ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದೆ. ಅರವತ್ತು ಸದಸ್ಯ ಬಲದ ವಿಧಾನಸಭೆಯಲ್ಲಿ ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ೨೬ ಸ್ಥಾನಗಳನ್ನು ಗಳಿಸಿ ವಿಧಾನಸಭೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು ೨೦೧೮ ರಲ್ಲಿ ಅದು ಗೆದ್ದದ್ದಕ್ಕಿಂತ ೭ ಸ್ಥಾನಗಳು ಹೆಚ್ಚು. ಇಬ್ಬರು ಸ್ವತಂತ್ರರನ್ನು ಹೊರತುಪಡಿಸಿ ಕನಿಷ್ಠ ಎರಡು ಸ್ಥಾನಗಳನ್ನು ಪಡೆದಿರುವ ಪಕ್ಷಗಳ ಸಂಖ್ಯೆ ಏಳು. ಹಾಗಾಗಿ ಫಲಿತಾಂಶದ ನಂತರ ಸರ್ಕಾರ ರಚಿಸಲು ಚತುರ ರಾಜಕೀಯದ ಅಗತ್ಯವಿತ್ತು. ತೃಣಮೂಲ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರು ಎನ್‌ಪಿಪಿ ಮತ್ತು ಎರಡು ಸ್ಥಾನಗಳನ್ನು ಗೆದ್ದ ಬಿಜೆಪಿಯನ್ನು ಹೊರಗಿಟ್ಟು ಹೊಸ ಒಕ್ಕೂಟವನ್ನು ರೂಪಿಸಲು ಪ್ರಯತ್ನಿಸಿದರಾದರೂ ಅವರ ಪಕ್ಷವು ಕೇವಲ ಐದು ಸ್ಥಾನಗಳನ್ನು ಗೆದ್ದಿದೆಯಾದ್ದರಿಂದ ಅವರ ನೇತೃತ್ವದ ಮೈತ್ರಿ ಸಾಧ್ಯವಾಗಲಿಲ್ಲ. ಹಲವು ಸಣ್ಣ ಪಕ್ಷಗಳ ಯಾವುದೇ ಒಕ್ಕೂಟದ ಸರ್ಕಾರವು ಅಸ್ಥಿರವಾಗಿರುತ್ತದೆ. ಎನ್‌ಪಿಪಿ ನೇತೃತ್ವದ ಆಡಳಿತದಲ್ಲಿನ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತಾ ಮೈತ್ರಿಯಿಂದ ಹೊರಬಂದ ಬಿಜೆಪಿ ಸ್ವತಂತ್ರವಾಗಿ ಎಲ್ಲ ೬೦ ಸ್ಥಾನಗಳಲ್ಲಿ ಸ್ಪರ್ಧಿಸಿತು. ಆದರೆ ಫಲಿತಾಂಶದ ನಂತರ ಎನ್‌ಪಿಪಿಯ ಬೆಂಬಲಕ್ಕೆ ನಿಂತಿತು. ಈಶಾನ್ಯ ರಾಜ್ಯಗಳ ಸರ್ಕಾರಗಳು ಕೇಂದ್ರ ಸರ್ಕಾರದ ನಿಧಿಯ ಮೇಲೆ ಅತಿ ಅವಲಂಬಿತವಾಗಿವೆ. ಹಾಗಾಗಿ ಅವಕ್ಕೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಜೊತೆ ಗುರುತಿಸಿಕೊಳ್ಳುವುದು ಅನಿವಾರ್ಯ. ಆದರೆ ಬಿಜೆಪಿಯು ಭ್ರಷ್ಟಾಚಾರ ಆರೋಪ ಮಾಡಿದ ಪಕ್ಷದೊಂದಿಗೆ ಆ ಕೂಡಲೇ ಮೈತ್ರಿ ಮಾಡಿಕೊಂಡಿರುವುದು ಪಕ್ಷವು ರಾಜ್ಯದಲ್ಲಿ ತನ್ನ ನೆಲೆಯನ್ನು ವಿಸ್ತರಿಸಲು ಅಧಿಕಾರ ಬೇಕು ಎಂಬ ಅದರ ಹತಾಶ ನಿಲುವನ್ನು ಸೂಚಿಸುತ್ತದೆ. ಹನ್ನೊಂದು ಸ್ಥಾನಗಳನ್ನು ಗೆದ್ದಿರುವ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ, ತಲಾ ಎರಡು ಸ್ಥಾನ ಗೆದ್ದಿರುವ ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಇಬ್ಬರು ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಕೊನೆಗೂ ಎನ್‌ಪಿಪಿ ನೇತೃತ್ವದ ಸರ್ಕಾರಕ್ಕೆ ಸ್ಪಷ್ಟ ಬಹುಮತ ಲಭಿಸಿದೆ.
ಎನ್‌ಪಿಪಿ ಸಂಪೂರ್ಣ ಬಹುಮತ ಗೆಲ್ಲದಿದ್ದರೂ, ಜೈನ್ತಿಯಾ ಮತ್ತು ಖಾಸಿ ಬೆಟ್ಟಗಳ ಪ್ರದೇಶಗಳಲ್ಲಿ ಎಂಟು ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಗಾರೋ ಬೆಟ್ಟಗಳಾಚೆಗೆ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿದೆ. ಇದರಿಂದ ಕಾಂಗ್ರೆಸ್ ನಂತರ ರಾಜ್ಯಾದ್ಯಂತ ಬೆಂಬಲ ಇರುವ ಏಕೈಕ ಪಕ್ಷವಾಗಿ ಅದು ಹೊರಹೊಮ್ಮಿದೆ. ಇಂತಹ ಜನಾದೇಶದೊಂದಿಗೆ, ಇನ್ನೂ ಹೆಚ್ಚು ಬಡತನದಿಂದ ಬಳಲುತ್ತಿರುವ ರಾಜ್ಯದ ಎಡಬಿಡದ ಅಭಿವೃದ್ಧಿ ಸಮಸ್ಯೆಗಳನ್ನು ಪರಿಹರಿಸಲು ಪಕ್ಷವು ಗಮನಹರಿಸಬೇಕು. ನೀತಿ ಆಯೋಗದ ವರದಿಯ ಪ್ರಕಾರ ಮೇಘಾಲಯದಲ್ಲಿ ಶೇ.೩೨.೬೭ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದು, ರಾಜ್ಯವು ಭಾರತದ ಐದನೇ ಅತ್ಯಂತ ಬಡ ರಾಜ್ಯವಾಗಿದೆ. ರಾಜ್ಯಕ್ಕೆ ಭ್ರಷ್ಟಾಚಾರ ಒಂದು ಶಾಪವಾಗಿದೆ. ಇದು ಮೂಲಸೌಕರ್ಯ ಅಭಿವೃದ್ಧಿಗೆ ಮಾರಕವಾಗಿದೆ. ಅಪಾರ ಖನಿಜ ಸಂಪತ್ತು ಹೊಂದಿರುವ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾಗೆ ಸಿಕ್ಕಿರುವ ವಿಸ್ತೃತ ಜನಾದೇಶದ ಹೊರತಾಗಿಯೂ ಅವರು ಮಿತ್ರ ಪಕ್ಷಗಳ ಮೇಲೆ ಅವಲಂಬಿತರಾಗಿರಬೇಕಿರುವುದು ಸರ್ಕಾರವನ್ನು ಸದಾ ತುದಿಗಾಲ ಮೇಲೆ ನಿಲ್ಲಿಸಿರುತ್ತದೆ. ಆದರೆ ಅದು ಸಾಧ್ಯವಾಗಲಿಕ್ಕೆ ಮಿತ್ರ ಪಕ್ಷಗಳು ನೀತಿ ನಿರೂಪಣೆಯ ಸಮಸ್ಯೆಗಳನ್ನು ಎತ್ತಬೇಕೆ ವಿನಹ ಅವರೂ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳಬಾರದು.
This editorial has been translated from English, which can be read here.
COMMents
SHARE