ADVERTISEMENT

ನಿಧಾನ ಹಿಂಪಡೆಯುವಿಕೆ

May 23, 2023 09:31 am | Updated 09:33 am IST

ಗಡುವು ನಿಗದಿಪಡಿಸದೆ ಆರ್‌ಬಿಐ ಕ್ರಮೇಣ ನೋಟುಗಳನ್ನು ಹಿಂಪಡೆಯಬಹುದಿತ್ತು

₹೨೦೦೦ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಳ್ಳಲಾಗುವುದು ಎಂದು ಮೇ ೧೯ರಂದು ಭಾರತೀಯ ರಿಸರ್ವ್ ಬ್ಯಾಂಕ್‌ ಘೋಷಿಸಿರುವುದು ಏಳೂವರೆ ವರ್ಷಗಳ ಬಳಿಕ ಮತ್ತೆ ಆರ್ಥಿಕವಾಗಿ ಹೊಡೆತ ನೀಡಿದ ನೋಟು ಅಮಾನ್ಯೀಕರಣದ ನೆನಪುಗಳನ್ನು ಮರುಕಳಿಸುವಂತೆ ಮಾಡಿತು. ೨೦೧೬ರ ನವೆಂಬರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಗ ಲಭ್ಯವಿದ್ದ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಹಠಾತ್ತನೆ ಸಂಪೂರ್ಣ ಅಮಾನ್ಯ ಮಾಡಿದ್ದು “ಕಪ್ಪುಹಣ ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ಲಭ್ಯತೆಯ” ವಿರುದ್ಧದ ಹೋರಾಟ ಎಂದಿದ್ದರು. ಆದರೆ ಆರ್‌ಬಿಐ ಈಗ ₹೨೦೦೦ ನೋಟುಗಳನ್ನು ಹಿಂಪಡೆಯುತ್ತಿರುವುದು ತನ್ನ ಸ್ವಚ್ಛ ನೋಟುಗಳ ನೀತಿಗೆ ಅನುಗುಣವಾಗಿ ಎಂದು ಹೇಳಿದೆ. ಆದರೆ ಹಿಂಪಡೆದ ನೋಟು ಅಮಾನ್ಯವಾಗಿಲ್ಲ. ಆದರೆ ಹಿಂಪಡೆದ ನೋಟುಗಳ ವಿನಿಮಯ ಅಥವಾ ಠೇವಣಿಗಾಗಿ ಕೇಂದ್ರ ಬ್ಯಾಂಕ್ ಸೆಪ್ಟೆಂಬರ್ ೩೦ರ ಗಡುವನ್ನು ನಿಗದಿಪಡಿಸಿದೆ. ಇದರಿಂದ ಜನಸಾಮಾನ್ಯರು ಈ ನೋಟುಗಳನ್ನು ಬಳಸುವುದು ಆಗಲೇ ಕಷ್ಟವಾಗಿದೆ. ಈ ನೋಟುಗಳು ಈಗಲೂ ಕಾನೂನು ಬದ್ಧವಾಗಿದ್ದರೂ ಸಹ ನಿರ್ಮಾಣದಂತಹ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರೂ ಸೇರಿದಂತೆ ಹಲವರು ಔಷಧ, ಪೆಟ್ರೋಲು ಮತ್ತು ದಿನನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ಪಾವತಿಸಲು ಹೆಣಗಾಡುತ್ತಿರುವ ಬಗ್ಗೆ ವರದಿಯಾಗಿದೆ. ೨೦೧೮-೧೯ರಲ್ಲಿ ಹೊಸ ₹೨೦೦೦ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ ಎಂದು ಆರ್‌ಬಿಐ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಚಲಾವಣೆಯಲ್ಲಿರುವ ನೋಟುಗಳನ್ನು ಹಠಾತ್ ಹಿಂತೆಗೆದುಕೊಳ್ಳುವ ನಿರ್ಧಾರ ಪ್ರಶ್ನಾರ್ಹವಾಗಿದೆ. ನೋಟು ಅಮಾನ್ಯೀಕರಣದ ನಂತರ “ಆರ್ಥಿಕತೆಯ ಕರೆನ್ಸಿ ಅಗತ್ಯವನ್ನು ತ್ವರಿತವಾಗಿ ಪೂರೈಸಲು” ನವೆಂಬರ್ ೨೦೧೬ ಮತ್ತು ಮಾರ್ಚ್ ೨೦೧೭ರ ನಡುವೆ ಸುಮಾರು ಶೇ. ೮೯ರಷ್ಟು ₹೨೦೦೦ ನೋಟುಗಳನ್ನು ಚಾಲ್ತಿಗೆ ಬಿಡಲಾಯಿತೆಂದೂ ಮತ್ತು ಅಂದಿನಿಂದ ಕಡಿಮೆ ಮುಖಬೆಲೆಯ ನೋಟುಗಳು ಸಮರ್ಪಕವಾಗಿ ಲಭ್ಯವಿರುವ ಕಾರಣ ಈ ನೋಟುಗಳ ಅಗತ್ಯ ಇಲ್ಲ ಎಂದು ಆರ್‌ಬಿಐ ಹೇಳಿದೆ.

ಈಗ ಹಿಂಪಡೆಯಲಾಗುತ್ತಿರುವ ನೋಟುಗಳು ತಮ್ಮ “ಅಂದಾಜು ೪-೫ ವರ್ಷಗಳ ಜೀವಿತಾವಧಿಯ” ಕೊನೆ ದಿನಗಳಲ್ಲಿದೆ ಮತ್ತು ಮಾರ್ಚ್ ೩೧ಕ್ಕೆ ಈ ನೋಟುಗಳ ಒಟ್ಟು ಮೌಲ್ಯ ಅಂದಾಜು ₹೩.೬೨ ಲಕ್ಷ ಕೋಟಿಗೆ, ಅಂದರೆ ಚಲಾವಣೆಯಲ್ಲಿರುವ ಒಟ್ಟು ನೋಟುಗಳ ಅಂದಾಜು ಶೇ. ೧೦.೮ಕ್ಕೆ, ಕುಸಿದಿದೆ ಎಂದು ಆರ್‌ಬಿಐ ಹೇಳಿದೆ. ಕೇಂದ್ರೀಯ ಬ್ಯಾಂಕ್ ಈ ಹಿಂದೆ ಹೀಗೆ ನೋಟುಗಳನ್ನು ಹಿಂಪಡೆದ ಉದಾಹರಣೆಗಳನ್ನು ಗಮನಿಸಿದರೆ ಏಪ್ರಿಲ್ ೨೦೧೪ರಲ್ಲಿ, ೨೦೦೫ಕ್ಕೂ ಮೊದಲು ಮುದ್ರಿತವಾದ ಅಂದರೆ ಒಂದು ದಶಕಕ್ಕೂ ಹಳೆಯ ನೋಟುಗಳನ್ನು ಕ್ರಮೇಣವಾಗಿ ಹಿಂಪಡೆಯಿತು. ಇವತ್ತಿಗೂ ಕೂಡಾ ೨೦೧೩ಕ್ಕೂ ಹಿಂದೆ ಮುದ್ರಿತವಾದ ಕಡಿಮೆ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿವೆ. ಹಾಗಾಗಿ ಆರ್‌ಬಿಐನ ಸ್ವಚ್ಛ ನೋಟುಗಳ ನೆಪ ಪ್ರಶ್ನಾರ್ಹವಾಗಿದೆ. ಆರ್‌ಬಿಐ ತನ್ನ ಆದ್ಯತೆಗಳಿಗನುಸಾರ ಕರೆನ್ಸಿ ನೋಟುಗಳನ್ನು ವಿತರಿಸುವ ಅಥವಾ ಹಿಂತೆಗೆದುಕೊಳ್ಳುವ ಅಧಿಕಾರ ಹೊಂದಿದೆ. ಆದರೆ ಪಾರದರ್ಶಕತೆಯ ಕೊರತೆ ಮತ್ತು ಆಡಳಿತಾತ್ಮಕವಾಗಿ ಸ್ಥಿರ ನಿಲುವು ಕಾಪಾಡಿಕೊಳ್ಳದೆ ಇರುವುದು “ನೋಟಿನ ಮುಖಬೆಲೆಯ ಮೊತ್ತವನ್ನು ನೀಡುತ್ತೇವೆ” ಎಂಬ ಆರ್‌ಬಿಐ ಭರವಸೆಯನ್ನು ಟೊಳ್ಳಾಗಿಸುತ್ತದೆ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT