ADVERTISEMENT

ಅತ್ಯುತ್ತಮ ಪ್ರದರ್ಶನ

Published - October 10, 2023 10:23 am IST

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅತ್ಯುತ್ತಮ ಪದಕ ಬೇಟೆ ವೈವಿಧ್ಯಮಯ ಆಟಗಳಿಂದ ಬಂದಿದೆ.

ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಿಂದ ಭಾರತವು ನೂರಕ್ಕೂ ಹೆಚ್ಚು ಪದಕಗಳನ್ನು ಪಡೆದಿರುವುದು ಅದರ ಕ್ರೀಡಾ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯ. ಈ ಮಹತ್ವದ ಸಾಧನೆಯು ಕ್ರಿಕೆಟ್ ವಿಶ್ವಕಪ್ ಆರಂಭವನ್ನೂ ಮಸುಕು ಮಾಡುವಷ್ಟು ಜನರಲ್ಲಿ ಸಂಭ್ರಮ ಮೂಡಿಸಿದೆ. ಭಾರತ ಗೆದ್ದ ೧೦೭ ಪದಕಗಳು (೨೮ ಚಿನ್ನ, ೩೮ ಬೆಳ್ಳಿ ಮತ್ತು ೪೧ ಕಂಚು) ೨೦೧೮ರ ಜಕಾರ್ತಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಡೆದ ೭೦ ಪದಕಗಳಿಗಿಂತ ಹೆಚ್ಚು. ಚಿನ್ನದ ಪದಕಗಳಲ್ಲಿ ಸಿಂಹ ಪಾಲು ಟ್ರ್ಯಾಕ್ ಮತ್ತು ಫೀಲ್ಡ್ (ಆರು), ಶೂಟಿಂಗ್ (ಏಳು) ಮತ್ತು ಬಿಲ್ಲುಗಾರಿಕೆ (ಐದು) ವಿಭಾಗಗಳಿಂದ ಬಂದಿದೆ. ಆದರೆ ಭಾರತ ಒಟ್ಟು ೨೨ ವಿವಿಧ ಕ್ರೀಡೆಗಳಲ್ಲಿ ಪದಕ ಪಡೆದಿರುವುದು ರಾಷ್ಟ್ರವು ಹೆಚ್ಚು ವೈವಿಧ್ಯಮಯ ಆಟಗಳಲ್ಲಿ ಶ್ರೇಷ್ಠತೆ ಸಾಧಿಸುತ್ತಿರುವುದರ ಸಂಕೇತ. ರೋವರ್‌ಗಳು, ಸ್ಕ್ವಾಷ್ ಆಟಗಾರರು, ಕಬಡ್ಡಿ ತಾರೆಗಳು ಮತ್ತು ಪುರುಷರ ಹಾಕಿ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದವು; ಕುದುರೆ ಸವಾರಿಯಲ್ಲಿ ಮೊದಲ ಬಾರಿ ಚಿನ್ನದ ಪದಕ ಗೆದ್ದೆವು, ರೋಲರ್-ಸ್ಕೇಟಿಂಗ್, ವಿಂಡ್-ಸರ್ಫಿಂಗ್, ವುಶು ಮತ್ತು ಸೆಪಕ್ಟಕ್ರಾದಲ್ಲಿ ಹೊಸ ತಾರೆಗಳು ಉದಯಿಸಿದರು. ಬಹು-ಶಿಸ್ತೀಯ ಕ್ರೀಡಾಕೂಟಗಳಿಂದ ದೂರ ಉಳಿದಿದ್ದ ಕ್ರಿಕೆಟ್ ಸಹ ಈ ಬಾರಿ ಏಷ್ಯನ್ ಗೇಮ್ಸ್ನಲ್ಲಿ ಆಡಿ ಎರಡು ಚಿನ್ನದ ಪದಕ ಪಡೆಯಿತು. ಈ ಕೆಲವು ಕ್ಷಣಗಳು ಜನಮಾನಸದಲ್ಲಿ ಉಳಿಯುವುದು ಖಚಿತ. ಮಹಿಳೆಯರ ೫೦೦೦ ಮೀಟರ್‌ ರೇಸಿನಲ್ಲಿ ಪಾರುಲ್ ಚೌಧರಿ ಅಂತಿಮ ೫೦ ಮೀಟರ್‌ನಲ್ಲಿ ಓಡಿದ ಅದ್ಭುತ ಓಟ ಮತ್ತು ಕಿಶೋರ್ ಜೆನಾ ಪ್ರಮುಖ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಅವರನ್ನು ಒಂದು ಕ್ಷಣ ಹಿಂದಿಕ್ಕಿ ನಂತರ ಬೆಳ್ಳಿ ಪದಕ ಪಡೆದಿದ್ದು, ಅಂತಹ ಕೆಲವು ಕ್ಷಣಗಳು.

ಆದರೆ ಈ ಕ್ರೀಡಾಕೊಟದಲ್ಲಿ ಕೆಲವು ಪದಕಗಳು ಇತರವುಗಳಿಗಿಂತ ಹೆಚ್ಚು ಮೌಲ್ಯಯುತವಾಗಿವೆ. ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್‌ನಂತಹ ಕ್ರೀಡೆಗಳು ಏಷ್ಯಾದಲ್ಲಿ ವಿಶ್ವ ಮಟ್ಟದ ಸ್ಪರ್ಧೆ ಕಾಣುತ್ತವೆಯಾದ್ದರಿಂದ ಇದು ಗೆದ್ದ ಪದಕಗಳಿಗೆ ಸ್ವಲ್ಪ ಹೆಚ್ಚು ಹೊಳಪು ನೀಡುತ್ತದೆ. ಪುರುಷರ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಸಾತ್ವಿಕ್‌ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಗೆದ್ದ ಚಿನ್ನ, ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಎಚ್.ಎಸ್. ಪ್ರಣಯ್ ಅವರ ಕಂಚು ಮತ್ತು ಮಹಿಳೆಯರ ಡಬಲ್ಸ್ ಟೇಬಲ್ ಟೆನಿಸ್‌ನಲ್ಲಿ ಚೀನಾದ ವಿಶ್ವ ಚಾಂಪಿಯನ್‌ಗಳಾದ ಚೆನ್ ಮೆಂಗ್‌ ಮತ್ತು ವಾಂಗ್ ಯಿದಿ ಅವರ ವಿರುದ್ಧ ಸುತೀರ್ಥ ಮತ್ತು ಅಹಿಕಾ ಮುಖರ್ಜಿ ಅವರ ಅದ್ಭುತ ಗೆಲುವು ಈ ವರ್ಗಕ್ಕೆ ಸೇರಿದವು. ೨೮ ಚಿನ್ನದ ಪದಕಗಳಲ್ಲಿ ಕೇವಲ ೧೨ ಪದಕಗಳು ಮಾತ್ರ ಒಲಂಪಿಕ್ಸ್ ಕ್ರೀಡಾಕೂಟದಲ್ಲೂ ಆಡುವ ಆಟಗಳಲ್ಲಿ ಬಂದಿವೆ ಎಂಬುದನ್ನು ಗಮನಿಸಬೇಕು. ನೀರಜ್ ಅವರ ೮೮.೮೮ ಮೀ ಜಾವಲಿನ್ ಎಸೆತ ಬಿಟ್ಟರೆ ಬೆರಳೆಣಿಕೆಯಷ್ಟು ಪ್ರದರ್ಶನಗಳು ಮಾತ್ರ ವಿಶ್ವಮಟ್ಟದವು. ಭಾರತೀಯ ಕ್ರೀಡೆಯು ಬಹುದೂರ ಸಾಗಿಬಂದಿದ್ದರೂ, ಜಾಗತಿಕ ಮಾನದಂಡಗಳನ್ನು ತಲುಪಲು ಇನ್ನೂ ಶ್ರಮ ಹಾಕಬೇಕಿದೆ ಎಂದು ಇದು ತೋರಿಸುತ್ತದೆ. ಕೇಂದ್ರ ಸರ್ಕಾರ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಕ್ರೀಡಾಪಟುಗಳಿಗೆ ಸಹಾಯ ಮಾಡಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ ಅಸಮರ್ಥ ನಿರ್ವಾಹಕರು, ಒಕ್ಕೂಟಗಳಲ್ಲಿನ ಗುಂಪುಗಾರಿಕೆ, ಅಂತ್ಯವಿಲ್ಲದ ನ್ಯಾಯಾಲಯದ ಕದನಗಳು ಮತ್ತು ಆಟಗಾರರ ಮೇಲೆ ತೇಲುತ್ತಿರುವ ದೈತ್ಯ ಡೋಪಿಂಗ್ ಮೋಡ ಅವರನ್ನು ಸದಾ ವಿಚಿಲಿತರನ್ನಾಗಿಸಿದೆ. ತಲೆ ಎತ್ತಿ ನಡೆಯಬೇಕೆಂದರೆ ಕೈಕಾಲುಗಳು ಕುಗ್ಗಲು ಬಿಡಬಾರದು.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT