ADVERTISEMENT

ಸಾಲದ ಮೇಲಿನ ಚರ್ಚೆ

December 26, 2023 10:51 am | Updated 10:51 am IST

ಭಾರತದ ಸಾರ್ವಭೌಮ ಸಾಲದ ಅಪಾಯಗಳ ಬಗ್ಗೆ ಐಎಂಎಫ್ ಮಾಡಿದ ಮೌಲ್ಯಮಾಪನಕ್ಕೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಣಕಾಸು ಸಚಿವಾಲಯವು ಕಳೆದ ಶುಕ್ರವಾರ “ಭಾರತದೊಂದಿಗೆ ಐಎಂಎಫ್ ಆರ್ಟಿಕಲ್ ೪ ಸಮಾಲೋಚನೆಗಳ ವಾಸ್ತವಿಕ ನೆಲೆ” ಎಂಬ ಹೇಳಿಕೆ ಬಿಡುಗಡೆ ಮಾಡಿತು. ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಪ್ರತಿ ವರ್ಷ ಸದಸ್ಯ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸುತ್ತದೆ. ಐಎಂಎಫ್ ಸಿಬ್ಬಂದಿ ಈ ದೇಶಗಳ ಸರ್ಕಾರಗಳಿಂದ ಆರ್ಥಿಕ ಮಾಹಿತಿ ಕಲೆ ಹಾಕಿ ದೇಶದ ಉನ್ನತ ಅಧಿಕಾರಿಗಳ ಜೊತೆ ಆರ್ಥಿಕ ನೀತಿಯ ಬಗ್ಗೆ ಚರ್ಚೆ ನಡೆಸಿ ಒಂದು ವರದಿ ತಯಾರಿಸುತ್ತಾರೆ. ಈ ವರದಿಯನ್ನು ಐಎಂಎಫ್ ಕಾರ್ಯನಿರ್ವಾಹಕ ಮಂಡಳಿ ಚರ್ಚಿಸಿ ಬಿಡುಗಡೆ ಮಾಡುತ್ತದೆ. ಐಎಂಎಫ್ ತನ್ನ ಇತ್ತೀಚಿನ ಭಾರತ ಸಮಾಲೋಚನೆಯ ವಿವರಗಳನ್ನು ಬಿಡುಗಡೆ ಮಾಡಿದ ನಾಲ್ಕು ದಿನಗಳ ನಂತರ ಸಚಿವಾಲಯದ ಹೇಳಿಕೆಯು “ವಾಸ್ತವ ಸ್ಥಿತಿಯನ್ನು ಪ್ರತಿಬಿಂಬಿಸದ ಸಂಭವನೀಯ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಂಡು ಕೆಲವು ಊಹೆಗಳನ್ನು ಮಾಡಲಾಗಿದೆ” ಎಂದು ಹೇಳಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಪ್ರತಿಕೂಲ ಆಘಾತಗಳು ಭಾರತದ ಒಟ್ಟು ಸಾಲವನ್ನು ಮಧ್ಯಮ-ಅವಧಿಯಲ್ಲಿ (೨೦೨೭-೨೮ರ ವೇಳೆಗೆ) ಜಿಡಿಪಿಯ ಶೇ. ೧೦೦ಕ್ಕೆ ಅಥವಾ ಅದಕ್ಕೂ ಮೀರಿ ಹೆಚ್ಚಿಸಬಹುದು ಎಂಬ ಮುನ್ನೋಟವನ್ನು ಸಚಿವಾಲಯ ಉಲ್ಲೇಖಿಸುತ್ತಿದೆ. ಸಚಿವಾಲಯವು ಇದು ಕೇವಲ ಒಂದು ಊಹಾತ್ಮಕ ಕೆಟ್ಟ ಸನ್ನಿವೇಶವಾಗಿದೆಯೇ ಹೊರತು ಇದು ಆಗೇ ಆಗುತ್ತದೆ ಎಂದು ಐಎಂಎಫ್ ಸಹ ಹೇಳಿಲ್ಲ ಎಂದು ವಾದಿಸಿದೆ. ಐಎಂಎಫ್ ವರದಿಗಳು ಇತರ ದೇಶಗಳಿಗೆ “ಇನ್ನೂ ಕೆಟ್ಟ ಸನ್ನಿವೇಶಗಳನ್ನು” ಊಹಿಸಿದೆ ಎಂದೂ ಅದು ಹೇಳಿದೆ. ಉದಾಹರಣೆಗೆ ಅಮೆರಿಕಾ, ಯುಕೆ ಮತ್ತು ಚೀನಾಗೆ ಕ್ರಮವಾಗಿ ಸಾಲ ಜಿಡಿಪಿಯ ಶೇ. ೧೬೦, ಶೇ. ೧೪೦ ಮತ್ತು ಶೇ. ೨೦೦ರಷ್ಟಾಗಬಹುದೆಂದು ಐಎಂಎಫ್ ವರದಿಗಳು ಊಹಿಸಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯೋಜಿತ ಸಾಲವು ೨೦೨೦-೨೧ರಲ್ಲಿ ಜಿಡಿಪಿಯ ಶೇ. ೮೮ರಿಂದ ಕುಸಿದು ೨೦೨೨-೨೩ ರಲ್ಲಿ ಜಿಡಿಪಿಯ ಶೇ. ೮೧ರಷ್ಟಿದೆ. ಅನುಕೂಲಕರ ಸಂದರ್ಭಗಳಲ್ಲಿ ಇದು ೨೦೨೭-೨೮ರ ವೇಳೆಗೆ ಶೇ. ೭೦ಕ್ಕೆ ಇಳಿಯಬಹುದು ಎಂದು ಐಎಂಎಫ್ ಹೇಳಿದೆ. ಈ ಶತಮಾನದಲ್ಲಿ ಭಾರತ ಇಲ್ಲಿಯವರೆಗೆ ಎದುರಿಸಿದ ಆರ್ಥಿಕ ಆಘಾತಗಳಾದ ೨೦೦೮ರ ಆರ್ಥಿಕ ಬಿಕ್ಕಟ್ಟು ಮತ್ತು ಸಾಂಕ್ರಾಮಿಕವು ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಿದ ಜಾಗತಿಕ ಸಂಕಷ್ಟಗಳು ಎಂದು ಹಣಕಾಸು ಸಚಿವಾಲಯ ಎತ್ತಿತೋರಿಸಿದೆ. ಮಧ್ಯಮ ಅವಧಿಯಲ್ಲಿ ಸರ್ಕಾರದ ಸಾಲ ಜಿಡಿಪಿಯ ಶೇ. ೧೦೦ರಷ್ಟು ಮುಟ್ಟಲಿದೆ ಎಂಬ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸುತ್ತಾ ಸಚಿವಾಲಯವು ತಾನು ಐಎಂಎಫ್ ವರದಿಯನ್ನು ಅಲ್ಲಗಳೆಯುತ್ತಿಲ್ಲ ಬದಲಿಗೆ ಮಾಧ್ಯಮಗಳು ಆ ವರದಿಯನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿವೆ ಎಂದು ಹೇಳಿದೆ. ಐಎಂಎಫ್ ಕಾರ್ಯನಿರ್ವಾಹಕ ಮಂಡಳಿಯಲ್ಲಿನ ಭಾರತೀಯ ನಿರ್ದೇಶಕರು “ಕೆಟ್ಟ ಸನ್ನಿವೇಶದ” ಊಹೆಯ ಬಗ್ಗೆ ಭಾರತದ ಆಕ್ಷೇಪವನ್ನು ದಾಖಲಿಸಿದ್ದರು. ಆದರೆ ವಾಸ್ತವವಾಗಿ ಭಾರತದ ಆರ್ಥಿಕತೆಯ ಬಗ್ಗೆ ಐಎಂಎಫ್ ಗ್ರಹಿಕೆ ಕಳೆದ ವರ್ಷಕ್ಕಿಂತ ಈ ಬಾರಿ ಸುಧಾರಿಸಿದೆ. ೨೦೨೨ರಲ್ಲಿ ಭಾರತದ ವಿತ್ತೀಯ ಪರಿಸ್ಥಿತಿ ಅಪಾಯದಲ್ಲಿದೆ ಎಂದು ಹೇಳಿದ್ದ ಐಎಂಎಫ್ ಈ ವರ್ಷ ಆ ಅಪಾಯ ತಗ್ಗಿದೆ ಎಂದು ಹೇಳಿದೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಸಾಲದ ಮಟ್ಟ ಜಿಡಿಪಿಯ ಶೇ. ೫೭ರಷ್ಟಿದ್ದರೂ ವಿತ್ತೀಯ ಕೊರತೆಯ ಗುರಿಗಳನ್ನು ಸಾಧಿಸಿರುವುದು ಸಣ್ಣ ಸಾಧನೆಯೇನಲ್ಲ. ಈ ವರ್ಷ ವಿತ್ತೀಯ ಕೊರತೆ ಶೇ. ೫.೯ರಷ್ಟಿದ್ದು, ೨೦೨೫-೨೬ರ ವೇಳೆಗೆ ಅದನ್ನು ಶೇ. ೪.೫ರೊಳಗೆ ತರಬೇಕಿದೆ. ಇಂಥ ವರದಿಗಳಲ್ಲಿನ ಪ್ರತಿಕೂಲ ವಿವರಗಳಿಗೆ ಪ್ರತಿಕ್ರಿಯಿಸುತ್ತಾ ಹೋದರೆ ಅದರೆಡೆಗೆ ಹೆಚ್ಚಿನ ಗಮನ ಹೋಗುತ್ತದೆ. ಬದಲಿಗೆ ಕ್ರಿಯೆ ಯಾವಾಗಲೂ ಮಾತಿಗಿಂತ ಉತ್ತಮ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT