ADVERTISEMENT

ಪ್ರತೀಕಾರದ ಮನಸ್ಥಿತಿ

December 27, 2023 10:46 am | Updated 10:46 am IST

ಸಂವಿಧಾನದ ಜಾತ್ಯಾತೀತ ದೃಷ್ಟಿಕೋನದಿಂದ ನ್ಯಾಯಾಲಯಗಳು ದೂರ ಸರಿಯಬಾರದು

ಪೂಜಾ ಸ್ಥಳಗಳ ಸ್ಥಿತಿಯನ್ನು ಬದಲಾಯಿಸುವ ಪುನರಾವರ್ತಿತ, ಕೋಮುವಾದಿ ಪ್ರಯತ್ನಗಳಿಗೆ ನ್ಯಾಯಾಲಯಗಳು ಅವಕಾಶ ನೀಡಬಾರದು. ಪರೋಕ್ಷ ವಿಧಾನಗಳ ಮೂಲಕ ಮಸೀದಿಯನ್ನು ದೇವಾಲಯವನ್ನಾಗಿ ಪರಿವರ್ತಿಸುವ ಯೋಜನೆಯನ್ನು ತ್ವರಿತವಾಗಿಗೊಳಿಸಬಹುದಾದ ಮತ್ತೊಂದು ಆದೇಶದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ೧೯೯೧ರಲ್ಲಿ ಜ್ಞಾನವಾಪಿ ಮಸೀದಿಯ ಜಾಗದ ಒಂದು ಭಾಗವನ್ನು ಕಾಶಿ ವಿಶ್ವೇಶ್ವರನ ಸ್ವತ್ತೆಂದು ಘೋಷಿಸಬೇಕು ಎಂದು ಹೂಡಿದ್ದ ದಾವೆಯ ಮೇಲೆ ಕಾನೂನಿನ ನಿರ್ಭಂಧ ಇಲ್ಲ ಎಂದು ಹೇಳಿದೆ. ೨೦೨೨ರಲ್ಲಿ ಕೆಲ ಹಿಂದೂ ಭಕ್ತರಿಂದ ಹೂಡಿದ್ದ ಮೊಕದ್ದಮೆಯನ್ನು ಅನುಮತಿಸಿದಂತೆ, ಈ ಹಳೆಯ ದಾವೆಯೂ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ, ೧೯೯೧ ರಿಂದ ನಿರ್ಬಂಧಿಸಲ್ಪಡುವುದಿಲ್ಲ ಎಂದು ತೀರ್ಮಾನಿಸಿದೆ. ಈ ಕಾಯ್ದೆಯು ಎಲ್ಲ ಪೂಜಾ ಸ್ಥಳಗಳ ಸ್ಥಿತಿಯು ಆಗಸ್ಟ್ ೧೫, ೧೯೪೭ ರಂದು ಇದ್ದಂತೆಯೆ ಇರಬೇಕು, ಯಾವುದೇ ಬದಲಾವಣೆ ತರಕೂಡದು ಎಂದು ಕಾನೂನು ಮಾಡಿದೆ. ಆದರೆ ವಿಚಿತ್ರ ತರ್ಕದಲ್ಲಿ ಜ್ಞಾನವಾಪಿ ಕಟ್ಟಡದ “ಧಾರ್ಮಿಕ ಪಾತ್ರ” ಇನ್ನೂ ನಿರ್ಧರಿಸಲ್ಪಡದ ಕಾರಣ ಕಾಯ್ದೆಯು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಕುತಂತ್ರದ ದಾವೆಯನ್ನು ಮೊಳಕೆಯಲ್ಲೇ ಚಿವುಟಿಹಾಕುವ ಬದಲು ಜ್ಞಾನವಾಪಿ ಆವರಣದಲ್ಲಿನ ಕಟ್ಟಡವು ಮಸೀದಿಯೇ ಅಥವಾ ದೇವಾಲಯವೇ ಎಂದು ನಿರ್ಧರಿಸಲು ನ್ಯಾಯಾಲಯವು ಸಂಪೂರ್ಣ ಸಿವಿಲ್ ವಿಚಾರಣೆಗೆ ಅನುಮತಿ ನೀಡಿದೆ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಈ ಸ್ಥಿತಿಯನ್ನು ನಿರ್ಧರಿಸದ ಹೊರತು, ಇದನ್ನು ದೇವಸ್ಥಾನ ಅಥವಾ ಮಸೀದಿ ಎಂದು ಕರೆಯಲಾಗುವುದಿಲ್ಲ ಎಂದು ಹೇಳಿದೆ. ಈ ಹಾದಿಯಲ್ಲಿ ನಡೆದರೆ ಆಧುನಿಕ ಸಮಾಜವನ್ನು ಮಧ್ಯಕಾಲೀನ ದಬ್ಬಾಳಿಕೆಗೆ ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸುವ ಮನಸ್ಥಿತಿಗೆ ಮಾತ್ರ ಕೊಂಡೊಯ್ಯುತ್ತದೆ.

೨೦೨೨ರಲ್ಲಿ ಕೆಲವು ಮಹಿಳಾ ಭಕ್ತರು ಹೂಡಿದ್ದ ಮೊಕದ್ದಮೆಯನ್ನು ಅನುಮತಿಸುವಾಗ ದಾವೆಯು ಮಸೀದಿಯ ಆವರಣದಲ್ಲಿ ಹಿಂದೂ ದೇವತೆಗಳ ಪೂಜೆಗೆ ಅವಕಾಶ ಕೋರಿದೆಯೇ ಹೊರತು ಅದನ್ನು ದೇವಾಲಯವಾಗಿ ಪರಿವರ್ತಿಸಬೇಕು ಎಂದು ಕೇಳಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಆದರೆ ೧೯೯೧ರ ದಾವೆಯು ಜ್ಞಾನವಾಪಿ ಆವರಣದ ಮುಖ್ಯ ಕಟ್ಟಡವನ್ನು ಮಸೀದಿ ಅಲ್ಲವೆಂದೂ ಮತ್ತು ಮಸೀದಿಯ ಆಡಳಿತ ಮಂಡಳಿ ಈ ಕಟ್ಟಡದಿಂದ ಅದರ ಎಲ್ಲ ಧಾರ್ಮಿಕ ಕುರುಹುಗಳನ್ನು ತೆಗೆದುಹಾಕಬೇಕೆಂದು ಸ್ಪಷ್ಟವಾಗಿ ಕೋರಿದೆ. ಆದರೂ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ, ೧೯೯೧ ಈ ದಾವೆಗೆ ಅಡ್ಡ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿರುವುದು ಆಶ್ಚರ್ಯ. ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ಯಿಂದ ಆವರಣದ ಸಮೀಕ್ಷೆ ನಡೆಸಲು ಕೆಳಹಂತದ ನ್ಯಾಯಾಲಯದ ಆದೇಶವನ್ನು ಈ ಆದೇಶ ಎತ್ತಿಹಿಡಿದಿದೆ. ಆದರೆ ೧೯೯೧ರ ದಾವೆಯನ್ನು ನಿರ್ಧರಿಸಲು ೨೦೨೨ರ ದಾವೆಗಳ ಆಧಾರದ ಮೇಲೆ ಎಎಸ್ಐ ಸಮೀಕ್ಷೆ ಮಾಡುವಂತೆ ಆದೇಶಿಸಿದೆ. ಅಗತ್ಯಬಿದ್ದರೆ ಹೆಚ್ಚಿನ ಸಮೀಕ್ಷೆಗೂ ಅವಕಾಶ ಕಲ್ಪಿಸಿದೆ. ಕಳವಳದ ಸಂಗತಿಯೆಂದರೆ, ಹೈಕೋರ್ಟ್ ಆದೇಶದಲ್ಲಿ ಈ ಪ್ರಕರಣದಲ್ಲಿ ಎದ್ದಿರುವ ವಿವಾದವು “ರಾಷ್ಟ್ರೀಯ ಪ್ರಾಮುಖ್ಯತೆ”ಯ ವಿಷಯ ಎಂದು ಅದು ಹೇಳಿರುವುದು. ಎರಡು ಕಕ್ಷಿದಾರರ ನಡುವಿನ ವ್ಯಾಜ್ಯಗಳನ್ನು ನಿರ್ಣಯಿಸುವಾಗ ನ್ಯಾಯಾಲಯವು ಹೀಗೆ ಹೇಳಿರುವುದು ದಿಗ್ಭ್ರಮೆ ಮೂಡಿಸುತ್ತದೆ. ಸಂವಿಧಾನದ ಜಾತ್ಯಾತೀತ ದೃಷ್ಟಿಕೋನದಿಂದ ನ್ಯಾಯಾಲಯಗಳು ದೂರ ಸರಿಯಬಾರದು ಮತ್ತು ಪೂಜಾ ಸ್ಥಳಗಳ ಸ್ಥಿತಿಯನ್ನು ಬದಲಿಸಲು ಇರುವ ಶಾಸನಬದ್ಧ ತಡೆಯನ್ನು ಜಾರಿ ಮಾಡಬೇಕು.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT