ADVERTISEMENT

ಅಘೋಷಿತ ತುರ್ತುಪರಿಸ್ಥಿತಿ

Published - October 05, 2023 11:04 am IST

ನ್ಯೂಸ್‌ಕ್ಲಿಕ್‌ ಪ್ರಕರಣದಲ್ಲಿ ಬಂಧನಗಳು ಮತ್ತು ಪತ್ರಕರ್ತರ ಮನೆಗಳ ಮೇಲೆ ದಾಳಿ ಒಟ್ಟಾರೆ ಪತ್ರಕರ್ತರಿಗೆ ಭಯ ಹುಟ್ಟಿಸುವ ವಾತಾವರಣ ಸೃಷ್ಟಿಸಿದೆ.

ವಿಮರ್ಶಾತ್ಮಕ ಪತ್ರಿಕೋದ್ಯಮದ ಬಗ್ಗೆ ಅಸಹಿಷ್ಣುತೆ ತೋರುತ್ತಾ ಬಂದಿರುವ ಬಿಜೆಪಿ ನೇತೃತ್ವದ ಸರ್ಕಾರದ ಮಾನದಂಡಗಳಿಂದಲೂ ಸಹ ನ್ಯೂಸ್‌ಕ್ಲಿಕ್ ಸುದ್ದಿತಾಣದ ಮೇಲೆ ಮಂಗಳವಾರದ ಕ್ರಮಗಳು ತೀವ್ರವಾದ ಸೇಡಿನಿಂದ ಕೂಡಿದ ದಾರ್ಷ್ಟ್ಯದ ಕಿರುಕುಳ ಎನಿಸುತ್ತದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಕಠಿಣ ನಿಬಂಧನೆಗಳಡಿ ಸುದ್ದಿತಾಣದ ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಯಾವ ನಿರ್ದಿಷ್ಟ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಇಲ್ಲಿಯವೆರೆಗೆ ಸರ್ಕಾರ ಬಹಿರಂಗಪಡಿಸಿಲ್ಲ. ವರದಿಗಳ ಪ್ರಕಾರ, ಸುದ್ದಿತಾಣವು “ಚೀನೀ ಸಂಪರ್ಕಗಳಿರುವ ಭಯೋತ್ಪಾದನೆ”ಗೆ ತನಿಖೆಗೊಳಪಟ್ಟಿದೆ. ಆದರೆ “ಭಯೋತ್ಪಾದನೆ” ಅಥವಾ ಚೀನೀ ಪರ ಪ್ರಚಾರಕ್ಕೆ ಸಾಕ್ಷಿಯಾಗಿ ಸುದ್ದಿತಾಣದಲ್ಲಿ ಇದುವರೆಗೆ ಯಾವುದೇ ಲೇಖನವನ್ನು ನಿದರ್ಶನವಾಗಿ ತೋರಿಸಿಲ್ಲ. ಸುದ್ದಿ ಸಂಸ್ಥೆಯು ತಮಗೆ ಇದುವರೆಗೆ ಪ್ರಥಮ ಮಾಹಿತಿ ವರದಿಯ ಪ್ರತಿಯನ್ನು ನೀಡಿಲ್ಲ ಅಥವಾ ತನ್ನ ವಿರುದ್ಧದ ಆರೋಪಗಳೇನು ಎಂದೂ ತಿಳಿಸಿಲ್ಲ ಎಂದು ಹೇಳಿದೆ. ಆದರೆ ಈ ಸುದ್ದಿಸಂಸ್ಥೆಯ ಅನೇಕ ಪತ್ರಕರ್ತರು, ಉದ್ಯೋಗಿಗಳು ಮತ್ತು ಈ ಸುದ್ದಿತಾಣಕ್ಕೆ ಲೇಖನ ಬರೆಯುವವರ ಮೇಲೂ ದಾಳಿ ಮಾಡಲಾಗಿದೆ. ಅವರ ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸುದ್ದಿತಾಣದ ವಿರುದ್ಧ ಈ ಸರ್ಕಾರ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಸಂಸ್ಥೆಯು ೨೦೨೧ ರಿಂದ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ ಇಲಾಖೆಯ ತನಿಖೆಗೊಳಪಟ್ಟಿದೆ. ಈ ಹಿಂದೆಯೂ ಅನೇಕ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಈ ಸುದ್ದಿತಾಣದ ಯಾರ ವಿರುದ್ಧವೂ ಇದುವರೆಗೆ ಯಾವುದೇ ಆರೋಪಪಟ್ಟಿ ಸಲ್ಲಿಸಲಾಗಿಲ್ಲ. ಮೇಲ್ನೋಟಕ್ಕೆ ಈ ಪ್ರಕರಣ ನ್ಯೂಸ್‌ಕ್ಲಿಕ್ ಪರವಾಗಿದೆ ಎಂದು ದೆಹಲಿ ಹೈಕೋರ್ಟ್ ಪುರ್ಕಾಯಸ್ಥ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿ ಇಡಿಗೆ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಸೂಚಿಸಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ದೂರನ್ನು ಕೆಳ ನ್ಯಾಯಾಲಯ ವಜಾಗೊಳಿಸಿತ್ತು.

ಇತ್ತೀಚಿನ ದಾಳಿಗಳಿಗೆ ಪ್ರಚೋದನೆ ನ್ಯೂಸ್‌ಕ್ಲಿಕ್‌ನ ಒಬ್ಬ ಹೂಡಿಕೆದಾರನ ಉದ್ದೇಶಗಳನ್ನು ಪ್ರಶ್ನಿಸಿದ ನ್ಯೂಯಾರ್ಕ್ ಟೈಮ್ಸ್‌ನಲ್ಲಿನ ಲೇಖನವಾಗಿದೆ. ಈ ಹೂಡಿಕೆದಾರ ಚೀನಾ ಸರ್ಕಾರಕ್ಕೆ ಅತ್ಯಾಪ್ತ ಎಂದು ಪತ್ರಿಕೆ ಆರೋಪಿಸಿದೆ. ಆದರೆ ನ್ಯೂಸ್‌ಕ್ಲಿಕ್‌ ಸುದ್ದಿತಾಣದಲ್ಲಿ ಭಾರತದ ವಿರುದ್ಧ ಅಕ್ರಮ ಪ್ರಚಾರ ಮಾಡುತ್ತಿರುವ ಯಾವುದೇ ನಿರ್ದಿಷ್ಟ ಲೇಖನವನ್ನು ಅದು ಸೂಚಿಸಲಿಲ್ಲ. ಸರ್ಕಾರದ ಪ್ರತಿನಿಧಿಗಳು ನ್ಯೂಯಾರ್ಕ್ ಟೈಮ್ಸ್‌ನ ಈ ಲೇಖನ ಉಲ್ಲೇಖಿಸಿ ನ್ಯೂಸ್‌ಕ್ಲಿಕ್‌ ಸುದ್ದಿತಾಣದ ವಿರುದ್ಧ ವ್ಯವಸ್ಥಿತ ನಿಂದನೆ ಮತ್ತು ಸುಳ್ಳು ಮಾಹಿತಿ ಹಂಚುವ ಅಭಿಯಾನದಲ್ಲಿ ತೊಡಗಿದ್ದರು. ಮಂಗಳವಾರದ ಕ್ರಮಗಳು ಮಾಧ್ಯಮವನ್ನು ಬಲಿಪಶು ಮಾಡಲು ಮತ್ತು ವಿಮರ್ಶಾತ್ಮಕ ಪತ್ರಿಕೋದ್ಯಮದಲ್ಲಿ ತೊಡಗಿರುವವರಲ್ಲಿ ಭಯ ಹುಟ್ಟಿಸಲು ಮಾಡಿದವು ಎಂಬುದು ಸ್ಪಷ್ಟ. ಯಾವುದೇ ಸರ್ಕಾರವು ಒಂದು ಸುದ್ದಿತಾಣದ ಹಣಕಾಸು ಮೂಲದ ಬಗ್ಗೆ ಕೇವಲ ಅನುಮಾನದ ಮೇಲೆ ಹೀಗೆ ಪತ್ರಕರ್ತರನ್ನು ಗುರಿಯಾಗಿಸಿ ದಾರ್ಷ್ಟ್ಯದಿಂದ ದಾಳಿ ನಡೆಸಲಾಗದು, ನಡೆಸಕೂಡದು. ಇದು ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೊಡೆತ. ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ೧೯೭೫ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪುರ್ಕಾಯಸ್ಥ ಅವರನ್ನು ಕಠಿಣ ಆಂತರಿಕ ಭದ್ರತಾ ಕಾಯ್ದೆಯಡಿ ಬಂಧಿಸಿ ಜೈಲಿನಲ್ಲಿರಿಸಲಾಗಿತ್ತು. ಇಂದು, ಇತಿಹಾಸವು ಪುನರಾವರ್ತನೆಯಾಗುತ್ತಿರುವಂತೆ ತೋರುತ್ತಿದೆ. ಆದರೆ ಇಂದು ಘೋಷಿತ ತುರ್ತು ಪರಿಸ್ಥಿತಿಯ ನೆಪವೂ ಇಲ್ಲ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT