ADVERTISEMENT

ಸಮತೋಲಿತ ನೀತಿ

Published - October 14, 2023 10:50 am IST

ಭಯೋತ್ಪಾದನೆಯ ಪ್ರಚೋದನೆಯ ಹೊರತಾಗಿಯೂ ಜವಾಬ್ದಾರಿಯುತವಾಗಿ ವರ್ತಿಸುವಂತೆ ಭಾರತವು ಇಸ್ರೇಲ್ ಮೇಲೆ ಒತ್ತಡ ಹೇರಬೇಕು.

ಕಳೆದ ಶನಿವಾರ ಹಮಾಸ್ ಹೋರಾಟಗಾರರು ಇಸ್ರೇಲಿ ನಾಗರಿಕರ ಹತ್ಯಾಕಾಂಡ ನಡೆಸಿದ ಕೆಲವೇ ಗಂಟೆಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ನೊಂದಿಗೆ ಭಾರತ ನಿಲ್ಲಲಿದೆ ಎಂದು ಟ್ವೀಟ್ ಮಾಡಿದ್ದರು. ಇಸ್ರೇಲ್-ಹಮಾಸ್ ನಡುವಿನ ಘರ್ಷಣೆಗಳ ಇತಿಹಾಸ ಮತ್ತು ಹಿಂಸಾಚಾರದ ರೀತಿ ತುಂಬಾ ವಿಭಿನ್ನವಾಗಿದ್ದರೂ, ಇಸ್ರೇಲ್‌ನಲ್ಲಿ ಸಂಗೀತ ಕಚೇರಿಯಲ್ಲಿದ್ದ ಹದಿಹರೆಯದವರು, ಉದ್ಯಾನವನದಲ್ಲಿದ್ದ ಮಕ್ಕಳು, ಮನೆಯಲ್ಲಿದ್ದ ವೃದ್ಧರು ಮತ್ತು ತೊಟ್ಟಿಲುಗಳಲ್ಲಿ ಮಲಗಿದ್ದ ಕಂದಮ್ಮಗಳನ್ನು ಗುಂಡಿಟ್ಟು ಕೊಂದ ಮತ್ತು ಹಲವರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡ ಹಮಾಸ್ ದಾಳಿಯ ನೋವನ್ನು ಸ್ವತಃ ಭಯೋತ್ಪಾದಕ ದಾಳಿಗಳನ್ನು ಎದುರಿಸಿರುವ ಭಾರತ ಬಲ್ಲದು. ಮತ್ತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮೋದಿಯವರು ಮಾತನಾಡುವಾಗ ಇದೇ ಭಾವನೆ ವ್ಯಕ್ತವಾಗಿದೆ. ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಪ್ರತಿದಾಳಿ ಶುರು ಮಾಡಿರುವ ಈ ಕಾಲಕ್ಕೆ ಭಾರತದ ಎರಡನೇ ದೊಡ್ಡ ಕಾಳಜಿ ತನ್ನ ನಾಗರಿಕರ ಸುರಕ್ಷತೆ. ಸುಮಾರು ೧೮ ಸಾವಿರ ಭಾರತೀಯರು ಇಸ್ರೇಲ್‌ನಲ್ಲಿ ಓದು ಅಥವಾ ಕೆಲಸಕ್ಕೆ ಹೋಗಿದ್ದಾರೆ. ಇದರ ಜೊತೆಗೆ ೮೫ ಸಾವಿರ ಭಾರತೀಯ ಮೂಲದ ಇಸ್ರೇಲಿಗಳು (ಮಹಾರಾಷ್ಟ್ರ, ಮಣಿಪುರ, ಮಿಜೋರಾಂ, ಕೇರಳ ಮತ್ತು ಪಶ್ಚಿಮ ಬಂಗಾಳದಿಂದ) ಅಲ್ಲಿ ಇದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಅವರನ್ನು ಸುರಕ್ಷಿತವಾಗಿ ದೇಶಕ್ಕೆ ಮರಳಿ ಕರೆತರಲು ವಿಶೇಷ ವಿಮಾನಗಳ ಆಯೋಜನೆ ಮಾಡಿದೆ. ಇತ್ತ ಎಂಇಎ ಇಸ್ರೇಲ್-ಗಾಜಾ ಸಂಘರ್ಷದ ಬಗ್ಗೆ ದೇಶದ ಮೊದಲ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು ಮೊದಲು ಮೋದಿಯವರು ತಳೆದ ನಿಲುವಿಗೆ ಹಲವು ಸೂಕ್ಷ್ಮಗಳನ್ನು ಕೂಡಿಸಲಾಗಿದೆ. ಹಮಾಸ್ ದಾಳಿಯನ್ನು ಖಂಡಿಸುತ್ತಲೇ, ಈ ಹೇಳಿಕೆಯು ಇಸ್ರೇಲಿಗೆ ತಾನು “ಭಯೋತ್ಪಾದನೆಯ ವಿರುದ್ಧ ಹೋರಾಡಲು ಜಾಗತಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದರಿಂದ...” “ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಅನುಸರಿಸುವ ಸಾರ್ವತ್ರಿಕ ಬಾಧ್ಯತೆ”ಯ ಬಗ್ಗೆ ನೆನಪಿಸಿದೆ. ಇದಲ್ಲದೆ ಎಂಇಎ ಪ್ಯಾಲೆಸ್ಟೀನ್ ಬಗ್ಗೆ ತನ್ನ “ದೀರ್ಘಕಾಲದ ಸ್ಥಿರ” ನಿಲುವನ್ನು ಪುನರುಚ್ಚರಿಸಿದೆ.

ಈ ಹೇಳಿಕೆಯು ೧೯೯೨ರಲ್ಲಿ ಭಾರತವು ಇಸ್ರೇಲಿನೊಂದಿಗೆ ಸಂಪೂರ್ಣ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸಿದಾಗಿನಿಂದ ಅತ್ತ ಪ್ಯಾಲೆಸ್ಟೀನ್ ಅನ್ನು ಬೆಂಬಲಿಸುತ್ತಲೇ ಇತ್ತ ಇಸ್ರೇಲಿನ ಜೊತೆ ಉತ್ತಮ ಸಂಬಂಧಗಳನ್ನು ಹೊಂದಿರುವ ಭಾರತದ ಹಗ್ಗದ ಮೇಲಿನ ನಡಿಗೆಯನ್ನು ನೆನಪಿಸುತ್ತದೆ. ಆದರೆ ಹೆಚ್ಚುತ್ತಿರುವ ನಿಕಟ ದ್ವಿಪಕ್ಷೀಯ ಸಂಬಂಧಗಳು, ವ್ಯಾಪಾರ, ತಾಂತ್ರಿಕ ನೆರವು, ಸೇನಾ ಆಯುಧಗಳ ಪೂರೈಕೆ ಮತ್ತು ಭಯೋತ್ಪಾದನಾ ನಿಗ್ರಹದಲ್ಲಿ ಹೆಚ್ಚಿರುವ ಸಹಕಾರದ ಹಿನ್ನೆಲೆಯಲ್ಲಿ ಭಾರತದ ನಿಲುವು ನಿಧಾನಕ್ಕೆ ಇಸ್ರೇಲಿನ ಪರವೇ ವಾಲುತ್ತಿದೆ. ೨೦೧೭ರಲ್ಲಿ ಮೋದಿಯವರು ಇಸ್ರೇಲಿಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾದರು. ೨೦೧೮ರಲ್ಲಿ ನೆತನ್ಯಾಹು ಅವರು ಭಾರತಕ್ಕೆ ಭೇಟಿ ನೀಡಿದರು. ಆದರೆ ಮೋದಿ ಅವರು ಪ್ಯಾಲೆಸ್ಟೀನಿಗೆ ಅಧಿಕೃತ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ. ಭಾರತ ೨೦೧೭ರಲ್ಲಿ ಯುಎಸ್ ಮತ್ತು ಇಸ್ರೇಲ್ ಏಕಪಕ್ಷೀಯವಾಗಿ ಇಡೀ ಜೆರುಸಲೆಮನ್ನು ಇಸ್ರೇಲಿನ ರಾಜಧಾನಿಯಾಗಿ ಘೋಷಿಸಲು ವಿಶ್ವಸಂಸ್ಥೆಯಲ್ಲಿ ತಂದ ನಿರ್ಣಯದ ವಿರುದ್ಧ ಮತ ಹಾಕಿತು. ಭಾರತದ ನಿಲುವು ಸ್ಪಷ್ಟವಿದೆ: ಭಯೋತ್ಪಾದನೆಗೆ ಸಂಪೂರ್ಣ ವಿರೋಧ, ಆದರೆ ವಿವೇಚನಾರಹಿತ ಪ್ರತೀಕಾರದ ದಾಳಿಗೂ ವಿರೋಧ ವ್ಯಕ್ತಪಡಿಸುತ್ತಲೇ ಪಾಲೆಸ್ಟೀನ್ ಬಗ್ಗೆ ತನ್ನ ಸ್ಥಿರ ನಿಲುವನ್ನು ಮುಂದುವರೆಸುವುದು. ಅವರ ಮೇಲಾಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವ ಯಾವುದೇ ವಾದವೂ ಇಸ್ರೇಲಿನ ಮೇಲೆ ಹಮಾಸ್ ನಡೆಸಿರುವ ಅಮಾನವೀಯ ದಾಳಿಯನ್ನು ಸಮರ್ಥಿಸುವುದಿಲ್ಲ. ಆದರೆ ಒಂದು ಜವಾಬ್ದಾರಿಯುತ ರಾಜ್ಯವು ದಂಗೆಕೋರ ಗುಂಪಿನಂತೆ ವರ್ತಿಸಲು ಸಾಧ್ಯವಿಲ್ಲ. ತಾನು ಗಾಜಾ ನಗರದ ಮೇಲೆ ಬಾಂಬುಗಳ ಸುರಿಮಳೆ ಸುರಿಸುವುದನ್ನು ಮುಂದುವರೆಸಿರುವಾಗ ಮತ್ತು ನೆಲದ ಮೇಲೂ ಆಕ್ರಮಣ ಶುರು ಮಾಡುವುದರಲ್ಲಿರುವ ಇಸ್ರೇಲ್ ಒಂದು ಮಿಲಿಯನ್ನಿಗೂ ಹೆಚ್ಚು ಗಾಜಾ ನಿವಾಸಿಗಳನ್ನು ೨೪ ಘಂಟೆಗಳಲ್ಲಿ ಗುಳೆ ಹೋಗುವಂತೆ ಹೇಳಿರುವುದು, ಭಾರತ ತನ್ನ ನೀತಿ ಮತ್ತು ನಿಲುವನ್ನು ಸಮತೋಲನಗೊಳಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT