ADVERTISEMENT

ಹೊಸ ವಾಸ್ತವ

March 13, 2023 10:06 am | Updated 10:06 am IST

ಸೌದಿ ಅರೇಬಿಯಾ ಮತ್ತು ಇರಾನ್ ಶಾಂತಿಯನ್ನು ಬಯಸುತ್ತಿರುವ ಸಂದರ್ಭದಲ್ಲಿ ಅದಕ್ಕೆ ಮುಂದೊದಗಬಹುದಾದ ಸಂಭಾವ್ಯ ಅಪಾಯಗಳ ಬಗ್ಗೆಯೂ ಎಚ್ಚರದಿಂದಿರಬೇಕು

ಚೀನಾದ ಮಧ್ಯಸ್ಥಿಕೆಯಲ್ಲಿ ಸೌದಿ ಅರೇಬಿಯಾ ಮತ್ತು ಇರಾನ್ ಶಾಂತಿ ಒಪ್ಪಂದ ಮಾಡಿಕೊಂಡಿರುವುದು ಪಶ್ಚಿಮ ಏಷ್ಯಾದ ಹೊಸ ವಾಸ್ತವನ್ನು ಪ್ರತಿಬಿಂಬಿಸುತ್ತದೆ. ಈ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ದೊಡ್ಡಣ್ಣನ ಪಾತ್ರ ವಹಿಸುತ್ತಾ ಬಂದಿರುವ ಅಮೆರಿಕಾ ತನ್ನ ಗಮನ ಇತೆರೆಡೆ ನೆಟ್ಟಿರುವಾಗ ಚೀನಾ ಈ ಪ್ರದೇಶದಲ್ಲಿ ಹಿರಿದಾದ ಪಾತ್ರ ನಿರ್ವಹಿಸಲು ಉತ್ಸುಕವಾಗಿದೆ ಮತ್ತು ಚೀನಾ ಮಧ್ಯಸ್ಥಿಕೆಯಲ್ಲಿ ಹಳೆಯ ವೈರಿಗಳು ಸಂಬಂಧ ಸುಧಾರಿಸಿಕೊಳ್ಳುತ್ತಿದ್ದಾರೆ. ಶಿಯಾ-ಬಹುಸಂಖ್ಯಾತ ದೇವಪ್ರಭುತ್ವದ ಇರಾನ್ ಮತ್ತು ಸುನ್ನಿ-ಬಹುಮತದ ಸಂಪೂರ್ಣ ರಾಜಪ್ರಭುತ್ವದ ಸೌದಿ ಅರೇಬಿಯಾಗಳ ನಡುವಿನ ವೈರವು ಈ ಪ್ರದೇಶದ ಸಂಘರ್ಷದ ಮೂಲಗಳಲ್ಲಿ ಒಂದಾಗಿದೆ. ಈ ಎರಡು ದೇಶಗಳ ನಡುವೆ ಆಗಿರುವ ಶಾಂತಿ ಒಪ್ಪಂದದ ವಿವರಗಳು ಇನ್ನೂ ಹೊರಬೀಳದಿದ್ದರೂ ಹೌತಿ-ನಿಯಂತ್ರಿತ ಯೆಮೆನ್‌ನ ಭಾಗಗಳೂ ಸೇರಿದಂತೆ ಸೌದಿ ಅರೇಬಿಯಾ ವಿರುದ್ಧದ ದಾಳಿಗಳನ್ನು ತಡೆಯಲು ಇರಾನ್ ಒಪ್ಪಿಕೊಂಡಿದೆ ಮತ್ತು ಎರಡೂ ದೇಶಗಳು ಸಂಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಏಷ್ಯಾ ಇದೇ ರೀತಿಯ ಹಲವು ಹೊಸ ಬೆಳವಣಿಗೆಗಳನ್ನು ಕಂಡಿದೆ. ೨೦೨೦ರಲ್ಲಿ ಯುಎಇ ಕಾಲು ಶತಮಾನದಲ್ಲಿ ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸಿದ ಮೊದಲ ಅರಬ್ ರಾಷ್ಟ್ರವಾಯಿತು. ನಂತರದ ವರ್ಷಗಳಲ್ಲಿ ಇಸ್ರೇಲ್ ಪ್ಯಾಲೆಸ್ಟೈನ್ ಭೂಪ್ರದೇಶವನ್ನು ಇಸ್ರೇಲ್ ಕ್ರೂರವಾಗಿ ವಶಪಡಿಸಿಕೊಂಡಿದ್ದರೂ ಸಹ ಇರಾನಿನ ಸವಾಲಿನ ಎದುರು ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳು ತಮ್ಮ ನಡುವಿನ ಸಹಕಾರವನ್ನು ಗಾಢವಾಗಿಸಿಕೊಂಡವು ಅಮೆರಿಕಾ ಪಶ್ಚಿಮ ಏಷ್ಯಾದಿಂದ ತನ್ನ ಗಮನವನ್ನು ಯುಕ್ರೇನ್ ಯುದ್ಧ ಮತ್ತು ಚೀನಾದ ಇಂಡೋ-ಪೆಸಿಫಿಕ್ ಪ್ರಭಾವವನ್ನು ತಗ್ಗಿಸುವುದರತ್ತ ನೆಟ್ಟಿರುವುದರಿಂದ, ಪಶಿಮ ಏಷ್ಯಾದ ಅದರ ಮಿತ್ರರಾಷ್ಟ್ರಗಳು ಅಮೆರಿಕದ ಕ್ಷೀಣಿಸುತ್ತಿರುವ ಭದ್ರತಾ ಖಾತರಿಗಳ ನಡುವೆ ಹೊಸ ಪರಿಹಾರಗಳನ್ನು ಹುಡುಕಲಾರಂಭಿಸಿದ್ದಾರೆ.

ಈ ಒಪ್ಪಂದವು ಪಶ್ಚಿಮ ಏಷ್ಯಾದಲ್ಲಿ ‘ಪವರ್ ಬ್ರೋಕರ್’ ಆಗಿ ಚೀನಾದ ಆಗಮನವನ್ನು ಸಹ ಸೂಚಿಸುತ್ತದೆ. ಈ ಹಿಂದೆ ೨೦೧೫ರ ಇರಾನ್ ಪರಮಾಣು ಒಪ್ಪಂದದಂತಹ ಬಹುಪಕ್ಷೀಯ ಶಾಂತಿ ಮಾತುಕತೆಗಳಲ್ಲಿ ಚೀನಾ ತೊಡಗಿಸಿಕೊಂಡಿತ್ತು. ಆದರೆ ಇದೇ ಮೊದಲ ಬಾರಿಗೆ ಚೀನಾ ನೇರವಾಗಿ ಈ ಪ್ರಾಂತ್ಯದಲ್ಲಿ ತನ್ನ ಹತೋಟಿಯನ್ನು ಬಳಸಿ ಕಿತ್ತಾಡುತ್ತಿದ್ದ ಎರಡು ದೇಶಗಳ ನಡುವೆ ಶಾಂತಿ ಮಾತುಕತೆ ನಡೆಸಿದೆ. ವಿಶ್ವದ ಅತಿದೊಡ್ಡ ತೈಲ ಆಮದುದಾರನಾಗಿರುವ ಚೀನಾಕ್ಕೆ ಪ್ರಮುಖ ಇಂಧನ ಮೂಲವಾದ ಪಶ್ಚಿಮ ಏಷ್ಯಾದಲ್ಲಿ ಸ್ಥಿರತೆ ಅತ್ಯಗತ್ಯ. ಇರಾನಿನೊಂದಿಗೆ ಯುಎಸ್ ಸಂಬಂಧ ಮುರಿದುಬಿದ್ದಿವೆ. ಆದರೆ ಅದಕ್ಕಿಂತಲೂ ಭಿನ್ನವಾಗಿ ಟೆಹ್ರಾನ್ ಮತ್ತು ರಿಯಾದ್ ಎರಡರ ಜೊತೆಯೂ ಚೀನಾ ಉತ್ತಮ ಸಂಬಂಧ ಹೊಂದಿದೆ. ಚೀನಾ ಇರಾನಿನ ಅತಿ ದೊಡ್ಡ ತೈಲ ಆಮದುದಾರನಾಗಿದ್ದರೆ ಸೌದಿ ಅರೇಬಿಯಾದ ದೊಡ್ಡ ವ್ಯಾಪಾರ ಪಾಲುದಾರನಾಗಿದೆ. ಈ ಕಾರಣಕ್ಕೆ ಪ್ರದೇಶದ ಎರಡು ಪ್ರಮುಖ ಶಕ್ತಿಗಳನ್ನು ಒಂದು ತಾಟಿಗೆ ತರಲು ಚೀನಾವೇ ಸೂಕ್ತ ಎನಿಸಿದೆ. ಕ್ಷಿಪ್ರ ಬದಲಾವಣೆಗಳಿಗೆ ಒಳಗಾಗುತ್ತಿರುವ ಸೌದಿ ಅರೇಬಿಯಾ ತನ್ನ ನೆರೆಹೊರೆಯಲ್ಲಿ ಶಾಂತಿಯನ್ನು ಬಯಸುತ್ತಿದೆ. ಯುಎಸ್ ಹೇರಿದ ನಿರ್ಬಂಧಗಳ ಅಡಿಯಲ್ಲಿ ತತ್ತರಿಸುತ್ತಿರುವ ಇರಾನ್ ಹೆಚ್ಚು ಮುಕ್ತ ರಾಜತಾಂತ್ರಿಕ ಸಂಬಂಧಗಳು ಮತ್ತು ಆರ್ಥಿಕ ಅವಕಾಶಗಳನ್ನು ಬಯಸುತ್ತಿದೆ. ಈ ಶಾಂತಿ ಒಪ್ಪಂದವು ನಿಜಕ್ಕೂ ಬಾಳಿಕೆ ಬಂದರೆ ಇದು ಯೆಮೆನ್‌ನಲ್ಲಿ ಶಾಂತಿಯಿಂದ ಹಿಡಿದು ಲೆಬನಾನ್ ಸ್ಥಿರತೆಯವರೆಗೆ ಪ್ರಾದೇಶಿಕ ಭೌಗೋಳಿಕ ರಾಜಕೀಯದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ. ಆದರೆ ಇರಾನ್ ಮತ್ತು ಸೌದಿ ಅರೇಬಿಯಾ ನಡುವಿನ ಬಹುವರ್ಷಗಳ ಬಹುಪದರದ ವೈರತ್ವದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಶಾಂತಿ ನೆಲೆಸುತ್ತದೆಯೇ ಎಂದು ಹೇಳುವುದು ಕಷ್ಟ. ಸೌದಿ ಅರೇಬಿಯಾ, ಇರಾನ್ ಮತ್ತು ಚೀನಾ ಮುಂಬರುವ ಸಂಭಾವ್ಯ ಅಪಾಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಎರಡು ಪ್ರಾದೇಶಿಕ ಶಕ್ತಿಗಳ ನಡುವೆ ಶಾಂತಿಯನ್ನು ಸಾಧಿಸಲು ಈಗ ಸಾಧಿಸಿರುವ ಆವೇಗವನ್ನು ಕಾಪಾಡಿಕೊಂಡು ಇದನ್ನು ಇನ್ನೂ ವೃದ್ಧಿಸಬೇಕು.

This editorial has been translated from English, which can be read here.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT