ADVERTISEMENT

ಅನ್ಯಾಯ ಮತ್ತು ಅವಿವೇಕ

December 28, 2023 10:09 am | Updated 10:09 am IST

ಜಮ್ಮು ಕಾಶ್ಮೀರದಲ್ಲಿನ ಬಂಡಾಯ ನಿಗ್ರಹ ಕಾರ್ಯಾಚರಣೆಗಳು ನಾಗರಿಕರನ್ನು ಗುರಿ ಮಾಡಬಾರದು

ಜಮ್ಮು ಮತ್ತು ಕಾಶ್ಮೀರದಂತಹ ಸಂಘರ್ಷ ಪೀಡಿತ ಗಡಿ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಭಯೋತ್ಪಾದನೆಯನ್ನು ನಿಭಾಯಿಸುವುದಷ್ಟೆ ಅಲ್ಲ ನಿಖರ ಮತ್ತು ನ್ಯಾಯಯುತ ರೀತಿಯಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆಗಳಲ್ಲಿ ತೊಡಗಬೇಕಾಗುತ್ತದೆ. ಪೂಂಛ್ ಮತ್ತು ರಜೌರಿ ಜಿಲ್ಲೆಗಳನ್ನು ಒಳಗೊಂಡಿರುವ ಪಿರ್ ಪಂಜಾಲ್ ಕಣಿವೆಯು ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಅನೇಕ ಭೀಕರ ಗುಂಡಿನ ಚಕಮಕಿಗಳಿಗೆ ಸಾಕ್ಷಿಯಾಗಿದೆ. ಈ ಪ್ರಾಂತ್ಯದಲ್ಲಿ ಈ ವರ್ಷ ೨೮ ಸೈನಿಕರು ಹುತಾತ್ಮರಾದರು. ಡಿಸೆಂಬರ್ ೨೧ ರಂದು ಸೇನಾ ಬೆಂಗಾವಲು ಪಡೆಯ ಮೇಲೆ ನಡೆದ ಮಾರಣಾಂತಿಕ ದಾಳಿಯ ನಂತರ ಪೂಂಛ್-ರಜೌರಿ ಪ್ರದೇಶದಲ್ಲಿ ಸೇನೆಯಿಂದ ಬಂಧನಕ್ಕೊಳಗಾದ ಮೂವರು ನಾಗರಿಕರ ಸಾವು ಮತ್ತು ಭದ್ರತಾ ಪಡೆಗಳ ಚಿತ್ರಹಿಂಸೆಯಿಂದ ಇತರ ಐವರು ನಾಗರಿಕರು ತೀವ್ರವಾಗಿ ಗಾಯಗೊಂಡಿರುವುದು ಅಲ್ಲಿ ಸೇನೆ ಬಳಸುತ್ತಿರುವ ಬಂಡಾಯ ನಿಗ್ರಹ ಕಾರ್ಯಾಚರಣೆಗಳ ರೀತಿ ರಿವಾಜುಗಳನ್ನು ಎತ್ತಿತೋರಿಸುತ್ತಿದೆ. ಉಗ್ರಗಾಮಿ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ನಾಗರಿಕರನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳು ಇಂತಹ ಹೇಯ ಕೃತ್ಯಗಳನ್ನು ನಡೆಸುವುದು ಎರಡು ರೀತಿಯಲ್ಲಿ ಸಮಸ್ಯಾತ್ಮಕ. ಮೊದಲನೆಯದಾಗಿ ಇದು ಅರ್ಧ ದಶಕಕ್ಕೂ ಹೆಚ್ಚು ಕಾಲ ಚುನಾವಣೆಗಳು ನಡೆಯದ ಕೇಂದ್ರಾಡಳಿತ ಪ್ರದೇಶದಲ್ಲಿ ಕೇಂದ್ರ ಸರ್ಕಾರಕ್ಕೆ ಮತ್ತಷ್ಟು ಮಸಿ ಬಳಿಯುತ್ತದಷ್ಟೆ. ಕಾಶ್ಮೀರ ಕಣಿವೆಗೆ ಹೋಲಿಸಿದರೆ ತುಲನಾತ್ಮಕವಾಗಿ ಶಾಂತಿಯುತವಾಗಿರುವ ಈ ಪ್ರಾಂತ್ಯದಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆಗೆ ಇದು ದೊಡ್ಡ ಹೊಡೆತ. ವಾಸ್ತವವಾಗಿ ಪೀರ್ ಪಂಜಾಲ್ ಪ್ರದೇಶವು ಒಂದೂವರೆ ದಶಕಗಳ ಶಾಂತಿಯ ನಂತರ ಕಳೆದ ಎರಡು ವರ್ಷಗಳಲ್ಲಿ ಉಗ್ರಗಾಮಿ ಚಟುವಟಿಕೆಗಳ ತಾಣವಾಗಿದೆ. ಕಳೆದ ವಾರದ ದಾಳಿಯ ನಂತರದ ಸೇನೆ ನಡೆಸಿರುವ ಬಂಡಾಯ ನಿಗ್ರಹ ಕಾರ್ಯಾಚರಣೆಗಳ ಮಾದರಿಯು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸುತ್ತದೆ ಮತ್ತು ಈ ಹಿಂದೆ ಉಗ್ರಗಾಮಿಗಳನ್ನು ಬೆಂಬಲಿಸದ ಪ್ರಾಂತ್ಯದಲ್ಲಿ ಅವರಿಗೆ ನೆಲೆ ಒದಗಿಸುವ ಅಪಾಯವಿದೆ.

ಭಾರತೀಯ ಭದ್ರತಾ ಪಡೆಗಳ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಉಗ್ರಗಾಮಿಗಳ ಒಂದು ಉದ್ದೇಶವೆಂದರೆ ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸಿ ದಾಳಿ ನಡೆಸುವಂತೆ ಸೇನೆಯನ್ನು ಪ್ರಚೋದಿಸುವುದು ಮತ್ತು ಅದರಿಂದ ತಮಗಿರುವ ಬೆಂಬಲವನ್ನು ವೃದ್ಧಿಸಿಕೊಳ್ಳುವುದು. ಭದ್ರತಾ ಪಡೆಗಳ ಇಂತಹ ಕ್ರಮಗಳು ಗಡಿಯುದ್ದಕ್ಕೂ ಉಗ್ರಗಾಮಿಗಳು ಮತ್ತು ಅವರ ಹ್ಯಾಂಡ್ಲರ್‌ಗಳ ಕೈ ಬಲಪಡಿಸುತ್ತವೆಯಷ್ಟೆ. ಎರಡನೆಯದಾಗಿ ಸರ್ಕಾರವು ಹಿಂಸೆಯನ್ನು ಬಳಸುವಾಗ ಅದು ನ್ಯಾಯಸಮ್ಮತವಾಗಿರಬೇಕು. ಸೂಕ್ತ ಕಾರಣವಿಲ್ಲದೆ ನಾಗರಿಕರನ್ನು ಗುರಿಯಾಗಿಸಿ ಹಿಂಸಾಚಾರ ನಡೆಸಿದರೆ ಜನ ಸೇನೆಯನ್ನೇ ಪ್ರಶ್ನಿಸಲು ಶುರು ಮಾಡುತ್ತಾರಷ್ಟೆ. ನಾಗರಿಕರ ಸಾವಿನ ನಂತರ ಜಮ್ಮು ಕಾಶ್ಮೀರದ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಸರ್ಕಾರ ತನಿಖೆಯ ಭರವಸೆ ನೀಡಿದೆ ಮತ್ತು ಸೇನೆಯು ಮೂವರು ಹಿರಿಯ ಅಧಿಕಾರಿಗಳನ್ನು ಅವರ ಹುದ್ದೆಗಳಿಂದ ತೆಗೆದುಹಾಕಿದೆ. ಈ ಎರಡೂ ಸಂಸ್ಥೆಗಳು ಈಗ ತ್ವರಿತವಾಗಿ ನ್ಯಾಯ ನೀಡಬೇಕು. ಕಣಿವೆಯಲ್ಲಿ ಭದ್ರತಾ ಸಂಸ್ಥೆಗಳಿಂದ “ನಕಲಿ ಎನ್ಕೌಂಟರ್” ಸಾವುಗಳು ಮತ್ತು ಚಿತ್ರಹಿಂಸೆ ಪ್ರಕರಣಗಳು ಹೆಚ್ಚಿದ ಉಗ್ರಗಾಮಿ ಚಟುವಟಿಕೆಗಳಿಗೆ ಮತ್ತು ಸಾರ್ವಜನಿಕ ಆಕ್ರೋಶವು ಕಾನೂನು ಸುವ್ಯವಸ್ಥೆ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿವೆ. ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಸಾರ್ವಜನಿಕ ಆಕ್ರೋಶವನ್ನು ನಿಭಾಯಿಸಲು ಭಧ್ರತಾ ದೃಷ್ಟಿಕೋನದಿಂದ ಮಾತ್ರ ನೋಡುತ್ತಿದೆ. ಬಂಡಾಯ ನಿಗ್ರಹ ಕಾರ್ಯಾಚರಣೆಗಳ ಹೆಸರಿನಲ್ಲಿ ಹಕ್ಕುಗಳ ಉಲ್ಲಂಘನೆ ಮತ್ತು ಪದೇ ಪದೇ ಭಧ್ರತಾ ಪಡೆಗಳೇ ಇಂತಹ ಅಪರಾಧಗಳನ್ನು ಎಸಗುತ್ತಿರುವುದು ಈ ವಿಧಾನ ವಿಫಲವಾಗಿದೆ ಎಂಬುದರ ಸ್ಪಷ್ಟ ದ್ಯೋತಕ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT