ADVERTISEMENT

ಹಳೆಯ ಮತ್ತು ಗಟ್ಟಿಯಾದ ಸಂಬಂಧ

December 29, 2023 11:39 am | Updated 11:39 am IST

ಬದಲಾದ ಜಗತ್ತಿನಲ್ಲಿ ತಮ್ಮ ಬಾಂಧವ್ಯವನ್ನು ನವೀಕರಿಸಲು ಭಾರತ ಮತ್ತು ರಷ್ಯಾ ಉತ್ಸುಕವಾಗಿವೆ

ಈ ವಾರ ಹೊಸದಿಲ್ಲಿ ಮತ್ತು ಮಾಸ್ಕೋ ತಮ್ಮ ದ್ವಿಪಕ್ಷೀಯ ಸಭೆಯನ್ನು ಯಶಸ್ವಿಗೊಳಿಸಲು ಹಾಕಿದ ವಿಶೇಷ ಶ್ರಮ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ರಷ್ಯಾ ಭೇಟಿಯ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ವರ್ಷದ ಕೊನೆಯಲ್ಲಿ ಐದು ದಿನಗಳ ಸುಧೀರ್ಘ ರಾಜತಾಂತ್ರಿಕ ಭೇಟಿ ಭಾರತ ರಷ್ಯಾ ಇಬ್ಬರಿಗೂ ಅಸಾಧಾರಣವೇ. ರಷ್ಯಾ ಕ್ರಿಸ್ಮಸ್ ರಜಾ ದಿನಗಳ ಕಾಲದಲ್ಲಿ ಸಾಧಾರಣವಾಗಿ ಯಾವುದೇ ದ್ವಿಪಕ್ಷೀಯ ಸಭೆಗಳನ್ನು ಇಟ್ಟುಕೊಳ್ಳುವುದಿಲ್ಲ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಜೈಶಂಕರ್ ಅವರನ್ನು ಭೇಟಿಯಾದಾಗ ಮಾಡಿದಂತೆ ಕೆಳಮಟ್ಟದ ವಿದೇಶಾಂಗ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾದದ್ದು ಕೂಡ ಅಸಾಮಾನ್ಯವಾಗಿದೆ. ೨೦೦೦ ರಿಂದ ೨೦೨೧ರವರೆಗೆ ಪ್ರತಿ ವರ್ಷ ಭಾರತ-ರಷ್ಯಾ ನಾಯಕತ್ವ ಶೃಂಗಸಭೆ ನಡೆದಿದ್ದು ಕಳೆದೆರಡು ವರ್ಷಗಳಿಂದ ಕೈಬಿಡಲಾಗಿತ್ತು. ಇದು ಯುಕ್ರೇನ್ ಯುದ್ಧದ ಬಳಿಕ ಭಾರತ ರಷ್ಯಾ ಸಂಬಂಧ ಹಳಸಿದೆಯೇ ಎಂಬ ಬಗ್ಗೆ ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಭಾರತ ರಷ್ಯಾವನ್ನು ಟೀಕಿಸದಂತೆ ಜಾಗ್ರತೆ ವಹಿಸಿತಾದರೂ ಕುಗ್ಗುತ್ತಿರುವ ಸೇನಾ ಸರಕುಗಳ ಸರಬರಾಜು, ಆಮದುಗಳಿಗೆ ರಷ್ಯಾ ಅಥವಾ ಭಾರತದಲ್ಲದ ಮೂರನೇ ದೇಶದ ಕರೆನ್ಸಿಯಲ್ಲಿ ಪಾವತಿಸುವ ಸಮಸ್ಯೆಗಳು ಮತ್ತು ಒಟ್ಟಾರೆ ದ್ವಿಪಕ್ಷೀಯ ಸಂಬಂಧದಲ್ಲಿ ಕುಸಿತ ಮುಂದುವರೆದಿದೆ. ಈ ಸಂಬಂಧದಲ್ಲಿ ಮೂಡಿರುವ ಭಿನ್ನಾಭಿಪ್ರಾಯಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ಸರಿಪಡಿಸುವುದು ಜೈಶಂಕರ್ ಅವರ ಭೇಟಿಯ ಪ್ರಮುಖ ಗುರಿ ಎಂಬುದು ವಿದಿತ. ಭವಿಷ್ಯದ ಕೂಡಂಕುಳಂ ಪರಮಾಣು ವಿದ್ಯುತ್ ಯೋಜನೆಗಳಲ್ಲಿ ಸಹಯೋಗ ಹೆಚ್ಚಿಸುವುದು, ಯುರೇಷಿಯನ್ ಆರ್ಥಿಕ ಒಕ್ಕೂಟ-ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆಗಳನ್ನು ಪುನರಾರಂಭಿಸುವುದು ಮತ್ತು ಜಂಟಿ ಸೇನಾ ಉತ್ಪಾದನೆಗೆ ಸಂಬಂಧಿಸಿದ ಒಪ್ಪಂದಗಳು ದ್ವಿಪಕ್ಷೀಯ ಸಂಬಂಧ ಸರಿಯಾದ ಹಾದಿಯಲ್ಲಿದೆ ಎಂದು ಸೂಚಿಸುತ್ತವೆ. ಬಹುಪಕ್ಷೀಯ ನೆಲೆಯಲ್ಲಿ ಎರಡು ದೇಶಗಳ ನಡುವಿನ ಸಹಕಾರವೂ ಉತ್ತಮವಾಗಿಯೇ ಇದೆ. ವಿಶೇಷವಾಗಿ ಮುಂದಿನ ವರ್ಷ ರಷ್ಯಾ ವಿಸ್ತರಿತ ಬ್ರಿಕ್ಸ್ ಶೃಂಗಸಭೆಗೆ ಆತಿಥ್ಯ ವಹಿಸಲಿದ್ದು ವಿಶ್ವಸಂಸ್ಥೆ ಮತ್ತು ಶಾಂಘಾಯ್ ಸಹಕಾರ ಒಕ್ಕೂಟದಲ್ಲಿ ಎರಡೂ ದೇಶಗಳು ಸಮನ್ವಯ ಸಾಧಿಸಿ ಒಟ್ಟಾಗಿ ನಿಲುವುಗಳನ್ನು ತೆಗೆದುಕೊಳ್ಳುತ್ತಿವೆ. ರಷ್ಯಾದ ಮೇಲೆ ಪಶ್ಚಿಮದ ನಿರ್ಬಂಧಗಳ ಹೊರತಾಗಿಯೂ ಭಾರತ ರಷ್ಯಾದಿಂದ ತೈಲ ಮತ್ತು ಅನಿಲ ಆಮದನ್ನು ಮುಂದುವರೆಸುತ್ತದೆ ಎಂಬ ಜೈಶಂಕರ್ ಅವರ ಹೇಳಿಕೆಯು “ರಾಜಕೀಯ ಏರಿಳಿತಗಳನ್ನು ಲೆಕ್ಕಿಸದೆ” ಭಾರತ-ರಷ್ಯಾ ಸಂಬಂಧದ ಬಲವನ್ನು ಸೂಚಿಸುತ್ತದೆ.

ವಾರ್ಷಿಕ ನಾಯಕತ್ವ ಶೃಂಗಸಭೆಯನ್ನು ೨೦೨೪ರಲ್ಲಿ ಪುನರಾರಂಭಿಸಲಾಗುವುದು ಎಂದು ಜೈಶಂಕರ್ ಅವರು ಹೇಳಿರುವುದು ಎರಡೂ ದೇಶಗಳು ಈ ಸಂಬಂಧದಲ್ಲಿನ ಯಾವುದೇ ಅಡೆತಡೆಗಳನ್ನು ತೊಡೆದುಹಾಕಲು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಕಳೆದ ಆರು ದಶಕಗಳಲ್ಲಿ ಭಾರತ ರಷ್ಯಾ ಸಂಬಂಧವು “ವಿಶ್ವ ರಾಜಕೀಯದಲ್ಲಿ ಏಕಮಾತ್ರ ಸ್ಥಿರ ಸಂಬಂಧವಾಗಿದೆ” ಎಂಬ ಜೈಶಂಕರ್ ಅವರ ಹೇಳಿಕೆಯು ವಾಷಿಂಗ್ಟನ್ ಮತ್ತು ಬೀಜಿಂಗ್‌ನ ಗಮನ ಸೆಳೆದೇ ಇರುತ್ತದೆ. ಖಾಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನುನ್ ಅವರ ಮೇಲಿನ ಹತ್ಯಾ ಯತ್ನದ ತನಿಖೆಯ ಹಿನ್ನೆಲೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಗಣರಾಜ್ಯ ದಿನದಂದು ಮುಖ್ಯ ಅತಿಥಿಯಾಗಲು ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಭಾರತ ಚೀನಾ ಸಂಬಂಧವು ಸೇನಾ ಬಿಕ್ಕಟ್ಟಿನ ನಡುವೆಯೇ ಮತ್ತೊಂದು ವರ್ಷ ದೂಡಿದೆ. ಈ ಭೇಟಿಯು ರೂಪಾಯಿ-ರೂಬಲ್ ಪಾವತಿ ಕಾರ್ಯವಿಧಾನ ಸ್ಥಾಪಿಸುವಲ್ಲಿ ಫಲಪ್ರದವಾಗುತ್ತದೆಯೇ ಮತ್ತು ಎಸ್-೪೦೦ ಏರ್ ಸಿಸ್ಟಮ್ ಯೂನಿಟ್‌ಗಳ ವಿಳಂಬಿತ ವಿತರಣೆಯನ್ನು ತ್ವರಿತಗೊಳಿಸುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಆದರೆ ಈ ಭೇಟಿಯ ಸಂಧರ್ಭದಲ್ಲಿ ಜೈಶಂಕರ್ ಅವರು “ಮರುಸಮತೋಲನಗೊಳ್ಳುತ್ತಿರುವ ಬಹುಧ್ರುವೀಯ ಜಗತ್ತಿನಲ್ಲಿ” ಭಾರತ ರಷ್ಯಾದ “ಭೌಗೋಳಿಕ ರಾಜಕೀಯ ಮತ್ತು ಸ್ಟ್ರಾಟಜಿಕ್” ಆಸಕ್ತಿಗಳು ಸಮಾನವಾಗಿವೆ ಎಂದು ಹೇಳಿರುವುದನ್ನು ಜಗತ್ತು ನಿಕಟವಾಗಿ ಗಮನಿಸಿದೆ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT