ADVERTISEMENT

ಆಮೂಲಾಗ್ರ ಸುಧಾರಣೆ ಅಗತ್ಯ

Updated - October 12, 2023 10:40 am IST

Published - October 12, 2023 10:33 am IST

ಗೊಂದಲ ನಿವಾರಣೆ ಸ್ವಾಗತಾರ್ಹ, ಆದರೆ ಜಿಎಸ್‌ಟಿಗೆ ಸಮಗ್ರ ಸುಧಾರಣಾ ಯೋಜನೆಯ ಅಗತ್ಯವಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಕಳೆದ ಶನಿವಾರದಂದು ಸುಮಾರು ಹನ್ನೆರಡು ವಸ್ತುಗಳ ಮೇಲಿನ ತೆರಿಗೆಯ ಬಗ್ಗೆ ಇದ್ದ ಗೊಂದಲ ನಿವಾರಿಸಿತು. ಅವುಗಳಲ್ಲಿ ಕೆಲವು, ಉದಾಹರಣೆಗೆ ಕಾರ್ಪೊರೇಟ್ ಮತ್ತು ಬ್ಯಾಂಕ್ ಸಾಲಗಳಿಗೆ ವೈಯಕ್ತಿಕ ಖಾತರಿಗಳ ಮೇಲಿನ ತೆರಿಗೆಯ ಬಗ್ಗೆ ಗೊಂದಲ, ಜುಲೈ ೨೦೧೭ರಲ್ಲಿ ಜಿಎಸ್‌ಟಿ ಆಡಳಿತ ಜಾರಿಗೆ ಬಂದ ದಿನದಿಂದ ಇದ್ದವು. ಇನ್ನು ಜಾನುವಾರುಗಳ ಮೇವಿನ ವೆಚ್ಚ ಕಡಿಮೆ ಮಾಡಲು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಹಣದ ಹರಿವು ಸರಾಗಗೊಳಿಸಲು ಮೊಲಾಸಿಸ್‌ ಮೇಲಿನ ಜಿಎಸ್‌ಟಿಯನ್ನು ಶೇ. ೨೮ ರಿಂದ ಶೇ. ೫ಕ್ಕೆ ಕಡಿತಗೊಳಿಸಲಾಯಿತು. ಇದರಿಂದಾಗಿ ಸಕ್ಕರೆ ಕಾರ್ಖಾನೆಗಳು ರೈತರ ಬಾಕಿಯನ್ನು ತ್ವರಿತವಾಗಿ ಪಾವತಿಸಬಹುದು ಎಂದು ಆಶಿಸಲಾಗಿದೆ. ಇಂತಹ ಕೆಲವು ಸಣ್ಣ ಪುಟ್ಟ ಬದಲಾವಣೆಗಳ ಹೊರತಾಗಿ ಈ ಸಭೆಯಿಂದ ಹೊರಬಿದ್ದ ಮುಖ್ಯ ನಿರ್ಣಯಗಳಲ್ಲೊಂದು ಮದ್ಯ ತಯಾರಿಕೆಗೆ ಬಳಸಲಾಗುವ ಹೆಚ್ಚುವರಿ ತಟಸ್ಥ ಆಲ್ಕೋಹಾಲ್ (extra neutral alcohol) (ಇಎನ್ಎ) ಮೇಲೆ ಜಿಎಸ್‌ಟಿ ವಿಧಿಸದಿರಲು ನಿರ್ಧರಿಸಿರುವುದು. ಮದ್ಯವು ಇನ್ನೂ ಜಿಎಸ್‌ಟಿ ವ್ಯಾಪ್ತಿಯ ಹೊರಗಿರುವುದರಿಂದ ಇಎನ್ಎ ಮೇಲೆ ಪರೋಕ್ಷ ತೆರಿಗೆ ವಿಧಿಸಿದರೆ ಅದನ್ನು ಅಂತಿಮ ಉತ್ಪನ್ನದ ಮೇಲಿನ ರಾಜ್ಯ ತೆರಿಗೆಗಳೊಂದಿಗೆ ಹೊಂದಿಸಲಾಗುವುದಿಲ್ಲ ಎಂದು ಇದರ ಮೇಲೆ ತೆರಿಗೆ ವಿಧಿಸದಿರಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಮೊದಲ ದಿನದಿಂದಲೂ ಗೊಂದಲ ಇದ್ದು, ಹಲವು ನ್ಯಾಯಾಲಯಗಳು ವಿಭಿನ್ನ ನಿಲುವು ತಾಳಿದ್ದವು. ಉದ್ಯಮವು ಹಲವು ವರ್ಷಗಳಿಂದ ಈ ಬಗ್ಗೆ ಸ್ಪಷ್ಟನೆ ಬಯಸಿತ್ತು.

೨೦೨೨ರಲ್ಲಿ ಕೇವಲ ಎರಡು ಬಾರಿ ಸಭೆ ಸೇರಿದ್ದ ಜಿಎಸ್‌ಟಿ ಕೌನ್ಸಿಲ್, ಈ ವರ್ಷ ಆಗಲೇ ನಾಲ್ಕು ಬಾರಿ ಮತ್ತು ಕೇವಲ ಕಳೆದ ನಾಲ್ಕು ತಿಂಗಳಲ್ಲಿ ಮೂರು ಬಾರಿ ಸಭೆ ಸೇರಿರುವುದು ಸ್ವಾಗತಾರ್ಹ. ಆದರೆ ಈ ಸಭೆಗಳಲ್ಲಿ ಇತ್ತೀಚಿನ ಕೆಲವು ನಿರ್ಣಗಳಲ್ಲಿನ ಗೊಂದಲ ನಿವಾರಣೆಯೇ ಪ್ರಮುಖ ಕಾರ್ಯಸೂಚಿಯಾಗಿತ್ತು. ಬಹುನಿರೀಕ್ಷಿತ ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರ ವಯಸ್ಸಿನ ಮಾನದಂಡಗಳು ಈಗ ಇತರ ನ್ಯಾಯಮಂಡಳಿಗಳೊಂದಿಗೆ ಸಮನ್ವಯಗೊಂಡಿವೆ. ಹಾಗಾಗಿ ಇವು ಆದಷ್ಟು ಬೇಗ ರಚನೆಗೊಂಡು ಕಾರ್ಯಾರಂಭ ಮಾಡಲಿವೆ ಎಂದು ಆಶಿಸಲಾಗಿದೆ. ಕೌನ್ಸಿಲ್ ಇಷ್ಟರಲ್ಲೇ ಜಿಎಸ್‌ಟಿ ಪರಿಹಾರ ಸೆಸ್‌ ಬದಲು ಯಾವ ಸರ್ಚಾರ್ಜ್ ವಿಧಿಸಬೇಕು ಎಂದು ಚರ್ಚಿಸಲು ಮತ್ತೆ ಸಭೆ ಸೇರಲು ನಿರ್ಧರಿಸಿರುವುದು ಗ್ರಾಹಕರು ಮತ್ತು ಉತ್ಪಾದಕರಿಗೆ ಕಳವಳ ಹುಟ್ಟಿಸುವ ವಿಷಯ. ಇದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಪರ್ಸ್ಪೆಕ್ಟಿವ್ ಪ್ಲಾನಿಂಗ್’ ಎಂದು ಕರೆದಿದ್ದಾರೆ. ಜಿಎಸ್‌ಟಿಯ ಮೊದಲ ಐದು ವರ್ಷಗಳಲ್ಲಿ ರಾಜ್ಯಗಳ ಆದಾಯ ನಷ್ಟವನ್ನು ಸರಿದೂಗಿಸಲು ಈ ಸೆಸ್‌ ಅನ್ನು ವಿಧಿಸಲಾಗಿತ್ತು. ಆದರೆ ತೆರಿಗೆ ಸಂಗ್ರಹದ ಮೇಲೆ ಕೋವಿಡ್-೧೯ ಸಾಂಕ್ರಾಮಿಕದ ಹೊಡೆತವು ಈ ಸೆಸ್ ಅನ್ನು ವಿಸ್ತರಿಸಲು ಕಾರಣವಾಯಿತು. ಮಾರ್ಚ್ ೨೦೨೬ರವೆರೆಗೆ ತಂಪು ಪಾನೀಯಗಳು, ತಂಬಾಕು ಉತ್ಪನ್ನಗಳು ಮತ್ತು ವಾಹನಗಳಂತಹ ಕೆಲವು “ಡಿಮೆರಿಟ್” ಸರಕುಗಳ ಮೇಲೆ ಈ ಸೆಸ್ ಅನ್ನು ವಿಧಿಸಲು ತೀರ್ಮಾನಿಸಲಾಯಿತು. ಆದರೆ ಹೊಸ ಸೆಸ್ ವಿಧಿಸುವ ಪ್ರಕ್ರಿಯೆ ಜಿಎಸ್‌ಟಿಯ ಸಂಕೀರ್ಣ ಬಹು-ದರ ರಚನೆಯ ಸರಳೀಕರಣದ ಭಾಗವಾಗಿ ಆಗಬೇಕು. ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಆ ಪ್ರಕ್ರಿಯೆಯು, ಇತ್ತೀಚಿನ ದಿನಗಳಲ್ಲಿ ದೃಢವಾದ ಆದಾಯದ ಒಳಹರಿವಿನ ಹೊರತಾಗಿಯೂ, ಹಿನ್ನೆಲೆಗೆ ಸರಿಸಲ್ಪಟ್ಟಿದೆ. ಪದೇ ಪದೇ ಹೀಗೆ ದರ ಬದಲಾವಣೆ ಮಾಡುವುದನ್ನು ಕೈಬಿಟ್ಟು, ಜಿಎಸ್‌ಟಿ ವ್ಯಾಪ್ತಿಯ ಹೊರಗಿರುವ ವಿದ್ಯುತ್, ಪೆಟ್ರೋಲಿಯಂ ಮತ್ತು ಮದ್ಯವನ್ನು ಕೂಡಾ ಇದೇ ತೆರಿಗೆ ಪದ್ಧತಿಯ ವ್ಯಾಪ್ತಿಗೆ ತರಲು ನೀಲಿನಕ್ಷೆ ಸೇರಿದಂತೆ ಸಮಗ್ರ ಸುಧಾರಣಾ ಯೋಜನೆಯ ಅಗತ್ಯವಿದೆ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT