ADVERTISEMENT

ಒಳಬರುವ ಕರೆ

Published - December 20, 2023 12:33 pm IST

ಅಂತರ್ಜಾಲ ಪ್ರಪಂಚದ ನಿಯಂತ್ರಣವು ಗೌಪ್ಯತೆಯ ಬಗೆಗಿನ ಕಾಳಜಿಗಳನ್ನು ಪರಿಹರಿಸಬೇಕು, ಕಾರ್ಯವಿಧಾನಗಳನ್ನು ಸರಳಗೊಳಿಸಬೇಕು.

ದೂರಸಂಪರ್ಕ ಮಸೂದೆ, ೨೦೨೩ರ ಮಂಡನೆಯು ವೈರ್ಲೆಸ್ ನೆಟ್‌ವರ್ಕ್‌ಗಳು ಮತ್ತು ಇಂಟರ್ನೆಟ್ ಸೇವೆಯ ಬಗೆಗಿನ ಎಲ್ಲ ಕಾನೂನುಗಳನ್ನು ಕ್ರೋಢೀಕರಿಸುವ ಕೇಂದ್ರ ಸರ್ಕಾರದ ದೀರ್ಘಾವಧಿಯ ಗುರಿಯನ್ನು ಸಾಧಿಸುತ್ತದೆ. ೪೬-ಪುಟಗಳ ಈ ಶಾಸನವು ಅಸ್ತಿತ್ವದಲ್ಲಿರುವ ನಿಯಂತ್ರಕ ರಚನೆಗಳನ್ನು ಬಹುಮಟ್ಟಿಗೆ ಉಳಿಸಿಕೊಂಡು ಹಲವು ಕಾರ್ಯವಿಧಾನಗಳನ್ನು ಸರಳಗೊಳಿಸುತ್ತದೆ. ಪರವಾನಗಿ ಪ್ರಕ್ರಿಯೆಗಳನ್ನು ಡಿಜಿಟೈಸ್ ಮಾಡುತ್ತದೆ. ಟೆಲಿಕಾಂ ಆಪರೇಟರ್‌ಗಳು ತಮ್ಮ ಉಪಕರಣಗಳನ್ನು ಸ್ಥಾಪಿಸುವಾಗ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ಮೇಲೆ ಆಪ್ಟಿಕಲ್ ಫೈಬರ್ ಕೇಬಲ್ಲುಗಳನ್ನು ಹಾಕುವಾಗ ಅನುಮತಿಗಳು ಮತ್ತು ವಿವಾದ ಪರಿಹಾರಕ್ಕಾಗಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ವ್ಯವಹರಿಸುತ್ತಾರೆ. ಸ್ಪೆಕ್ಟ್ರಮ್‌ಗಾಗಿ ಹರಾಜು ಪ್ರಕ್ರಿಯೆ ಇರುವುದಿಲ್ಲ ಎಂಬ ಸ್ಪಷ್ಟತೆ ಇರುವುದರಿಂದ ದುರ್ಗಮ ಪ್ರದೇಶಗಳಿಗೆ ಅಂತರ್ಜಾಲ ಮತ್ತು ಮೊಬೈಲ್ ಸಂಪರ್ಕ ಕಲ್ಪಿಸುವ ಉಪಗ್ರಹ ಅಂತರ್ಜಾಲ ಸೇವೆಗೆ ಈ ಮಸೂದೆ ಉತ್ತೇಜನ ನೀಡುತ್ತದೆ. ಇದು ತಮ್ಮ ವ್ಯವಹಾರವನ್ನು ಸುಗಮಗೊಳಿಸುವುದಾಗಿಯೂ ಮತ್ತು ನಿಯಂತ್ರಕ ವಾವಸ್ಥೆಯಲ್ಲಿ ಸ್ಥಿರತೆ ತರುವುದರಿಂದ ಮುಂದಿನ ಹಂತದ ಟೆಲಿಕಾಂ ವಿಸ್ತರಣೆಗೆ ಇದು ದಾರಿ ಮಾಡಿಕೊಡುತ್ತದೆ ಎಂದು ಉದ್ಯಮವು ಈ ಮಸೂದೆಯನ್ನು ಸ್ವಾಗತಿಸಿದೆ. ಭಾರತದ ಜನಸಂಖ್ಯೆಯ ಅರ್ಧದಷ್ಟು ಜನ ಸಂಪರ್ಕಿತ ಪ್ರಪಂಚದ ಅಂಚಿನಲ್ಲಿದ್ದು, ಇದನ್ನು ಸುಧಾರಿಸಲು ಈ ಮಸೂದೆಯು ಸಹಾಯ ಮಾಡಬಹುದು. ಆದರೆ ಈ ಮಸೂದೆಯಲ್ಲೂ ಕೆಲವು ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ: ಟೆಲಿಕಾಂನ ವಿಸ್ತಾರವಾದ ವ್ಯಾಖ್ಯಾನವು ಅದರ ವ್ಯಾಪ್ತಿಯಲ್ಲಿ ಅನೇಕ ಸೇವೆಗಳನ್ನು ತರುತ್ತದೆ ಮತ್ತು ಅವುಗಳ ಮೇಲೆ ಸರ್ಕಾರದ ಸಂಪೂರ್ಣ ನಿಯಂತ್ರಣವನ್ನು ಸ್ಥಾಪಿಸುತ್ತದೆ. ಇದು ಕಣ್ಗಾವಲು ಮತ್ತು ಗೌಪ್ಯತೆಯ ಬಗ್ಗೆ ಕಾಳಜಿಗಳನ್ನು ಹೆಚ್ಚಿಸುತ್ತದೆ. ಈ ಹಿಂದೆ ಬೆಳಕಿಗೆ ಬಂದಿರುವ ಸರ್ಕಾರಿ ಪ್ರಾಯೋಜಿತ ಕಣ್ಗಾವಲು ಪ್ರಕರಣಗಳ ಹಿನ್ನೆಲೆಯಲ್ಲಿ ಈ ಕಾಳಜಿಗಳು ಸಹಜ. ಈ ಮಸೂದೆಯು ಅನಗತ್ಯ ಕರೆ ಮತ್ತು ಸಂದೇಶಗಳ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತದಾದರೂ, ಅದು ಪ್ರಸ್ತಾಪಿಸುವ ಪರಿಹಾರಕ್ಕೆ ಬಳಕೆದಾರರು ಮತ್ತೆ ತಮ್ಮ ಗೌಪ್ಯತೆಯನ್ನು ಬಿಟ್ಟುಕೊಡಬೇಕಾಗುತ್ತದೆ. ಕಣ್ಗಾವಲು ಸುಧಾರಣೆಯ ಸಮಸ್ಯೆಗಳು ಮತ್ತು ಅಂತರ್ಜಾಲ ಸ್ಥಗಿತಗೊಳಿಸುವಿಕೆಗಳು ಬೃಹತ್ ಪರಿಣಾಮಗಳನ್ನು ಹೊಂದಿವೆ. ಮಸೂದೆಯು ಸರ್ಕಾರಕ್ಕೆ ಈ ಬಗ್ಗೆ ವಿಸ್ತಾರವಾದ ಅಧಿಕಾರ ನೀಡುತ್ತದೆಯಾದ್ದರಿಂದ ಈ ಬಗೆಗಿನ ಕಾಳಜಿಗಳನ್ನು ಸರ್ಕಾರ ಮುಕ್ತ ಮನಸ್ಸಿನಿಂದ ಪರಿಹರಿಸಬೇಕು. ಈ ಹಿಂದೆ ಮಸೂದೆಯ ಕರಡನ್ನು ಸಾರ್ವಜನಿಕ ಚರ್ಚೆಗೆ ಬಿಟ್ಟಾಗ ಉದ್ಯಮ ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಬಂದ ಪ್ರತಿಕ್ರಿಯೆಗಳ ಮುಕ್ತ ಪರಿಶೀಲನೆಯನ್ನು ತಡೆಹಿಡಿಯಲಾಯಿತು. ತನ್ನ ಉದ್ದೇಶಗಳು ಸ್ವಚ್ಛ ಇವೆಯೆಂದು ಸಾರ್ವಜನಿಕರಿಗೆ ಭರವಸೆ ಮೂಡಿಸಲು ಸರ್ಕಾರ ಸಂಪೂರ್ಣ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಮತ್ತು ಸಾರ್ವಜನಿಕ ಸಮಾಲೋಚನೆಯ ಮೂಲಕವೇ ಕಾನೂನು ರಚಿಸಬೇಕು. ಟೆಲಿಗ್ರಾಫ್ ಆಕ್ಟ್ ೧೯ನೇ ಶತಮಾನದ ಕಾನೂನು. ಅಂದಿಗೆ ಹೋಲಿಸಿದರೆ ಇಂದು ದೂರಸಂಪರ್ಕ ಕ್ಷೇತ್ರವು ಗುರುತು ಹಿಡಿಯಲಾರದಷ್ಟು ಬದಲಾಗಿದೆ. ಅಂತರ್ಜಾಲ ಪ್ರಪಂಚದ ನಿಯಂತ್ರಣ ಮತ್ತು ಕಾನೂನು ರಚನೆಯು ಈ ಡಿಜಿಟಲ್ ಸ್ಫೋಟದಿಂದ ಹುಟ್ಟಿಕೊಂಡಿರುವ ಎಲ್ಲಾ ಸಮಸ್ಯೆಗಳನ್ನು ಸಮಗ್ರವಾಗಿ ಪರಿಹರಿಸಬೇಕಾಗಿದೆ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT