ಸುಪ್ರೀಂ ಕೋರ್ಟ್ ೨೦೧೮ರಲ್ಲಿ ‘ಮುಂಗಡ ವೈದ್ಯಕೀಯ ನಿರ್ದೇಶನಗಳ’ (advanced medical directive) ಪರಿಕಲ್ಪನೆಗೆ ಕಾನೂನು ಸ್ಥಾನಮಾನವನ್ನು ನೀಡಿದಾಗ ಮತ್ತು ಕಟ್ಟುನಿಟ್ಟಾದ ಸುರಕ್ಷತೆಗಳಿಗೆ ಒಳಪಟ್ಟು ನಿಷ್ಕ್ರಿಯ ದಯಾಮರಣವನ್ನು ಅನುಮತಿಸಿದಾಗ, ಇದು ಜೀವನಾಂತ್ಯದ ನಿರ್ಧಾರಗಳ ಮೇಲೆ ರೋಗಿಗಳ ಸ್ವಾಯತ್ತತೆ ಮತ್ತು ಒಂದು ಘನತೆಯ ಸಾವಿನ ಹಕ್ಕುಗಳೆರಡಕ್ಕೂ ನೀಡಿದ ಪ್ರಮುಖ ಮನ್ನಣೆಯಾಗಿತ್ತು. ಆದರೆ ಆಚರಣೆಯಲ್ಲಿ ಕೆಲವು ನಿರ್ದೇಶನಗಳು ಮೀರಲಾಗದ ಅಡೆತಡೆಗಳೆಂದು ನಂತರ ವೈದ್ಯರು ಕಂಡುಕೊಂಡರು. ಇತ್ತೀಚಿನ ತನ್ನ ಆದೇಶದಲ್ಲಿ, ಸಾಂವಿಧಾನಿಕ ಪೀಠವು ಈ ನಿರ್ದೇಶನಗಳನ್ನು ಸರಳಗೊಳಿಸಿದೆ. ಮುಂಗಡ ನಿರ್ದೇಶನಕ್ಕೆ ಇನ್ನು ಮುಂದೆ ನ್ಯಾಯಾಧೀಶರು ಸಹಿ ಹಾಕುವ ಅಗತ್ಯವಿಲ್ಲ. ಬದಲಿಗೆ, ನೋಟರಿ ಅಥವಾ ಗೆಜೆಟೆಡ್ ಅಧಿಕಾರಿಯ ಮುಂದೆ ಇದನ್ನು ದೃಢೀಕರಿಸಬಹುದು. ನ್ಯಾಯಾಧೀಶರ ಬದಲಿಗೆ, ನೋಟರಿ ಅಥವಾ ಅಧಿಕಾರಿಗೆ ಇದನ್ನು ಸ್ವಯಂಪ್ರೇರಣೆಯಿಂದ, ಬಲವಂತ ಅಥವಾ ಪ್ರಚೋದನೆಯಿಲ್ಲದೆ ಮತ್ತು ಪೂರ್ಣ ತಿಳುವಳಿಕೆಯೊಂದಿಗೆ ಮಾಡಲಾಗಿದೆ ಎಂದು ಮನವರಿಕೆ ಆದರೆ ಸಾಕು. ಹೀಗೆ ಮುಂಗಡ ನಿರ್ದೇಶನ ನೀಡುವ ವ್ಯಕ್ತಿಯು ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರಾದ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಲು ಅಥವಾ ಹಿಂತೆಗೆದುಕೊಳ್ಳಲು ಸಮ್ಮತಿಯನ್ನು ನೀಡಲು ಅಧಿಕಾರ ಹೊಂದಿರುವ ಗಾರ್ಡಿಯನ್ ಅಥವಾ ನಿಕಟ ಸಂಬಂಧಿಯನ್ನು ಹೆಸರಿಸಬೇಕೆಂಬ ಮೂಲ ಮಾರ್ಗಸೂಚಿಯನ್ನು ಬದಲಿಸಿ ಒಂದಕ್ಕಿಂತ ಹೆಚ್ಚು ಗಾರ್ಡಿಯನ್ ಅಥವಾ ಸಂಬಂಧಿಗಳನ್ನು ಹೆಸರಿಸಲು ಅವಕಾಶವಾಗುವಂತೆ ಮಾರ್ಪಡಿಸಲಾಗಿದೆ. ಈ ಮುಂಗಡ ನಿರ್ದೇಶನವನ್ನು ಕಾರ್ಯಗತಗೊಳಿಸುವ ಸಮಯದಲ್ಲಿ ಅವರು ಇಲ್ಲದಿದ್ದರೆ ಕುಟುಂಬ ಸದಸ್ಯರಿಗೆ ಈ ಬಗ್ಗೆ ತಿಳಿಸುವ ಜವಾಬ್ದಾರಿಯನ್ನು ನ್ಯಾಯಾಧೀಶರ ಬದಲಿಗೆ, ಮುಂಗಡ ನಿರ್ದೇಶನ ನೀಡುವವರೆ ಅದರ ಪ್ರತಿಯನ್ನು ಅದರಲ್ಲಿ ಹೆಸರಿಸಲಾದ ಗಾರ್ಡಿಯನ್, ಹತ್ತಿರದ ಸಂಬಂಧಿಗಳು ಮತ್ತು ಕುಟುಂಬದ ವೈದ್ಯರಿಗೆ ನೀಡಬೇಕು. ಅದನ್ನು ಇನ್ನು ಮುಂದೆ ಡಿಜಿಟಲ್ ಆರೋಗ್ಯ ದಾಖಲೆಗಳಲ್ಲಿ ಕೂಡ ಸೇರಿಸಬಹುದು.
ಹೊಸ ಮಾರ್ಗಸೂಚಿಗಳ ಅನ್ವಯ ಚಿಕಿತ್ಸೆಯ ನಿರಾಕರಣೆ ಅಥವಾ ಹಿಂತೆಗೆದುಕೊಳ್ಳುವಿಕೆಯ ಸೂಚನೆಗಳನ್ನು ಕಾರ್ಯಗತಗೊಳಿಸಬೇಕೆ ಬೇಡವೆ ಎಂದು ನಿರ್ಧರಿಸಲು ಆಸ್ಪತ್ರೆಯು ಪ್ರಾಥಮಿಕ ವೈದ್ಯಕೀಯ ಮಂಡಳಿಯನ್ನು ರಚಿಸಬೇಕು. ಆಸ್ಪತ್ರೆಯು ಪ್ರಾಥಮಿಕ ಮಂಡಳಿಯ ಪ್ರಮಾಣಪತ್ರವನ್ನು ಅನುಮೋದಿಸಲು ದ್ವಿತೀಯ ಮಂಡಳಿಯನ್ನು ಸಹ ರಚಿಸಬೇಕಿದ್ದು, ಇದರಲ್ಲಿ ಜಿಲ್ಲಾ ಮುಖ್ಯ ವೈದ್ಯಕೀಯ ಅಧಿಕಾರಿಯಿಂದ ನಾಮನಿರ್ದೇಶನಗೊಂಡ ವೈದ್ಯರು ಸದಸ್ಯರಾಗಿರುತ್ತಾರೆ. ೨೦೧೮ರ ತೀರ್ಪಿನನ್ವಯ ಜಿಲ್ಲಾಧಿಕಾರಿ ಎರಡನೇ ವೈದ್ಯಕೀಯ ಮಂಡಳಿಯನ್ನು ರಚಿಸುವ ಅಗತ್ಯವಿಲ್ಲ ಎಂಬುದು ಇಲ್ಲಿನ ಮುಖ್ಯ ಬದಲಾವಣೆಯಾಗಿದೆ. ರೋಗಿಯು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲದಿದ್ದು ಯಾವುದೇ ಮುಂಗಡ ನಿರ್ದೇಶನವಿಲ್ಲದ ಸಂದರ್ಭಗಳಲ್ಲಿಯೂ ಸಹ ವೈದ್ಯಕೀಯ ಮಂಡಳಿಗಳ ಪರಿಶೀಲನೆಯು ಸಮಂಜಸವಾಗಿರುತ್ತದೆ. ಹೊಸ ಮಾರ್ಗಸೂಚಿಗಳು ವೈದ್ಯಕೀಯ ಮಂಡಳಿಗಳಲ್ಲಿ ಸದಸ್ಯ ವೈದ್ಯರಿಗೆ ಇರಬೇಕಾದ ಅನುಭವ ಮತ್ತು ವಿಷಯ ಪರಿಣತಿಯನ್ನು ಪಟ್ಟಿ ಮಾಡುತ್ತದೆ. ಇಂತಹ ಮಾರ್ಗಸೂಚಿಗಳು ‘ಜೀವಂತ ಉಯಿಲು’ ಪರಿಕಲ್ಪನೆ ಮತ್ತು ಮುಂಗಡ ನಿರ್ದೇಶನಗಳನ್ನು ಕಾರ್ಯಗತಗೊಳಿಸಲು ಉಪಯುಕ್ತ ಮತ್ತು ಅಗತ್ಯವಾಗಿದ್ದರೂ, ಸಂಸತ್ತು ಈ ಕುರಿತು ಸಮಗ್ರ ಕಾನೂನನ್ನು ರೂಪಿಸಲು ಇದು ಸೂಕ್ತ ಸಮಯ. ಅನುಷ್ಠಾನದ ಸಮಯದಲ್ಲಿ ಅದರ ನೈಜತೆಯನ್ನು ಪ್ರಮಾಣಿಸುವ ಅಗತ್ಯವಿಲ್ಲದಂತೆ ಪ್ರಮಾಣೀಕೃತ ಮುಂಗಡ ನಿರ್ದೇಶನಗಳನ್ನು ಇಂತಹ ಕಾನೂನು ಒದಗಿಸಬಲ್ಲದು.
This editorial has been translated from English, which can be read here.
COMMents
SHARE