ADVERTISEMENT

ಮುಂಗಾರಿನ ಲೆಕ್ಕ

Published - October 03, 2023 10:49 am IST

ಜಾಗತಿಕ ಹವಾಮಾನದ ಹೆಚ್ಚುತ್ತಿರುವ ಅನಿರೀಕ್ಷಿತ ಬದಲಾವಣೆಗಳ ವಿರುದ್ಧ ವಿಮೆಯ ಅಗತ್ಯವಿದೆ

೨೦೧೮ರಿಂದೀಚೆಗೆ ಮೊದಲ ಬಾರಿಗೆ ಭಾರತವು ಮುಂಗಾರು ಮಳೆಯ ಕೊರತೆಯನ್ನು ವರದಿ ಮಾಡಿದೆ. ಈ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಭಾರತವು ೮೨ ಸೆಂ.ಮೀ ಮಳೆ ದಾಖಲಿಸಿದೆ. ಇದು ‘ಸಾಮಾನ್ಯ’ ಎಂದು ಪರಿಗಣಿಸಲಾದ ೮೯ ಸೆಂ.ಮೀಗಿಂತ ಸುಮಾರು ಶೇ. ೬ರಷ್ಟು ಕಡಿಮೆಯಾಗಿದೆ. ಈ ವರ್ಷ ಎಲ್ ನಿನೊ ಪರಿಸ್ಥಿತಿ ರೂಪುಗೊಳ್ಳುವ ಸಾಧ್ಯತೆ ಇದ್ದದ್ದರಿಂದ ಏಪ್ರಿಲ್ಲಿನಿಂದಲೇ ಈ ಬಾರಿ ಮುಂಗಾರು ಕೊರತೆಯಾಗುವ ಸೂಚನೆಗಳಿದ್ದವು. ಮಧ್ಯ ಮತ್ತು ಪೂರ್ವ ಪೆಸಿಫಿಕ್ ಸಾಗರದ ಈ ಆವರ್ತಕ ತಾಪಮಾನ ಏರಿಕೆಯು ಸಾಮಾನ್ಯವಾಗಿ ಭಾರತದ ಮೇಲೆ, ವಿಶೇಷವಾಗಿ ವಾಯುವ್ಯದಲ್ಲಿ ಮಳೆ ಕೊರತೆಗೆ ಕಾರಣವಾಗುತ್ತದೆ. ೨೦೧೯ ಮತ್ತು ೨೦೨೨ರ ನಡುವೆ, ಭಾರತೀಯ ಮುಂಗಾರು ಎಲ್ ನಿನೊದ ವ್ಯತಿರಿಕ್ತ ವಿದ್ಯಮಾನ - ಸಾಗರ ಮೇಲ್ಮೈ ತಾಪಮಾನವನ್ನು ತಂಪಾಗಿಸುವ - ಲಾ ನಿನಾದಿಂದ ಗಮನಾರ್ಹವಾಗಿ ಪ್ರಭಾವಿತವಾಗಿತ್ತು. ಇದು ಹಲವು ಬಾರಿ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಗೆ ಕಾರಣವಾಗಿದೆ. ಹಾಗಾಗಿ ಈ ವರ್ಷ ಸಾಮಾನ್ಯ ಮಳೆಯ ನಿರೀಕ್ಷೆ ಏನೂ ಇರಲಿಲ್ಲ. ಆದರೆ ಈ ವರ್ಷ ಮುಂಗಾರು ಮಳೆಯ ಅನುಭವ ಅಸಾಮಾನ್ಯವಾಗಿತ್ತು. ದೇಶದ ಸುಮಾರು ಶೇ. ೯ರಷ್ಟು ಪ್ರದೇಶ ‘ಹೆಚ್ಚುವರಿ’ ಮಳೆಯನ್ನು ಪಡೆದಿದ್ದರೆ, ಶೇ. ೧೮ರಷ್ಟು ಪ್ರದೇಶ ‘ಕೊರತೆ’ ಅನುಭವಿಸಿತು ಮತ್ತು ಉಳಿದ ಭಾಗಗಳಲ್ಲಿ ‘ಸಾಮಾನ್ಯ’ ಮಳೆಯಾಗಿದೆ. ಒಂದೆಡೆ ಮುಂಗಾರು ಋತುವಿನ ಎರಡನೇ ಅತಿ ಮುಖ್ಯ ತಿಂಗಳು ಆಗಸ್ಟಿನಲ್ಲಿ ಮೂರನೇ ಒಂದು ಭಾಗದಷ್ಟು ಕೊರತೆ ಮಳೆ ದಾಖಲಾಗಿದ್ದರೆ, ಮತ್ತೊಂದೆಡೆ ಕನಿಷ್ಠ ಮಳೆಯ ನಿರೀಕ್ಷೆಯಲ್ಲಿದ್ದ ಉತ್ತರ ಭಾರತದ ಹಲವಾರು ರಾಜ್ಯಗಳು ದಾಖಲೆಯ ಮಳೆ ಕಂಡು ಪ್ರವಾಹಕ್ಕೆ ಒಳಗಾದವು. ಉದಾಹರಣೆಗೆ, ಜುಲೈನಲ್ಲಿ ಚಂಡೀಗಢ, ಹರ್ಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಅಸಾಧಾರಣವಾದ ಭಾರೀ ಮಳೆ ಸುರಿದು, ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಯಿತು. ಹಲವಾರು ದಿನಗಳು ಹಲವಾರು ನಗರಗಳು ಗಂಭೀರ ಪ್ರವಾಹದಿಂದ ತತ್ತರಿಸಿದವು. ಹಿಮಾಚಲ ಪ್ರದೇಶದಲ್ಲಿ ಆಗಸ್ಟಿನಲ್ಲಿ ಮೇಘಸ್ಫೋಟಗಳು ವರದಿಯಾಗಿದ್ದವು. ಪಾಶ್ಚಿಮಾತ್ಯ ಅಡಚಣೆಗಳು ಎಂದು ಕರೆಯಲ್ಪಡುವ ಮೆಡಿಟರೇನಿಯನ್ ಪ್ರದೇಶದ ಉಷ್ಣವಲಯದ ಚಂಡಮಾರುತಗಳು ಈ ಪ್ರದೇಶದಲ್ಲಿ ಹೆಚ್ಚುವರಿ ಮಳೆಗೆ ಕಾರಣ. ಇವು ಭಾರತದ ಮುಂಗಾರಿನಲ್ಲಿ ಯಾವುದೇ ಪ್ರಮುಖ ಪಾತ್ರ ವಹಿಸುತ್ತಿರಲಿಲ್ಲ. ಹೀಗಾಗಿ, ಇವು ಮಾನವಜನ್ಯ ತಾಪಮಾನ ಏರಿಕೆಯ ವ್ಯಾಪಕ ಪರಿಣಾಮಗಳ ಬೆರಳಚ್ಚುಗಳಾಗಿವೆ.

ಇನ್ನೊಂದು ತುದಿಯಲ್ಲಿ ಮಹಾರಾಷ್ಟ್ರದಲ್ಲಿ ಬರಗಾಲದಂತಹ ಪರಿಸ್ಥಿತಿ ಇತ್ತು. ಛತ್ತೀಸ್‌ಗಢ, ಬಿಹಾರ ಮತ್ತು ಕರ್ನಾಟಕದಿಂದಲೂ ತೀವ್ರ ನೀರಿನ ಅಭಾವ ವರದಿಯಾಗಿದೆ. ಕರ್ನಾಟಕದಲ್ಲಿ ಉದ್ಭವಿಸಿದ ನೀರಿನ ಅಭಾವ ನೆರೆಯ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ವಿಷಯವಾಗಿ ವಿವಾದಕ್ಕೆ ದಾರಿ ಮಾಡಿಕೊಟ್ಟಿತು. ಭಾರತೀಯ ಹವಾಮಾನ ಇಲಾಖೆಯು ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಈಶಾನ್ಯ ಮುಂಗಾರು ‘ಸಾಮಾನ್ಯ’ವಾಗಿರಲಿದೆ ಎಂದು ಹೇಳಿದೆ. ವಾಯುವ್ಯ ಭಾರತ ಮತ್ತು ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ “ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ” ಆಗುತ್ತದೆ ಎಂದು ಮುನ್ಸೂಚನೆ ತಿಳಿಸಿದೆ. ದಕ್ಷಿಣ ಭಾರತದ ಹಲವೆಡೆ ಮಳೆ ಹೆಚ್ಚಾಗುವ ಲಕ್ಷಣಗಳಿವೆ. ಮುಂಗಾರು ಮಳೆಯ ಪ್ರಾದೇಶಿಕ ಮತ್ತು ತಾತ್ಕಾಲಿಕ ಅಸಮರ್ಪಕ ಹಂಚಿಕೆಯು ಹವಾಮಾನ ವೈಪರೀತ್ಯವನ್ನು ತಡೆದುಕೊಳ್ಳಬಲ್ಲ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಅಗತ್ಯವನ್ನು ಸೂಚಿಸುತ್ತದೆ. ಇದು ಜಾಗತಿಕ ಹವಾಮಾನದ ಹೆಚ್ಚುತ್ತಿರುವ ಅನಿರೀಕ್ಷಿತ ಬದಲಾವಣೆಗಳ ವಿರುದ್ಧ ವಿಮೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಮುಂಗಾರಿನ ಬದಲಾವಣೆಗಳ ಬಗ್ಗೆ ಒಂದು ಅಥವಾ ಎರಡು ವಾರ ಮುಂಚಿತವಾಗಿಯೇ ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ಇದರ ಮೇಲೆ ಇನ್ನೂ ಹೆಚ್ಚಿನ ಹಣ ಹೂಡಬೇಕು ಮತ್ತು ಪರಿಣತಿಯನ್ನು ಸುಧಾರಿಸಬೇಕು.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT