ADVERTISEMENT

ಕೊಂಚ ನಿರಾಳ 

December 30, 2023 12:33 pm | Updated 12:33 pm IST

ತೆರೆಯ ಹಿಂದೆ ಕತಾರಿನೊಂದಿಗೆ ಸಂಧಾನ ನಡೆಸಿ ಭಾರತ ಯಶಸ್ವಿಯಾಗಿದೆ

ಎಂಟು ಮಂದಿ ಭಾರತದ ನೌಕಾಪಡೆಯ ಮಾಜಿ ಸಿಬ್ಬಂದಿಗೆ ಅಕ್ಟೋಬರಿನಲ್ಲಿ ಕತಾರಿನ ನ್ಯಾಯಾಲಯ ನೀಡಿದ್ದ ಮರಣದಂಡನೆಯ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯ ಸಂದರ್ಭ ನ್ಯಾಯಾಲಯವು ಅದನ್ನು ರದ್ದುಗೊಳಿಸಿ ಜೈಲು ಶಿಕ್ಷೆ ವಿಧಿಸಿದೆ. ಇದು ಅವರ ಕುಟುಂಬಗಳು ಮತ್ತು ರಾಜತಾಂತ್ರಿಕವಾಗಿ ಈ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದ ಭಾರತ ಸರ್ಕಾರಕ್ಕೆ ನಿರಾಳ ತಂದಿದೆ. ತೀರ್ಪಿನ ಪೂರ್ಣ ಪಾಠ ಇನ್ನೂ ಹೊರಬಿದ್ದಿಲ್ಲ. ಹಾಗಾಗಿ ಶಿಕ್ಷೆಯ ಪ್ರಮಾಣದ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಈ ಎಂಟು ಮಂದಿಯನ್ನು ತಪ್ಪಿತಸ್ಥರು ಎಂಬ ಕೆಳಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಲಾಗಿರುವುದು ಹಿನ್ನಡೆ. ಈಗ ಈ ಎಂಟು ಮಂದಿಯ ಕುಟುಂಬಗಳು ಮತ್ತು ಭಾರತದ ಸರ್ಕಾರ ಇವರು ತಪ್ಪಿತಸ್ಥರಲ್ಲ ಎಂದು ಋಜು ಮಾಡಲು ಇರುವ ಸಾಕ್ಷಿಗಳು ಮತ್ತು ಕಾನೂನು ಮಾರ್ಗಗಳನ್ನು ಪರಿಶೀಲಿಸಿ ಕತಾರಿನ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬೇಕು. ನ್ಯಾಯಾಂಗದ ಯಾವ ಮಾರ್ಗದಲ್ಲೂ ಪರಿಹಾರ ಸಿಗದಿದ್ದರೆ ಸರ್ಕಾರಕ್ಕೆ ಮೂರು ಆಯ್ಕೆಗಳಿವೆ. ಮೊದಲನೆಯದಾಗಿ ಕತಾರಿನ ಆಡಳಿತಾರೂಢ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರೊಂದಿಗೆ ಅಪರಾಧದ ಮರುಪರಿಶೀಲನೆಗಾಗಿ ಒತ್ತಾಯಿಸುವುದನ್ನು ಮುಂದುವರಿಸುವುದು. ಅದು ವಿಫಲವಾದರೆ, ಈ ಎಂಟು ಮಂದಿ ಕ್ಷಮೆಗಾಗಿ ಮನವಿ ಮಾಡಬಹುದು. ಕತಾರಿನ ಎಮಿರ್ ಈ ಹಿಂದೆ ಹಲವರಿಗೆ ಕ್ಷಮಾದಾನ ನೀಡಿದ್ದಾರೆ. ಅದೂ ಸಾಧ್ಯವಾಗದಿದ್ದರೆ ೨೦೧೫ರ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಅವರು ಭಾರತದ ಜೈಲಿನಲ್ಲಿ ತಮ್ಮ ಸೆರೆವಾಸ ಅನುಭವಿಸಲು ಅವರನ್ನು ಭಾರತಕ್ಕೆ ಕರೆತರುವುದು. ಆದರೆ ಇದರಲ್ಲಿ ಅವರು ತಮ್ಮನ್ನು ತಪ್ಪಿತಸ್ಥರು ಎಂಬ ತೀರ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಭಾರತ ತನ್ನ ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರೆಸಬೇಕು.

ಈ ಬಿಕ್ಕಟ್ಟು ಶುರುವಾದ ಮೇಲೆ ಮೊನ್ನೆ ಡಿಸೆಂಬರ್ ೧ರಂದು ಕಾಪ್ ೨೮ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಕತಾರಿನ ಎಮಿರ್ ಅವರನ್ನು ಭೇಟಿಯಾದರು. ಅದರ ನಂತರ ಈ ಬೆಳವಣಿಗೆ ಆಗಿರುವುದು ಗಮನಾರ್ಹ. ಆಗಸ್ಟ್ ೨೦೨೨ರಲ್ಲಿ ಈ ಎಂಟು ಮಂದಿಯ ಬಂಧನವಾದ ಕೂಡಲೇ ಉನ್ನತ ಮಟ್ಟದ ನಿಯೋಗ ದೋಹಾಗೆ ಹೋಗಿದ್ದರೆ ಒಳ್ಳೆಯದಿತ್ತೋ ಅಥವಾ ಇಷ್ಟು ತಡವಾಗಿ ಮೋದಿಯವರೇ ಮಾತಾಡಿದ್ದು ಹೆಚ್ಚು ಸೂಕ್ತವೋ ಎನ್ನುವ ಪ್ರಶ್ನೆ ಈಗ ಅಪ್ರಸ್ತುತ. ಕೆನಡಾ ಮಾಡಿದ ಆರೋಪಗಳಿಗೆ ಸಾರ್ವಜನಿಕವಾಗಿ ಪ್ರತ್ಯುತ್ತರ ನೀಡಿದಂತೆ ಈ ಪ್ರಕರಣದಲ್ಲಿ ಭಾರತ ನಡೆದುಕೊಳ್ಳಲಿಲ್ಲ ಎಂಬುದು ಶ್ಲಾಘನೀಯವಾಗಿದೆ. ವಿಶೇಷವಾಗಿ ಕೆಲ ಮಾಧ್ಯಮಗಳಲ್ಲಿ ಕತಾರ್ ಅನ್ನು ಗುರಿ ಮಾಡಿ ನಡೆಸಿದ ದಾಳಿಗೆ ಭಾರತ ಸರ್ಕಾರ ಪ್ರತಿಕ್ರಿಯಿಸಿದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿತ್ತು. ಈ ಎಂಟು ಮಂದಿಯ ಪ್ರಕರಣ ಯಾವುದೇ ರೀತಿಯಲ್ಲಿ ಭಾರತದ ಗುಪ್ತಚರ ಕಾರ್ಯಾಚರಣೆಗಳಿಗೆ ಸಂಬಂಧಿಸಿದ್ದೇ ಆಗಿದ್ದರೆ ಹೊರದೇಶಗಳಲ್ಲಿ ಭಾರತೀಯರನ್ನು ಅಪಾಯಕ್ಕೆ ಸಿಲುಕಿಸುವ ಇಂತಹ ಕಾರ್ಯಾಚರಣೆಗಳನ್ನು ಕೂಲಂಕುಷವಾಗಿ ಮರುಪರಿಶೀಲಿಸುವ ಅಗತ್ಯ ಇದೆ. ಗಾಝಾದ ಮೇಲೆ ಇಸ್ರೇಲ್ ದಾಳಿ ಈ ಪ್ರಾಂತ್ಯದಲ್ಲಿ ಉದ್ವಿಗ್ನತೆ ಹೆಚ್ಚಿಸಿದ್ದು ಆ ಗೊಂದಲದಲ್ಲಿ ಈ ಪ್ರಕರಣ ಸಿಲುಕದಂತೆ ನೋಡಿಕೊಂಡಿರುವುದು ಉತ್ತಮ ಸಾಧನೆ. ಕತಾರಿನ ಭಾವನೆಗಳ ಬಗ್ಗೆ ಸೂಕ್ಷ್ಮತೆ ಉಳಿಸಿಕೊಂಡು ನಿರಂತರವಾಗಿ ಧೃಢವಾಗಿ ಪ್ರಯತ್ನಿಸಿದರೆ ಈ ಎಂಟು ಮಂದಿ ಭಾರತೀಯರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳುತ್ತಾರೆ ಎಂದು ಆಶಿಸಲಾಗಿದೆ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT