ADVERTISEMENT

ಮತ್ತೆ ಸಿಸಿ

Updated - December 21, 2023 11:10 am IST

Published - December 21, 2023 11:03 am IST

ಆರ್ಥಿಕ ಬಿಕ್ಕಟ್ಟಿನ ನಡುವೆ ಈಜಿಪ್ಟ್ ಅನ್ನು ಆಳುವುದು ಸುಲಭವಲ್ಲ

೨೦೧೩ರಲ್ಲಿ ಸೇನಾ ದಂಗೆಯ ಮೂಲಕ ಅಧಿಕಾರ ವಶಪಡಿಸಿಕೊಂಡ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿಗೆ ಮರುಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸುಲಭವಾಗಿತ್ತು. ಈಜಿಪ್ಟ್‌ನ ಅಧ್ಯಕ್ಷೀಯ ಚುನಾವಣೆಗಳಲ್ಲಿ ಹಾಲಿ ಅಧ್ಯಕ್ಷರು ಯಾವಾಗಲೂ ಭಾರಿ ಅಂತರದಿಂದ ಗೆಲ್ಲುತ್ತಾರೆ. ಡಿಸೆಂಬರ್ ೧೦-೧೨ರ ಚುನಾವಣೆಗಳಲ್ಲಿ ಮಾಜಿ ಸೇನಾಧಿಕಾರಿ ಸಿಸಿ ಅವರು ಯಾರಿಗೂ ಹೆಚ್ಚು ಪರಿಚಿತರಲ್ಲದ ಮೂವರು ಅಭ್ಯರ್ಥಿಗಳ ವಿರುದ್ಧ ಸೆಣಸಿದರು. ಆದರೆ ಅವರ ಕಟು ವಿರೋಧಿ ಜನಪ್ರಿಯ ಅಹ್ಮದ್ ತಾಂಟವಿ ಅವರನ್ನು ಸ್ಪರ್ಧಿಸದಂತೆ ತಡೆಯಲಾಯಿತು. ಸರ್ಕಾರಿ ಪ್ರಾಯೋಜಿತ ಮಾಧ್ಯಮವು ಅಧ್ಯಕ್ಷರ ಸಾಧನೆಗಳನ್ನು ಕೊಂಡಾಡುತ್ತಾ ಪ್ರಚಾರ ನಡೆಸಿತು. ಸಿಸಿ ಅವರು ಶೇ. ೮೯.೬ರಷ್ಟು ಮತ ಪಡೆದು ಅವರ ಆಡಳಿತವನ್ನು ೨೦೩೦ರವರೆಗೂ ವಿಸ್ತರಿಸಿದ್ದು ಆಶ್ಚರ್ಯವೇನೂ ಅಲ್ಲ. ಆದರೆ ಈಗ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳೊಂದಿಗೆ ಹೋರಾಡುತ್ತಿರುವ ಈಜಿಪ್ಟ್ ಅನ್ನು ಆಳುವುದು ಸುಲಭದ ವಿಷಯವಲ್ಲ. ಈಜಿಪ್ಟ್‌ನ ಮುಕ್ತವಾಗಿ ಚುನಾಯಿತರಾದ ಮೊದಲ ಅಧ್ಯಕ್ಷ ಮುಸ್ಲಿಂ ಬ್ರದರ್‌ಹುಡ್ ನಾಯಕ ಮೊಹಮ್ಮದ್ ಮೊರ್ಸಿಯವರನ್ನು ಸೇನಾ ದಂಗೆಯಲ್ಲಿ ಗದ್ದುಗೆಯಿಂದ ಇಳಿಸಿದಾಗ, ಅವರು ಸರ್ವಾಧಿಕಾರಿ ಹೋಸ್ನಿ ಮುಬಾರಕ್ ಆಡಳಿತವನ್ನು ಉರುಳಿಸಿದ ೨೦೧೧ರ “ಕ್ರಾಂತಿ”ಯನ್ನು ಅಲ್ಲಗಳೆದಿದ್ದರು ಎಂದು ಸೇನೆ ಆರೋಪಿಸಿತ್ತು. ಆದರೆ ಸಿಸಿ ಅವರ ಆಡಳಿತದಲ್ಲಿ ದೇಶವು ಮತ್ತೆ ಹೋಸ್ನಿ ಮುಬಾರಕ್ ಅವರ ರೀತಿಯ ಆಡಳಿತಕ್ಕೆ ಜಾರಿತು. ಆಗಸ್ಟ್ ೧೪, ೨೦೧೩ರಂದು ‘ಸುವ್ಯವಸ್ಥೆ’ ಸ್ಥಾಪಿಸಲು ಸೇನಾ ದಂಗೆಯ ವಿರುದ್ಧ ಪ್ರತಿಭಟನೆ ಮಾಡಿದ ನೂರಾರು ಮುಸ್ಲಿಂ ಬ್ರದರ್‌ಹುಡ್ ಪರ ಪ್ರತಿಭಟನಾಕಾರರನ್ನು ಕೊಂದ ಆಡಳಿತವು ಅಂದಿನಿಂದ ಯಾವುದೇ ಟೀಕೆ ಮತ್ತು ಭಿನ್ನಾಭಿಪ್ರಾಯಗಳನ್ನು ಸಹಿಸಿಲ್ಲ. ಆದರೆ ಸಿಸಿ ತನ್ನನ್ನು ತಾನು ದೇಶಕ್ಕೆ ಸ್ಥಿರತೆಯನ್ನು ನೀಡಬಲ್ಲ ಏಕೈಕ ವ್ಯಕ್ತಿಯೆಂದೂ, ಭಯೋತ್ಪಾದನೆಯ ವಿರುದ್ಧ ರಾಜಿಯಿಲ್ಲದೆ ಹೋರಾಡುವುದಾಗಿಯೂ ಬಿಂಬಿಸಿಕೊಂಡರು ಮತ್ತು ಕೈರೋದ ಹೊರಗೆ ಹೊಸ ರಾಜಧಾನಿ ಕಟ್ಟುವುದೂ ಸೇರಿದಂತೆ ಸಾಲ ಮಾಡಿ ಹಲವು ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳನ್ನು ಪ್ರಾರಂಭಿಸಿದರು.

ಅಧ್ಯಕ್ಷರಾಗಿ ಹೊಸ ಅವಧಿ ಪ್ರಾರಂಭಿಸುತ್ತಿರುವ ಸಿಸಿ ಅವರ ಗಮನವೆಲ್ಲ ಆರ್ಥಿಕತೆಯ ಮೇಲೆ ನೆಟ್ಟಿರಬೇಕು. ಶೇ. ೩೫ರಷ್ಟಿರುವ ಅಧಿಕ ಹಣದುಬ್ಬರ ಈಗಾಗಲೇ ಅನೇಕ ಈಜಿಪ್ಷಿಯನ್ನರನ್ನು ಬಡತನಕ್ಕೆ ತಳ್ಳಿದೆ. ಬಾಹ್ಯ ಸಾಲವು ಡಿಸೆಂಬರ್ ೨೦೨೨ರಲ್ಲಿ $೧೬೨.೯ ಶತಕೋಟಿಯಷ್ಟಿದೆ. ಕೇಂದ್ರ ಬ್ಯಾಂಕ್ ಪ್ರಕಾರ ಇದು ದೇಶದ ಜಿಡಿಪಿಯ ಸುಮಾರು ಶೇ. ೪೦ರಷ್ಟು. ೨೦೨೪ರಲ್ಲಿ ಮರುಪಾವತಿ ಬಿಕ್ಕಟ್ಟು ಎದುರಿಸಲಿರುವ ದೇಶವು ಈಗಾಗಲೇ ಐಎಂಎಫ್ ಮತ್ತು ಇತರ ಸಂಸ್ಥೆಗಳೊಂದಿಗೆ ಹೆಚ್ಚಿನ ಸಹಾಯಕ್ಕಾಗಿ ಮಾತುಕತೆ ನಡೆಸುತ್ತಿದೆ. ಈಜಿಪ್ಟ್‌ನೊಂದಿಗೆ ಗಡಿ ಹಂಚಿಕೊಳ್ಳುವ ಗಾಝಾ ನಗರದ ಮೇಲೆ ಇಸ್ರೇಲ್ ದಾಳಿಯು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಐತಿಹಾಸಿಕವಾಗಿ ದೇಶದಲ್ಲಿ ಪ್ಯಾಲೆಸ್ಟೀನ್ ಪರ ಸಹಾನುಭೂತಿ ಹೆಚ್ಚಿದೆ. ಇಸ್ರೇಲ್‌ನ ಪಟ್ಟುಬಿಡದ ಬಾಂಬ್‌ ದಾಳಿಯು ಸಾವಿರಾರು ಪ್ಯಾಲೆಸ್ಟೀನಿಯನ್ನರನ್ನು ಈಜಿಪ್ಟ್ ಗಡಿಯತ್ತ ತಳ್ಳಿದೆ. ಈ ಸಂಧರ್ಭದಲ್ಲಿ ಸಿಸಿ ಅವರು ಬಹಿರಂಗವಾಗಿ ಇಸ್ರೇಲ್ ಕ್ರಮವನ್ನು ಖಂಡಿಸುತ್ತಾ ಬಂದಿದ್ದಾರಾದರೂ ಇಸ್ರೇಲಿನೊಂದಿಗೆ ತಮ್ಮ ಸಂಬಂಧದ ಹದಗೆಡಿಸುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೆ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಗಾಝಾದಿಂದ ಪ್ಯಾಲೆಸ್ಟೀನಿಯನ್ನರನ್ನು ಸಾಮೂಹಿಕವಾಗಿ ಹೊರಹಾಕುವ ಯಾವುದೇ ಇಸ್ರೇಲ್ ಯೋಜನೆಗೆ ತನ್ನ ವಿರೋಧವಿದೆ ಎಂದು ಸಿಸಿ ಹೇಳಿದ್ದಾರೆ. ಆದರೆ ಯುದ್ಧವು ಮತ್ತಷ್ಟು ಲಂಬಿಸಿದರೆ ನಿರಾಶ್ರಿತ ಪ್ಯಾಲೆಸ್ಟೀನಿಯನ್ನರನ್ನು ದೇಶದೊಳಗೆ ಬಿಟ್ಟುಕೊಳ್ಳಲು ಅವರ ಮೇಲೆ ಒತ್ತಡ ಹೆಚ್ಚುತ್ತದೆ. ಇದು ಅಪಾರ ಆರ್ಥಿಕ ರಾಜಕೀಯ ಪರಿಣಾಮಗಳನ್ನು ಬೀರುತ್ತದೆ. ದೇಶದ ನೆರೆಯಲ್ಲಿ ಯುದ್ಧ ಮತ್ತು ದೇಶದೊಳಗೆ ಆರ್ಥಿಕ ಬಿಕ್ಕಟ್ಟಿನ ನಡುವೆ ಇತ್ತೀಚೆಗೆ ಸರ್ಕಾರವನ್ನು ಕಿತ್ತೊಗೆದ ಪ್ರತಿಭಟನೆಗಳು ಮತ್ತು ಸೇನಾ ದಂಗೆಗಳನ್ನು ಕಂಡ ದೇಶದಲ್ಲಿ ಸ್ಥಿರ ಆಡಳಿತ ನೀಡುವುದು ಅವರ ಸವಾಲು.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT