಗಾಲದ ವ್ಯಾಪಾರದ (carbon trading) ಮಾರುಕಟ್ಟೆಯ ರೂಪುರೇಖೆಗಳನ್ನು ಈ ವರ್ಷ ಸರ್ಕಾರ ಸ್ಪಷ್ಟಪಡಿಸುವ ನಿರೀಕ್ಷೆಯಿದೆ. ೨೦೨೨ ರಲ್ಲಿ ಅಂಗೀಕರಿಸಲ್ಪಟ್ಟ ಇಂಧನ ಸಂರಕ್ಷಣಾ ಕಾಯ್ದೆಯ ತಿದ್ದುಪಡಿ ಮತ್ತು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಫ್ರೇಮ್‌ವರ್ಕ್ ಕನ್ವೆನ್ಶನ್‌ನ ಪ್ಯಾರಿಸ್ ಮತ್ತು ಗ್ಲ್ಯಾಸ್ಗೋ ಒಪ್ಪಂದಗಳ ಅನುಮೋದನೆಯು ಇಂಗಾಲದ ಮಾರುಕಟ್ಟೆಗಳು ಜಾಗತಿಕವಾಗಿ ಹೆಚ್ಚು ಚಾಲ್ತಿಗೆ ಬರುವಂತೆ ಮಾಡಿವೆ. ಇಂಗಾಲದ ಮಾರುಕಟ್ಟೆಗಳಲ್ಲಿ ‘ಕಾರ್ಬನ್ ಕ್ರೆಡಿಟ್‌ಗಳು’ ಮತ್ತು ‘ಹೊರಸೂಸುವಿಕೆ ಪ್ರಮಾಣಪತ್ರಗಳ’ (emission certificate) ವಹಿವಾಟು ನಡೆಯುತ್ತದೆ. ಭಾರತೀಯ ಸನ್ನಿವೇಶದಲ್ಲಿ ಇಂಗಾಲದ ಮಾರುಕಟ್ಟೆ ಅಂದರೆ ಏನೆಲ್ಲಾ ಒಳಗೊಂಡಿರುತ್ತದೆ ಎಂಬ ಸ್ಪಷ್ಟತೆ ಇಲ್ಲ. ಒಂದು ದಶಕಕ್ಕೂ ಹಿಂದೆ ಇದು ಕ್ಲೀನ್ ಡೆವಲಪ್‌ಮೆಂಟ್ ಮೆಕ್ಯಾನಿಸಂ ಅಡಿಯಲ್ಲಿ ಕಾನೂನುಬದ್ಧಗೊಳಿಸಿದ ‘ಕಾರ್ಬನ್ ಆಫ್‌ಸೆಟ್‌ಗಳಲ್ಲಿ’ ವ್ಯಾಪಾರ ಮಾಡುವ ಷೇರು ಮಾರುಕಟ್ಟೆಯಂತಹ ವಿನಿಮಯವನ್ನು ಸೂಚಿಸುತ್ತಿತ್ತು. ಇಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಕೈಗಾರಿಕಾ ಯೋಜನೆಗಳು ಕ್ರೆಡಿಟ್‌ಗಳಿಗೆ ಅರ್ಹವಾಗಿದ್ದು, ಹೊರಸೂಸುವಿಕೆಯನ್ನು ಕಡಿತಗೊಳಿಸುವ ಬದಲು ಯುರೋಪಿಯನ್ ಕಂಪನಿಗಳು ಅವುಗಳನ್ನು ಖರೀದಿಸಬಹುದಾಗಿದೆ. ಇದಲ್ಲದೆ ಯೂರೋಪಿಯನ್ ಯೂನಿಯನ್ -ಎಮಿಷನ್ಸ್ ಟ್ರೇಡಿಂಗ್ ಸಿಸ್ಟಮ್ಸ್ (ಇಯು-ಇಟಿಎಸ್) ಇದೆ. ಇಲ್ಲಿ ಅಲ್ಯೂಮಿನಿಯಂ ಅಥವಾ ಸ್ಟೀಲ್ ಅಂತಹ ಕೈಗಾರಿಕಾ ವಲಯಗಳ ಮೇಲೆ ಸರ್ಕಾರ ವಿಧಿಸಿದ ಹೊರಸೂಸುವಿಕೆಯ ಮಿತಿಗಳಿಗೆ ಕೈಗಾರಿಕೆಗಳು ಬದ್ಧವಾಗಿರದಿದ್ದಲ್ಲಿ, ಅಗತ್ಯಕ್ಕಿಂತ ಹೆಚ್ಚು ಹೊರಸೂಸುವಿಕೆಯನ್ನು ಕಡಿತಗೊಳಿಸುವ ಕಂಪೆನಿಗಳಿಂದ ಕ್ರೆಡಿಟ್ಟುಗಳನ್ನು ಕೊಳ್ಳಬಹುದು. ಹೀಗಾಗಿ ಕಾರ್ಬನ್ ಕ್ರೆಡಿಟ್‌ಗಳಿಗೆ ಬೆಲೆ ಬಂದವು. ಆದರೆ ಇವು “ಮಾಲಿನ್ಯ ಮಾಡುವ ಹಕ್ಕಿನ” ಪರವಾನಗಿಗಳಾಗಿವೆ. ಷೇರು ಮಾರುಕಟ್ಟೆಯಂತಹ ವಿನಿಮಯ ಕೇಂದ್ರದಲ್ಲಿ ಇವುಗಳ ವ್ಯವಹಾರ ನಡೆಯಿತ್ತುರುವುದರಿಂದ ಲಾಭದಾಯಕತೆ ಮತ್ತು ಮಾಲಿನ್ಯದ ಮಾನದಂಡಗಳನ್ನು ಸರಿದೂಗಿಸುವ ಕಂಪೆನಿಯ ಅಗತ್ಯತೆಯನ್ನು ಅವಲಂಬಿಸಿ ಇವುಗಳ ಮೌಲ್ಯದಲ್ಲಿ ಏರಿಳಿತವಾಗುತ್ತದೆ.
ಇಂತಹ ಮಾರುಕಟ್ಟೆಗಳ ಉದ್ದೇಶವು ನವೀಕರಿಸಬಹುದಾದ ಇಂಧನ ಮೂಲಗಳ ಮೇಲೆ ಹೂಡಿಕೆಗಳನ್ನು ಉತ್ತೇಜಿಸುವುದಾಗಿದೆ. ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತವು ತನ್ನ ಇಂಗಾಲದ ಹೊರಸೂಸುವಿಕೆ ಮಟ್ಟವನ್ನು ಹಿಗ್ಗಿಸುವ ಹಕ್ಕನ್ನು ಉಳಿಸಿಕೊಂಡಿದೆಯಾದರೂ, ೨೦೩೦ರ ವೇಳೆಗೆ ಜಿಡಿಪಿಯ ಬೆಳವಣಿಗೆಯ ಪ್ರತಿ ಯೂನಿಟ್ಟಿಗೆ ಶೇ. ೪೫ರಷ್ಟು ಹೊರಸೂಸುವಿಕೆಯ ತೀವ್ರತೆಯನ್ನು ಕಡಿತಗೊಳಿಸಲು ಬದ್ಧವಾಗಿದೆ. ಇದನ್ನು ಸಾವಿರ ಕೈಗಾರಿಕೆಗಳು ಇಂಧನ ಉಳಿತಾಯ ಪ್ರಮಾಣಪತ್ರಗಳನ್ನು ಪಡೆದು ವ್ಯಾಪಾರದಲ್ಲಿ ತೊಡಗಿರುವ “ಪರ್ಫಾರ್ಮ್, ಅಚೀವ್ ಮತ್ತು ಟ್ರೇಡ್” (ಪ್ಯಾಟ್) ಯೋಜನೆಯ ಮೂಲಕ ಮಾಡುತ್ತಿದೆ. ೨೦೧೫ರಿಂದ ಪ್ಯಾಟ್ ಯೋಜನೆಯ ಹಲವು ಆವೃತ್ತಿಗಳು ಶೇ. ೩-೫ ರಷ್ಟು ಹೊರಸೂಸುವಿಕೆ ಕಡಿತ ಸಾಧಿಸಿರುವುದನ್ನು ತೋರಿಸಿವೆ. ೨೦೦೫ರಿಂದ ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಹಳೆಯ ಇಂತಹ ವ್ಯವಸ್ಥೆಯಾದ ಇಯು-ಇಟಿಎಸ್, ಯುರೋಪಿಯನ್ ಯೂನಿಯನ್ ೨೦೦೫-೧೯ರ ನಡುವೆ ಶೇ. ೩೫ರಷ್ಟು ಮತ್ತು ೨೦೦೯ರಲ್ಲಿ ಶೇ. ೯ರಷ್ಟು ಹೊರಸೂಸುವಿಕೆಯನ್ನು ಕಡಿತಗೊಳಿಸಿರುವುದನ್ನು ತೋರಿಸುತ್ತದೆ. ಭಾರತದ ಸಂದರ್ಭದಲ್ಲಿ ಇಂಗಾಲದ ವ್ಯಾಪಾರವು ಅರ್ಥಪೂರ್ಣ ಹೊರಸೂಸುವಿಕೆ ಕಡಿತಕ್ಕೆ ಕಾರಣವಾಗಬಹುದೆ ಎಂಬ ಪ್ರಶ್ನೆಗೆ ಉತ್ತರಿಸಲು ದಶಕಗಳೆ ಬೇಕಾಗಬಹುದು. ಆದರೆ ಇದು ಪಳೆಯುಳಿಕೆ ಇಂಧನದಿಂದ ದೂರ ಸರಿಯಲು ದೇಶೀಯ ಹಣಕಾಸು ಹೂಡಿಕೆಯನ್ನು ಹೆಚ್ಚಿಸಿದರೆ, ಅದೂ ಸಹ ಗೆಲುವೇ ಆಗಿರುತ್ತದೆ. ಈ ದೃಷ್ಟಿಯಿಂದ ಸರ್ಕಾರವು ಮಧ್ಯಪ್ರವೇಶಿಸಿ ಇಂಗಾಲದ ಮಾರುಕಟ್ಟೆಯಲ್ಲಿ ಭಾಗವಹಿಸಲು ಉದ್ಯಮದ ಮೇಲೆ ಒತ್ತಡ ತರಬೇಕು. ಆದರೆ ಸರ್ಕಾರವು ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿತ ಸಾಧಿಸಲು ಮಾರುಕಟ್ಟೆಯೇತರ ಉಪಕ್ರಮಗಳನ್ನು ನಿರ್ಲಕ್ಷಿಸಬಾರದು.
This editorial has been translated from English, which can be read here.
COMMents
SHARE