ADVERTISEMENT

ಸಮಾನತೆ ಮತ್ತು ಅಸ್ಮಿತೆ

Published - October 06, 2023 11:50 am IST

ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಯು ಜಾತಿಯ ಅಸ್ಮಿತೆಯನ್ನು ಬಲಪಡಿಸುವ ಮೂಲಕ ಆಗಬಾರದು.

ಬಿಹಾರವು ಜಾತಿ ಸಮೀಕ್ಷೆ ನಡೆಸಿ ಅದರ ಜನಸಂಖ್ಯೆಯ ಜಾತಿವಾರು ಎಣಿಕೆಯನ್ನು ಪ್ರಕಟಿಸಿರುವುದು ಅತ್ಯಂತ ಮಹತ್ವದ ನಡೆಯಾಗಿದೆ. ಒಂದು ಜನಗಣತಿಯಂತೆಯೇ ಎರಡು ಹಂತಗಳಲ್ಲಿ ಮೊದಲು ಮನೆಗಳನ್ನು ಪಟ್ಟಿ ಮಾಡಿ ನಂತರ ಮನೆಮನೆಗೂ ತೆರಳಿ ಅವರ ಸಂಪೂರ್ಣ ಮಾಹಿತಿ ಪಡೆಯುವ ಮೂಲಕ ಈ ಸಮೀಕ್ಷೆ ನಡೆಸಲಾಗಿದೆ. ಬಿಹಾರದ ೧೩ ಕೋಟಿ ಜನಸಂಖ್ಯೆಯಲ್ಲಿ ಶೇ. ೬೩ರಷ್ಟು ಜನ ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ ಎಂದು ಈ ಸಮೀಕ್ಷೆಯು ಬಹಿರಂಗಪಡಿಸಿದೆ. ಜನರ ಸಾಮಾಜಿಕ-ಆರ್ಥಿಕ ವಿವರಗಳನ್ನೂ ಕಲೆಹಾಕಲಾಗಿದ್ದರೂ ಅದನ್ನು ಇನ್ನೂ ಬಹಿರಂಗಪಡಿಸಿಲ್ಲ. ರಾಷ್ಟ್ರ ಮಟ್ಟದಲ್ಲಿ ಇದು ದೇಶಾದ್ಯಂತ ಜಾತಿಗಣತಿ ಮಾಡಬೇಕೆಂಬ ಬೇಡಿಕೆಗೆ ಉತ್ತೇಜನ ನೀಡಬಹುದು ಮತ್ತು ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಒಟ್ಟು ಮೀಸಲಾತಿ ಶೇ. ೫೦ರಷ್ಟು ಮೀರಬಾರದು ಎಂಬ ಮಿತಿಯನ್ನು ಮರುಪರಿಶೀಲಿಸುವತ್ತ ನ್ಯಾಯಾಂಗವನ್ನು ದೂಡಬಹುದು. ಪಕ್ಷ ರಾಜಕೀಯ ದೃಷ್ಟಿಯಲ್ಲಿ ನೋಡುವುದಾದರೆ, ಹಿಂದುಳಿದ ವರ್ಗಗಳ ಅಸ್ಮಿತೆಯ ಆಧಾರದ ಮೇಲೆ ರಾಜಕೀಯ ಮಾಡಬಯಸುವ ಪಕ್ಷಗಳು ಮತ್ತು ಎಲ್ಲ ಹಿಂದೂಗಳನ್ನೂ ಒಂದೇ ಮತಬ್ಯಾಂಕಾಗಿ ಪರಿವರ್ತಿಸಲು ಹವಣಿಸುವ ಬಿಜೆಪಿ ನಡುವಿನ ಸಾಂಪ್ರದಾಯಿಕ ಸಂಘರ್ಷದಲ್ಲಿ ಹೊಸ ಅಧ್ಯಾಯ ತೆರೆಯಬಹುದು. ಹಿಂದುತ್ವವು ಹಿಂದುಳಿದ ವರ್ಗಗಳ ಅಸ್ಮಿತೆಯ ರಾಜಕೀಯ ಮಾಡುವ ಪಕ್ಷಗಳಿಗೆ ಹೊಡೆತ ನೀಡಿರುವ ಈ ಹೊತ್ತಲ್ಲಿ ಪ್ರಭಾವಿ ಸಮುದಾಯಗಳು ತಮ್ಮ ಜನಸಂಖ್ಯಾ ಬಲದ ಮೇಲೆ ತಮ್ಮ ಹಿತಾಸಕ್ತಿಗಳನ್ನು ಮುಂದು ಮಾಡಲು ಈ ಅವಕಾಶ ಬಳಸಿಕೊಳ್ಳಬಹುದು. ವಿವಿಧ ರಾಜ್ಯಗಳಲ್ಲಿ ಮೀಸಲಾತಿ ಮಟ್ಟವನ್ನು ಸಮರ್ಥಿಸಲು ನ್ಯಾಯಾಂಗವು ಕೇಳುತ್ತಿರುವ ದತ್ತಾಂಶವನ್ನು ಈ ಸಮೀಕ್ಷೆ ಒದಗಿಸಬಲ್ಲದು.

ಜಾತಿಗಣತಿಯನ್ನು ಹೇಗೆ ಮಾಡಬೇಕೆಂದು ಬಿಹಾರವು ಒಂದು ಉತ್ತಮ ಮಾದರಿ ರೂಪಿಸಿಕೊಟ್ಟಿದೆ. ರಾಜ್ಯದ ಜಾತಿಗಳ ಪಟ್ಟಿಯಲ್ಲಿರುವ ೨೧೪ ಜಾತಿಗಳಲ್ಲಿ ಪ್ರತಿಯೊಂದಕ್ಕೂ ಒಂದು ಕೋಡ್ ನೀಡಲಾಯಿತು. ಉಪ-ಜಾತಿಗಳು ಮತ್ತು ಪಂಗಡಗಳನ್ನು ಮುಂಚಿತವಾಗಿಯೇ ಗುರುತಿಸಿ ಅವುಗಳನ್ನು ವಿಶಾಲವಾದ ಜಾತಿಗಳಲ್ಲಿ ಯಾವುದರಡಿ ದಾಖಲಿಸಬೇಕು ಎಂದು ಮೊದಲೇ ಮಾರ್ಗಸೂಚಿ ನೀಡಲಾಯಿತು. ಇದರಿಂದ ಗಣತಿದಾರರು ಜನರು ಹೇಳಿದ ಜಾತಿಗನುಗುಣವಾಗಿ ಸೂಕ್ತ ಕೋಡ್ ಅನ್ನು ನೀಡಲು ಅನುವಾಯಿತು. ಕೇಂದ್ರ ಸರ್ಕಾರವು ತನ್ನ ೨೦೧೧ರ ‘ಸಾಮಾಜಿಕ-ಆರ್ಥಿಕ ಮತ್ತು ಜಾತಿಗಣತಿ’ಯ ಜಾತಿ-ಸಂಬಂಧಿತ ವಿವರಗಳನ್ನು ಬಿಡುಗಡೆ ಮಾಡದಿರಲು ಒಂದು ಪ್ರಮುಖ ಕಾರಣ ಈ ಮಾಹಿತಿಯು ತುಂಬಾ ಗೊಂದಲಮಯವಾಗಿರುವುದು. ೪೬ ಲಕ್ಷ ಜಾತಿಗಳನ್ನು ಜನರು ಹೆಸರಿಸಿದ್ದಾರೆ. ಬಹುಶಃ ಅವರು ತಮ್ಮ ಜಾತಿಗಳನ್ನು ಹೆಸರಿಸಲು ಕೇಳಿದಾಗ ಜಾತಿಗಳು, ಉಪಜಾತಿಗಳು, ಪಂಗಡಗಳು, ಕುಲಗಳು ಮತ್ತು ಉಪನಾಮಗಳನ್ನು ಹೇಳಿದ್ದಾರೆ. ಪ್ರತಿ ಜಾತಿಯಲ್ಲೂ ಎಷ್ಟು ಜನರಿದ್ದಾರೆ ಎಂದು ನಿಖರವಾಗಿ ತಿಳಿದುಕೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ. ಆದರೆ ಸಂವಿಧಾನದ ಗುರಿ ಜಾತಿರಹಿತ ಸಮಾಜದ ನಿರ್ಮಾಣ ಎಂಬುದನ್ನು ನಾವು ಮರೆಯಬಾರದು. ಜಾತಿಯ ಅಸ್ಮಿತೆಯನ್ನು ಬಲಪಡಿಸದೆ ಸಮಾನ ಅವಕಾಶಗಳ ಸೃಷ್ಟಿ ಮತ್ತು ಸಂಪನ್ಮೂಲಗಳ ನ್ಯಾಯಯುತ ಹಂಚಿಕೆ ಮಾಡಲು ಸರ್ಕಾರಗಳು ಉತ್ತಮ ಮಾರ್ಗಗಳನ್ನು ಹುಡುಕಬೇಕು.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT