ADVERTISEMENT

ಸ್ಥಳೀಯ ಭಾವನೆಗಳು

October 11, 2023 11:20 am | Updated 11:20 am IST

ಕಾರ್ಗಿಲ್‌ ಮತದಾರರು ನೀಡಿರುವ ರಾಜಕೀಯ ಸಂದೇಶವನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಬೇಕು

ನ್ಯಾಶನಲ್ ಕಾನ್ಫರೆನ್ಸ್ (ಎನ್‌ಸಿ)-ಕಾಂಗ್ರೆಸ್ ಮೈತ್ರಿಕೂಟವು ಲಡಾಖ್ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್-ಕಾರ್ಗಿಲ್ (ಎಲ್‌ಎಹೆಚ್‌ಡಿಸಿ-ಕೆ) ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದೆ. ಇದು ಈ ಪ್ರಾಂತ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ನೆಲೆ ವಿಸ್ತರಿಸಲು ನಡೆಸಿದ ಪ್ರಯತ್ನದ ಸೋಲಿನ ಪ್ರತೀಕ. ೨೦೧೯ರಲ್ಲಿ ಕೇಂದ್ರದ ನೇರ ಆಡಳಿತಕ್ಕೆ ಒಳಪಟ್ಟ ನಂತರ ಕಾರ್ಗಿಲ್ ಮತದಾರರು ನೀಡಿರುವ ಮೊದಲ ನೇರ ಸಂದೇಶ ಇದು. ಆಗಸ್ಟ್ ೫, ೨೦೧೯ರಂದು ಕೇಂದ್ರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿ ರಾಜ್ಯವನ್ನು ವಿಭಜಿಸಿ ಅತ್ತ ಜಮ್ಮು ಮತ್ತು ಕಾಶ್ಮೀರ, ಇತ್ತ ಮುಸ್ಲಿಂ ಬಹುಸಂಖ್ಯಾತ ಕಾರ್ಗಿಲ್ ಮತ್ತು ಬೌದ್ಧ ಬಹುಸಂಖ್ಯಾತ ಲೇಹ್ ಜಿಲ್ಲೆಗಳನ್ನು ಕೂಡಿಸಿ ಲಡಾಖ್‌ ಪ್ರಾಂತ್ಯಕ್ಕೆ ಕೇಂದ್ರಾಡಳಿತ ಪ್ರದೇಶಗಳ ಸ್ಥಾನಮಾನ ನೀಡಿತು. ೨೦೨೦ರಲ್ಲಿ ಬಿಜೆಪಿ ಲಡಾಖ್ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್-ಲೇಹ್ ಚುನಾವಣೆಯಲ್ಲಿ ಗೆದ್ದಿತ್ತು. ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಪಕ್ಷಗಳೂ ಈಗ ಆ ಪ್ರಾಂತ್ಯದಲ್ಲೂ ಈ ಕೂಡಲೇ ಚುನಾವಣೆ ನಡೆಸಬೇಕು ಎಂದು ಕರೆಕೊಟ್ಟಿವೆ. ಕಾರ್ಗಿಲಿನ ೨೬ ಸದಸ್ಯರ ಕೌನ್ಸಿಲ್‌ನಲ್ಲಿ ಎನ್‌ಸಿ ೧೨ ಮತ್ತು ಕಾಂಗ್ರೆಸ್ ೧೦ ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಎರಡಕ್ಕೆ ತೃಪ್ತಿಪಡಬೇಕಾಯಿತು. ಚುನಾವಣೆಯಲ್ಲಿ ಶೇ. ೭೭.೬೧ ರಷ್ಟು ಮತದಾನ ಆಗಿರುವುದು ಮತ್ತು ದೇಶದ ನಾನಾ ಭಾಗಗಳಿಗೆ ವಲಸೆ ಹೋಗಿದ್ದ ಜನರು ಮರಳಿ ಬಂದು ಮತದಾನ ಮಾಡಿರುವುದು ಜನ ಈ ಚುನಾವಣೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರು ಎಂಬುದನ್ನು ತೋರಿಸುತ್ತದೆ. ಕಾರ್ಗಿಲ್ಲಿನಲ್ಲಿ ಒಟ್ಟು ೭೪,೦೨೬ ನೋಂದಾಯಿತ ಮತದಾರರಿದ್ದಾರೆ. ಇವರು ದುರ್ಗಮ ಪರ್ವತ ಪ್ರದೇಶಗಳಲ್ಲಿ ಹರಡಿಕೊಂಡಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ, ನೆಲ, ಸಂಸ್ಕೃತಿ, ಉದ್ಯೋಗಗಳು, ಭಾಷೆ ಮತ್ತು ಪರಿಸರವನ್ನು ರಕ್ಷಿಸಲು ಸಂವಿಧಾನದ ಆರನೇ ಶೆಡ್ಯೂಲಿನಡಿ ಲಡಾಖಿಗೆ ವಿಶೇಷ ಸ್ಥಾನಮಾನ ನೀಡಬೇಕೆಂದು ಬೌದ್ಧರು ಮತ್ತು ಶಿಯಾ ಮುಸ್ಲಿಮರು ಜಂಟಿಯಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಜಮ್ಮು ಕಾಶ್ಮೀರದ ಜೊತೆ ಪುನರೇಕೀಕರಣ ಅಥವಾ ಲಡಾಖಿಗೆ ಸಂಪೂರ್ಣ ರಾಜ್ಯತ್ವದ ಬೇಡಿಕೆಗಳು ಕೂಡಾ ಇವೆ. ಬಿಜೆಪಿ ತನ್ನ ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದ ಮೇಲೆ, ಅದರಲ್ಲೂ ವಿಶೇಷವಾಗಿ ರಸ್ತೆ ಸಂಪರ್ಕ ಅಭಿವೃದ್ಧಿ, ಹೊಸ ಶಿಕ್ಷಣ ಸಂಸ್ಥೆಗಳು ಮತ್ತು ಕೆಳ ಹಂತದ ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡುವ ಯೋಜನೆಗಳ ಮೂಲಕ, ಕಾರ್ಗಿಲ್ಲಿನಲ್ಲಿ ತನ್ನ ನೆಲೆ ವಿಸ್ತರಿಸಲು ಆಶಿಸಿತ್ತು. ಎನ್‌ಸಿ ಈ ಚುನಾವಣೆಯನ್ನು ೨೦೧೯ರ ಜಮ್ಮು ಕಾಶ್ಮೀರ ಮರುಸಂಘಟನೆಯ ಜನಾಭಿಪ್ರಾಯದಂತೆ ನೋಡಿತ್ತು. ಈ ವರ್ಷದ ಆಗಸ್ಟ್‌ನಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಲಡಾಖಿನಲ್ಲಿ ಬೈಕ್ ಪ್ರವಾಸ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಕೆಡಿಎ) ಬೇಡಿಕೆಗಳಿಗೆ ತಮ್ಮ ಬೆಂಬಲ ಸೂಚಿಸಿದ ಪಕ್ಷದ ಮೊದಲ ಹಿರಿಯ ನಾಯಕರಾದರು. ಕೆಡಿಎ ವಿವಿಧ ಸಾಮಾಜಿಕ-ರಾಜಕೀಯ-ಧಾರ್ಮಿಕ ಗುಂಪುಗಳ ಮೈತ್ರಿಕೂಟವಾಗಿದ್ದು ಭೂಮಿ ಮತ್ತು ಉದ್ಯೋಗಗಳನ್ನು ಸ್ಥಳೀಯರಿಗೆ ಉಳಿಸಲು ಕಾನೂನು ರಕ್ಷಣೆ ಮತ್ತು ಕಾರ್ಗಿಲ್ ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನಕ್ಕಾಗಿ ಹೋರಾಡುತ್ತಿದ್ದಾರೆ. ಪ್ರಸ್ತುತ, ಲೇಹ್ ಮತ್ತು ಕಾರ್ಗಿಲ್ಲಿಗೆ ಸೇರಿ ಒಂದು ಲೋಕಸಭಾ ಪ್ರತಿನಿಧಿಯಿದ್ದಾರೆ. ಲಡಾಖಿನ ಅಸ್ಮಿತೆಯು ಒಂದು ಭಾವನಾತ್ಮಕ ವಿಷಯವಾಗಿದ್ದು ಸ್ಥಳೀಯರಿಗೆ ವಿಶೇಷ ಕಾನೂನಾತ್ಮಕ ರಕ್ಷಣೆ, ಸಾಂವಿಧಾನಿಕ ಮಾನ್ಯತೆ ಮತ್ತು ಚುನಾಯಿತ ವಿಧಾನಸಭೆ ಇಲ್ಲದೆ ಎಷ್ಟೇ ಅಭಿವೃದ್ಧಿ ಮಾಡಿದರೂ ಪ್ರಯೋಜನವಿಲ್ಲವೆಂದು ಕಾರ್ಗಿಲ್ಲಿನ ಮತದಾರರು ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT