ತ್ರಿಪುರಾದಲ್ಲಿ ಭಾರತೀಯ ಜನತಾ ಪಕ್ಷದ ಮಾಣಿಕ್ ಸಹಾ ನೇತೃತ್ವದ ನೂತನ ಸಚಿವ ಸಂಪುಟ ಬುಧವಾರ ಪ್ರಮಾಣ ವಚನ ಸ್ವೀಕರಿಸಿದೆ. ಎಪ್ಪತ್ತು ವರ್ಷ ವಯಸ್ಸಿನ ವೈದ್ಯ - ರಾಜಕಾರಣಿ ಡಾ. ಮಾಣಿಕ್ ಸಹ ಅವರನ್ನು ಬಿಜೆಪಿ ಚುನಾವಣೆಯ ಹೊಸ್ತಿಲಲ್ಲಿ ಸಾಕಷ್ಟು ಆಡಳಿತ ವಿರೋಧಿ ಅಲೆ ಕಟ್ಟಿಕೊಂಡಿದ್ದ ಬಿಪ್ಲಬ್ ದೇಬ್ ಅವರನ್ನು ಇಳಿಸಿ ಮೇ ೨೦೨೨ ರಲ್ಲಿ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಈ ತಂತ್ರ ಉತ್ತಮ ರೀತಿಯಲ್ಲಿ ಕೆಲಸ ಮಾಡಿದೆ, ಪಕ್ಷ ಮತ್ತೆ ಗೆದ್ದಿದೆ. ಆದರೆ ಕಳೆದ ಬಾರಿಗಿಂತ ಕೆಲವು ಸ್ಥಾನಗಳು ಕಡಿಮೆ ಪಡೆದಿದೆ. ಡಾ. ಸಹಾ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ. ಇದು ಕೇಂದ್ರ ಸಚಿವೆ ಪ್ರತಿಮಾ ಭೌಮಿಕ್ ಅವರು ಮುಖ್ಯಮಂತ್ರಿ ರೇಸ್ ಅಲ್ಲಿದ್ದಾರೆ ಎಂಬ ಊಹಾಪೋಹಕ್ಕೆ ತೆರೆ ಎಳೆದಂತಾಗಿದೆ. ಭೌಮಿಕ್ ಅವರು ಗೆದ್ದಿದ್ದ ವಿಧಾನಸಭಾ ಸ್ಥಾನವನ್ನು ತೆರವು ಮಾಡಿ ಕೇಂದ್ರದಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ನೂತನ ಸಚಿವ ಸಂಪುಟದಲ್ಲಿ ಬಿಜೆಪಿ ನಾಲ್ಕು ಸಚಿವರನ್ನು ಉಳಿಸಿಕೊಂಡು, ಪಕ್ಷದ ಪರಿಶಿಷ್ಟ ಪಂಗಡ ಮೋರ್ಚಾದ ಮುಖ್ಯಸ್ಥ ಬಿಕಾಶ್ ದೆಬ್ಬರ್ಮಾ ಅವರೂ ಸೇರಿದಂತೆ ಮೂರು ಹೊಸ ಮುಖಗಳಿಗೆ ಮಣೆ ಹಾಕಿದೆ. ಈ ಚುನಾವಣೆಯಲ್ಲಿ ಬಿಜಿಪಿಯ ಮಿತ್ರಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ಗಣನೀಯವಾಗಿ ಕ್ಷೀಣಿಸಿ ಒಂದು ಸ್ಥಾನಕ್ಕಷ್ಟೆ ತೃಪ್ತಿ ಪಟ್ಟುಕೊಂಡಿದೆ. ಆದರೂ ಶುಕ್ಲಾ ಚರಣ್ ನೋಟಿಯಾ ಅವರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಕ್ಕಿತು. ಅರವತ್ತು ಸದಸ್ಯ ಬಲದ ವಿಧಾನಸಭೆಯಲ್ಲಿ, ಮಂತ್ರಿಮಂಡಲದಲ್ಲಿ ೧೨ ಸದಸ್ಯರಿರಬಹುದು. ಸದ್ಯ ಮೂರು ಸ್ಥಾನಗಳನ್ನು ಖಾಲಿ ಬಿಡಲಾಗಿದೆ. ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ೧೩ ಸ್ಥಾನಗಳನ್ನು ಗೆದ್ದು ಚೊಚ್ಚಲ ಚುನಾವಣೆಯಲ್ಲೇ ಉತ್ತಮ ಪ್ರದರ್ಶನ ನೀಡಿರುವ ಹೊಸ ಪಕ್ಷ ತಿಪ್ರಾ ಮೋಥಾದೊಂದಿಗೆ ಬಿಜೆಪಿ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಬಿಜೆಪಿ ಮತ್ತು ತಿಪ್ರಾ ಮೋಥಾ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.
ದಶಕಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘ-ಸಂಯೋಜಿತ ಸಂಘಟನೆಗಳು ಸದ್ದಿಲ್ಲದೆ ಕೆಲಸ ಮಾಡಿದ್ದರ ಫಲವಾಗಿ ೨೦೧೮ ರಲ್ಲಿ ಎಡರಂಗವನ್ನು ಸೋಲಿಸಿ ಬಿಜಿಪಿಯ ಅಧಿಕಾರಕ್ಕೆ ಬಂದಿತು. ಬುಧವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಸೇರಿದಂತೆ ಪಕ್ಷದ ರಾಷ್ಟ್ರೀಯ ನಾಯಕತ್ವವೇ ಅಗರ್ತಲಾದಲ್ಲಿ ಇದ್ದದ್ದು ಪಕ್ಷವು ತ್ರಿಪುರಾ ರಾಜ್ಯಕ್ಕೆ ನೀಡುವ ಪ್ರಾಮುಖ್ಯತೆಯ ದ್ಯೋತಕವಾಗಿ ಕಂಡಿತು. ಸತತ ಎರಡನೇ ಬಾರಿ ಗೆಲುವು ಸಾಧಿಸಿರುವುದು ಗಡಿ ರಾಜ್ಯದಲ್ಲಿ ಬಿಜೆಪಿಯನ್ನು ಬಳಪಡಿಸಿದೆ. ಆದರೆ ಹೊಸ ಸವಾಲುಗಳು ಸಹ ಹುಟ್ಟಿಕೊಂಡಿವೆ. ಹೊಸ ಸರ್ಕಾರವು ಚುನಾವಣಾ ಫಲಿತಾಂಶ ನಂತರ ಭುಗಿಲೆದ್ದಿರುವ ಹಿಂಸಾಚಾರವನ್ನು ಈ ಕೂಡಲೇ ನಿರ್ವಹಿಸಬೇಕು. ಇದಲ್ಲದೆ ರಾಜ್ಯದಲ್ಲಿ ಬುಡಕಟ್ಟು ಮತ್ತು ಬುಡಕಟ್ಟೇತರ ಜನರ ನಡುವೆ ಕಂದಕ ದೊಡ್ಡದಾಗಿದೆ. ಇದರಿಂದ ಬಿಜೆಪಿಗೆ ಚುನಾವಣೆಯಲ್ಲಿ ಲಾಭವಾಗಿದೆ. ಈಗ ತ್ರಿಪುರ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಪ್ರದೇಶವನ್ನು ಒಳಗೊಂಡಿರುವ ಪ್ರತ್ಯೇಕ ಗ್ರೇಟರ್ ಟಿಪ್ರಾಲ್ಯಾಂಡ್‌ಗಾಗಿನ ತಿಪ್ರಾ ಮೊಥಾದ ಅಭಿಯಾನ ಹೊಸ ಸಮಸ್ಯೆಯನ್ನು ಸೃಷ್ಟಿಸಿದೆ. ರಾಜ್ಯದ ಜನಸಂಖ್ಯಾ ಬದಲಾವಣೆಗಳ ಕಾರಣ ಸ್ಥಳೀಯ ಸಮುದಾಯಗಳು ಹೆಚ್ಚೆಚ್ಚು ಅವಗಣೆನೆಗೆ ಒಳಗಾಗುತ್ತವೆ ಎಂಬ ಭಯ ಆವರಿಸಿಕೊಂಡಿದೆ ಮತ್ತು ಅದೇ ಗ್ರೇಟರ್ ತಿಪ್ರಾ ಲ್ಯಾಂಡ್ ಬೇಡಿಕೆಗೆ ದಾರಿ ಮಾಡಿಕೊಟ್ಟಿದೆ. ಕಳೆದ ಸರ್ಕಾರದ ಅವಧಿಯಲ್ಲಿ, ಆಂತರಿಕವಾಗಿ ಸ್ಥಳಾಂತರಗೊಂಡ ಬ್ರು ಸಮುದಾಯಕ್ಕೆ ಮತದಾನದ ಹಕ್ಕು ನೀಡಿ ಈಶಾನ್ಯ ಭಾರತದಲ್ಲಿನ ಬಹುದಿನಗಳ ಸಮಸ್ಯೆಯೊಂದನ್ನು ಪರಿಹರಿಸಲಾಯಿತು. ಡಾ. ಸಹ ಈ ಕೂಡಲೇ ಆಡಳಿತದಲ್ಲಿ ಬಿಗಿ ಸಾಧಿಸಬೇಕಿದೆ ಮತ್ತು ಅವರು ತಮ್ಮ ಸ್ಥಾನಕ್ಕೆ ಒದಗಿ ಬರಬಹುದಾದ ಸಂಭಾವ್ಯ ಸವಾಲುಗಳ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು.
This editorial has been translated from English, which can be read here.
COMMents
SHARE