ಸಿಂಗಾಪುರದಲ್ಲಿ ಓದುತ್ತಿರುವ ಅಥವಾ ವಾಸಿಸುತ್ತಿರುವ ಸಂಬಂಧಿಗೆ ಹಣವನ್ನು ವರ್ಗಾಯಿಸುವುದು ಅಥವಾ ಅಲ್ಲಿ ಕೆಲಸ ಮಾಡುವ ಕುಟುಂಬದ ಸದಸ್ಯರಿಂದ ಹಣ ಪಡೆಯುವುದು ಈಗ ಸರಳವಾಗಿದೆ. ಫೆಬ್ರವರಿ ೨೧ ರಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಸಿಂಗಾಪುರ ವಿತ್ತೀಯ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ರವಿ ಮೆನನ್ ಅವರು ಭಾರತದ ಯುಪಿಐ ಮತ್ತು ಸಿಂಗಾಪುರದ ಪೇನೌ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿ ಪರಸ್ಪರರಿಗೆ ದೇಶದ ಗಡಿಯಾಚೆಗೆ ಟೋಕನ್ ತಂತ್ರಜ್ಞಾನದ ಮೂಲಕ ಆನ್ಲೈನ್ ಹಣ ರವಾನೆ ಮಾಡಿದರು. ಈ ವಹಿವಾಟಿನೊಂದಿಗೆ ದಕ್ಷಿಣ ಏಷ್ಯಾದ ಅತಿದೊಡ್ಡ ಆರ್ಥಿಕತೆ ಮತ್ತು ಮಲಕ್ಕಾ ಜಲಸಂಧಿಯಾಚೆಗಿನ ನೆರೆಯ ರಾಷ್ಟ್ರದ ನಡುವೆ ಗಡಿಗಳನ್ನು ಮೀರಿ ವ್ಯಕ್ತಿಯಿಂದ ವ್ಯಕ್ತಿಗೆ ನೇರ ಹಣ ವರ್ಗಾವಣೆ ಪ್ರಾರಂಭವಾಗಿದೆ. ಸಿಂಗಾಪುರದಲ್ಲಿ ಗಮನಾರ್ಹವಾದ ಅನಿವಾಸಿ ಭಾರತೀಯ ಸಮುದಾಯವಿದೆ ಮತ್ತು ಅಲ್ಲಿನ ನಿರ್ಮಾಣ, ಶಿಪ್‌ಯಾರ್ಡ್ ಮತ್ತು ಸೇವಾ ಕ್ಷೇತ್ರಗಳಲ್ಲಿ ನಮ್ಮ ಹತ್ತಾರು ಸಾವಿರ ವಲಸೆ ಕಾರ್ಮಿಕರು ದುಡಿಯುತ್ತಿದ್ದಾರೆ. ಈ ಲಿಂಕ್ ಈಗ ಸಿಂಗಾಪುರದ ಡಾಲರ್ ಅಥವಾ ಭಾರತೀಯ ರೂಪಾಯಿಯನ್ನು ‘ಸಂಬಂಧಿಕರ ನಿರ್ವಹಣೆಗಾಗಿ’ ಅಥವಾ ‘ಉಡುಗೊರೆಯಾಗಿ’ ಕಳುಹಿಸಲು ಬಯಸುವ ವ್ಯಕ್ತಿಗಳಿಗೆ ಯುಪಿಐ ಮತ್ತು ಪೇನೌ ಅಪ್ಲಿಕೇಶನ್ಗಳನ್ನು ಬಳಸಿ ಯಾವುದೇ ಅಡೆತಡೆ ಇಲ್ಲದಂತೆ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಮೊದಲಿಗೆ ಮೂರು ಸರ್ಕಾರಿ, ಎರಡು ಖಾಸಗಿ ಮತ್ತು ಸಿಂಗಾಪುರದ ಡಿಬಿಎಸ್ ಬ್ಯಾಂಕ್‌ನ ಭಾರತೀಯ ಘಟಕ ಸೇರಿದಂತೆ ಭಾರತದ ಆರು ಬ್ಯಾಂಕ್‌ಗಳು ತಮ್ಮ ಖಾತೆದಾರರಿಗೆ ಸಿಂಗಾಪುರದಿಂದ ಹಣ ಪಡೆಯಲು ಅನುವು ಮಾಡಿಕೊಟ್ಟರೆ, ಒಂದು ಖಾಸಗಿ ಸಾಲ ಸಂಸ್ಥೆ ಮತ್ತು ಮೂರು ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಭಾರತೀಯ ಗ್ರಾಹಕರು ಸಿಂಗಾಪುರಕ್ಕೆ ಹಣ ಕಳಿಸಲು ಸೌಲಭ್ಯ ಒದಗಿಸುತ್ತವೆ. ಸಿಂಗಾಪುರದಲ್ಲಿ, ಡಿಬಿಎಸ್ ಬ್ಯಾಂಕ್ ಮತ್ತು ಸಾಲ ಸಂಸ್ಥೆ ಲಿಕ್ವಿಡ್ ಗ್ರೂಪ್‌ನ ಗ್ರಾಹಕರು ಭಾರತಕ್ಕೆ ನೇರ ಹಣ ವರ್ಗಾವಣೆಯ ಸೌಲಭ್ಯವನ್ನು ಪಡೆಯಬಹುದು.
ದೈನಂದಿನ ವಹಿವಾಟಿನ ಮಿತಿಯನ್ನು ₹೬೦,೦೦೦ ಅಥವಾ ಸುಮಾರು ೧೦೦೦ ಸಿಂಗಾಪುರ ಡಾಲರ್ ಎಂದು ನಿಗದಿಪಡಿಸಲಾಗಿದ್ದು, ಇದು ಸಣ್ಣ ಆರಂಭವಾದರೂ ಮಹತ್ವದ್ದಾಗಿದೆ. ಇದು ವ್ಯಕ್ತಿಗಳು ತಮ್ಮ ಪ್ರೀತಿಪಾತ್ರರಿಗೆ ಬ್ಯಾಂಕ್‌ಗೆ ಹೋಗಬೇಕಾದ ಇಲ್ಲ ತಂತಿ ವರ್ಗಾವಣೆ ಸೌಲಭ್ಯ ಬಳಸುವ ಇಲ್ಲ ಹೆಚ್ಚಿನ ವೆಚ್ಚದ ಮತ್ತು ಅಪಾಯಕಾರಿ ‘ಹವಾಲಾ’ ಚಾನಲ್‌ಗಳನ್ನು ಅವಲಂಬಿಸಬೇಕಾದ ಅಗತ್ಯ ಇಲ್ಲದೆ ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಹಣವನ್ನು ರವಾನಿಸಲು ಅನುವು ಮಾಡಿಕೊಡುತ್ತದೆ. ಇದು ವ್ಯಕ್ತಿಗಳು ಮತ್ತು ವ್ಯಾಪಾರಿಗಳಿಗೆ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ಗಡಿಯಾಚೆಗೆ ತತ್-ತಕ್ಷಣದ ಹಣ ವರ್ಗಾವಣೆಯನ್ನು ಸುಗಮಗೊಳಿಸುವ ಪ್ರಯತ್ನದ ಭಾಗವಾಗಿದೆ. ಅದೇ ಸಮಯದಲ್ಲಿ ಎರಡು ಕರೆನ್ಸಿಗಳ ನಡುವಿನ ವಹಿವಾಟಿನ ಇತ್ಯರ್ಥಕ್ಕೆ ಸಾಧಾರಣವಾಗಿ ಬಳಕೆಯಾಗುವ ಯುಎಸ್ ಡಾಲರಿನ ಮೇಲಿನ ಅವಲಂಬನೆಯನ್ನು ಇದು ಕಡಿಮೆ ಮಾಡುತ್ತದೆ. ೨೦೨೧ರಲ್ಲಿ ಥೈಲ್ಯಾಂಡ್‌ನೊಂದಿಗೆ ಇದೇ ರೀತಿಯ ಪಾವತಿ ಲಿಂಕ್ ಅನ್ನು ಸಿಂಗಾಪುರ ಸ್ಥಾಪಿಸಿತು. ಇದು ಮಲೇಷ್ಯಾ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಸೇರಿದಂತೆ ಆಗ್ನೇಯ ಏಷ್ಯಾದ ದೇಶೀಯ ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಪರಸ್ಪರ ಸಂಪರ್ಕಿಸುವ ಗುರಿ ಹೊಂದಿರುವ ಕಾರ್ಯಕ್ರಮದ ಭಾಗವಾಗಿದೆ. ಭಾರತವು ತನ್ನ ಗಡಿಯಾಚೆಗಿನ ಡಿಜಿಟಲ್ ಪಾವತಿ ಸಂಪರ್ಕಗಳನ್ನು ಹೆಚ್ಚಿಸಲು ಆಗ್ನೇಯ ಏಷ್ಯಾದಲ್ಲಿ ಸಿಂಗಾಪುರದ ಇತರ ಮಿತ್ರ ರಾಷ್ಟ್ರಗಳಿಗೆ ವಿಸ್ತರಿಸಬಹುದು. ಅಂತಹ ಜಾಲವು ಪ್ರಾದೇಶಿಕ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಖಚಿತವಾದ ಉತ್ತೇಜನ ನೀಡುವುದಲ್ಲದೆ, ಅಲ್ಲಿಂದ ಒಳಬರುವ ಹಣದ ಹರಿವನ್ನು ಇನ್ನಷ್ಟು ಔಪಚಾರಿಕಗೊಳಿಸಲು ಭಾರತಕ್ಕೆ ಸಹಾಯ ಮಾಡುತ್ತದೆ.
This editorial has been translated from English, which can be read here.
COMMents
SHARE