ADVERTISEMENT

ವಿಪತ್ತು ಪರಿಹಾರದ ಬಗ್ಗೆ ವಿವಾದ 

December 30, 2023 12:28 pm | Updated 12:28 pm IST

ವಿಪತ್ತು ಪರಿಹಾರಕ್ಕೆ ಮಾನದಂಡಗಳನ್ನು ಸ್ಪಷ್ಟವಾಗಿ ನಿಗದಿಪಡಿಸಬೇಕು

ರಾಜ್ಯದಲ್ಲಿ ಎರಡು ಬಾರಿ ಸುರಿದ ಭಾರಿ ಮಳೆಯ ನಂತರ ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳ ನಡುವೆ ಇತ್ತೀಚೆಗೆ ನಡೆದ ಜಟಾಪಟಿ ಸಂತ್ರಸ್ತರನ್ನು ನಿರಾಶೆಗೊಳಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯ ಯುವ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್ ನಡುವೆ ಈ ವಾಗ್ಯುದ್ಧ ತಲೆದೊರಲೇಬಾರದಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆದ್ಯತೆ ಡಿಸೆಂಬರ್ ೧೭-೧೮ರಂದು ಸುರಿದ ಭಾರಿ ಮಳೆಗೆ ತತ್ತರಗೊಂಡಿರುವ ದಕ್ಷಿಣ ತಮಿಳು ನಾಡಿನ ಜಿಲ್ಲೆಗಳನ್ನು ಸಹಜ ಸ್ಥಿತಿಗೆ ತರುವುದೇ ಆಗಬೇಕಿತ್ತು. ಅದೃಷ್ಟವಶಾತ್ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದರಿಂದ ಪರಿಸ್ಥಿತಿ ತಿಳಿಯಾಗಿದೆ. ಈ ಹಿಂದೆ ದೆಹಲಿಯಲ್ಲಿ ಮೋದಿಯವರನ್ನು ಭೇಟಿಯಾದಾಗ ಸ್ಟಾಲಿನ್ ಅವರು ₹೭೦೩೩ ಕೋಟಿ ಮಧ್ಯಂತರ ಪರಿಹಾರ ಮತ್ತು ಮೈಚಾಂಗ್ ಚಂಡಮಾರುತದಿಂದ ಚೆನ್ನೈ ಪ್ರದೇಶಕ್ಕೆ ಈ ಹಿಂದೆ ಉಂಟಾದ ಹಾನಿಗೆ ₹೧೨,೬೫೯ ಕೋಟಿ ಅಂತಿಮ ಪರಿಹಾರ ನಿಧಿಯನ್ನು ಕೋರಿದ್ದರು. ಅವರು ದಕ್ಷಿಣದ ಜಿಲ್ಲೆಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ₹೨೦೦೦ ಕೋಟಿ ಪರಿಹಾರ ಬಯಸಿದ್ದರು. ರಾಜ್ಯವು ಕೇಂದ್ರ ಸರ್ಕಾರದಿಂದ ಒಟ್ಟು ₹೨೧,೬೯೨ ಕೋಟಿ ಕೇಳಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಹಿಂದೆ ಚೆನ್ನೈ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಗೆ (ಎಸ್‌ಡಿಆರ್‌ಎಫ್) ಎರಡನೇ ಕಂತಿನ ₹೪೫೦ ಕೋಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಚೆನ್ನೈನ ಪ್ರವಾಹ ತಗ್ಗಿಸುವ ಯೋಜನೆಗೆ ಕೇಂದ್ರವು ₹೫೦೦ ಕೋಟಿಯನ್ನು ಸಹ ಮಂಜೂರು ಮಾಡಿದೆ. ಪೀಡಿತ ಪ್ರದೇಶಗಳಿಗೆ ಅಂತರ ಸಚಿವಾಲಯದ ತಂಡಗಳ ಭೇಟಿಯ ನಂತರ ರಾಜ್ಯವು ಇದೀಗ ಹೊಸ ಕೇಂದ್ರ ಸರ್ಕಾರದ ಪ್ರಕಟಣೆಗಾಗಿ ಕಾಯುತ್ತಿದೆ. ನಿರ್ಮಲಾ ಸೀತಾರಾಮನ್ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಸೂಚಿಸಿದಂತೆ, ಕೇಂದ್ರ ಸರ್ಕಾರವು ಯಾವುದೇ ನೈಸರ್ಗಿಕ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವುದಿಲ್ಲ. ಕೇಂದ್ರ ತಂಡದ ಮೌಲ್ಯಮಾಪನದ ನಂತರವೇ ಯಾವುದೇ ನೈಸರ್ಗಿಕ ವಿಕೋಪವನ್ನು ತೀವ್ರ ಸ್ವರೂಪದ ವಿಪತ್ತು ಎಂದು ಈ ಹಿಂದೆಯೂ ವರ್ಗೀಕರಿಸಲಾಗಿದೆ. ಉತ್ತರಾಖಂಡದಲ್ಲಿ ೨೦೧೩ ರ ಪ್ರವಾಹ ಮತ್ತು ೨೦೧೮ ರ ಕೇರಳದ ಪ್ರವಾಹದಲ್ಲೂ ಹೀಗೇ ಮಾಡಲಾಯಿತು. ಅಂತಹ ಸಂದರ್ಭದಲ್ಲಿ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಹೆಚ್ಚುವರಿ ಆರ್ಥಿಕ ಸಹಾಯ ದೊರೆಯುತ್ತದೆ. ಹಾಗಾಗಿ ತಮಿಳುನಾಡಿನ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಪ್ರಶ್ನೆಯೇ ಇಲ್ಲ. ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರತರಬೇಕು ಮತ್ತು ವಿಪತ್ತು ಪರಿಹಾರ ನಿಧಿಯಿಂದ ದೀರ್ಘಾವಧಿಯ ಅಥವಾ ಶಾಶ್ವತ ಮರುನಿರ್ಮಾಣ ಕಾರ್ಯಗಳನ್ನು ಮಾಡುವಂತಿಲ್ಲ ಎಂಬ ನಿಯಮವನ್ನು ಮರುಪರಿಶೀಲಿಸಬೇಕು. ಮಾರ್ಚ್ ೨೦೨೧ರ ಸಂಸದೀಯ ಸಮಿತಿ ಸಲಹೆಯ ಮೇಲೆ ಮುಕ್ತ ಚರ್ಚೆ ನಡೆಯಬೇಕು. ಅದು ತೀವ್ರ ವಿಪತ್ತಿಗೆ ಒಳಗಾದ ರಾಜ್ಯಗಳು ವಿಪತ್ತಿನ ನಂತರದ ಮರುನಿರ್ಮಾಣ ಕಾರ್ಯಗಳಿಗೆ ಕೇಂದ್ರ ಸರ್ಕಾರದ ಯೋಜನೆಗಳ ಶೇ. ೨೫ಕ್ಕಿಂತ ಹೆಚ್ಚು ನಿಧಿಯನ್ನು ಬಳಸಿಕೊಳ್ಳಲು ಅವಕಾಶ ಕೊಡಬೇಕು ಎಂದು ಹೇಳಿದೆ. ವಿಪತ್ತು ಪರಿಹಾರ ನಿಧಿಯಡಿ ಚಿಕ್ಕ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಆದ ಹಾನಿಗೆ ಪರಿಹಾರ ನೀಡುವುದಿಲ್ಲ. ರಾಜ್ಯದಲ್ಲಿ ೧.೪ ಕೋಟಿ ಜನರಿಗೆ ಉದ್ಯೋಗ ನೀಡುವ ಈ ವಲಯಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು. ಅಂತಿಮವಾಗಿ ಕೇಂದ್ರವು ಆಗಾಗ ಚಂಡಮಾರುತಕ್ಕೆ ತುತ್ತಾಗುವ ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಗುಜರಾತ್ ರಾಜ್ಯಗಳೊಂದಿಗೆ ಸಮಾಲೋಚಿಸಿ ರಾಜಕೀಯ ವಿವಾದಗಳಿಗೆ ಅವಕಾಶ ನೀಡದ ಹೊಸ ವಿಪತ್ತು ನಿರ್ವಹಣಾ ಮತ್ತು ಪರಿಹಾರ ಮಾರ್ಗಸೂಚಿಗಳನ್ನು ರೂಪಿಸಬೇಕು.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT