ADVERTISEMENT

ಸರಿಯಾದ ಪಾಠಗಳು

Published - April 11, 2023 12:55 pm IST

ಪಠ್ಯಕ್ರಮವನ್ನು ರೂಪಿಸುವಾದ ವಿಶಾಲವಾದ, ಪಾರದರ್ಶಕ ಸಮಾಲೋಚನೆ ಅಗತ್ಯವಿದೆ

ಎನ್‌ಸಿಇಆರ್‌ಟಿ ಹಲವು ಪಠ್ಯಪುಸ್ತಕಗಳಿಂದ ಹತ್ತುಹಲವು ಭಾಗಗಳನ್ನು ವಿವೇಚನೆಯಿಲ್ಲದೆ ಮತ್ತು ರಹಸ್ಯವಾಗಿ ತೆಗೆದುಹಾಕಿರುವುದು ನಂಬಿಕೆ ದ್ರೋಹ ಮತ್ತು ವೃತ್ತಿಪರತೆಯ ಕೊರತೆಯಾಗಿದ್ದರೂ, ಪ್ರಸಕ್ತ ಚಾಲ್ತಿಯಲ್ಲಿರುವ ರಾಜಕೀಯ ವಾತಾವರಣದಲ್ಲಿ, ಇದು ಸಂಪೂರ್ಣವಾಗಿ ಅಚ್ಚರಿಯನ್ನೇನು ಉಂಟುಮಾಡುವುದಿಲ್ಲ. ಎಲ್ಲ ವಲಯಗಳ ಉದ್ದಗಲಕ್ಕೆ ಹೊಸ ಜ್ಞಾನ ಪರಿಸರದ ಸೃಷ್ಟಿಯನ್ನು ಅಡಳಿತಾರೂಢ ಬಿಜೆಪಿ ತನ್ನ ರಾಜಕೀಯದ ಕೇಂದ್ರವನ್ನಾಗಿಸಿಕೊಂಡಿದೆ. ಪಠ್ಯಕ್ರಮವನ್ನು ವೈಚಾರಿಕಗೊಳಿಸುವ ಕ್ರಮ ಎಂದು ಎನ್‌ಸಿಇಆರ್‌ಟಿ ಬಣ್ಣಿಸಿ ತೆಗೆದುಹಾಕಿರುವ ಪಾಠಗಳಲ್ಲಿ ಮುಖ್ಯವಾದವು ಗಾಂಧಿ ಬಗ್ಗೆ ಹಿಂದುತ್ವ ತೀವ್ರವಾದಿಗಳ ಅಸಮಧಾನದ ಬಗೆಗಿನ, ಗಾಂಧಿ ಹತ್ಯೆಯ ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಿದ ಉಲ್ಲೇಖಗಳು, ಮುಘಲ್ ಇತಿಹಾಸದ ಎಲ್ಲ ಅಧ್ಯಾಯಗಳು, 2002ರ ಗುಜರಾತ್ ಕೋಮು ದಂಗೆಯ, ನಕ್ಸಲ್ ಹೋರಾಟದ, ತುರ್ತು ಪರಿಸ್ಥಿತಿಯ ಉಲ್ಲೇಖಗಳು ಮತ್ತು ಸಾಮಾಜಿಕ ಹೋರಾಟಗಳ ಮೇಲಿನ ಚರ್ಚೆಗಳು ಆಗಿವೆ. ಇತಿಹಾಸದ ಪಠ್ಯಗಳನ್ನು ನಿರ್ದಿಷ್ಟವಾಗಿ ಗುರಿಪಡಿಸಲಾಗಿದ್ದು, ಹಿಂದೆ ವಿಶಾಲ ಚರ್ಚೆಗಳು ಮತ್ತು ಸಮಾಲೋಚನೆಯ ಮೂಲಕ ಅವುಗಳನ್ನು ಸಿದ್ಧಪಡಿಸಿದವರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕತ್ತಲಲ್ಲಿ ಇಡಲಾಗಿದೆ ಎಂದು ಭಾರತೀಯ ಮತ್ತು ವಿದೇಶದ ವಿಶ್ವವಿದ್ಯಾಲಯಗಳ ಸುಮಾರು 250 ಇತಿಹಾಸಕಾರರು ಹೇಳಿದ್ದಾರೆ. ಈ ಬದಲಾವಣೆಗಳು ಕೇವಲ ಶಾಲಾ ಪಠ್ಯಪುಸ್ತಕಗಳಿಗೆ ಸೀಮಿತವಾಗಿಲ್ಲ. ‘ಇಂಡಿಯನ್ ಹಿಸ್ಟರಿ ಕಾಂಗ್ರೆಸ್’ ಹೇಳುವಂತೆ “ನಮ್ಮ ಭೂತದ ಬಗ್ಗೆ ಸ್ಪಷ್ಟ ಪೂರ್ವಾಗ್ರಹ ಮತ್ತು ಅತಾರ್ಕಿಕ ಗ್ರಹಿಕೆಯನ್ನು ಬೆಳೆಸುವಂತೆ” ಪದವಿ ಪೂರ್ವ ಹಂತದ ಯುಜಿಸಿ ಇತಿಹಾಸ ಕರಡು ಪಠ್ಯಕ್ರಮವನ್ನೂ ಬದಲಿಸಲಾಗಿದೆ. ಎನ್‌ಸಿಇಆರ್‌ಟಿ ಪಾರದರ್ಶಕತೆಯ ವೈಫಲ್ಯವನ್ನು “ಅಜಾಗರೂಕತೆ”ಯ ಸಂಗತಿ ಮಾತ್ರ ಎಂದು ಬಣ್ಣಿಸಿಕೊಳ್ಳುತ್ತದೆ, ಆದರೆ ಪರಿಷ್ಕರಣೆಯ ಬಗ್ಗೆ ದೃಢವಾಗಿದೆ.

ಜ್ಞಾನ ನಿರಂತರವಾಗಿ ವಿಸ್ತರಿಸುತ್ತಿರುತ್ತದಾದ್ದರಿಂದ ಒಂದು ಆರೋಗ್ಯಕರ ಶಿಕ್ಷಣ ವ್ಯವಸ್ಥೆಗೆ ಪಠ್ಯ ಪರಿಷ್ಕರಣೆ ಅಗತ್ಯ. ಯುವ ಪೀಳಿಗೆಗೆ ಯಾವ ಪಾಠಗಳನ್ನು ಹೇಳಿಕೊಡಬೇಕೆನ್ನುವುದು ಸಮಾಜದ ಸಾಮೂಹಿಕ ನಿರ್ಧಾರವಾಗಿದ್ದು, ಅದರಲ್ಲಿ ಮೂಲ ಶಿಕ್ಷಣ ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಶಿಕ್ಷಣದಲ್ಲಿ ಈ ಸಾಮೂಹಿಕ ತಿಳಿವಳಿಕೆಯ ಮೌಲ್ಯಗಳು ಮತ್ತು ನೀತಿಗಳು ಪ್ರತಿಫಲನಗೊಳ್ಳುತ್ತವೆ ಮತ್ತವು ಕಾಲಕಾಲಕ್ಕೆ ವಿಕಸನಗೊಳ್ಳುತ್ತವೆ. ಭಾರತದಲ್ಲಿ ರಾಷ್ಟ್ರೀಯ ಐಕ್ಯತೆ, ವಿಮರ್ಶಾತ್ಮಕ ಚಿಂತನೆ ಮತ್ತು ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ಗುರಿ ಇಟ್ಟುಕೊಂಡು ಶಿಕ್ಷಣ ವಿಕಸನಗೊಂಡಿದೆ. ಸಮಾಜ ಪ್ರಬುದ್ಧವಾದಂತೆ ಭೂತದ ಕರಾಳ ಅಧ್ಯಾಯಗಳನ್ನು ಹೆಚ್ಚು ಸಮಚಿತ್ತತೆಯಿಂದ ಅರಗಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಬಹುದು. ಕಲಿಕೆಯ ಹಂತದಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನದ ವಿವಿಧ ಹಂತಗಳನ್ನು ಪರಿಚಯಿಸುವಾಗ ಯಾವುದು ಸೂಕ್ತ ಮಟ್ಟ ಎಂಬುದನ್ನು ನಿರ್ಣಯಿಸುವ ಪ್ರಶ್ನೆಯೂ ತಲೆದೋರುತ್ತದೆ. ಈ ಎಲ್ಲಾ ಕಾರಣಗಳಿಂದ, ಪಠ್ಯಪುಸ್ತಕಗಳು ಮತ್ತು ಶಿಕ್ಷಣಶಾಸ್ತ್ರವನ್ನು ಹಂತಹಂತಕ್ಕೆ ಪರಿಷ್ಕರಿಸುವ ಅಗತ್ಯವಿದೆ. ವಿಷಯ ತಜ್ಞತೆಗೆ ಅಗೌರವ ತೋರಿಸಿ, ರಾಜಕೀಯ ಪಕ್ಷಪಾತದ ರೀತಿಯಲ್ಲಿ ಇಂಥ ಪರಿಷ್ಕರಣೆಯನ್ನು ಮಾಡಿದಾಗ ಸಮಸ್ಯೆ ಉದ್ಭವಿಸುತ್ತದೆ. ಮೂಲ ಶಿಕ್ಷಣದಲ್ಲಿ ಸಾಮರಸ್ಯದ ಬದಲಾಗಿ ಕಲಹವನ್ನು ಉತ್ತೇಜಿಸಿದರೆ ಅದು ವಿಷಮತೆಗೆ ತಿರುಗುತ್ತದೆ. ಭಾರತದ ಅಭಿವೃದ್ದಿ ಮತ್ತು ಬೆಳವಣಿಗೆ, ಸಂಪೂರ್ಣವಾಗಿ ಸ್ಫೋಟಿಸುತ್ತಿರುವ ಅದರ ಯುವ ಜನಸಮೂಹಕ್ಕೆ ವೃತ್ತಿಪರ ಮತ್ತು ಸಾಮಾಜಿಕ ಕೌಶಲ್ಯಗಳ ಶಿಕ್ಷಣ ನೀಡುವುದರ ಮೇಲೆ ಮತ್ತು ಯುವಕರನ್ನು ಬಹುತ್ವದ ದೇಶದ ಕಾಳಜಿಯುಳ್ಳ ನಾಗರಿಕರನ್ನಾಗಿ ರೂಪಿಸುವುದರ ಮೇಲೆ ನಿಂತಿದೆ. ಸಾಮರಸ್ಯದ ಭವಿಷ್ಯವನ್ನು ಕಟ್ಟುವ ಸಲುವಾಗಿ ಅವರು ಹಿಂದಿನ ದುರಂತಗಳನ್ನು ಪುನರಾವರ್ತಿಸದಂತೆ ಮಾಡುವ ಗುರಿಯುಳ್ಳ ಇತಿಹಾಸವನ್ನು ಕಲಿಯಬೇಕು. ಎಲ್ಲಾ ಹಂತಗಳಲ್ಲಿ ಪಠ್ಯಕ್ರಮವನ್ನು ರೂಪಿಸುವಾಗ ಹೆಚ್ಚು ವಿಶಾಲವಾದ ಮತ್ತು ಪಾರದರ್ಶಕವಾದ ಸಮಾಲೋಚನೆಗಳು ಇರಬೇಕು.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT