ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾದ ನಾಯಕರು ಈ ವಾರ ಅಮೆರಿಕಾದ ನೌಕಾನೆಲೆ ಪಾಯಿಂಟ್ ಲೊಮಾದಲ್ಲಿ ಜಂಟಿಯಾಗಿ ಕಾಣಿಸಿಕೊಂಡು ಮೂರೂ ದೇಶಗಳ ನಡುವಿನ ಔಕಾಸ್ (AUKUS) ತ್ರಿಪಕ್ಷೀಯ ರಕ್ಷಣಾ ಒಪ್ಪಂದದ ಬಗ್ಗೆ ವಿವರಿಸಿದ್ದು ಗಮನಾರ್ಹವಾದ ಬೆಳವಣಿಗೆ. ಜಾಗತಿಕ ಶಕ್ತಿಗಳ ನಡುವಿನ ಪೈಪೋಟಿಯಲ್ಲಿ ಇದೊಂದು ಹೊಸ ಅಧ್ಯಾಯ. ಸೆಪ್ಟೆಂಬರ್ ೨೦೨೧ರಲ್ಲಿ ಮೊದಲ ಬಾರಿಗೆ ಘೋಷಿಸಲಾದ ಈ ಒಪ್ಪಂದವು ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿ ಮೂರು ಹಂತಗಳನ್ನು ಒಳಗೊಂಡಿದೆ. ಈ ವರ್ಷದಿಂದ ಯುಎಸ್ ಮತ್ತು ಯುಕೆ ನೌಕಾಪಡೆಗಳು ಆಸ್ಟ್ರೇಲಿಯಾದ ನೌಕಾ ಸಿಬ್ಬಂದಿಯ ಜೊತೆ ಜಂಟಿಯಾಗಿ ಕಾರ್ಯನಿರ್ವಹಿಸಲಿವೆ ಮತ್ತು ಅವರಿಗೆ ತರಬೇತಿ ನೀಡಲು ಆಸ್ಟ್ರೇಲಿಯಾದ ಬಂದರುಗಳಿಗೆ ತಮ್ಮ ಭೇಟಿಗಳನ್ನು ಹೆಚ್ಚಿಸಲಿವೆ. ಎರಡನೇ ಹಂತದಲ್ಲಿ ಯುಎಸ್ ಮತ್ತು ಯುಕೆ ಪರಮಾಣು ಜಲಾಂತರ್ಗಾಮಿ ನೌಕೆಗಳು ಸರದಿಯಂತೆ ಆಸ್ಟ್ರೇಲಿಯಾದ ತೀರಕ್ಕೆ ಪ್ರಯಾಣಿಸಲಿವೆ. ಯುಎಸ್ ಆಸ್ಟ್ರೇಲಿಯಾಗೆ ಐದು ಪರಮಾಣು-ಚಾಲಿತ ವರ್ಜಿನಿಯಾ-ಕ್ಲಾಸ್ ಜಲಾಂತರ್ಗಾಮಿ ನೌಕೆಗಳನ್ನು ಮಾರಾಟ ಮಾಡುತ್ತದೆ. ತರುವಾಯ, ಎಸ್. ಎಸ್. ಎನ್- ಔಕಾಸ್ ಎಂಬ ಹೊಸ ಜಲಾಂತರ್ಗಾಮಿ ನೌಕೆಯನ್ನು ನಿರ್ಮಿಸಿ ಮೂರೂ ನೌಕಾಪಡೆಗಳು ಬಳಸುತ್ತವೆ. ಬ್ರಿಟಿಷ್ ವಿನ್ಯಾಸ ಮತ್ತು ಅಮೆರಿಕಾದ ತಂತ್ರಜ್ಞಾನವನ್ನು ಬಳಸುವ ಇದು ಆಸ್ಟ್ರೇಲಿಯಾಗೆ $೩೬೮ ಶತಕೋಟಿ ಭಾರ ಹೊರಿಸಲಿದ್ದು, ಆ ದೇಶಕ್ಕೆ ಇದು ಅತಿ ದೊಡ್ಡ ಒಪ್ಪಂದವಾಗಿದೆ. ಈ ಮೈತ್ರಿಯ ಗುರಿ ಯಾರೆಂದು ಊಹಿಸುವುದು ಕಷ್ಟವೇನಲ್ಲ. ತಮ್ಮ ಭಾಷಣದಲ್ಲಿ ಯುಕೆ ಪ್ರಧಾನಿ ರಿಷಿ ಸುನಕ್ ಅವರು “ಯುಕ್ರೇನ್‌ನ ಮೇಲೆ ರಷ್ಯಾದ ಅಕ್ರಮ ಅತಿಕ್ರಮಣ, ಚೀನಾದ ಹೆಚ್ಚುತ್ತಿರುವ ಮಹತ್ವಾಕಾಂಕ್ಷೆ ಮತ್ತು ಇರಾನ್ ಮತ್ತು ಉತ್ತರ ಕೊರಿಯಾಗಳ ಅಸ್ಥಿರತೆಯನ್ನು ಪ್ರಚೋದಿಸುವ ನಡವಳಿಕೆಗಳು” ಇಂದು ಜಗತ್ತು ಎದುರಿಸುತ್ತಿರುವ ಸವಾಲುಗಳು ಎಂದು ಹೇಳಿದರು. ಅತ್ತ ಚೀನಾವು ತೈವಾನಿನ ಮೇಲೆ ತನ್ನ ಹಕ್ಕು ಚಲಾಯಿಸಲು ಹವಣಿಸುತ್ತಿರುವಾಗ ಅದಕ್ಕೆ ಪ್ರತಿಯಾಗಿ ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಗಳನ್ನೂ ಒಳಗೊಂಡಂತೆ ಆಸ್ಟ್ರೇಲಿಯಾದ ತೀರದಲ್ಲಿ ನೌಕಾನೆಲೆ ಸ್ಥಾಪಿಸಿದರೆ ಅಲ್ಲಿಂದ ನೌಕಾಪಡೆಯು ದಕ್ಷಿಣ ಚೀನಾ ಸಮುದ್ರವನ್ನು ತ್ವರಿತವಾಗಿ ತಲುಪಲು ಸಾಧ್ಯವಾಗುತ್ತದೆ ಎಂಬುದು ಈ ಒಪ್ಪಂದದ ಮೂಲ ಉದ್ದೇಶದಂತಿದೆ.
ನಿರೀಕ್ಷಿತವಾಗಿ ಬೀಜಿಂಗ್ ಇದನ್ನು “ತಪ್ಪು ಮತ್ತು ಅಪಾಯಕಾರಿ ಮಾರ್ಗ” ಎಂದು ಖಾರವಾಗಿ ಖಂಡಿಸಿದೆ. ಈ ಒಪ್ಪಂದದಿಂದ ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಬಳಸುವ ದೇಶಗಳ ಗುಂಪಿಗೆ ಆಸ್ಟ್ರೇಲಿಯಾ ಹೊಸದಾಗಿ ಸೇರ್ಪಡೆಯಾಗುವುದರಿಂದ ಪರಮಾಣು ಪ್ರಸರಣದ ಬಗ್ಗೆ ರಷ್ಯಾ ಪ್ರಶ್ನೆಗಳನ್ನು ಎತ್ತಿದೆ. ಅದಕ್ಕೆ ಉತ್ತರಿಸಿರುವ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಈ ಜಲಾಂತರ್ಗಾಮಿ ನೌಕೆಗಳು ಪರಮಾಣು-ಚಾಲಿತವಾಗಿರುತ್ತವೆಯೇ ಹೊರತು ಪರಮಾಣು-ಶಸ್ತ್ರಸಜ್ಜಿತವಾಗಿರುವುದಿಲ್ಲ ಎಂದು ಹೇಳಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಮಾಸ್ಕೋದಲ್ಲಿ ನಡೆಯುವ ಸಭೆಯಲ್ಲಿ ಪರಮಾಣು ಪ್ರಸರಣ ತಡೆ ಒಪ್ಪಂದದ ಸಂಭಾವ್ಯ ಉಲ್ಲಂಘನೆಗಳ ಬಗ್ಗೆ ಚರ್ಚಿಸುವ ಸಂಭವವಿದೆ. ನ್ಯೂಜಿಲೆಂಡ್, ಮಲೇಷ್ಯಾ ಮತ್ತು ಇಂಡೋನೇಷ್ಯಾಗಳು ಕೂಡಾ ತಮ್ಮ ಅಸಮಾಧಾನ ಹೊರಹಾಕಿವೆಯಾದರೂ ಅವರ ಪ್ರತಿಕ್ರಿಯೆ ತೀವ್ರವಾದುದಲ್ಲ. ಬಹುಷಃ ಒಪ್ಪಂದದ ಕುರಿತು ಈ ದೇಶಗಳು ನವದೆಹಲಿಯೊಂದಿಗೆ ಈ ಮುಂಚೆಯೇ ಚರ್ಚಿಸಿರುವುದರಿಂದ ಭಾರತ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕ್ವಾಡ್ ಮೈತ್ರಿಯಲ್ಲಿ ರಕ್ಷಣಾ ಅಂಶಗಳನ್ನು ಹೆಚ್ಚು ಅನ್ವೇಷಿಸಲು ಹಿಂಜರಿಯುತ್ತಿರುವ ನವದೆಹಲಿಗೆ ಈ ಹೊಸ ಒಪ್ಪಂದವು ಇಂಡೋ-ಪೆಸಿಫಿಕ್ ರಕ್ಷಣಾ ವಲಯದಲ್ಲಿ ಸ್ವಲ್ಪ ಮಟ್ಟಿಗೆ ನಿರಾಳತೆ ಮೂಡಿಸಿದೆ. ಭಾರತವು ಜಾಗತಿಕ ದಕ್ಷಿಣದ ಧ್ವನಿಯಾಗಿ ಈ ನೂತನ ಒಪ್ಪಂದವು ಅತ್ತ ಅಮೆರಿಕಾ ನೇತೃತ್ವದ ಮೈತ್ರಿಕೂಟ ಮತ್ತು ಇತ್ತ ರಷ್ಯಾ-ಚೀನಾ ಮೈತ್ರಿಯ ನಡುವೆ ಹೊಸ ಸಂಘರ್ಷವನ್ನು ತಡೆಯುವ ನಿರೋಧಕವಾಗಿ ಕೆಲಸ ಮಾಡಬೇಕು. ಈಗಾಗಲೇ ಇರುವ ತೀಕ್ಷ್ಣ ವಿಭಜನೆ ಉಲ್ಬಣಿಸಿ ಜಾಗತಿಕ ಸಂಘರ್ಷ ಬಿಗಡಾಯಿಸದಂತೆ ನೋಡಲು ತನ್ನ ಕೈಲಾದಷ್ಟು ಪ್ರಯತ್ನಿಸಬೇಕು.
This editorial has been translated from English, which can be read here.
COMMents
SHARE