ADVERTISEMENT

ಒಂದೇ ಏಟಿಗೆ ಎರಡು ಹಕ್ಕಿ

February 25, 2023 11:36 am | Updated 11:36 am IST

ನ್ಯಾಯಾಲಯದ ಆದೇಶವು ಎಡಪ್ಪಾಡಿ ಅವರ ಕೈಯನ್ನು ಬಲಪಡಿಸಿದರೆ, ಪನ್ನೀರಸೆಲ್ವಂ ರಾಜಕೀಯವಾಗಿ ಅಪ್ರಸ್ತುತರಾಗುವ ಅಪಾಯ ಎದುರಿಸುತ್ತಿದ್ದಾರೆ. 

ಸುಪ್ರೀಂ ಕೋರ್ಟು ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಪರ ತೀರ್ಪು ನೀಡುವುದರೊಂದಿಗೆ ಪಕ್ಷದ ಆಂತರಿಕ ಬಿಕ್ಕಟ್ಟು ಇತ್ಯರ್ಥ ಆದಂತಿದೆ. ಇದರೊಂದಿಗೆ ಅವರ ಪ್ರತಿಸ್ಪರ್ಧಿ ಓ. ಪನ್ನೀರಸೆಲ್ವಂ ಮತ್ತು ಅವರ ಹಿಂಬಾಲಕರಿಗೆ ದೊಡ್ಡ ಹೊಡೆತ ನೀಡಿದೆ. ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠವು ಜುಲೈ ೧೧, ೨೦೨೨ರಂದು ಪಕ್ಷದ ಜನರಲ್ ಕೌನ್ಸಿಲ್ ಸಭೆಯನ್ನು ನಡೆಸಿದ್ದರಲ್ಲಿ ಯಾವುದೇ ಅಕ್ರಮ ಇಲ್ಲ ಎಂದು ಹೇಳಿದೆ. ಈ ಸಭೆಯಲ್ಲಿ ಸಂಯೋಜಕರು ಮತ್ತು ಜಂಟಿ ಸಂಯೋಜಕರ ಅಡಿಯಲ್ಲಿ ಪಕ್ಷಕ್ಕೆ ಆವರೆಗೆ ಇದ್ದ ಉಭಯ ನಾಯಕತ್ವ ವ್ಯವಸ್ಥೆಯನ್ನು ರದ್ದುಪಡಿಸುವ, ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಮರುಸ್ಥಾಪಿಸುವ ಮತ್ತು ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಣಯಗಳನ್ನು ಅಂಗೀಕರಿಸಲಾಗಿತ್ತು. ನ್ಯಾಯಾಲಯವು ಈ ಯಾವುದೇ ನಿರ್ಣಯಗಳ ಸಿಂಧುತ್ವದ ಪ್ರಶ್ನೆಯನ್ನು ಕೈಗೆತ್ತಿಕೊಂಡಿಲ್ಲ. ಆದರೆ ಮದ್ರಾಸ್ ಹೈಕೋರ್ಟಿನ ಏಕ ನ್ಯಾಯಾಧೀಶ ಪೀಠಕ್ಕೆ ವಾಸ್ತವ ಪರಿಸ್ಥಿತಿಯನ್ನು ನಿರ್ಲಕ್ಷಿಸಿ ತಾಂತ್ರಿಕ ಆಧಾರದ ಮೇಲೆ ಮುನಿಸಿಕೊಂಡಿರುವ ಈರ್ವರು ನಾಯಕರು ಒಟ್ಟಿಗೆ ಕೆಲಸ ಮಾಡುವಂತೆ ಒತ್ತಾಯಿಸಲು ಯಾವುದೇ ಕಾರಣವಿರಲಿಲ್ಲ ಎಂದು ದೃಢವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆಯಲ್ಲದೆ, ಹೈಕೋರ್ಟ್‌ನ ವಿಭಾಗೀಯ ಪೀಠವು ಈ ಪ್ರಕರಣದಲ್ಲಿ ಸರಿಯಾಗಿಯೇ ಮಧ್ಯಪ್ರವೇಶ ಮಾಡಿದೆ ಎಂದೂ ಹೇಳಿದೆ. ನ್ಯಾಯಾಂಗ ಆದೇಶದ ಮೂಲಕ ಉಭಯ ನಾಯಕತ್ವವನ್ನು ಉಳಿಸಿಕೊಂಡು ಪಕ್ಷದ ವ್ಯವಹಾರಗಳ ಮೇಲೆ ಸಮಾನ ನಿಯಂತ್ರಣವನ್ನು ಚಲಾಯಿಸುವ ಪನ್ನೀರಸೆಲ್ವಂ ಪಾಳಯದ ಪ್ರಯತ್ನವನ್ನು ಈ ತೀರ್ಪು ಕೊನೆಗೊಳಿಸಿದೆ. ಸಿವಿಲ್ ಮೊಕದ್ದಮೆಗಳಲ್ಲಿ ಈ ನಿರ್ಣಯಗಳ ಸಿಂಧುತ್ವವನ್ನು ಪ್ರಶ್ನಿಸುವ ಸಾಧ್ಯತೆಯಿದೆಯಾದರೂ, ಆ ಬಗ್ಗೆ ನ್ಯಾಯಾಲಯದ ತೀರ್ಮಾನಗಳು ಹೊರಬೀಳುವುದು ಬಹುವರ್ಷಗಳ ನಂತರವೇ. ಅಲ್ಲಿಯವರೆಗೆ, ಎಐಎಡಿಎಂಕೆ ಸಂಘಟನೆಯ ಎಲ್ಲ ಹಂತಗಳಲ್ಲಿ ಬಹುಮತದ ಬೆಂಬಲದೊಂದಿಗೆ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸಿರುವ ಪಳನಿಸ್ವಾಮಿ ಅವರ ದೃಢ ಹಿಡಿತದಲ್ಲಿರಲಿದೆ.

ಪನ್ನೀರಸೆಲ್ವಂ ಅವರು ಇತ್ತೀಚೆಗೆ “ಸರ್ವಾಧಿಕಾರಿಯಿಂದ ಪಕ್ಷವನ್ನು ಮರಳಿ ಪಡೆಯುವ” ಬಗ್ಗೆ ಮಾತನಾಡಿದ್ದರು. ಆದರೆ ಅವರು ತಮ್ಮ ರಾಜಕೀಯ ಶಕ್ತಿ ಮತ್ತು ಬೆಂಬಲ ಹೆಚ್ಚಿಸಿಕೊಳ್ಳದೆ, ಪಕ್ಷದ ನಾಯಕತ್ವ ಪಡೆಯುವ ತಮ್ಮ ಮಹತ್ವಾಕಾಂಕ್ಷೆಯ ಹೋರಾಟದಿಂದ ರಾಜಕೀಯವಾಗಿ ಅಪ್ರಸ್ತುತರಾಗುತ್ತಿದ್ದಾರೆ ಎಂಬುದು ಈಗ ಸ್ಪಷ್ಟ. ತನ್ನ ಹೋರಾಟಕ್ಕೆ ಕಾನೂನು ಪ್ರಕ್ರಿಯೆಗಳು ಪುಷ್ಟಿ ನೀಡುತ್ತವೆ ಎಂದು ನಿರೀಕ್ಷಿಸುತ್ತಾ ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ಜೊತೆ ಉತ್ತಮ ಸಂಬಂಧಗಳನ್ನು ಉಳಿಸಿಕೊಳ್ಳುವ ತಂತ್ರವು ಅವರಿಗೆ ಫಲ ನೀಡುತ್ತಿಲ್ಲ. ಇತ್ತೀಚೆಗಷ್ಟೇ ಅವರು ಈರೋಡ್ ಪೂರ್ವ ವಿಧಾನಸಭಾ ಉಪಚುನಾವಣೆಗೆ ತಮ್ಮ ಬಣದ ಅಭ್ಯರ್ಥಿಯನ್ನು, ಎಐಎಡಿಎಂಕೆಯ ‘ಎರಡು ಎಲೆ’ ಚಿಹ್ನೆ ಯಶಸ್ವಿಯಾಗಬೇಕೆಂದು ತಮ್ಮ ಪಾಳೆಯ ಬಯಸಿದೆ ಎಂದು ಸಮಜಾಯಿಷಿ ನೀಡಿ, ಹಿಂತೆಗೆದುಕೊಂಡು ಸೋಲೊಪ್ಪಬೇಕಾಯಿತು. ಪಕ್ಷದ ಜನರಲ್ ಕೌನ್ಸಿಲ್ ಸದಸ್ಯರ ಪೈಕಿ ಸುಪ್ರೀಂ ಕೋರ್ಟ್ ಆದೇಶಿಸಿದ ಎಣಿಕೆಯಲ್ಲಿ ಬಹುಪಾಲು ಸದಸ್ಯರು ಪಳನಿಸ್ವಾಮಿ ಅವರ ಬಣದ ಅಭ್ಯರ್ಥಿಯನ್ನು ಬೆಂಬಲಿಸುವುದು ಬಯಲಾಯಿತು. ಪಳನಿಸ್ವಾಮಿ ಅವರೂ ಸಹ ಬಿಜೆಪಿಯೊಂದಿಗೆ ಉತ್ತಮ ಸಂಬಂಧಗಳನ್ನು ಇಟ್ಟುಕೊಳ್ಳಲು ಉತ್ಸುಕರಾಗಿದ್ದಾರೆ. ಆದರೆ ಪಕ್ಷದ ಮೇಲಿನ ಅವರ ದೃಢವಾದ ಹಿಡಿತವು ಪ್ರಬಲ ಡಿಎಂಕೆ ಎದುರಿನ ಚುನಾವಣೆಯ ಸವಾಲಿನ ಹೊರತಾಗಿಯೂ ಅವರನ್ನು ರಾಜಕೀಯವಾಗಿ ಬಲಗೊಳಿಸಿದೆ.

This editorial has been translated from English, which can be read here.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT