ADVERTISEMENT

ಹಗ್ಗದ ಮೇಲಿನ ನಡಿಗೆ  

March 22, 2023 11:08 am | Updated 11:08 am IST

ಭಾರತವು ಭೌಗೋಳಿಕ ರಾಜಕೀಯದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕಿದ್ದು, ಯಾವುದೇ ಪಲ್ಲಟ ಮಾಡವುದು ಸಿಂಧುವಲ್ಲ

೨೦೦೬ ರಿಂದ ಭಾರತ ಮತ್ತು ಜಪಾನ್‌ನ ಪ್ರಧಾನ ಮಂತ್ರಿಗಳು ತಮ್ಮ ವಾರ್ಷಿಕ ಶೃಂಗಸಭೆಗಾಗಿ ಎರಡೂ ದೇಶಗಳಿಗೆ ಭೇಟಿ ನೀಡಿದ್ದು ಈ ಸಭೆಗಳು ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸಿದೆ. ಆದರೆ ಈ ವಾರ ದೆಹಲಿಗೆ ಅವರ ತ್ವರಿತ “ಅಧಿಕೃತ ಭೇಟಿ”ಯ ಸಮಯದಲ್ಲಿ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಗಮನವು ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಗಿಂತಲೂ ಎರಡು ವಿಷಯಗಳ ಮೇಲೆ ಕೇಂದ್ರೀಕೃತವಾಗಿತ್ತು: ಮುಖ್ಯವಾಗಿ ಯುಕ್ರೇನ್ ಸಂಘರ್ಷದಿಂದ ಉದ್ಭವಿಸಿರುವ ಆಹಾರ ಮತ್ತು ಇಂಧನ ಭದ್ರತೆ ಸಮಸ್ಯೆಗಳ ಹಿನ್ನೆಲೆಯಲ್ಲಿ ಜಿ-೭ ಮತ್ತು ಜಿ-೨೦ ಅಜೆಂಡಾಗಳನ್ನು ಸಂಯೋಜಿಸುವುದು ಮತ್ತು ಉಚಿತ ಮತ್ತು ಮುಕ್ತ ಇಂಡೋ-ಪೆಸಿಫಿಕ್ (ಎಫ್.ಓ.ಐ.ಪಿ) ಗಾಗಿ ಜಪಾನ್‌ನ $೭೫ ಶತಕೋಟಿ ಯೋಜನೆಯನ್ನು ಅನಾವರಣಗೊಳಿಸುವುದು. ಎಫ್.ಓ.ಐ.ಪಿ ಅಡಿ ಇಂಡೋ-ಪೆಸಿಫಿಕ್ ಪ್ರಾಂತ್ಯದ ದೇಶಗಳೊಂದಿಗೆ ಕೆಲಸ ಮಾಡಿ ಈ ಪ್ರಾಂತ್ಯದಲ್ಲಿನ ದೇಶಗಳು ಸಾಲದ ಬಲೆಯಲ್ಲಿ ಸಿಲುಕುವುದನ್ನು ತಪ್ಪಿಸುವುದು, ಮೂಲಸೌಕರ್ಯಗಳನ್ನು ನಿರ್ಮಿಸುವುದು ಮತ್ತು ಕಡಲ ಮತ್ತು ವಾಯು ಭದ್ರತೆಯನ್ನು ಹೆಚ್ಚಿಸುವುದು ಜಪಾನಿನ ಗುರಿ. ರಷ್ಯಾ ಮತ್ತು ಚೀನಾಗಳಿಂದ ಉದ್ಭವಿಸುತ್ತಿರುವ ಸವಾಲುಗಳನ್ನು ಎದುರಿಸಲು ಜಾಗತಿಕವಾಗಿ ಒಮ್ಮತ ಮೂಡಿಸುವ ಪ್ರಾಮುಖ್ಯತೆಯನ್ನು ಕಿಶಿಡಾ ಒತ್ತಿ ಹೇಳುತ್ತಿದ್ದರು. ಈ ವಿಷಯದಲ್ಲಿ ಜಪಾನ್ ಪಾಶ್ಚಿಮಾತ್ಯ ಶಕ್ತಿಗಳೊಂದಿಗೆ ಕೈಜೋಡಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗಿನ ಮಾತುಕತೆಯಲ್ಲಿ ಕಿಶಿಡಾ ಅವರು ಯುಕ್ರೇನಿನ ಮೇಲೆ ರಷ್ಯಾದ ಆಕ್ರಮಣಶೀಲತೆಯನ್ನು ಖಂಡಿಸಲು ಮತ್ತು ಇದಕ್ಕೆ ಪರಿಹಾರ ಹುಡುಕಲು ಜಿ-೭ ಯೋಜನೆಯನ್ನು ಜಿ-೨೦ ಅಧ್ಯಕ್ಷ ಸ್ಥಾನ ಹೊಂದಿರುವ ಭಾರತ ಬೆಂಬಲಿಸಬೇಕು ಎಂದು ನೇರವಾಗಿ ಹೇಳಿದರು ಎನ್ನಲಾಗಿದೆ. ಅವರು ಚೀನಾವನ್ನು ನೇರವಾಗಿ ಹೆಸರಿಸದಿದ್ದರೂ ಅದರ ನೆರೆಹೊರೆಯಲ್ಲಿ ಚೀನಾದ ಕ್ರಮಗಳು ಜಪಾನ್‌ಗೆ ಕಳವಳವನ್ನುಂಟು ಮಾಡಿದೆ ಎಂಬುದು ಸ್ಪಷ್ಟ. ಅವರ ಎಫ್.ಓ.ಐ.ಪಿ ಯೋಜನೆಯಲ್ಲಿ ಭಾರತವನ್ನು ಅವರು “ಅನಿವಾರ್ಯ ಪಾಲುದಾರ” ಎಂದು ಭಾವಿಸಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮಾಸ್ಕೋ ಭೇಟಿಯ ಸಮಯಕ್ಕೆ ಸರಿಯಾಗಿ ಅವರು ಭಾರತಕ್ಕೆ ಭೇಟಿ ನೀಡಿದರು. ಇದು ಕಾಕತಾಳೀಯವಲ್ಲ. ಅತ್ತ ಮಂಗಳವಾರ ಕ್ಸಿ ಅವರು ಪುಟಿನ್ ಅನ್ನು ಭೇಟಿ ಮಾಡಿ ಶಕ್ತಿ ಪ್ರದರ್ಶನ ಮಾಡಿದರೆ ಕಿಶಿಡಾ ಅವರು ಯುಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಬೆಂಬಲಿಸಲು ಕೀವ್‌ಗೆ ಹಾರಿದರು. ಯುದ್ಧ ಪ್ರಾರಂಭವಾದ ನಂತರ ಇದು ಅವರ ಮೊದಲ ಭೇಟಿ.

ಟೋಕಿಯೊದೊಂದಿಗೆ ಉತ್ತಮ ದ್ವಿಪಕ್ಷೀಯ ಮತ್ತು ಕ್ವಾಡ್ ಮೂಲಕ ಬಹುಪಕ್ಷೀಯ ಸಹಕಾರ ಸಂಬಂಧ ಹೊಂದಿರುವ ನವದೆಹಲಿಯಲ್ಲಿ ಕಿಶಿಡಾ ಅವರು ಸ್ವಾಗತಾರ್ಹ ಅತಿಥಿಯಾಗಿದ್ದರು. ಹೆಚ್ಚು ವಿಳಂಬವಾಗಿರುವ ಬುಲೆಟ್ ರೈಲು ಯೋಜನೆಗೆ ಜಪಾನಿನ ಸಾಲ ಮತ್ತು ಬಾಂಗ್ಲಾದೇಶ ಮತ್ತು ಭಾರತದ ಈಶಾನ್ಯದ ನಡುವೆ ಸಂಪರ್ಕ ಸಾಧನೆಯೂ ಸೇರಿದಂತೆ ಉಭಯ ದೇಶಗಳು ಅನೇಕ ಯೋಜನೆಗಳಲ್ಲಿ ಕೈಜೋಡಿಸಿವೆ. ಜಿ-೭ ಮತ್ತು ಜಿ-೨೦ ಅಧ್ಯಕ್ಷರಾಗಿ ಜಾಪಾನ್ ಮತ್ತು ಭಾರತ ತಮ್ಮ ಆದ್ಯತೆಗಳನ್ನು ಸಂಯೋಜಿಸುವುದರಿಂದ ಜಾಗತಿಕ ದಕ್ಷಿಣವು ಎರಡೂ ಶೃಂಗಗಳಲ್ಲಿ ತನ್ನ ನ್ಯಾಯಯುತ ಪಾಲು ಪಡೆಯಲು ಸಹಕಾರಿಯಾಗುತ್ತದೆ. ಯುಕ್ರೇನ್ ಯುದ್ಧದ ಅಂತ್ಯ ಮತ್ತು ಅದರ ನೆರೆಹೊರೆಯಲ್ಲಿ ಚೀನಾದ ಆಕ್ರಮಣವನ್ನು ತಡೆಗಟ್ಟುವುದು ಸಹ ಎರಡೂ ದೇಶಗಳ ಸಾಮಾನ್ಯ ಗುರಿಗಳಾಗಿವೆ. ಆದರೂ ಅವರು ಈ ವಿಷಯಗಳ ಕುರಿತು ಒಂದೇ ನಿಲುವು ಹೊಂದಿದ್ದಾರೆ ಎಂದು ಭಾವಿಸುವುದು ತಪ್ಪು. ಭಾರತಕ್ಕಿಂತ ಭಿನ್ನವಾಗಿ ಜಪಾನ್ ಯುಎಸ್ ಒಕ್ಕೂಟದ ಭಾಗವಾಗಿದೆ. ರಷ್ಯಾ ವಿರುದ್ಧದ ನಿರ್ಬಂಧಗಳನ್ನೂ ಜಪಾನ್ ಒಪ್ಪಿ ಆಚರಿಸುತ್ತಿದೆ, ಭಾರತ ನಿರಾಕರಿಸಿದೆ. ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ನಲ್ಲಿ ಚೀನಾದ ಕ್ರಮಗಳ ಬಗ್ಗೆ ಭಾರತವು ತನ್ನ ಕಳವಳವನ್ನು ವ್ಯಕ್ತಪಡಿಸುತ್ತಿದೆಯಾದರೂ ದಕ್ಷಿಣ ಚೀನಾ ಸಮುದ್ರ, ತೈವಾನ್ ಜಲಸಂಧಿ ಇತ್ಯಾದಿಗಳಲ್ಲಿ ಚೀನಾದ ಕ್ರಮಗಳನ್ನು ನೇರವಾಗಿ ಟೀಕಿಸುವಲ್ಲಿ ಹಿಂಜರಿಯುತ್ತಿದೆ. ಮೋದಿಯವರು ಜಿ-೭ ಶೃಂಗ ಸಭೆಯ ವಿಶೇಷ ಆಹ್ವಾನಿತರಾಗಿ ಮೇನಲ್ಲಿ ಹಿರೋಷಿಮಾಗೆ ಭೇಟಿ ನೀಡಲಿದ್ದಾರೆ, ನಂತರ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಕ್ಸಿ ಮತ್ತು ಪುಟಿನ್ ಅವರಿಗೆ ಆತಿಥ್ಯ ನೀಡಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಿಯ ಮಿತ್ರ ಜಪಾನಿನ ಒತ್ತಾಯದ ನಡುವೆಯೂ ಭೌಗೋಳಿಕ ರಾಜಕೀಯ ವಿಷಯಗಳ ಮೇಲೆ ಹೊಸ ದೆಹಲಿಯ ಹಗ್ಗದ ಮೇಲಿನ ನಡಿಗೆಯನ್ನು ಕೈಬಿಡುವಂತಿಲ್ಲ.

This editorial has been translated from English, which can be read here.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT