ADVERTISEMENT

ಕೇಂದ್ರ ಬಿಂದು

October 12, 2023 10:38 am | Updated 10:38 am IST

ಬಿಜೆಪಿಯ ಕೋಮುವಾದದ ಎದುರು ಕಾಂಗ್ರೆಸ್ ಜಾತಿವಾದವನ್ನು ಬಳಸಬಾರದು.

ಭಾರತದ ಭೌಗೋಳಿಕ ಕೇಂದ್ರದಲ್ಲಿರುವ ಮಧ್ಯಪ್ರದೇಶವು ನವೆಂಬರಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಐದು ವರ್ಷಗಳ ಹಿಂದೆ ೨೦೧೮ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದರೂ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದೆ. ಚುನಾವಣೆಯಾದ ಎರಡು ವರ್ಷಗಳ ನಂತರ ಬಿಜೆಪಿ ಕಾಂಗ್ರೆಸ್ಸಿನ ಹಲವು ಪಕ್ಷಾಂತರಿಗಳನ್ನು ಬಳಸಿಕೊಂಡು ೨೦೨೦ರಲ್ಲಿ ಮತ್ತೆ ಅಧಿಕಾರ ಕಸಿದುಕೊಂಡಿತು. ಕೆಲವು ಚತುರ ನಡೆಗಳು ಮತ್ತು ಚುನಾವಣಾ ಪ್ರಯೋಗಗಳ ಮೂಲಕ ೧೮ ವರ್ಷಗಳ ಸುಧೀರ್ಘ ಆಡಳಿತದಿಂದ ಹುಟ್ಟಿಕೊಂಡಿರುವ ಆಡಳಿತ ವಿರೋಧಿ ಅಲೆಯನ್ನು ಜಯಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಪಕ್ಷವು ಮತ್ತೊಂದು ಅವಧಿಗೆ ಗೆದ್ದರೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮುಂದುವರಿಯುವುದಿಲ್ಲ ಎಂದು ಹಲವು ಸೂಚನೆಗಳನ್ನು ಪಕ್ಷ ನೀಡಿದೆ. ಮೂರು ಕೇಂದ್ರ ಮಂತ್ರಿಗಳಾದ ನರೇಂದ್ರ ಸಿಂಗ್ ತೋಮರ್, ಫಗ್ಗನ್ ಸಿಂಗ್ ಕುಲಸ್ತೆ ಮತ್ತು ಪ್ರಹ್ಲಾದ್ ಸಿಂಗ್ ಪಟೇಲ್ ಸೇರಿದಂತೆ ಏಳು ಸಂಸದರನ್ನು ವಿಧಾನಸಭಾ ಚುನಾವಣಾ ಕಣಕ್ಕಿಳಿಸಿದೆ. ಇದು ಆಯಾಸಗೊಂಡಿರುವ ತನ್ನ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಲಿದೆ ಎಂದು ಪಕ್ಷ ನಂಬಿದೆ. ಇತ್ತ ರಾಜ್ಯ ಸರ್ಕಾರ ಮತ್ತು ಚೌಹಾಣ್ ಅವರ ಆಡಳಿತದ ಬದಲು ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವರ್ಚಸ್ಸಿನ ಆಧಾರದ ಮೇಲೆ ಚುನಾವಣೆ ನಡೆಸಲು ನೋಡುತ್ತಿದೆ. ಇದಲ್ಲದೆ ಇತ್ತ ತಾನು ಹಿಂದೂ ಅಸ್ಮಿತೆಯ ಏಕೈಕ ವಕ್ತಾರ ಎಂದು ಬಿಂಬಿಸಿಕೊಳ್ಳುತ್ತಲೇ ಆದಿವಾಸಿಗಳಂತಹ ಸಮುದಾಯಗಳನ್ನು ಸೆಳೆದುಕೊಳ್ಳಲು ನೋಡುತ್ತಿದೆ.

ಕಾಂಗ್ರೆಸ್ಸಿನಲ್ಲಿ ೨೦೨೦ರ ವಿಭಜನೆಯ ಗಾಯಗಳು ಇನ್ನೂ ಮಾಗಿಲ್ಲ. ಈ ಚುನಾವಣೆಯಲ್ಲಿ ಅದನ್ನು ತನ್ನ ಪರವಾಗಿ ಬಳಸಿಕೊಳ್ಳಲು ಪಕ್ಷ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷಾಂತರಿಗಳ ಪ್ರವೇಶವು, ವಿಶೇಷವಾಗಿ ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿ, ಬಿಜೆಪಿಯೊಳಗಿನ ಅಧಿಕಾರದ ಸಮತೋಲನವನ್ನು ಅಸ್ಥಿರಗೊಳಿಸಿದೆ. ಇದು ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಲಾಭ ತರಬಹುದು. ಪಕ್ಷಾಂತರಗಳು ಕಾಂಗ್ರೆಸ್ಸಿನ ನಾಯಕತ್ವ ಗೊಂದಲವನ್ನು ಸ್ವಲ್ಪ ಕಡಿಮೆ ಮಾಡಿದ್ದು, ಪಕ್ಷದ ಆಂತರಿಕ ವ್ಯವಹಾರಗಳಲ್ಲಿ ಹೆಚ್ಚು ಒಗ್ಗಟ್ಟು ಮೂಡಿದೆ. ಪಕ್ಷದ ಪ್ರಚಾರದ ಸಂಪೂರ್ಣ ಹಿಡಿತ ಈಗ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಬಳಿ ಇದ್ದು, ಪಕ್ಷದ ಎಲ್ಲ ಇತರ ನಾಯಕರೂ ಇವರ ನಾಯಕತ್ವವನ್ನು ಒಪ್ಪುತ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ರಾಜ್ಯದಲ್ಲಿ ಉತ್ಸಾಹ ಮತ್ತು ಅವರಿಗೆ ಹಲವು ಹೊಸ ಅನುಯಾಯಿಗಳನ್ನು ಹುಟ್ಟುಹಾಕಿದೆ. ಅದು ಪಕ್ಷಕ್ಕೆ ಹೆಚ್ಚುವರಿ ಬಲ ನೀಡಿದೆ. ದೇಶಾದ್ಯಂತ ಜಾತಿ ಆಧಾರಿತ ಸಮೀಕ್ಷೆಯ ಭರವಸೆ ನೀಡುವ ಮೂಲಕ ಜಾತಿ ರಾಜಕಾರಣಕ್ಕೆ ಧುಮುಕಿರುವ ಕಾಂಗ್ರೆಸ್‌ನ ಅಸಾಧಾರಣ ನಡೆ ಮಧ್ಯಪ್ರದೇಶದಲ್ಲಿ ಪರೀಕ್ಷೆಗೊಳಪಡಲಿದೆ. ರಾಜಸ್ಥಾನ ಮತ್ತು ಛತ್ತೀಸಘಢದಲ್ಲಿರುವಂತೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಗಣನೀಯ ಸಂಖ್ಯೆಯ ಹಿಂದುಳಿದ ವರ್ಗಗಳ ನಾಯಕರಿಲ್ಲ. ಇನ್ನು ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವಿನ ರಾಜಕೀಯ ಸ್ಪರ್ಧೆಯನ್ನು ತ್ರಿಕೋನ ಸ್ಪರ್ಧೆ ಮಾಡಲು ಆಮ್ ಆದ್ಮಿ ಪಕ್ಷ ಹವಣಿಸುತ್ತಿದ್ದು, ಇದನ್ನೂ ಕಾಂಗ್ರೆಸ್ ಎದುರಿಸಬೇಕಾಗಬಹುದು. ಹಿಂದೂ ಅಸ್ಮಿತೆಯ ಪ್ರಶ್ನೆಯ ಬಗ್ಗೆ ಹಗ್ಗದ ಮೇಲಿನ ನಡಿಗೆ ಮತ್ತು ಬಿಜೆಪಿ ತಾನು ಸಂಕಷ್ಟದಲ್ಲಿದ್ದಾಗ ಸಹಜವಾಗಿ ಆಶ್ರಯಿಸುವ ಕೋಮು ಧ್ರುವೀಕರಣವನ್ನು ತಪ್ಪಿಸುವುದು ಕಾಂಗ್ರೆಸ್ಸಿನ ಅತಿದೊಡ್ಡ ಸವಾಲಾಗಿದೆ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT