ADVERTISEMENT

ಸತ್ವವಿಲ್ಲದ ನ್ಯೂಸ್‌ಕ್ಲಿಕ್ ಪ್ರಕರಣ

Published - October 09, 2023 10:27 am IST

ವೈಯಕ್ತಿಕ ಮತ್ತು ಮಾಧ್ಯಮ ಹಕ್ಕುಗಳನ್ನು ದುರ್ಬಲಗೊಳಿಸಲು ರಾಷ್ಟ್ರೀಯ ಭದ್ರತಾ ಭಾವನೆಯನ್ನು ಕೆರಳಿಸುವ ಮತ್ತು ಭಯೋತ್ಪಾದನಾ-ವಿರೋಧಿ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವ ಈ ಆಡಳಿತದ ಪ್ರವೃತ್ತಿಯನ್ನು ಈ ಪ್ರಕರಣವು ಎತ್ತಿತೋರಿಸುತ್ತದೆ

ನ್ಯೂಸ್‌ಕ್ಲಿಕ್‌ ಸುದ್ದಿತಾಣದ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಮತ್ತು ಇತರರ ವಿರುದ್ಧ ದೆಹಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಯಾವುದೇ ಅಪರಾಧ ಸಂಭವಿಸಿರಬಹುದೆಂಬುದಕ್ಕೆ ಪುರಾವೆ ಒದಗಿಸುವುದಿಲ್ಲವಾದರೂ ಭಯೋತ್ಪಾದನೆಯ ಅಸ್ಪಷ್ಟ ಆರೋಪ ಮಾಡುತ್ತದೆ. ಈ ಸುದ್ದಿತಾಣದಲ್ಲಿ ಯಾವುದೇ ಪ್ರಕಟಿತ ಲೇಖನವನ್ನು ಉಲ್ಲೇಖಿಸದೆ, ಈ ಎಫ್‌ಐಆರ್ ದೇಶದ ಭದ್ರತೆಯನ್ನು ದುರ್ಬಲಗೊಳಿಸುವ ಪಿತೂರಿಯಿಂದ ಹಿಡಿದು ೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನ, ಚುನಾಯಿತ ಸರ್ಕಾರದ ವಿರುದ್ಧ ಅಸಮಾಧಾನ ಹುಟ್ಟುಹಾಕುವುದು ಮತ್ತು ಅಗತ್ಯ ಸೇವೆಗಳಿಗೆ ಅಡ್ಡಿಪಡಿಸುವವರೆಗೆ ಅನೇಕ ಆರೋಪಗಳನ್ನು ಮಾಡಿದೆ. ಇದು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ನಿಬಂಧನೆಗಳು, ಪಿತೂರಿ ಮತ್ತು ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲು ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ನಿಬಂಧನೆಗಳಡಿ ಪ್ರಕರಣ ದಾಖಲಿಸಿದೆ. ಗಮನಾರ್ಹವಾಗಿ, ಇದು ಕಾನೂನುಬಾಹಿರ ಚಟುವಟಿಕೆ ಅಥವಾ ಭಯೋತ್ಪಾದಕ ಕೃತ್ಯ ಎಂದು ಹೇಳಬಹುದಾದ ಯಾವುದೇ ಕೃತ್ಯವನ್ನು ಉಲ್ಲೇಖಿಸುವುದಿಲ್ಲ. ಸರ್ಕಾರದ ವಿರುದ್ಧ ಅಸಮಾಧಾನ ಉಂಟುಮಾಡುವ, ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಅಲ್ಲಗಳೆಯುವ ಮತ್ತು ಅದರ ಏಕತೆ ಮತ್ತು ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ದೇಶ ವಿರೋಧಿ ಶಕ್ತಿಗಳಿಂದ ವಿದೇಶಿ ಹಣವನ್ನು ಅಕ್ರಮವಾಗಿ ಪಡೆಯಲಾಗಿದೆ ಎಂದು ಆರೋಪಿಸುತ್ತದೆ. ಒಂದು ಈ-ಮೇಲ್ ಸಂಭಾಷಣೆ ಆಧರಿಸಿ ಅರುಣಾಚಲ ಪ್ರದೇಶ ಮತ್ತು ಕಾಶ್ಮೀರವನ್ನು “ಭಾರತದ ಭಾಗವಲ್ಲ” ಎಂದು ತೋರಿಸಲು “ಪಿತೂರಿ” ಮಾಡಲಾಗಿದೆ ಎಂದು ಆರೋಪಿಸುತ್ತದೆ. ೨೦೨೦-೨೧ರ ರೈತರ ಆಂದೋಲನಕ್ಕೆ ಬೆಂಬಲ ನೀಡಿ ಆ ಮೂಲಕ ಸೇವೆಗಳು ಮತ್ತು ಇತರ ಅಗತ್ಯ ಸರಬರಾಜುಗಳ ಪೂರೈಕೆಯನ್ನು ಅಡ್ಡಿಪಡಿಸಲು ಸಂಚು ರೂಪಿಸಲಾಗಿತ್ತು ಎಂದೂ ಎಫ್‌ಐಆರ್ ಹೇಳುತ್ತದೆ. ಒಟ್ಟಿನಲ್ಲಿ, ನ್ಯೂಸ್‌ಕ್ಲಿಕ್‌ನಲ್ಲಿ ಅಮೇರಿಕಾದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಮ್ ಅವರ ಹೂಡಿಕೆಯನ್ನು ಸುದ್ದಿತಾಣದ ಪತ್ರಿಕೋದ್ಯಮದ ಜೊತೆ ಸಂಯೋಜಿಸಿ ಭಾರತದ ವಿರುದ್ಧದ ಪ್ರೋಪಗ್ಯಾಂಡಾಕ್ಕೆ ಮತ್ತು ದೇಶದ ಭಧ್ರತೆಯನ್ನು ಅಲ್ಲಗಳೆಯಲು “ಚೀನೀ” ಹಣವನ್ನು ಬಳಸಲಾಗುತ್ತಿದೆ ಎಂದು ಹೇಳುವ ಪ್ರಯತ್ನ ಇದು. ಯುಎಪಿಎ ಕಾನೂನು ಸಹ ಇಂತಹ ದುರುಪಯೋಗಕ್ಕೆ ಅನುವು ಮಾಡಿಕೊಡುತ್ತದೆ, ಏಕೆಂದರೆ ಅದರ ವಿಶಾಲ ವ್ಯಾಪ್ತಿ ಕೃತ್ಯಗಳನ್ನಷ್ಟೇ ಅಲ್ಲದೆ “ಆಲೋಚನೆ”ಯನ್ನೂ ಅಪರಾಧೀಕರಿಸಲು ಆಸ್ಪದ ನೀಡುತ್ತದೆ. ಬಂಧಿತರ ಸೆರೆವಾಸವನ್ನು ಲಂಬಿಸಲು ಮತ್ತು ಒಟ್ಟಾರೆ ಮಾಧ್ಯಮವನ್ನು ಬೆದರಿಸಲು ಯುಎಪಿಎ ಕಾನೂನಿಗೆ ಮೊರೆ ಹೋಗಲಾಗಿದೆ ಎಂಬುದು ಸ್ಪಷ್ಟ. ಇದಲ್ಲದೆ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಜನರಿಗೆ ಆಡಳಿತಾರೂಢ ಬಿಜೆಪಿಯು ‘ಚೀನೀ ಪಿತೂರಿ’ಯ ಕಥೆ ಹೇಳಬಹುದು. ಭಯೋತ್ಪಾದನೆಗೆ ಧನಸಹಾಯ ಮಾಡಲು ಎರಡು ಟೆಲಿಕಾಂ ಕಂಪನಿಗಳು ಶೆಲ್ ಕಂಪನಿಗಳನ್ನು ರಚಿಸಿವೆ ಎಂಬುದು ಸಂಬಂಧವಿಲ್ಲದ ಎಫ್‌ಐಆರ್‌ನಲ್ಲಿ ಸಾಂದರ್ಭಿಕ ಉಲ್ಲೇಖಕ್ಕಿಂತ ಪ್ರತ್ಯೇಕ ತನಿಖೆ ಬೇಡುವುದಿಲ್ಲವೇ ಎಂಬ ಪ್ರಶ್ನೆ ಸಹ ಏಳುತ್ತದೆ. ಈ ಕಂಪನಿಗಳ ರಕ್ಷಣೆಗಾಗಿ ಕಾನೂನು ಜಾಲವನ್ನು ರಚಿಸಲು ಸಹಾಯ ಮಾಡಿದವರಲ್ಲಿ ಒಬ್ಬ ವಕೀಲರು ಇದ್ದಾರೆ ಎಂದು ಉಲ್ಲೇಖಿಸಿ ಕಾನೂನು ಸೇವೆಗಳನ್ನು ಕೂಡಾ ಅಪರಾಧೀಕರಿಸಲು ಪೊಲೀಸರು ಹವಣಿಸುತ್ತಿದ್ದಾರೆ. ವೈಯಕ್ತಿಕ ಮತ್ತು ಮಾಧ್ಯಮ ಹಕ್ಕುಗಳನ್ನು ದುರ್ಬಲಗೊಳಿಸಲು ರಾಷ್ಟ್ರೀಯ ಭದ್ರತಾ ಭಾವನೆಯನ್ನು ಕೆರಳಿಸುವ ಮತ್ತು ಭಯೋತ್ಪಾದನಾ-ವಿರೋಧಿ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವ ಈ ಆಡಳಿತದ ಪ್ರವೃತ್ತಿಯನ್ನು ಈ ಪ್ರಕರಣವು ಎತ್ತಿತೋರಿಸುತ್ತದೆ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT