ADVERTISEMENT

ತೀಕ್ಷ್ಣ ಬದಲಾವಣೆಗಳು

March 02, 2023 09:59 am | Updated 09:59 am IST

ಆರೋಗ್ಯ ವ್ಯವಸ್ಥೆಯು ಶಾಖದ ಅಲೆಗಳು ಒಡ್ಡುವ ಸವಾಲುಗಳಿಗೆ ಸ್ಪಂದಿಸಬೇಕು

ಫೆಬ್ರವರಿ ೨೦೨೩ ರಲ್ಲಿ ಸರಾಸರಿ ಗರಿಷ್ಠ ತಾಪಮಾನವು ಸುಮಾರು ೨೯.೫೪ °C ದಾಖಲಾಗಿದ್ದು, ಇದು ೧೯೦೧ರ ಈಚೆಗೆ ಅತಿ ಹೆಚ್ಚು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇಲಾಖೆಯು ಫೆಬ್ರವರಿ ತಿಂಗಳನ್ನು ವಸಂತ ಇಲ್ಲ ಚಳಿಗಾಲ ಎಂದೇ ಬಗೆಯುತ್ತದೆ. ಸಾಮಾನ್ಯವಾಗಿ ೨೦ರ ಆಸುಪಾಸಿನಲ್ಲಿ ಗರಿಷ್ಠ ತಾಪಮಾನ ಇರುತ್ತದೆ. ಆದರೆ ಸರಾಸರಿ ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳೆರಡೂ ಕ್ರಮೇಣ ಏರಿಕೆ ಆಗುತ್ತಿದೆ. ಸರಾಸರಿ ಗರಿಷ್ಠ ತಾಪಮಾನವು ೧.೭೩ °C ಮತ್ತು ಕನಿಷ್ಠ ತಾಪಮಾನವು ೦.೮೧ °C ಸಾಮಾನ್ಯ ಸರಾಸರಿ ತಾಪಮಾನಕ್ಕಿಂತ ಹೆಚ್ಚಾಗಿದೆ. ಹವಾಮಾನ ಇಲಾಖೆಯು ಈ ಪ್ರವೃತ್ತಿಯು ಬೇಸಿಗೆಯಲ್ಲೂ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹೇಳಿದೆ. ಈಶಾನ್ಯ, ಪೂರ್ವ, ಮಧ್ಯ ಮತ್ತು ವಾಯುವ್ಯ ಭಾರತದ ಹೆಚ್ಚಿನ ಭಾಗಗಳು ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸುವ ನಿರೀಕ್ಷೆಯಿದೆ. ಮಾರ್ಚ್-ಮೇ ಅವಧಿಯಲ್ಲಿ ಈಶಾನ್ಯ ಭಾರತ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಕೇರಳ ಮತ್ತು ಕರಾವಳಿ ಕರ್ನಾಟಕವನ್ನು ಹೊರತುಪಡಿಸಿ ಭಾರತದ ಬಹುತೇಕ ಭಾಗಗಳಲ್ಲಿ ಶಾಖದ ಅಲೆಗಳ ಪರಿಣಾಮ ಕಂಡುಬರುತ್ತವೆ. ಗರಿಷ್ಠ ತಾಪಮಾನವು ೪೫ °C ಗಿಂತ ಹೆಚ್ಚಿದ್ದರೆ ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ಸಾಮಾನ್ಯ ತಾಪಮಾನಕ್ಕಿಂತ ೪.೫ °C ಹೆಚ್ಚಿದ್ದರೆ ಅದನ್ನು ‘ಶಾಖದ ಅಲೆ’ ಎಂದು ಪರಿಗಣಿಲಾಗುತ್ತದೆ. ಹವಾಮಾನ ಬದಲಾವಣೆ ಭಾರತದಲ್ಲಿ ಶಾಖದ ಅಲೆಗಳ ಪ್ರಭಾವವನ್ನು ಉಲ್ಬಣಗೊಳಿಸಿದೆ ಎಂದು ಅಧ್ಯಯನಗಳು ವರದಿ ಮಾಡಿವೆ. ಲ್ಯಾನ್ಸೆಟ್ ಅಧ್ಯಯನವೊಂದು ತೀವ್ರವಾದ ಶಾಖದ ಕಾರಣದಿಂದಾಗಿ ಆದ ಸಾವುಗಳಲ್ಲಿ ಶೇ. ೫೫ರಷ್ಟು ಏರಿಕೆಯಾಗಿದೆ ಮತ್ತು ೨೦೨೧ರಲ್ಲಿ ಇದು ೧೬೭.೨ ಶತಕೋಟಿ ಮಾನವ ಘಂಟೆಗಳ ನಷ್ಟಕ್ಕೆ ಕಾರಣ ಆಯಿತು ಎಂದು ಲೆಕ್ಕ ಹಾಕಿದೆ.

ಏರುತ್ತಿರುವ ತಾಪಮಾನವು ಗೋಧಿಯ ಇಳುವರಿ ಮೇಲೆ ಪರಿಣಾಮ ಬೀರಿದೆ. ಭಾರತವು ೨೦೨೧-೨೨ ರಲ್ಲಿ ೧೦೬.೮೪ ಮಿಲಿಯನ್ ಟನ್ ಗೋಧಿಯನ್ನು ಉತ್ಪಾದಿಸಿದೆ. ಇದು ೨೦೨೦-೨೧ ರ ೧೦೯.೫೯ ಮಿಲಿಯನ್ ಟನ್‌ಗಳಿಗಿಂತ ಕಡಿಮೆ. ಮಾರ್ಚ್‌ನಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದ್ದ ಕಾರಣ ಅದರ ಬೆಳವಣಿಗೆಯ ಹಂತದಲ್ಲಿ ಬೆಳೆಯ ಮೇಲೆ ಪರಿಣಾಮವಾಯಿತು. ಈ ತಾಪಮಾನ ಏರಿಕೆಯು ಈ ಬಾರಿಯ ಮುಂಗಾರಿನ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂದು ಈಗಲೇ ಹೇಳುವುದು ಕಷ್ಟ. ಏಕೆಂದರೆ ಮಾರ್ಚ್ ನಂತರ ಮಾತ್ರ ಜಾಗತಿಕ ಮುಂಗಾರು ಮುನ್ಸೂಚನಾ ಮಾದರಿಗಳು ಸಮುದ್ರ-ಮೇಲ್ಮೈ ಪರಿಸ್ಥಿತಿಗಳನ್ನು ವಿಶ್ಲೇಷಿಸಲು, ಮುಂಗಾರು ಪರಿಸ್ಥಿತಿಯನ್ನು ಉತ್ತಮವಾಗಿ ಊಹಿಸಲು ಶಕ್ತವಾಗಿವೆ.   ಕಳೆದ ನಾಲ್ಕು ವರ್ಷಗಳಲ್ಲಿ ಮೂರು ವರ್ಷಗಳು ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿದೆ. ಇದು ‘ಲಾ ನಿನಾ’ ಅಥವಾ ಈಕ್ವಟೋರಿಯಲ್ ಪೆಸಿಫಿಕ್‌ ಪ್ರಾಂತ್ಯ ಸಾಮಾನ್ಯಕ್ಕಿಂತ ತಂಪಾಗಿರುವ ಕಾರಣ ಆಗಿದೆ. ಈ ಬಾರಿ ಇದು ಕಡಿಮೆಯಾಗುವ ನಿರೀಕ್ಷೆಯಿದ್ದರೂ, ಅದು ಅಂತಿಮವಾಗಿ ‘ಎಲ್ ನಿನೊ’ಗೆ ತಿರುಗಿ ಭಾರತದ ಕರಾವಳಿಯಿಂದ ತೇವಾಂಶವನ್ನು ಸೆಳೆಯುತ್ತದೆಯೇ ಎಂದು ನೋಡಬೇಕಿದೆ. ಸ್ಥಳೀಯ ವಾತಾವರಣ ಮತ್ತು ಹವಾಮಾನದ ನಡುವಿನ ಸಂಬಂಧ ಅತ್ಯಂತ ಸಂಕೀರ್ಣವಾದುದು. ಏರುತ್ತಿರುವ ಶಾಖದ ಅಲೆಯ ತೀವ್ರತೆಯನ್ನು ‘ಹವಾಮಾನ ಬದಲಾವಣೆ’ ಎಂದು ಸುಲಭಕ್ಕೆ ಕರೆದುಬೀಡಬಹುದಾದರೂ, ವಿಜ್ಞಾನವು ನಿಶ್ಚಿತವಾಗಿ ಇದನ್ನು ಹೇಳುವುದಿಲ್ಲ. ಆದರೆ, ಇದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳಿಗೆ ಎಚ್ಚರಿಕೆಯ ಘಂಟೆ ಆಗಬೇಕು. ಏರುತ್ತಿರುವ ತಾಪಮಾನದ ಸವಾಲುಗಳಿಗೆ ಸ್ಪಂದಿಸುವಂತಾಗಬೇಕು. ಶಾಖದ ಅಲೆಗಳ ಕುರಿತು ಹಲವಾರು ರಾಜ್ಯಗಳು ಕ್ರಿಯಾ ಯೋಜನೆಗಳನ್ನು ಹೊಂದಿವೆಯಾದರೂ, ಹಳ್ಳಿಗಾಡಿನ ಕಡೆ ಈ ಕುರಿತು ಇನ್ನೂ ಗಮನ ಹರಿಸಿಲ್ಲ. ಬೇಗ ಕಟಾವಿಗೆ ಬರುವ ಬೆಳೆಗಳನ್ನು ಉತ್ತೇಜಿಸುವುದರ ಜೊತೆಗೆ ಈ ಬದಲಾವಣೆಗಳಿಗೆ ಹೊಂದಿಕೊಳ್ಳಲು ಮಣ್ಣು ಮತ್ತು ನೀರಿನ ನಿರ್ವಹಣೆಯ ಅಭ್ಯಾಸಗಳನ್ನು ಬದಲಿಸಿಕೊಳ್ಳಲು ರೈತರಿಗೆ ಸಹಾಯ ಮಾಡಲು ಹೆಚ್ಚಿನ ಒತ್ತು ನೀಡಬೇಕು.

This editorial has been translated from English, which can be read here.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT