ADVERTISEMENT

ತ್ರಿಕೋನ ಸ್ಪರ್ಧೆ

Published - October 14, 2023 10:46 am IST

ಎಂಎನ್ಎಫ್ ಮಿಜೋರಾಂನಲ್ಲಿ ಜನಾಂಗೀಯ ಸಮಸ್ಯೆಗಳ ಬಗ್ಗೆ ಕಠಿಣ ನಿಲುವು ತಳೆದು ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಮಿಜೋರಾಂ ಭಾರತದ ಎರಡನೇ ಅತಿ ಕಡಿಮೆ ಜನಸಂಖ್ಯೆ ಇರುವ ರಾಜ್ಯವಾಗಿದ್ದು, ಅಲ್ಲಿ ನಾಗರಿಕ ಸಮಾಜವು ದೇಶದಲ್ಲಿ ಬೇರೆಲ್ಲೂ ಇಲ್ಲದಂತೆ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿದೆ. ನವೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಇತರ ರಾಜ್ಯಗಳಿಗಿಂತ ಭಿನ್ನವಾಗಿ, ಮಿಜೋರಾಂನ ರಾಜಕೀಯ ಸ್ಪರ್ಧೆಯು ಹಣ ಮತ್ತು ತೋಳ್ಬಲದ ಮೇಲೆ ಹೆಚ್ಚು ಅವಲಂಬಿತವಾಗಿಲ್ಲ. ಸಾಮಾಜಿಕ ಸೇವೆ, ಸಾರ್ವಜನಿಕ ಸ್ಥಾನಮಾನ, ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳ ಬೆಂಬಲವು ಗೆಲ್ಲಲು ಹೆಚ್ಚು ಉಪಕಾರಿಯಾಗಿದೆ. ಆಡಳಿತಾರೂಢ ಮಿಜೋ ನ್ಯಾಶನಲ್ ಫ್ರಂಟ್ (ಎಂಎನ್ಎಫ್) ತನ್ನ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನೊಂದಿಗೆ ಮಾತ್ರವಲ್ಲದೆ ಈ ಬಾರಿ ಕಠಿಣ ಸವಾಲು ಒಡ್ಡುತ್ತಿರುವ ಝೋರಾಮ್ ಪೀಪಲ್ಸ್ ಮೂವ್‌ಮೆಂಟ್ (ಜೆಡ್.ಪಿ.ಎಂ) ಜೊತೆಗೂ ಸ್ಪರ್ಧಿಸಬೇಕಿದೆ. ಇದರ ಜೊತೆ ಸ್ಪೀಕರ್ ಲಾಲ್ರಿನ್ಲಿಯಾನಾ ಸೈಲೋ ಭಾರತೀಯ ಜನತಾ ಪಕ್ಷ ಸೇರುವುದರೊಂದಿಗೆ ತನ್ನ ನಾಯಕರ ವಲಸೆಯನ್ನೂ ಎದುರಿಸುತ್ತಿದೆ. ಈ ಹಿಂದೆ ದಂಗೆಕೋರ ಗುಂಪಿನ ನಾಯಕರಾಗಿದ್ದ ಈಗ ರಾಜ್ಯದ ಅನುಭವಿ ನಾಯಕರಾಗಿರುವ ಎಂಎನ್ಎಫ್ ಮುಖ್ಯಮಂತ್ರಿ ಝೋರಾಮ್ತಂಗಾ ಅವರು ಮಿಜೋ ಮತದಾರರ ಬೆಂಬಲ ಗಳಿಸಲು ಜನಾಂಗೀಯ ನೆಲೆಗೆ ಮೊರೆ ಹೋಗಿದ್ದಾರೆ. ನೆರೆಯ ಮಣಿಪುರದಲ್ಲಿ ಜನಾಂಗೀಯ ಘರ್ಷಣೆಯಲ್ಲಿ ಸಿಲುಕಿರುವ ಕುಕಿ-ಜೋ ಜನರನ್ನು ಬೆಂಬಲಿಸುವ ಮೂಲಕ ಮತ್ತು ಮಿಜೋ ಜನರೊಂದಿಗೆ ಅವರ ಜನಾಂಗೀಯ ಸಂಬಂಧವನ್ನು ಉಲ್ಲೇಖಿಸಿ ಮ್ಯಾನ್ಮಾರಿನಿಂದ ಬಂದ ನಿರಾಶ್ರಿತರ ಬಯೋಮೆಟ್ರಿಕ್ ದತ್ತಾಂಶವನ್ನು ಸಂಗ್ರಹಿಸಲು ಕೇಂದ್ರ ಸರ್ಕಾರದ ನಿರ್ದೇಶನವನ್ನು ನಿರ್ಲಕ್ಷಿಸುವ ಮೂಲಕ ಅವರು ಜನಬೆಂಬಲ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ವಿಷಯಗಳ ಬಗ್ಗೆ ಮಿಜೋರಾಂನ ಎಲ್ಲಾ ಪಕ್ಷಗಳ ನಿಲುವೂ ಇದೇ ಆಗಿದ್ದರೂ ಈ ವಿಷಯಗಳ ಬಗ್ಗೆ ಸರ್ಕಾರದ ಅಬ್ಬರ ಇತರರಿಗಿಂತ ಎಂಎನ್‌ಎಫ್‌ಗೆ ಕೊಂಚ ಅನುಕೂಲ ಮಾಡಿಕೊಟ್ಟಿದೆ. ಮಣಿಪುರದ ಸಂಘರ್ಷದ ಉತ್ತುಂಗದಲ್ಲಿ, ನಾಗರಿಕ ಸಮಾಜದ ಸಂಘಟನೆಗಳು ಕುಕಿ-ಜೋ ಜನರಿಗೆ ತನ್ನ ಬೆಂಬಲ ಸೂಚಿಸಲು ಹಲವು ಪ್ರದರ್ಶನಗಳನ್ನು ನಿರ್ವಹಿಸಿದ್ದು ಮಿಜೋ ಮತದಾರರೊಂದಿಗೆ ಪ್ರತಿಧ್ವನಿಸಿದೆ.

ಏತನ್ಮಧ್ಯೆ, ನಗರ ಪ್ರದೇಶಗಳಲ್ಲಿ ಹೆಚ್ಚಿದ ಅದರ ಬೆಂಬಲವನ್ನು ಸೂಚಿಸುವ ಲುಂಗ್ಲೀ ಮುನ್ಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ ಅದರ ಆಶ್ಚರ್ಯಕರ ಉತ್ತಮ ಪ್ರದರ್ಶನದ ಆಧಾರದ ಮೇಲೆ ಹೋರಾಡುತ್ತಿರುವ ಜೆಡ್.ಪಿ.ಎಂ ಅಭಿವೃದ್ಧಿಯ ವಿಚಾರದಲ್ಲಿ ಎಂಎನ್ಎಫ್ ದಾಖಲೆಯನ್ನು ಪ್ರಶ್ನಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಪೀಪಲ್ಸ್ ಕಾನ್ಫರೆನ್ಸ್ ಮತ್ತು ಜೋರಾಮ್ ನ್ಯಾಶನಲಿಸ್ಟ್ ಪಾರ್ಟಿ ಸೇರಿದಂತೆ ಇತರ ಪಕ್ಷಗಳ ಮೈತ್ರಿಕೂಟವನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ಸಿನಿಂದ ಎಂಎನ್‌ಎಫ್‌ಗೆ ಪ್ರಬಲ ಸ್ಪರ್ಧೆ ಎದುರಾಗಿದೆ. ಕಳೆದ ವರ್ಷ ಭಾರತದ ಉಳಿದ ಭಾಗಗಳಿಗೆ ಹೋಲಿಸಿದರೆ ಹಣದುಬ್ಬರವು ರಾಜ್ಯದಲ್ಲಿ ಪ್ರಮುಖ ಕಾಳಜಿಯಾಗಿ ಉಳಿದಿದೆ ಮತ್ತು ಇದು ಮತದಾರರ ಆಯ್ಕೆಯನ್ನು ಪ್ರಭಾವಿಸಬಹುದು. ಮಿಜೋರಾಂ ಭಾರತದ ಶೇ. ೦.೧ರಷ್ಟು ಜನಸಂಖ್ಯೆ ಹೊಂದಿದ್ದು ರಾಷ್ಟ್ರೀಯ ಜಿಡಿಪಿಯ ಶೇ. ೦.೧ರಷ್ಟು ಕೊಡುಗೆ ನೀಡುತ್ತಿರುವ ಒಂದು ಸಣ್ಣ ರಾಜ್ಯವಾಗಿದ್ದರೂ, ಬಹುಮಟ್ಟಿಗೆ ಕೃಷಿ ಪ್ರಧಾನ ಆರ್ಥಿಕತೆ ಹೊಂದಿದ್ದರೂ, ಪ್ರವಾಸೋದ್ಯಮ ಮತ್ತು ಸೇವೆಗಳ ಮೂಲಕ ಆರ್ಥಿಕ ಬೆಳವಣಿಗೆಗೆ ಸಾಕಷ್ಟು ಅವಕಾಶ ಇರುವ ಗಡಿ ರಾಜ್ಯವಾಗಿದೆ. ಇದು ಭಾರತದ ‘ಆಕ್ಟ್ ಈಸ್ಟ್’ ಕಾರ್ಯತಂತ್ರದ ಹೆಬ್ಬಾಗಿಲು ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಮಿಜೋರಾಂ ಅನ್ನು ಮ್ಯಾನ್ಮಾರ್ ಮತ್ತು ಅದರಾಚೆಗಿನ ಪ್ರದೇಶಗಳಿಗೆ ಸಂಪರ್ಕಿಸುವ ಮೂಲಸೌಕರ್ಯ ಯೋಜನೆಗಳ ಪ್ರಗತಿ ಕುಂಠಿತವಾಗಿದೆ. ಬಹುಪಕ್ಷೀಯ ಸ್ಪರ್ಧೆಯು ಜನಾಂಗೀಯ ವಿಷಯಗಳಾಚೆಗೆ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜನರಲ್ಲಿ ಪ್ರಜ್ಞೆ ಮೂಡಿಸಬೇಕು.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT