ದೇಶದ ಪ್ರಧಾನ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (ಸಿಪಿಆರ್) ನ ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ (ಎಫ್.ಸಿ.ಆರ್.ಎ) ಪರವಾನಗಿಯನ್ನು ಅಮಾನತುಗೊಳಿಸುವ ಭಾರತ ಸರ್ಕಾರದ ನಿರ್ಧಾರವು ಎಲ್ಲ ರೀತಿಯಲ್ಲೂ ಕೆಟ್ಟದ್ದಾಗಿದೆ. ಈ ನಿರ್ಧಾರಕ್ಕೆ ಅಧಿಕಾರಿಗಳು ಉಲ್ಲೇಖಿಸಿರುವ ಕಾರಣಗಳೆಂದರೆ ಆದಾಯ ತೆರಿಗೆ ದಾಖಲೆಗಳಲ್ಲಿನ ಲೋಪಗಳು, ಲೆಕ್ಕಪತ್ರಗಳಲ್ಲಿ ಸರಿಯಾದ ಪ್ರಕ್ರಿಯೆಯ ಕೊರತೆ ಮತ್ತು ಸಿಪಿಆರ್‌ನ ಉದ್ದೇಶಗಳ ಭಾಗವಲ್ಲ ಎಂದು ಅಧಿಕಾರಿಗಳು ವಾದಿಸುವ ಪುಸ್ತಕಗಳ ಪ್ರಕಟಣೆಗೆ ಹಣವನ್ನು ವಿನಿಯೋಗಿಸಿರುವುದು. ಪ್ರತಿಷ್ಠಿತ ಸಂಸ್ಥೆಯನ್ನು ಕಾನೂನು ಪ್ರಕ್ರಿಯೆಗಳ ಚಕ್ರವ್ಯೂಹಕ್ಕೆ ಸಿಲುಕಿಸುವ ಉತ್ಸುಕತೆಯು ಈ ಪ್ರಹಸನದಲ್ಲಿ ಢಾಳಾಗಿ ಕಾಣುತ್ತದೆ. ಆಡಳಿತವನ್ನು ಸುಧಾರಿಸಲು ಮತ್ತು ರಾಜ್ಯಗಳ ಸಾಮರ್ಥ್ಯ ಹೆಚ್ಚಿಸಲು ಸಿಪಿಆರ್ ಸರ್ಕಾರ, ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಜೊತೆ ಕೆಲಸ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಸರ್ಕಾರೇತರ ಸಂಸ್ಥೆಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಆದರೆ ಸಿಪಿಆರ್ ವಿರುದ್ಧದ ಕ್ರಮವು ಸರ್ಕಾರದ ಸಹಿಷ್ಣುತೆ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ ಎಂಬುದನ್ನು ಸೂಚಿಸುತ್ತದೆ. ಇದು ಎಲ್ಲಾ ರೀತಿಯ ಜ್ಞಾನ ಸೃಷ್ಟಿಯ ವಿರುದ್ಧ ವಿವರಿಸಲಾಗದ ಹಗೆತನವನ್ನು ತೋರಿಸುತ್ತದೆ. ವಿದೇಶಿ ಪಟ್ಟಭದ್ರ ಹಿತಾಸಕ್ತಿಗಳು ಭಾರತದ ದೇಶೀಯ ರಾಜಕೀಯದ ಮೇಲೆ ಅನುಚಿತವಾದ ಪ್ರಭಾವ ಬೀರಲು ಅವಕಾಶ ಮಾಡಿಕೊಡಬಾರದು ಎಂದು ಎಫ್.ಸಿ.ಆರ್.ಎ ಕಾನೂನು ಜಾರಿ ಮಾಡಲಾಗಿದೆ. ಆದರೆ ಸರ್ಕಾರೇತರ ವಲಯವನ್ನು ಸ್ಪಷ್ಟವಾಗಿ ನಿಷ್ಕ್ರಿಯಗೊಳಿಸುವ ರೀತಿಯಲ್ಲಿ ಕಾನೂನಿನ ವ್ಯಾಪಕವಾದ ಅನ್ವಯವು ಪ್ರತೀಕಾರದಂತೆ ಕಾಣುತ್ತಿದೆ.
ಭಾರತದ ಹೊಸ ಶಿಕ್ಷಣ ನೀತಿಯು ದೇಶದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸಲು ಭಾರತೀಯ ಮತ್ತು ಜಾಗತಿಕ ಸಂಸ್ಥೆಗಳ ನಡುವೆ ಶೈಕ್ಷಣಿಕ ವಿನಿಮಯ ಮತ್ತು ಸಹಕಾರವನ್ನು ಉತ್ತೇಜಿಸಬೇಕು ಎನ್ನುತ್ತದೆ. ಭಾರತವು ತಾಂತ್ರಿಕ ಶ್ರೇಷ್ಠತೆ ಮತ್ತು ಉತ್ಪಾದನೆಯ ಕೇಂದ್ರವಾಗಿ ಹೊರಹೊಮ್ಮಲು ಬಯಸುತ್ತದೆ. ಇತ್ತೀಚೆಗೆ ಆಸ್ಟ್ರೇಲಿಯಾದ ಎರಡು ವಿಶ್ವವಿದ್ಯಾನಿಲಯಗಳು ಭಾರತದಲ್ಲಿ ತಮ್ಮ ಶಾಖೆಗಳನ್ನು ತೆರೆಯುವ ತಮ್ಮ ಯೋಜನೆಗಳನ್ನು ಘೋಷಿಸಿದವು.
ಆದರೆ ಭಾರತದ ಜಾಗತಿಕ ಮಹತ್ವಾಕಾಂಕ್ಷೆಗಳು ಸಿಪಿಆರ್ ಮೇಲಿನ ನಿರ್ಬಂಧಗಳಂತಹ ಪ್ರತಿಗಾಮಿ ಕ್ರಮಗಳೊಂದಿಗೆ ಘರ್ಷಣೆಗಿಳಿದಂತಿವೆ. ಜಗತ್ತಿನೊಂದಿಗೆ ಕೈಜೋಡಿಸಬೇಕು ಎಂದರೆ ಮಾಹಿತಿ, ಸಿಬ್ಬಂದಿ ಮತ್ತು ಹಣದ ಹರಿವು ಎರಡೂ ದಿಕ್ಕುಗಳಲ್ಲಿ ಸಾಗಬೇಕು. ರಾಷ್ಟ್ರೀಯ ಭದ್ರತೆಯ ಕಾರಣಗಳಿಗಾಗಿ ಇವುಗಳ ಮೇಲಿನ ನಿರ್ಬಂಧಗಳು ಎಲ್ಲೆಡೆ ಇವೆ ಮತ್ತು ಅವು ಒಪ್ಪಿತವೇ.
ಆದರೆ ಇವುಗಳನ್ನು ಮಿತವಾಗಿ ಚಲಾಯಿಸಬೇಕು. ಅಂತರರಾಷ್ಟ್ರೀಯ ತಂತ್ರಜ್ಞಾನ ಮತ್ತು ಬಂಡವಾಳದ ಒಳಹರಿವನ್ನು ಅರಸುತ್ತಿರುವಾಗ, ಭಾರತೀಯ ಚಿಂತನೆಯನ್ನು ಎಲ್ಲ ವಿದೇಶಿ ಪ್ರಭಾವಗಳಿಂದ ಕಾಪಾಡಬೇಕು ಎಂದು ಹೊರಡುವುದು ಒಂದು ವಿರೋಧಾಭಾಸವಾಗಿದೆ. ಭಾರತದಷ್ಟು ವೇಗವಾಗಿ ಬೆಳೆಯುತ್ತಿರುವ ದೇಶಕ್ಕೆ ಸಂಶೋಧನೆಯ ಸಾಮರ್ಥ್ಯದ ಬೃಹತ್ ವಿಸ್ತರಣೆಯು ಇಂದಿನ ತುರ್ತು ಅಗತ್ಯವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಜ್ಞಾನದ ಪರಿಧಿಯನ್ನು ನಿರಂತರವಾಗಿ ವಿಸ್ತರಿಸಲು ಭಾರತಕ್ಕೆ ಸರ್ಕಾರದ ಅನುದಾನದ ಜೊತೆಗೆ ಖಾಸಗಿ ವಲಯದ ದಾನ ದತ್ತಿಗಳೂ ಅತ್ಯಗತ್ಯ. ಸರ್ಕಾರವು ಸಿಪಿಆರ್ ನಂತಹ ಹಲವಾರು ಸಂಸ್ಥೆಗಳು ಹೊರಹೊಮ್ಮಲು ಸಹಾಯ ಮಾಡಬೇಕು.
This editorial has been translated from English, which can be read here.
COMMents
SHARE