ADVERTISEMENT

ಪಳೆಯುಳಿಕೆ ಮತ್ತು ಕಾಲ

February 15, 2023 10:33 am | Updated 10:33 am IST

ಜಿಎಸ್ಐಗೆ ಪರಮಾಧಿಕಾರ ನೀಡುವುದು ಪ್ರಾಗ್ಜೀವಶಾಸ್ತ್ರದ (paleontology) ಸಂಶೋಧನೆಗೆ ಅಡ್ಡಿಯಾಗಬಹುದು

ಪ್ರಾಗ್ಜೀವಶಾಸ್ತ್ರಜ್ಞರು ಆಗಾಗ ಭಾರತದಿಂದ ಆಸಕ್ತಿದಾಯಕ ಸಂಶೋಧನೆಗಳನ್ನು ವರದಿ ಮಾಡುತ್ತಾರೆ. ಜನವರಿಯಲ್ಲಿ, ತಂಡವೊಂದು ಟೈಟಾನೊಸಾರಸ್‌ನ ೨೫೬ ಪಳೆಯುಳಿಕೆ ಮೊಟ್ಟೆಗಳು ಮತ್ತು ೯೨ ಡೈನೋಸಾರ್ ಗೂಡುಕಟ್ಟುವ ತಾಣಗಳನ್ನು ಕಂಡುಹಿಡಿದಿದೆ. ಇದು ೬೬-೧೦೦ ಮಿಲಿಯನ್ ವರ್ಷಗಳ ಹಿಂದೆ, ‘ಭಾರತ’ ಒಂದು ಖಂಡವಾಗಿದ್ದ ಮತ್ತು ಯುರೇಷಿಯನ್ ಭೂಪ್ರದೇಶದ ಜೊತೆ ಇನ್ನೂ ವಿಲೀನಗೊಳ್ಳದ ಸಮಯದ್ದು. ಅದೇ ರೀತಿ ಕಚ್, ಗುಜರಾತ್‌ನ ಮರುಭೂಮಿಗಳು ಮತ್ತು ಮಹಾರಾಷ್ಟ್ರದ ಡೆಕ್ಕನ್ ಪ್ರದೇಶಗಳು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಈ ದೇಶದ ವೈವಿಧ್ಯಮಯ ಭೌಗೋಳಿಕತೆ ಮತ್ತು ತನ್ಮೂಲಕ ಇತಿಹಾಸವನ್ನು ರೂಪಿಸಿದ ಶಕ್ತಿಗಳಿಗೆ ಸಾಕ್ಷಿಯಾಗಿದೆ. ಸಾಂಸ್ಕೃತಿಕ ಇತಿಹಾಸ ಮತ್ತು ಮಾನವ ನಿರ್ಮಿತ ಕೃತಿಗಳನ್ನು ಸಂರಕ್ಷಿಸಲು ಸಾಕಷ್ಟು ಅಸಕ್ತಿ ಇದೆ ಮತ್ತು ಪ್ರಯತ್ನಗಳಾಗಿವೆ. ಆದರೆ ಬಂಡೆ ರಚನೆಗಳು, ಮತ್ತು ಪಳೆಯುಳಿಕೆಗಳಂತಹ ಈ ನೈಸರ್ಗಿಕ ‘ಭೂ-ಇತಿಹಾಸ’ವನ್ನು ಸಂರಕ್ಷಿಸಲು ಮತ್ತು ಅದನ್ನು ಜನರ ಬಳಿ ಕೊಂಡೊಯ್ಯಲು ಸೀಮಿತ ಪ್ರಯತ್ನಗಳು ನಡೆದಿವೆ. ಈ ನಿರ್ಲಕ್ಷ್ಯವು ಈ ಇತಿಹಾಸವನ್ನು ಸಾರ್ವಜನಿಕ ಮನಸ್ಸಿನಿಂದ ಅಳಿಸಿಹಾಕಲು ಮತ್ತು ಅದರ ಖಾಸಗಿ ಸ್ವಾಧೀನ ಮತ್ತು ವಿನಾಶಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಕರು ಹಲವು ದಶಕಗಳಿಂದ ಎಚ್ಚರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ, ಗಣಿ ಸಚಿವಾಲಯವು ಪ್ರಾಯೋಗಿಕವಾಗಿ ರೂಪಿಸಿದ ಜಿಯೋ-ಹೆರಿಟೇಜ್ ಸೈಟ್ಸ್ ಮತ್ತು ಜಿಯೋ-ರಿಲಿಕ್ಸ್ (ಸಂರಕ್ಷಣೆ ಮತ್ತು ನಿರ್ವಹಣೆ) ಕರಡು ಮಸೂದೆ, ೨೦೨೨, ಇಂತಹ ಸಂರಕ್ಷಣೆಯ ಪ್ರಕ್ರಿಯೆಗಳಿಗೆ ಒಂದು ದೃಢವಾದ ಅಡಿಪಾಯ ಹಾಕುವ ಹೆಜ್ಜೆಯಾಗಿದೆ.

ಮಸೂದೆಯ ನಿಬಂಧನೆಗಳು ಗಣಿ ಸಚಿವಾಲಯದ ಅಧೀನ ಸಂಸ್ಥೆಯಾದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ (ಜಿಎಸ್‌ಐ) ಮಹಾನಿರ್ದೇಶಕರಿಗೆ ‘ಜಿಯೋ-ಹೆರಿಟೇಜ್’ ಪ್ರದೇಶಗಳನ್ನು ಘೋಷಿಸುವ ಅಧಿಕಾರವನ್ನು ನೀಡುತ್ತದೆ. ಇಂತಹ ಪ್ರದೇಶಗಳ ಸುತ್ತಲೂ ೧೦೦ ಮೀಟರುಗಳವರೆಗೆ ಯಾವುದೇ ನಿರ್ಮಾಣವನ್ನು ನಿಷೇಧಿಸಲು, ಖಾಸಗಿಯವರ ಬಳಿ ಇರುವ ಪಳೆಯುಳಿಕೆಗಳು, ಬಂಡೆರಚನೆಗಳಂತಹ ಅವಶೇಷಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕಾರ ನೀಡುತ್ತದೆ. ಈ ಪ್ರದೇಶಗಳ ಕುರಿತು ಜಿಎಸ್‌ಐ ಮಹಾನಿರ್ದೇಶಕರ ಆದೇಶಗಳ ಉಲ್ಲಂಘನೆ, ಈ ಪ್ರದೇಶಗಳನ್ನು ವಿರೂಪಗೊಳಿಸುವುದನ್ನು ₹೫ ಲಕ್ಷದವರೆಗೆ ದಂಡ ಇಲ್ಲ ಜೈಲು ಶಿಕ್ಷೆ ನೀಡುವ ಅವಕಾಶ ಮಾಡಿಕೊಡುತ್ತದೆ. ಆದರೆ ಇದು ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳು, ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅನೇಕ ತಜ್ಞರನ್ನು ಚಿಂತೆಗೆ ದೂಡಿದೆ. ಜಿಎಸ್‌ಐಗೆ ಪರಮಾಧಿಕಾರ ನೀಡುವುದು ಪ್ರಾಗ್ಜೀವಶಾಸ್ತ್ರದ ಸಂಶೋಧನೆಗೆ ಅಡ್ಡಿಯಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅವರು “ರಾಷ್ಟ್ರೀಯ ಭೂ ಪರಂಪರಾ ಪ್ರಾಧಿಕಾರದ” ಮಾದರಿಯಲ್ಲಿ ಎಲ್ಲರನ್ನೂ ಒಳಗೊಂಡ ಸಂಸ್ಥೆ ಇರಬೇಕು ಎಂದು ಆಗ್ರಹಿಸಿದ್ದಾರೆ. ಅಂತಹ ಸಂಸ್ಥೆಯು ಮಾತ್ರ ಹೆಚ್ಚು ಪ್ರಜಾಸತ್ತಾತ್ಮಕವಾಗಿ ‘ಭೂ-ಐತಿಹಾಸಿಕ’ ಪ್ರಾಮುಖ್ಯತೆ ಹೊಂದಿರುವ ಪ್ರದೇಶಗಳನ್ನು ಘೋಷಿಸಲು ಮತ್ತು ಅಲ್ಲಿ ದೊರೆತ ವಸ್ತುಗಳನ್ನು ಸಂರಕ್ಷಿಸುವ ಅತ್ಯುತ್ತಮ ಮಾರ್ಗೋಪಾಯಗಳನ್ನು ಸೂಚಿಸಲು ಶಕ್ತವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸರ್ಕಾರವು ಈ ಕುರಿತು ಇನ್ನೂ ಚರ್ಚೆ ಮಾಡುತ್ತಿದ್ದು, ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದು ಇನ್ನೂ ದೂರದ ಮಾತು ಎಂದು ತಿಳಿದು ಬಂದಿದೆ. ಆಡಳಿತದ ಪ್ರತಿ ಹೆಜ್ಜೆಯಲ್ಲೂ ಸಾಧಕ ಬಾಧಕಗಳಿದ್ದಾಗ್ಯೂ, ಶಾಸನವು ಒಂದು ಬೇಲಿಯಂತೆ ಕಾರ್ಯ ನಿರ್ವಹಿಸಬೇಕು ನಿಜ, ಆದರೆ ಅದೇ ಸ್ವತಂತ್ರ ಸಂಶೋಧನೆಗೆ ಅಡ್ಡಿಯಾಗಬಾರದು. ಭಾರತದಲ್ಲಿನ ಆರ್ಥಿಕ ಅವಶ್ಯಕತೆಗಳು ಮತ್ತು ಭೂಮಿಯ ಗಗನಮುಖಿ ಬೆಲೆಗಳ ಹಿನ್ನೆಲೆಯಲ್ಲಿ ಸಂರಕ್ಷಣೆ ಮತ್ತು ಜೀವನೋಪಾಯದ ಪ್ರಶ್ನೆಗಳ ನಡುವೆ ಸಂಘರ್ಷ ಇದ್ದೇ ಇರುತ್ತದೆ. ಆದರೆ ಯಾವುದೇ ಶಾಸನವು ಇವುಗಳ ನಡುವೆ ಸಮತೋಲನ ಮತ್ತು ಒಮ್ಮತ ಮೂಡಿಸಲು ಪ್ರಯತ್ನಿಸಬೇಕು.

This editorial has been translated from English, which can be read here.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT