ADVERTISEMENT

ನಿರ್ಣಾಯಕ ಚುನಾವಣೆಗಳು

October 11, 2023 11:22 am | Updated 11:22 am IST

ಪುನಶ್ಚೇತನಗೊಂಡ ಕಾಂಗ್ರೆಸ್ ಹೆಚ್ಚು ಸಂಪನ್ಮೂಲಭರಿತ ಬಿಜೆಪಿಯ ವಿರುದ್ಧ ಸೆಣಸಲಿದೆ

ಛತ್ತೀಸಗಢ, ಮಿಜೋರಾಂ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮುಂದಿನ ತಿಂಗಳು ನಡೆಯುವ ಚುನಾವಣೆಗಳನ್ನು ಲೋಕಸಭೆ ಚುನಾವಣೆಗೆ ಮೊದಲು ನಡೆಯುವ “ಸೆಮಿಫೈನಲ್” ಎಂದು ಕರೆಯುವ ಪ್ರವೃತ್ತಿ ಇದೆ. ಆದರೆ ಅದು ತಪ್ಪು. ಈ ರಾಜ್ಯಗಳು ಒಂದು ದೇಶಕ್ಕೆ ಸರಿಸಾಟಿಯಾಗಬಲ್ಲಷ್ಟು ಜನಸಂಖ್ಯೆ ಹೊಂದಿದ್ದು ಅದರದೇ ಆದ ನಿರ್ದಿಷ್ಟ ಚುನಾವಣಾ ಕಾಳಜಿಗಳನ್ನು ಹೊಂದಿವೆ. ಈ ಚುನಾವಣೆಗಳ ವಿಶೇಷ ಅಂದರೆ ಐದರಲ್ಲಿ ಮೂರು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ನೇರ ಸ್ಪರ್ಧೆ. ಮಿಜೋರಾಂ ಮತ್ತು ತೆಲಂಗಾಣದಲ್ಲಿ ಮಾತ್ರ ಪ್ರಾದೇಶಿಕ ಪಕ್ಷಗಳ ಪಾತ್ರ ಗಮನಾರ್ಹ. ಹಿಂದಿ ಭಾಷಿಕರೇ ಹೆಚ್ಚಿರುವ ಉತ್ತರ-ಮಧ್ಯ ಭಾರತದ ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಬಿಜೆಪಿಯು ಕೇಂದ್ರ ಸರ್ಕಾರದ ಜನಪ್ರಿಯತೆಯ ಮೇಲೆ ಅವಲಂಬಿತವಾಗಿದೆ ಮತ್ತು ಖಟ್ಟರ್ ಹಿಂದುತ್ವ ಸಿದ್ಧಾಂತಕ್ಕೆ ಬೆಂಬಲ ಹೆಚ್ಚಿಸಲು ನೋಡುತ್ತಿದೆ. ಜಾತಿಗಣತಿ ನಡೆಸುವ ಮತ್ತು ‘ಗ್ಯಾರೆಂಟಿ’ ಯೋಜನೆಗಳ ಭರವಸೆ ಮತ್ತು ಸದ್ಯ ಇರುವ ಪಕ್ಷದ ಸರ್ಕಾರಗಳು ಅನುಷ್ಠಾನಗೊಳಿಸಿರುವ ಜನಕಲ್ಯಾಣ ಯೋಜನೆಗಳ ಬಲದ ಮೇಲೆ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ರಾಜಸ್ಥಾನದಲ್ಲಿ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಸರ್ಕಾರದ ಜನಕಲ್ಯಾಣ ಯೋಜನೆಗಳ ಬಲದ ಮೇಲೆ ಜನಪ್ರಿಯರಾಗಿದ್ದಾರಾದರೂ ಪಕ್ಷದ ಶಾಸಕರು ಅವರಷ್ಟು ವಿಶ್ವಾಸಾರ್ಹತೆ ಉಳಿಸಿಕೊಂಡಿಲ್ಲ. ಈ ಕಾರಣಕ್ಕೆ ಗುಂಪುಗಾರಿಕೆಯ ಪಿಡುಗು ಸದ್ಯಕ್ಕೆ ನಿಯಂತ್ರಣದಲ್ಲಿದ್ದರೂ ಪಕ್ಷ ಅಧಿಕಾರ ಉಳಿಸಿಕೊಳ್ಳುವುದು ಸಂಕೀರ್ಣವಾಗಿದೆ. ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಒಟ್ಟು ೧೮ ವರ್ಷ ಅಧಿಕಾರದಲ್ಲಿದ್ದು, ನಿಧಾನಗತಿಯ ಆರ್ಥಿಕತೆ, ಹೆಚ್ಚುತ್ತಿರುವ ಸಾಮಾಜಿಕ ತಾರತಮ್ಯ ಮತ್ತು ಆಡಳಿತದ ಅನೇಕ ವಿಷಯಗಳ ಕಾರಣವಾಗಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಹಿಂದುತ್ವಕ್ಕೆ ಇರುವ ಬೆಂಬಲ ಬಿಜೆಪಿಗೆ ಒಂದು ಮತಬ್ಯಾಂಕನ್ನು ನಿರ್ಮಿಸಿಕೊಟ್ಟಿದ್ದು ಪಕ್ಷವು ಅದನ್ನೇ ನೆಚ್ಚಿಕೊಂಡಿದೆ.

ಛತ್ತೀಸಗಢದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಅವರ ಸರ್ಕಾರದ ಜನಕಲ್ಯಾಣ ಯೋಜನೆಗಳಾದ ಕೃಷಿ ಸಾಲ ಮನ್ನಾ ಮತ್ತು ಕೃಷಿ ಬೆಳೆಗಳು ಮತ್ತು ಸಣ್ಣ ಅರಣ್ಯ ಉತ್ಪನ್ನಗಳಿಗೆ ಬೆಂಬಲ ಬೆಲೆ ಹೆಚ್ಚಳದ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ. ಇದಲ್ಲದೆ ಪ್ರಾದೇಶಿಕ ಅಸ್ಮಿತೆಯ ಪ್ರಜ್ಞೆಯನ್ನೂ ಜಾಗೃತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಬಿಜೆಪಿ ಪ್ರಬಲ ಸ್ಪರ್ಧೆ ಒಡ್ಡುತ್ತಿದೆ. ಭಾರತ್ ಜೋಡೋ ಯಾತ್ರೆ ಮತ್ತು ಆಂತರಿಕ ಚುನಾವಣೆಗಳ ನಂತರ ಪುನಶ್ಚೇತನಗೊಂಡ ಕಾಂಗ್ರೆಸ್ ಈ ಮೂರು ರಾಜ್ಯಗಳಲ್ಲಿ ಹೆಚ್ಚು ಸಂಪನ್ಮೂಲ ಹೊಂದಿರುವ ಬಿಜೆಪಿಯನ್ನು ಎದುರಿಸಲು ಸಂಘಟನಾತ್ಮಕ ಶಕ್ತಿ ಹೊಂದಿದೆ ಎಂದು ನಂಬಿದೆ. ಈ ಚುನಾವಣೆಗಳು ೨೦೨೪ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಪರಿಣಾಮಕಾರಿ ಸ್ಪರ್ಧೆ ಒಡ್ಡಬಲ್ಲದೇ ಇಲ್ಲವೇ ಎಂಬುದನ್ನು ಸೂಚಿಸುತ್ತದೆ. ತೆಲಂಗಾಣದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಪಕ್ಷದ ವಿಜಯದ ನಂತರ, ಕಾಂಗ್ರೆಸ್ಸಿನ ಪುನಶ್ಚೇತನವು ಇನ್ನೂ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತಿದೆ. ಕಾಂಗ್ರೆಸ್ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿಗೆ ಕಠಿಣ ಸ್ಪರ್ಧೆ ಒಡ್ಡುವ ನಿರೀಕ್ಷೆಯಿದ್ದು ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಝೋರಾಮ್ ಜನ ಹೋರಾಟ ಮಿಜೋರಾಂ ರಾಜಕೀಯದ ಸಮೀಕರಣಗಳನ್ನು ಬದಲಿಸಿದೆ. ಸಾಂಪ್ರದಾಯಿಕವಾಗಿ ದ್ವಿಪಕ್ಷೀಯ ವ್ಯವಸ್ಥೆ ಜಾರಿಯಿದ್ದ ರಾಜ್ಯದಲ್ಲಿ ಈಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆದರೆ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟಿನ ಮುಖ್ಯಮಂತ್ರಿ ಝೋರಾಮ್ತಂಗಾ ಅವರು ನೆರೆಯ ಮಣಿಪುರದ ಉದ್ವಿಗ್ನ ಪರಿಸ್ಥಿತಿ ಮತ್ತು ಅವರು ನೀಡಿರುವ ಆಡಳಿತ ಅವರ ಪಕ್ಷದ ಪರವಾಗಿ ಕೆಲಸ ಮಾಡುತ್ತದೆ ಎಂದು ನಂಬಿದ್ದಾರೆ. ಈ ಚುನಾವಣೆಗಳು “ಸೆಮಿ-ಫೈನಲ್” ಅಲ್ಲವಾದರೂ ಕಣದಲ್ಲಿರುವ ಎರಡು ರಾಷ್ಟ್ರೀಯ ಪಕ್ಷಗಳಿಗೆ ನಿರ್ಣಾಯಕವಾಗಲಿದೆ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT