ವಕೀಲೆ ಎಲ್. ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾಗಿ ನೇಮಿಸಿರುವುದು ಪ್ರಶ್ನಾರ್ಹವಷ್ಟೇ ಅಲ್ಲ, ಅದು ನ್ಯಾಯಾಂಗ ನೇಮಕಾತಿ ವ್ಯವಸ್ಥೆಯ ಸಮಸ್ಯಾತ್ಮಕ ಸ್ವರೂಪದ ಪ್ರತೀಕ ಕೂಡ. ಇದು ತನ್ನ ನೆಚ್ಚಿನವರನ್ನು ನ್ಯಾಯಾಧೀಶರಾಗಿ ನೇಮಿಸುವ ಮೂಲಕ ಬೆಂಚ್ ಅನ್ನು ಕಬ್ಜ ಮಾಡುವ ಸರ್ಕಾರದ ಯೋಜನೆಯನ್ನೂ ಸೂಚಿಸುತ್ತದೆ. ಗೌರಿ ಅವರ ಹೆಸರನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದ ಬಳಿಕ ಅವರ ಹಳೆಯ ಸಂದರ್ಶನಗಳು ಬೆಳಕಿಗೆ ಬಂದವು. ಅವುಗಳಲ್ಲಿ ಅಲ್ಪಸಂಖ್ಯಾತರ ವಿರುಧ್ದ ಅವರ ಪೂರ್ವಾಗ್ರಹಗಳು ನಿಚ್ಛಳವಾಗಿತ್ತು. ಆದರೆ ಅತಿ ಆತುರದಲ್ಲಿ ಅವರಿಗೆ ನ್ಯಾಯಾಧೀಶರಾಗಿ ಪ್ರಮಾಣವಚನ ಬೋಧಿಸಲಾಯಿತು. ಕೇಂದ್ರ ಕಾನೂನು ಸಚಿವಾಲಯವು ಇತರ ಸಂದರ್ಭಗಳಲ್ಲಿ ಪ್ರದರ್ಶಿಸದ ಅಸಾಧಾರಣ ವೇಗದಲ್ಲಿ ಈ ಕಂತಿನ ಅಭ್ಯರ್ಥಿಗಳ ನೇಮಕಾತಿ ಶಿಫಾರಸ್ಸುಗಳನ್ನು ಅಂಗೀಕರಿಸಿತು. ಗೌರಿ ಅವರ ನೇಮಕಾತಿಯನ್ನು ಕೆಲವು ವಕೀಲರು ಪ್ರಶ್ನಿಸಿದ್ದು ಅವರ ಅರ್ಜಿಗಳನ್ನು ಆಲಿಸಲು ನ್ಯಾಯಾಲಯ ಒಪ್ಪಿದ್ದರಿಂದ, ಯಾವುದೇ ಮಧ್ಯಂತರ ಆದೇಶ ಬರುವ ಮುಂಚೆ ಸರ್ಕಾರ ಅವರ ನೇಮಕಾತಿ ಪ್ರಕ್ರಿಯೆಯನ್ನು ಮುಗಿಸುವ ಉದ್ದೇಶ ಹೊಂದಿದ್ದು ಸ್ಪಷ್ಟ. ಈ ಧಾವಂತದಲ್ಲಿ, ಈ ಹಿಂದೆ ಕಾನೂನು ಸಚಿವಾಲಯ ವಿರೋಧಿಸಿದ್ದ ವಕೀಲ ಆರ್. ಜಾನ್ ಸತ್ಯನ್ ಅವರನ್ನು ಮೊದಲು ನ್ಯಾಯಾಧೀಶರಾಗಿ ನೇಮಿಸಬೇಕು ಎಂಬ ನಿರ್ದಿಷ್ಟ ಶಿಫಾರಸ್ಸನ್ನು ಸರ್ಕಾರ ಕಡೆಗಣಿಸಿದೆ. ಪ್ರಸ್ತುತ ಆಡಳಿತವು ತನ್ನ ರಾಜಕೀಯ ಇಷ್ಟಾನಿಷ್ಟಗಳಿಗೆ ತಕ್ಕಂತೆ ಕೊಲಿಜಿಯಂನಿಂದ ಅನುಮೋದಿಸಲ್ಪಟ್ಟವರಲ್ಲಿ ತನಗೆ ಬೇಕಾದವರನ್ನು ಆಯ್ದುಕೊಳ್ಳುತ್ತದೆ ಎಂಬುದು ಸ್ಪಷ್ಟ. ಸರ್ಕಾರವು ಪದೇ ಪದೇ ತನ್ನ ನಿಲುವನ್ನೇ ದಕ್ಕಿಸಿಕೊಳ್ಳುತ್ತಿರುವುದು, ಖಾಲಿ ಹುದ್ದೆಗಳನ್ನು ತುಂಬುವಲ್ಲಿ ಯಾವುದೇ ಅರ್ಥಪೂರ್ಣ ಪ್ರಗತಿ ಸಾಧಿಸಬೇಕೆಂದರೆ ಕಾರ್ಯಾಂಗಕ್ಕೆ ಮಣಿಯಲು ಕೊಲಿಜಿಯಂ ಮೇಲೆ ಅಪಾರ ಒತ್ತಡ ಇದೆ ಎಂಬುದರ ದ್ಯೋತಕ.
ಗೌರಿ ಅವರ ನೇಮಕಾತಿಯನ್ನು ಎರಡು ನೆಲೆಗಳಲ್ಲಿ ಪ್ರಶ್ನಿಸಲಾಗಿತ್ತು. ಒಂದನೆಯದಾಗಿ, ಕೊಲಿಜಿಯಂ ಮುಂದೆ ಅವರ ಬಗ್ಗೆ ಸಂಪೂರ್ಣ ಮಾಹಿತಿ ಇರಿಸಿದ್ದಿದ್ದರೆ ಮತ್ತು ಆ ಕುರಿತು ಪರಿಣಾಮಕಾರಿ ಸಮಾಲೋಚನೆ ನಡೆದಿದ್ದರೆ ಅವರ ನೇಮಕಾತಿ ಆಗದಿರುವ ಸಾಧ್ಯತೆ ಇತ್ತು. ಮತ್ತು ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ವಿರುದ್ಧ ಅವರು ನೀಡಿದ ಭಾಷಣಗಳು ಅವರು ರಾಗ ದ್ವೇಷಗಳಿಲ್ಲದೆ ಕಾರ್ಯನಿರ್ವಹಿಸಲಾರರು ಎಂಬುದನ್ನು ತೋರಿಸುತ್ತದೆ. ಅವರು “ಧರ್ಮದ ನೆಲೆಯಲ್ಲಿ...” ತಾರತಮ್ಯವಿಲ್ಲದೆ ನ್ಯಾಯವನ್ನು ಒದಗಿಸುವರೆಂದು ನಿರೀಕ್ಷಿಸಲಾಗುವುದಿಲ್ಲ. ಆದರೆ ಒಮ್ಮೆ ಕೊಲಿಜಿಯಂ ನಿರ್ಧರಿಸಿದ ನಂತರ ಯಾವುದೇ ನೇಮಕಾತಿಯ ಸೂಕ್ತತೆಯನ್ನು ಮರುಪರಿಶೀಲಿಸಲು ಸಾಧ್ಯವಿಲ್ಲ ಎಂದು ಪೀಠವು ಅರ್ಜಿಗಳನ್ನು ಸರಿಯಾಗಿಯೇ ತಿರಸ್ಕರಿಸಿತು. ನ್ಯಾಯಾಲಯವು ಕೊಲೀಜಿಯಂನ ಮೂರು ಅತಿ ಹಿರಿಯ ನ್ಯಾಯಮೂರ್ತಿಗಳು ಮಾಡಿದ ಆಯ್ಕೆಯ ಮರುಪರಿಶೀಲನೆ ಮಾಡುವುದು ಸಮಂಜಸವಾಗಿರಲಾರದು. ವಾಸ್ತವವಾಗಿ, ಕೊಲೀಜಿಯಂನ ನಿರ್ಧಾರದ ಪರಿಶೀಲನೆಗೆ ಅರ್ಜಿಗಳನ್ನು ಪೀಠಕ್ಕೆ ವರ್ಗಾಯಿಸುವುದರಲ್ಲಿ ಯಾವುದೇ ಅರ್ಥವಿರಲಿಲ್ಲ. ರಾಜ್ಯ ಸರ್ಕಾರವೂ ಅವರ ತೀವ್ರತರ ನಿಲುವುಗಳನ್ನು ಆಕ್ಷೇಪಾರ್ಹವೆಂದು ಮಂಡಿಸಿರಲಿಲ್ಲ ಎಂದು ಈಗ ತಿಳಿದು ಬಂದಿದೆ. ರಾಜಕೀಯ ನಿಲುವುಗಳು ಯಾರನ್ನೂ ನ್ಯಾಯಾಂಗದ ಉನ್ನತ ಹುದ್ದೆಗಳನ್ನು ಅಲಂಕರಿಸಲು ಅನರ್ಹಗೊಳಿಸಬಾರದಾದರೂ ಮತಾಂಧತೆ ಅನರ್ಹತೆಯೇ ಆಗಬೇಕು. ಒಂದು ವಿವಾದಾತ್ಮಕ ಪ್ರಸ್ತಾಪವು ತನ್ನ ಪರಿಶೀಲನೆಯನ್ನು ದಾಟಿ ಹೋಗಿದೆ ಎಂಬುದು ಕೊಲಿಜಿಯಂ ವ್ಯವಸ್ಥೆಯ ವೈಫಲ್ಯವಾಗಿದೆ. ನ್ಯಾಯಾಂಗದ ನೇಮಕಾತಿ ವ್ಯವಸ್ಥೆಯಲ್ಲಿ ಸುಧಾರಣೆ ಮಾತ್ರ ಸಾಕಾಗುವುದಿಲ್ಲ. ಬಹುಷಃ ಅಭ್ಯರ್ಥಿಗಳ ವಸ್ತುನಿಷ್ಠ ಮೌಲ್ಯಮಾಪನ ಮತ್ತು ಅವರ ಸೂಕ್ತತೆಯ ಸಾರ್ವಜನಿಕ ಪರಿಶೀಲನೆ ಎರಡನ್ನೂ ಒಳಗೊಂಡ ಪ್ರಕ್ರಿಯೆ ಇಂದಿನ ಅಗತ್ಯ. ಸದ್ಯ ಇರುವ ವ್ಯವಸ್ಥೆಯು ಮುಚ್ಚಿದ ಬಾಗಿಲ ಹಿಂದೆ ನಡೆಯುವ ಅಪಾರದರ್ಶಕ ಸಂಧಾನವಾಗಿದ್ದು ಅನಾರೋಗ್ಯಕರ ರಾಜಿಗಳಿಗೆ ಅವಕಾಶವಿದೆ.
This editorial has been translated from English, which can be read here.
COMMents
SHARE