ADVERTISEMENT

ಆದಾಯದ ಒಗಟುಗಳು

October 07, 2023 11:39 am | Updated 11:39 am IST

ಆರೋಗ್ಯಕರ ಜಿಎಸ್‌ಟಿ ಆದಾಯದ ನಡುವೆಯೂ ಕೆಲವು ಪ್ರವೃತ್ತಿಗಳ ಬಗ್ಗೆ ಹೆಚ್ಚಿನ ಪರಿಶೀಲನೆಯ ಅಗತ್ಯವಿದೆ.

ಅರ್ಧ ಹಣಕಾಸು ವರ್ಷದಂತ್ಯಕ್ಕೆ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಭಾರತದ ಒಟ್ಟು ಆದಾಯವು ₹೯.೯೨ ಲಕ್ಷ ಕೋಟಿಗಳಷ್ಟಿದೆ. ಇದು ಏಪ್ರಿಲ್ ಮತ್ತು ಸೆಪ್ಟೆಂಬರ್ ೨೦೨೨ರ ನಡುವಿನ ಸಂಗ್ರಹಣೆಗಿಂತ ಶೇ. ೧೧.೧ ರಷ್ಟು ಹೆಚ್ಚು. ೨೦೨೩-೨ ೪ರಲ್ಲಿ ಸರಾಸರಿ ಮಾಸಿಕ ಆದಾಯವು ₹೧೬೫೪೧೮ ಕೋಟಿಯಷ್ಟಿದ್ದು ಆರೋಗ್ಯಕರವಾಗಿದೆ. ಕಳೆದ ಆರು ತಿಂಗಳಲ್ಲಿ ನಾಲ್ಕು ಬಾರಿ ಜಿಎಸ್‌ಟಿ ಆದಾಯ ₹೧.೬ಲಕ್ಷ ಕೋಟಿ ದಾಟಿದೆ. ಸೆಪ್ಟೆಂಬರ್‌ ತಿಂಗಳ ಜಿಎಸ್‌ಟಿ ಆದಾಯ ₹೧.೬೩ ಲಕ್ಷ ಕೋಟಿಯಿದ್ದು, ಸರಾಸರಿಗಿಂತ ಕೊಂಚ ಕಡಿಮೆಯಿದೆ. ಆದರೆ ಇದು ಕಳೆದ ಮೂರು ತಿಂಗಳಲ್ಲೇ ಕನಿಷ್ಠ ಸಂಗ್ರಹ ಕಂಡಿದ್ದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇ. ೨.೩ರಷ್ಟು ಹೆಚ್ಚು. ಹಬ್ಬದ ಋತು ಆರಂಭವಾಗಿರುವುದರಿಂದ, ಈ ತ್ರೈಮಾಸಿಕದಲ್ಲಿಯೂ ಸರಾಸರಿ ತಿಂಗಳ ಆದಾಯ ₹೧.೬ಲಕ್ಷ ಕೋಟಿಗೂ ಅಧಿಕವೇ ಉಳಿಯಬಹುದು. ಒಟ್ಟಾರೆ ನೋಡುವುದಾದರೆ ಕೇಂದ್ರ ಸರ್ಕಾರ ಜಿಎಸ್‌ಟಿ ಆದಾಯದ ಬಗ್ಗೆ ನಿಶ್ಚಿಂತೆಯಿಂದ ಇದ್ದಂತಿದೆ. ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆಯ ದರ ಶೇ. ೭.೮ ರಿಂದ ಶೇ.೫.೭ಕ್ಕೆ ನಿಧಾನವಾಗಲಿದೆ ಎಂದು ಕೇಂದ್ರ ಬ್ಯಾಂಕ್ ಅಂದಾಜಿಸಿದೆ. ಆಗ ಜಿಎಸ್‌ಟಿ ಆದಾಯವೂ ಕುಗ್ಗಲಿದೆ. ಆದರೂ ಸರ್ಕಾರಕ್ಕೆ ಅದನ್ನು ಸರಿದೂಗಿಸುವಷ್ಟು ಆದಾಯ ಬರುತ್ತಿದೆ. ಈ ದತ್ತಾಂಶವು ಸೂಚಿಸುವ ಒಟ್ಟಾರೆ ಹಣಕಾಸು ಆರೋಗ್ಯದ ಹೊರತಾಗಿಯೂ, ಸರ್ಕಾರದ ನೀತಿ ನಿರೂಪಕರು ಮತ್ತು ಇಂದು ಸಭೆ ಸೇರುತ್ತಿರುವ ಜಿಎಸ್‌ಟಿ ಕೌನ್ಸಿಲ್‌ ಕೆಲವು ಪ್ರವೃತ್ತಿಗಳನ್ನು ನಿಕಟವಾಗಿ ಪರಿಶೀಲಿಸುವ ಅಗತ್ಯ ಇದೆ.

ಒಂದು, ಜಿಎಸ್‌ಟಿ ಆದಾಯದ ಬೆಳವಣಿಗೆ ಸ್ಪಷ್ಟವಾಗಿ ನಿಧಾನವಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ಇದು ಶೇ. ೧೦.೨ಕ್ಕೆ ಇಳಿದಿದೆ. ಇದು ಜುಲೈ ೨೦೨೧ರಿಂದ ಅತಿ ನಿಧಾನಗತಿಯ ಏರಿಕೆಯಾಗಿದೆ. ಜುಲೈ ಮತ್ತು ಸೆಪ್ಟೆಂಬರ್ ನಡುವಿನ ಎರಡನೇ ತ್ರೈಮಾಸಿಕದಲ್ಲಿ ಜಿಎಸ್‌ಟಿ ಆದಾಯ ಬೆಳವಣಿಗೆ ಶೇ. ೧೦.೬ರಷ್ಟಿದ್ದು, ಮೊದಲ ತ್ರೈಮಾಸಿಕದಲ್ಲಿ ಇದು ಶೇ. ೧೧.೫ರಷ್ಟಿತ್ತು. ದೇಶೀಯ ವಹಿವಾಟುಗಳು ಮತ್ತು ಸೇವೆಗಳ ಆಮದುಗಳ ಬೆಳವಣಿಗೆಯು ಕಳೆದ ಎರಡು ತಿಂಗಳುಗಳಲ್ಲಿ ಶೇ. ೧೪ಕ್ಕೆ ಇಳಿದಿದೆ. ಜೂನ್‌ನಲ್ಲಿ ಇದು ಶೇ. ೧೮ರಷ್ಟಿತ್ತು. ಸೆಪ್ಟಂಬರ್ ಆದಾಯವು ಆಗಸ್ಟ್ ತಿಂಗಳ ವಹಿವಾಟುಗಳ ಲೆಕ್ಕ ಕೊಡುತ್ತದೆ. ಈ ಬಾರಿ ಇದು ೨೦೧೭-೧೮ ರಲ್ಲಿ ಜಿಎಸ್‌ಟಿ ಆಡಳಿತದ ಪ್ರಾರಂಭದಿಂದಲೂ ವ್ಯಾಪಾರಿ ಸಂಸ್ಥೆಗಳು ಸಲ್ಲಿಸಬೇಕಿರುವ ತೆರಿಗೆ ಬಾಕಿ ಸಹ ಒಳಗೊಂಡಿರುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ. ಏಕೆಂದರೆ ಈ ತೆರಿಗೆ ಬಾಕಿಗಳನ್ನು ಕಟ್ಟಲು ಸೆಪ್ಟೆಂಬರ್ ೩೦ ಕಡೆಯ ದಿನವಾಗಿತ್ತು. ಮೇಲಾಗಿ ಆಗಸ್ಟ್ ೧ರಿಂದ ₹೫ ಕೋಟಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಎಲ್ಲಾ ಸಂಸ್ಥೆಗಳಿಗೆ ಇ-ಇನ್‌ವಾಯ್ಸಿಂಗ್ ಕಡ್ಡಾಯವಾಗಿತ್ತು. ಈ ಹಿನ್ನೆಲೆಯಲ್ಲಿ ನೋಡಿದರೆ ಆಗಸ್ಟ್ ತಿಂಗಳಲ್ಲಿ ಉತ್ಪತ್ತಿಯಾದ ಅತ್ಯಧಿಕ ೯.೪ ಕೋಟಿ ಇ - ಬಿಲ್ಲುಗಳು ಅತ್ಯಧಿಕ ಆದಾಯಕ್ಕೆ ದಾರಿ ಮಾಡಿಕೊಡಲಿಲ್ಲ. ಇದು ಒಟ್ಟಾರೆ ವಹಿವಾಟಿನ ಗಾತ್ರ ಕುಗ್ಗಿರುವುದನ್ನು ಸೂಚಿಸುತ್ತದೆ. ಈ ವರ್ಷ ನಾಲ್ಕು ಬಾರಿ ಕುಗ್ಗಿದ ಸರಕುಗಳ ಆಮದುಗಳ ಆದಾಯದಲ್ಲಿ ಮತ್ತೊಂದು ಗೊಂದಲಮಯ ಪ್ರವೃತ್ತಿ ಕಂಡುಬರುತ್ತದೆ. ಸಹಜವಾಗಿ, ಈ ವರ್ಷ ದಾಖಲಾದ ಕಡಿಮೆ ಸರಕುಗಳ ಆಮದು ಮೊತ್ತವು ಕಡಿಮೆ ಜಿಎಸ್‌ಟಿ ಆದಾಯದಲ್ಲಿ ಪ್ರತಿಫಲಿಸುತ್ತದೆ. ಆದರೆ, ಆಮದುಗಳು ಆಗಸ್ಟ್‌ನಲ್ಲಿ ಒಂಬತ್ತು ತಿಂಗಳ ಗರಿಷ್ಠ $೫೮.೬ ಶತಕೋಟಿ ತಲುಪಿದವು. ಇದು ಜುಲೈನ ಆಮದು ಬಿಲ್ಲಿಗಿಂತ ಶೇ.೧೦.೭೫ ಹೆಚ್ಚು ಮತ್ತು ಕಳೆದ ಒಂಬತ್ತು ತಿಂಗಳಲ್ಲೇ ಅತ್ಯಧಿಕ. ಆದರೂ, ಸೆಪ್ಟೆಂಬರ್‌ನ ಆದಾಯವು ಹಿಂದಿನ ತಿಂಗಳಿಗಿಂತ ಶೇ. ೫.೭ರಷ್ಟು ಕಡಿಮೆ. ಇವೆರಡಕ್ಕೂ ತಾಳ ಮೇಳ ಇಲ್ಲ. ಆಮದು ಆದಾಯದ ಸೋರಿಕೆಯನ್ನು ತಡೆಯಲು ಅಧಿಕಾರಿಗಳು ಈ ಕೂಡಲೇ ಕ್ರಮ ಕೈಗೊಳ್ಳಬೇಕು.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT