ADVERTISEMENT

ಕಲಿತ ಪಾಠಗಳು

March 16, 2023 10:46 am | Updated 12:08 pm IST

ಬ್ಯಾಂಕುಗಳು ದಿವಾಳಿಯಾಗುತ್ತಿರುವ ಜಾಗತಿಕ ಸೋಂಕಿನಿಂದ ಭಾರತೀಯ ಬ್ಯಾಂಕುಗಳನ್ನು ಆರ್‌ಬಿಐ ರಕ್ಷಿಸಬೇಕು

ಯುಎಸ್ ಪಶ್ಚಿಮ ತೀರದಲ್ಲಿ ಬ್ಯಾಂಕೊಂದು ಮುಗ್ಗರಿಸಿರುವುದು ಜಾಗತಿಕ ಮಾರುಕಟ್ಟೆಗಳಲ್ಲಿ ೨೦೦೮ರ ಲೆಹ್ಮನ್ ಬ್ರದರ್ಸ್ ದಿವಾಳಿಯೆದ್ದ ಸಂದರ್ಭವನ್ನು ನೆನಪಿಸಿ ಭಯದ ಕಂಪನಗಳನ್ನು ಸೃಷ್ಟಿಸಿತು. ಇದು ಜಗತ್ತಿನ ಹಲವು ಮಾರುಕಟ್ಟೆಗಳಲ್ಲಿ ಬ್ಯಾಂಕಿಂಗ್ ಷೇರುಗಳ ತೀವ್ರ ಕುಸಿತಕ್ಕೆ ಕಾರಣವಾಗಿದೆ. ಹೂಡಿಕೆದಾರರು ಚಿನ್ನದಂತಹ ಸುರಕ್ಷಿತ ಸ್ವತ್ತುಗಳೆಡೆ ತಮ್ಮ ಚಿತ್ತ ಹರಿಸಿದ್ದಾರೆ. ಆದರೆ ಶುಕ್ರವಾರದಿಂದ ಈ ನಾಲ್ಕು ದಿನಗಳ ಅವಧಿಯಲ್ಲಿ ವಿಶ್ವದ ಅತಿದೊಡ್ಡ ಆರ್ಥಿಕತೆಯ ನಿಯಂತ್ರಕರು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸಲು ಚುರುಕಿನಿಂದ ಕೆಲಸ ಮಾಡಿದರು. ಫೆಡರಲ್ ಡಿಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ (ಎಫ್‌ಡಿಐಸಿ) ಮೊದಲು ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಮತ್ತು ಭಾನುವಾರ ನ್ಯೂಯಾರ್ಕ್ ಮೂಲದ ಸಿಗ್ನೇಚರ್ ಬ್ಯಾಂಕ್‌ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಫೆಡರಲ್ ರಿಸರ್ವ್ ಮತ್ತು ಖಜಾನೆ ಇಲಾಖೆಯೊಂದಿಗೆ ಸೇರಿ ಎರಡೂ ಬ್ಯಾಂಕುಗಳಲ್ಲಿನ ಠೇವಣಿದಾರರಿಗೆ ಅವರ ಠೇವಣಿಯನ್ನು ಪೂರ್ಣವಾಗಿ ಮರುಪಾವತಿ ಮಾಡಲಾಗುತ್ತದೆ ಎಂದು ಹೇಳಿದರು. ಆದರೆ ಬ್ಯಾಂಕುಗಳ ಷೇರುದಾರರನ್ನು ರಕ್ಷಿಸಲಾಗುವುದಿಲ್ಲ ಎಂದು ನಿಯಂತ್ರಕರು ಹೇಳಿದ್ದಾರೆ. ಸೋಮವಾರ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಯುಎಸ್ ಶಕ್ತ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿರ್ವಹಿಸಲು ಬದ್ಧವಾಗಿದೆ ಮತ್ತು ಇಂತಹ ವೈಫಲ್ಯಗಳು ಮತ್ತೆ ಮರುಕಳಿಸದಂತೆ ಬ್ಯಾಂಕಿಂಗ್ ನಿಯಮಗಳನ್ನು ಬಿಗಿಗೊಳಿಸುತ್ತದೆ ಎಂದು ಹೇಳುವ ಮೂಲಕ ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಭರವಸೆ ಮೂಡಿಸಲು ಪ್ರಯತ್ನಿಸಿದರು. ಈ ಎಲ್ಲ ಕ್ರಮಗಳು ವಿಶ್ವದ ಹೆಚ್ಚಿನ ಮಾರುಕಟ್ಟೆಗಳಲ್ಲಿ ಮತ್ತೆ ಕೊಂಚ ಶಾಂತಿ ತಂದಿದೆ. ಆದರೆ ಈ ಇಡೀ ಬಿಕ್ಕಟ್ಟು ಹಲವು ಪಾಠಗಳನ್ನು ಈಗಾಗಲೇ ಕಲಿಸಿದೆ ಮತ್ತು ಕಾಲಾಂತರದಲ್ಲಿ ಇನ್ನಷ್ಟು ಪಾಠಗಳನ್ನು ಕಲಿಸಲಿದೆ.

ಸಿಲಿಕಾನ್ ವ್ಯಾಲಿ ಬ್ಯಾಂಕ್ ಪ್ರಕರಣವು ವಿಶಿಷ್ಟವಾಗಿದೆ. ಈ ಬ್ಯಾಂಕಿಗೆ ಬಹುತೇಕ ನವೋದ್ಯಮಗಳು ಮತ್ತು ವೆಂಚರ್ ಕಾಪಿಟಲಿಸ್ಟುಗಳೇ ಠೇವಣಿದಾರರು. ಹೆಚ್ಚಾಗಿ ಸಿಲಿಕಾನ್ ವ್ಯಾಲಿಯಿಂದ ಬಂದ ಗ್ರಾಹಕರು ಭೌಗೋಳಿಕವಾಗಿ ಮತ್ತು ವಲಯವಾರು ಕೇಂದ್ರೀಕೃತರಾಗಿದ್ದರು. ಅಮೆರಿಕಾದ ಖಜಾನೆ ಮತ್ತು ಅಡಮಾನ ಬಾಂಡ್‌ಗಳ ಮೇಲೆ ಬ್ಯಾಂಕ್ ವ್ಯಾಪಕವಾಗಿ ಹೂಡಿಕೆ ಮಾಡಿತ್ತು. ಅತ್ತ ಹಣದುಬ್ಬರವನ್ನು ತಗ್ಗಿಸಲು ಹೋರಾಡುತ್ತಿರುವ ಕೇಂದ್ರ ಬ್ಯಾಂಕ್‌ ಇತ್ತೀಚೆಗೆ ಬಡ್ಡಿದರವನ್ನು ತೀಕ್ಷ್ಣವಾಗಿ ಹೆಚ್ಚಿಸಿದ್ದರಿಂದ ಬ್ಯಾಂಕು ಅಪಾರ ನಷ್ಟಕ್ಕೆ ಒಳಗಾಯಿತು. ಇದು ಸಂಕಷ್ಟದ ಸಮಯದಲ್ಲಿ ಠೇವಣಿ ಹಿಂದಿರುಗಿಸಲು ಆಗದಷ್ಟು ದುಬಾರಿಯಾಯಿತು. ಮತ್ತೊಂದೆಡೆ ಸಿಗ್ನೇಚರ್ ಬ್ಯಾಂಕ್ ಡಿಜಿಟಲ್ ಸ್ವತ್ತುಗಳಲ್ಲಿ ಹೂಡಿಕೆ ಮಾಡುವವರಿಗೆ ಸೇವೆಗಳನ್ನು ಒದಗಿಸುವ ಮೂಲಕ ಅಸ್ಥಿರ ಕ್ರಿಪ್ಟೋಕರೆನ್ಸಿಗಳಿಗೆ ತನ್ನನ್ನು ತಾನು ಒಡ್ಡಿಕೊಂಡಿತ್ತು. ಅದು ಈ ಬ್ಯಾಂಕು ದಿವಾಳಿಯಾಗಲು ಕಾರಣವಾಗಿದೆ. ಫೆಡರಲ್ ಬ್ಯಾಂಕು ವಿತ್ತೀಯ ನೀತಿಯನ್ನು ಬಿಗಿಗೊಳಿಸಿರುವುದೇ ಈ ಬ್ಯಾಂಕುಗಳು ದಿವಾಳಿಯಾಗಲು ಕಾರಣ ಎಂದು ದೂರುವುದು ಬಾಲಿಶ. ಬಡ್ಡಿದರಗಳು ಯಾವತ್ತೂ ಆವರ್ತಕವಾಗಿರುತ್ತವೆ ಮತ್ತು ಎಲ್ಲ ಬ್ಯಾಂಕಿಂಗ್ ಬಡ್ಡಿದರದ ಏರಿಳಿತಗಳ ಅಪಾಯಗಳನ್ನು ನಿರ್ವಹಿಸುವುದರ ಮೇಲೆ ಅವಲಂಬಿತವಾಗಿರುತ್ತದೆ. ಸಾಲ ನೀಡಲು ಬ್ಯಾಂಕುಗಳು ಪಡೆಯುವ ಠೇವಣಿಗಳನ್ನು ಯಾವುದೇ ಕ್ಷಣ ಹಿಂದಿರುಗಿಸುವುದನ್ನು ಸಾಧ್ಯವಾಗಿಸುವಂತೆ ಬ್ಯಾಂಕುಗಳ ಸ್ವತ್ತುಗಳು ಮತ್ತು ಆದಾಯವನ್ನು ಇರಿಸಿಕೊಳ್ಳುವುದು ಬ್ಯಾಂಕಿಂಗಿನ ಮೂಲ ತತ್ವವಾಗಿದೆ. ೨೦೧೮ರ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗದರ್ಶಿ ಸೂತ್ರಗಳು ‘ಹೂಡಿಕೆ ಏರಿಳಿತ ಮೀಸಲು ಫಂಡ್’ ಅನ್ನು ರಚಿಸಲು ಸೂಚಿಸಿರುವುದು ಭಾರತದ ಬ್ಯಾಂಕುಗಳನ್ನು ಬಡ್ಡಿದರಗಳ ಏರಿಳಿತದ ಅಪಾಯಗಳಿಂದ ಕಾಪಾಡುವ ಒಂದು ಸಾಧನವಾಗಿದೆ. ಆದರೂ ಬ್ಯಾಂಕುಗಳು ದಿವಾಳಿಯಾಗುತ್ತಿರುವ ಈ ಸಾಂಕ್ರಾಮಿಕವು ಯಾವುದೇ ಸ್ಥಳೀಯ ಬ್ಯಾಂಕುಗಳನ್ನು ಸೋಕದಂತೆ ಆರ್‌ಬಿಐ ಕಾವಲು ಕಾಯಬೇಕು.

This editorial has been translated from English, which can be read here.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT