ADVERTISEMENT

ಕ್ರಿಕೆಟ್ ಮತ್ತು ವಾಣಿಜ್ಯ

Published - December 28, 2023 10:07 am IST

ಟಿ-೨೦ ಪಂದ್ಯಗಳಲ್ಲಿ ಭಾರತದ ಕೀಲಿ ಕೈ ಐಪಿಎಲ್

ದುಬೈನಲ್ಲಿ ಕಳೆದ ವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಹರಾಜು ಈ ಕ್ರೀಡಾಕೂಟದ ಬ್ರಾಂಡ್ ಮೌಲ್ಯವನ್ನು ಮತ್ತೆ ಸಾಬೀತು ಮಾಡಿತು. ೨೦೦೮ರ ಏಪ್ರಿಲ್ಲಿನ ಒಂದು ಸಂಜೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುರುವಾದ ಈ ಕ್ರೀಡಾಕೂಟವನ್ನು ರಾಹುಲ್ ದ್ರಾವಿಡ್ ಅಂದು “ಅಂತಾರಾಷ್ಟ್ರೀಯ ನೆಲೆಯ ದೇಶೀಯ ಪಂದ್ಯಾವಳಿ” ಎಂದು ಬಣ್ಣಿಸಿದ್ದರು. ಅಂದಿನಿಂದ ಐಪಿಎಲ್ ಬಹುದೂರ ಸಾಗಿ ಬಂದಿದೆ. ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣ, ತಂಡದ ಅಮಾನತುಗಳು ಮತ್ತು ಮಾಲೀಕತ್ವದ ಸಮಸ್ಯೆಗಳನ್ನು ದಾಟಿ ಬಂದು ಇಂದು ಅಂತಾರಾಷ್ಟ್ರೀಯ ಕ್ರೆಕೆಟ್ ಕ್ಯಾಲೆಂಡರಿನ ಅವಿಭಾಜ್ಯ ಅಂಗವಾಗಿದೆ. ಇತ್ತೀಚಿನ ವಿಶ್ವಕಪ್ ವಿಜಯದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್, ಮಿಶೆಲ್ ಸ್ಟಾರ್ಕ್ ಮತ್ತು ಟ್ರಾವಿಸ್ ಹೆಡ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಹರಾಜಿನಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿತು. ಪ್ಯಾಟ್ ಕಮ್ಮಿನ್ಸ್ ಮತ್ತು ಮಿಶೆಲ್ ಸ್ಟಾರ್ಕ್ ಇದುವರೆಗೂ ಯಾರಿಗೂ ಲಭಿಸದಿದ್ದ ₹೨೦ ಕೋಟಿ ಮೊತ್ತವನ್ನು ಮೀರಿ ಪಡೆದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ₹೨೪.೭೫ ಕೋಟಿಗೆ ಸ್ಟಾರ್ಕ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡವು ₹೨೦.೫೦ ಕೋಟಿಗೆ ಕಮ್ಮಿನ್ಸ್‌ ಅವರನ್ನು ಪಡೆಯಿತು. ದೇಶ ಮತ್ತು ಕ್ಲಬ್ ನಡುವಿನ ಚರ್ಚೆಯಲ್ಲಿ, ಒಬ್ಬ ಆಟಗಾರ ತನ್ನ ದೇಶವನ್ನು ಪ್ರತಿನಿಧಿಸುವ ತಂಡಕ್ಕೆ ಆಡುವಾಗ ಮಾಡಿದ ಸಾಧನೆ ಕ್ಲಬ್ ಆಟದಲ್ಲೂ ಆತನ ತಾರಾಮೌಲ್ಯವನ್ನು ಹೆಚ್ಚಿಸುತ್ತದೆ ಮತ್ತು ಆತನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ತಂಡಗಳು ಮುಗಿಬೀಳುತ್ತವೆ. ಕ್ರಿಕೆಟ್ ಮತ್ತು ಫುಟ್‌ಬಾಲ್ ಎರಡರಲ್ಲೂ ಇದು ನಿಜ. ಆಸ್ಟ್ರೇಲಿಯಾದ ಕ್ರಿಕೆಟಿಗರು ಸಹಜವಾಗಿಯೇ ಇತ್ತೀಚಿನ ತಮ್ಮ ವಿಶ್ವಕಪ್ ವಿಜಯದ ಪ್ರತಿಫಲ ಪಡೆದರು. ಇನ್ನೂ ಅನೇಕ ಆಟಗಾರರನ್ನು ಗುರುತಿಸಲಾಯಿತು.

ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತೆಗೆದುಕೊಂಡಿದ್ದರಿಂದ ಹರಾಜು ನಾಟಕೀಯತೆಯಿಂದ ಕೂಡಿತ್ತು. ನಂತರ ಅವರನ್ನು ಮುಂಬೈ ಇಂಡಿಯನ್ಸ್‌ ತಂಡದ ನಾಯಕರಾಗಿ ನೇಮಿಸಲಾಯಿತು. ಇದರರ್ಥ ಐಪಿಎಲ್ ನಾಯಕರಾಗಿ ರೋಹಿತ್ ಶರ್ಮಾ ಅವರ ಆಟ ಮುಗಿದಂತೆಯೇ. ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಒಗಟೊಗಟಾಗಿ ಬರೆದು ನಾಯಕತ್ವ ಬದಲಾವಣೆಯ ಬಗ್ಗೆ ಸೂಚಿಸಿದ್ದು ನಾಟಕೀಯತೆಯನ್ನು ಹೆಚ್ಚಿಸಿತ್ತು. ಐಪಿಎಲ್ ಅನ್ನು ಟಿ೨೦ಯಲ್ಲಿ ಭಾರತ ತಂಡದ ದಿಕ್ಸೂಚಿ ಎಂದು ಪರಿಗಣಿಸಲಾಗುವುದರಿಂದ ಟಿ೨೦ ಪಂದ್ಯಗಳಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸುವುದನ್ನು ಮುಂದುವರೆಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಮುಂದಿನ ವರ್ಷ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಟಿ೨೦ ವಿಶ್ವಕಪ್ ಪಂದ್ಯಾವಳಿಗೆ ಆತಿಥ್ಯ ವಹಿಸುವುದರಿಂದ ಇತ್ತೀಚಿನ ಹರಾಜು ಮತ್ತು ೨೦೨೪ರ ಐಪಿಎಲ್ ಪಂದ್ಯಾವಳಿಯನ್ನು ಎಲ್ಲರೂ ವಿಶೇಷವಾಗಿ ಗಮನಿಸುತ್ತಿದ್ದಾರೆ. ಹಾಗೆ ನೋಡಿದರೆ ರಣಜಿ ಕ್ರಿಕೆಟ್ಟಿನಲ್ಲಿ ಉತ್ತಮ ಆಟ ಪ್ರದರ್ಶಿಸಿದ ಕೆಲವು ಯುವ ಆಟಗಾರರನ್ನು ಹಲವು ಐಪಿಎಲ್ ತಂಡಗಳು ಸೇರಿಸಿಕೊಂಡಿರುವುದರಿಂದ ಅವರು ಮುಂದೆ ಟೀಂ ಇಂಡಿಯಾಗೆ ಸೇರಿ ಆಡುವ ಸಾಧ್ಯತೆಯೂ ಇದೆ. ಸಮೀರ್ ರಿಜ್ವಿ, ಕುಮಾರ್ ಕುಶಾಗ್ರಾ, ಶುಭಂ ದುಬೆ, ಸ್ವಸ್ತಿಕ್ ಚಿಕಾರ ಮತ್ತು ರಮಣದೀಪ್ ಸಿಂಗ್ ಅವರಂತಹ ಆಟಗಾರರನ್ನು ಸೇರಿಸಿಕೊಳ್ಳಲು ತಂಡಗಳು ಉತ್ಸುಕವಾಗಿದ್ದವು. ಆದರೆ ಪಾಕಿಸ್ತಾನದ ಕ್ರಿಕೆಟಿಗರನ್ನು ಐಪಿಎಲ್‌ನಿಂದ ದೂರವಿಟ್ಟ ರೀತಿ ಕ್ರೀಡೆ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ಮುಕ್ತವಾಗಿರಲು ಸಾಧ್ಯವಿಲ್ಲ ಎಂಬುದರ ಸೂಚನೆಯಾಗಿತ್ತು.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT