೨೦೨೩-೨೪ರ ಆಯವ್ಯಯ: ಬಲವರ್ಧನೆಯ ನಡುವೆ ಹಲವು ರಿಯಾಯಿತಿಗಳು

ಎಲ್ಲರ ಒಳಗೊಂಡ ಅಭಿವೃದ್ಧಿಯನ್ನು ಉತ್ತೇಜಿಸುವ, ಆರ್ಥಿಕ ಬಲವರ್ಧನೆಯ ಮೇಲೆ ದೃಷ್ಟಿ ಕೇಂದ್ರೀಕರಿಸುವ ಆಯವ್ಯಯವು ಬಡವರಿಗಿಂತ ಶ್ರೀಮಂತರಿಗೆ ಹೆಚ್ಚು ನೀಡುತ್ತದೆ.

February 02, 2023 03:11 pm | Updated 03:11 pm IST

ಆಯವ್ಯಯ ತಯಾರಿಕೆಯು ಸಂಕೀರ್ಣವಾದ ಕಾರ್ಯವಾಗಿದ್ದು, ಅದು ಮರೆಮಾಡುವ ಸೂಕ್ಷ್ಮ ವಿವರಗಳ ಕಾರಣವಾಗಿ ಅದರ ವಿಶ್ಲೇಷಣೆಯು ತೊಡಕಿನ ಕೆಲಸವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಐದನೆ ಮತ್ತು ಮುಂಬರುವ ಚುನಾವಣೆಗೂ ಮೊದಲು ಪ್ರಸ್ತುತ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರದ ಅಂತಿಮ ಪೂರ್ಣ ಪ್ರಮಾಣದ ಆಯವ್ಯಯವು ಮೇಲ್ನೋಟಕ್ಕೆ ಸರಿಯಾದ್ದನ್ನೆ ಮಾಡುತ್ತದೆ. ವಿಶೇಷವಾಗಿ ಯುವಕರು, ಮಹಿಳೆಯರು, ರೈತರು, ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಸಮೃದ್ಧಿಯನ್ನು ಖಾತ್ರಿಪಡಿಸುವ, ಎಲ್ಲರನ್ನೂ ಒಳಗೊಳ್ಳುವ ಅಭುವೃದ್ಧಿ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಮೂಲಸೌಕರ್ಯ ಮತ್ತು ಹೂಡಿಕೆಯ ಮೇಲೆ ಗಮನ, ಸುಸ್ಥಿರ ಅಭಿವೃದ್ಧಿಗೆ ಸಹಕಾರಿಯಾದ ನೀತಿಗಳು, ನೇರ ತೆರಿಗೆಯ ಸರಳೀಕರಣ, ಮಧ್ಯಮ, ಸಂಬಳದ ವರ್ಗಗಳು ಮತ್ತು ಪಿಂಚಣಿದಾರರಿಗೆ ಹಲವು ರಿಯಾಯಿತಿಗಳನ್ನು ಆಯವ್ಯಯ ನೀಡುತ್ತದೆ. ಮುಖ್ಯವಾಗಿ ಈ ಎಲ್ಲವನ್ನು ಅದು ಆರ್ಥಿಕ ಬಲವರ್ಧನೆಯ ಹಾದಿಯಲ್ಲಿ ಮಾಡುತ್ತದೆ. ಇದನ್ನು “ಅಮೃತ ಕಾಲದ ಮೊದಲ ಆಯವ್ಯಯ” ಎಂದು ಕರೆದ ನಿರ್ಮಲ ಸೀತಾರಾಮನ್ ಅವರು ೨೦೧೪ ರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರದ ಸಾಧನೆಗಳನ್ನು ಒತ್ತಿಹೇಳುವ ಮೂಲಕ ಚುನಾವಣಾ ಕಹಳೆಯನ್ನು ಊದಿದರು. ಭಾರತದ ಆರ್ಥಿಕತೆ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಬೆಳೆದಿರುವುದು ಮತ್ತು ಎಲ್ಲರಿಗೂ ಉತ್ತಮ ಜೀವನ ಗುಣಮಟ್ಟವನ್ನು ಖಾತ್ರಿಪಡಿಸಲು ಸರ್ಕಾರದ ಪ್ರಯತ್ನಗಳ ಫಲವಾಗಿ ದೇಶದ ಪ್ರಜೆಗಳ ತಲಾ ಆದಾಯವು ದ್ವಿಗುಣಗೊಂಡು ಇಂದು ₹೧.೯೭ ಲಕ್ಷ ಆಗಿದೆ ಎಂದರು. ಆರ್ಥಿಕತೆಯ ಔಪಚಾರಿಕತೆಯ ಹೆಚ್ಚಳ ಮತ್ತು ವಿಶೇಷವಾಗಿ ಪಾವತಿ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನಗಳ ವ್ಯಾಪಕ ಅಳವಡಿಕೆ ಸರ್ಕಾರದ ಇತರ ಗಮನಾರ್ಹ ಸಾಧನೆಗಳೆಂದು ಅವರು ಉಲ್ಲೇಖಿಸಿದರು.

“ನೂರರತ್ತ ಭಾರತ”ದ ಕಡೆ ಚಿತ್ತ ಹರಿಸಿ “ಪ್ರಬಲ ಸಾರ್ವಜನಿಕ ಹಣಕಾಸು ಮತ್ತು ದೃಢವಾದ ಹಣಕಾಸು ವಲಯದೊಂದಿಗೆ ತಂತ್ರಜ್ಞಾನ-ಚಾಲಿತ ಮತ್ತು ಜ್ಞಾನ-ಆಧಾರಿತ ಆರ್ಥಿಕತೆಯನ್ನು” ಸಾಕಾರಗೊಳಿಸುವ ಗುರಿಯನ್ನು ಆಯವ್ಯಯ ಹೊಂದಿದೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು. ಇದನ್ನು ಸಾಧಿಸಲು ಅಗತ್ಯವಾದ ಆರ್ಥಿಕ ಕಾರ್ಯಸೂಚಿಯು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಪ್ರಚೋದಿಸಬೇಕು ಎಂದು ಒತ್ತಿ ಹೇಳುತ್ತಾ, ಸಚಿವರು ಈ ಸರ್ಕಾರದ ಮೋಹರೇ ಆಗಿರುವ ಅನೇಕ ಸಂಕ್ಷಿಪ್ತ ರೂಪಗಳನ್ನು ಉಧ್ಧರಿಸುತ್ತ ಆಯವ್ಯಯದ ಪ್ರಸ್ತಾವನೆಗಳನ್ನು ಮಂಡಿಸಿದರಾದರೂ, ಅದರಲ್ಲಿ ಈ ಕುರಿತ ವಿವರಗಳು ಹೆಚ್ಚು ಇಲ್ಲ. ಉದಾಹರಣೆಗೆ, PM VIKAS ಅಥವಾ ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್ ಯೋಜನೆಯು, ಮೊದಲ ಬಾರಿಗೆ ಸಾಂಪ್ರದಾಯಿಕ ಕುಶಲಕರ್ಮಿಗಳು ಅಥವ ವಿಶ್ವಕರ್ಮರಿಗೆ ತಮ್ಮ ಉತ್ಪನ್ನಗಳ ಗುಣಮಟ್ಟ, ಪ್ರಮಾಣ ಮತ್ತು ಮಾರುಕಟ್ಟೆಯನ್ನು ವಿಸ್ತರಿಸಲು ಸಹಾಯಿಕ ಅನುದಾನವನ್ನು ನೀಡುತ್ತದೆ ಎಂದು ಅವರು ಹೇಳಿದರು. ಆದರೆ ಈ ಯೋಜನೆಗೆ ತಗಲುವ ಹಣಕಾಸಿನ ವೆಚ್ಚಗಳು ಮತ್ತು ಅನುಷ್ಠಾನದ ರೀತಿಯ ಬಗ್ಗೆ ಯಾವುದೇ ವಿವರಗಳನ್ನು ನೀಡಲಿಲ್ಲ. ಅದೇ ರೀತಿ, ಕರಾವಳಿಯುದ್ದಕ್ಕೂ ಮ್ಯಾಂಗ್ರೋವ್ ತೋಟಗಾರಿಕೆಯನ್ನು ಮಾಡುವ ಗುರಿ ಹೊಂದಿರುವ ‘Mangrove Initiative for Shoreline Habitats & Tangible Incomes’ ಅಥವ ‘MISHTI’ ಯೋಜನೆಗೆ ಅಗತ್ಯವಾದ ಹಣಕಾಸನ್ನು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ಪರಿಹಾರ ಮರು-ಅರಣ್ಯೀಕರಣ ನಿಧಿಯಿಂದ ಕೂಡಿಸುವುದು ಎಂದಷ್ಟೆ ಹೇಳಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ ಸರ್ಕಾರದ ಅವಧಿಯಲ್ಲಿ ಪರಿಚಯಿಸಲಾದ ಗ್ರಾಮೀಣ ವಲಯದ ಪ್ರಮುಖ ಉದ್ಯೋಗ ಖಾತರಿ ಯೋಜನೆಗೇ ಬರಬರುತ್ತ ಅನುದಾನ ಕಡಿತ ಆಗುತ್ತಿರುವಾಗ ಅದು ಹೇಗೆ ಪರಿಸರ ಸೂಕ್ಷ್ಮ ಮ್ಯಾಂಗ್ರೋವ್ಗಳನ್ನು ರಕ್ಷಿಸುವ ಮತ್ತು ಪುನರುಜ್ಜೀವನಗೊಳಿಸುವ ಯೋಜನೆಯನ್ನು ಮುನ್ನಡೆಸುತ್ತದೆ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಕಳೆದೆರಡು ವರ್ಷಗಳ ಸಾಂಕ್ರಾಮಿಕ, ಕಳೆದ ವರ್ಷದ ಮುಂಗಾರು ಮಳೆಯ ಅಸಮಾನ ಹಂಚಿಕೆಯಿಂದ ಆದಾಯದ ಕುಸಿತ ಮತ್ತು ಆಹಾರ ಹಣದುಬ್ಬರದ ಹೆಚ್ಚಿದ ದುಷ್ಪರಿಣಾಮದಿಂದ ಸೊರಗಿರುವ ಗ್ರಾಮೀಣ ಆರ್ಥಿಕತೆಯು ಇನ್ನೂ ಚೈತನ್ಯವನ್ನು ಮರಳಿ ಪಡೆಯದ ಈ ಹೊತ್ತಿನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ಕಡಿತ ಆಗಿದೆ.

ಒಟ್ಟಾರೆ ೨೦೨೩-೨೪ರ ಆಯವ್ಯಯದಲ್ಲಿ ಗ್ರಾಮೀಣಾಭಿವೃದ್ಧಿಯ ಆಯವ್ಯಯ ಅಂದಾಜು ₹೨.೩೮ ಲಕ್ಷ ಕೋಟಿಗಳಷ್ಟಿದ್ದು, ಅದು ಒಟ್ಟು ವೆಚ್ಚದ ಶೇ. ೫.೩ ರಷ್ಟಿದ್ದು, ಕೆಳೆದ ವರ್ಷದ ಶೇ. ೫.೨ಗೆ ಹೋಲಿಸಿದರೆ ಕೇವಲ ಶೇ. ೦.೧ ರಷ್ಟು ಮಾತ್ರ ಹೆಚ್ಚು. ಆದರೆ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ಇದು ಶೇ. ೦.೬ ರಷ್ಟು ಕಡಿಮೆ ಇದೆ. ಆಹಾರ ಸಬ್ಸಿಡಿಯನ್ನು -₹೧.೯೭ ಲಕ್ಷ ಕೋಟಿ - ಸಹ ತೀವ್ರವಾಗಿ ಕಡಿತಗೊಳಿಸಲಾಗಿದೆ. ಇದು ೨೦೨೨-೨೩ರ ಆಯವ್ಯಯ ಅಂದಾಜಿಗಿಂತ ಶೇ. ೫ರಷ್ಟು ಕಡಿಮೆಯಿದ್ದರೆ ಪರಿಷ್ಕೃತ ಅಂದಾಜಿಗಿಂತ ಶೇ. ೩೧ರಷ್ಟು ಕಡಿಮೆ ಇದೆ. ನಿಜ, ಕೋವಿಡ್-೧೯ ಸಾಂಕ್ರಾಮಿಕದ ಕಾರಣವಾಗಿ ಹಿಂದೆಂದೂ ಕಾಣದಂತಹ ಆರ್ಥಿಕ ಸಂಕೋಚನದ ನಡುವೆ ಸರ್ಕಾರದ ಆದಾಯ ಕ್ಷೀಣಿಸುತ್ತಿದ್ದಾಗಿಯೂ ಹೆಚ್ಚು ಖರ್ಚು ಮಾಡಬೇಕಾಗಿ ಬಂದ ತರುವಾಯ, ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಅತ್ತ ಆರ್ಥಿಕ ಬಲವರ್ಧನೆಯ ಹಾದಿಯಲ್ಲಿ ಉಳಿಯುವ ಇತ್ತ ಮೂಲಸೌಕರ್ಯ ಮತ್ತು ಹೂಡಿಕೆಯ ಮೇಲೆ ತನ್ನ ಸಂಪನ್ಮೂಲಗಳನ್ನು ಕೇಂದ್ರೀಕರಿಸುವ ನಿರ್ಧಾರವನ್ನು ತೆಗೆದುಕೊಂಡ ಬಳಿಕ ಅವರಿಗೆ ಹೆಚ್ಚು ಆಯ್ಕೆಗಳು ಇರಲಿಲ್ಲ. ಬಂಡವಾಳ ವೆಚ್ಚವನ್ನು₹೧೦ ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ. ಇದು ಈ ವರ್ಷದ ಆಯವ್ಯಯ ಅಂದಾಜಿಗಿಂತ ಶೇ. ೩೩ರಷ್ಟು ಹೆಚ್ಚಾಗಿದೆ. ಇದಕ್ಕೆ ಬಂಡವಾಳ ಸ್ವತ್ತುಗಳ ಸೃಷ್ಟಿಗೆ ರಾಜ್ಯಗಳಿಗೆ ಮೀಸಲಿಟ್ಟ ಸಹಾಯಿಕ ಅನುದಾನ ಸುಮಾರು ₹೩.೭ ಲಕ್ಷ ಕೋಟಿಗಳನ್ನೂ ಸೇರಿಸಿದರೆ, ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸಲು ಸರ್ಕಾರದ ಬಂಡವಾಳ ವೆಚ್ಚವನ್ನು ಬಲ ಗುಣಕವನ್ನಾಗಿ ಬಳಸುವ ಶ್ಲಾಘನೀಯ ಉದ್ದೇಶವು ಸ್ಪಷ್ಟವಾಗಿ ಗೋಚರಿಸುತ್ತದೆ. ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿನ ಮಂದಗತಿಯ ಆರ್ಥಿಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ವರ್ಷ ಜಾಗತಿಕ ಬೇಡಿಕೆಯು ಅನಿಶ್ಚಿತವಾಗಿರುವ ಕಾರಣ, ಆರ್ಥಿಕ ಸಮೀಕ್ಷೆಯು ಸೂಚಿಸಿದಂತೆ, ಭಾರತದ ದೇಶೀಯ ಮಾರುಕಟ್ಟೆಯು ಆರ್ಥಿಕತೆಯ ಪ್ರಧಾನ ನೆಲೆಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ನಿರ್ಮಲ ಸೀತಾರಾಮನ್ ಅವರು ವೈಯಕ್ತಿಕ ಆದಾಯ ತೆರಿಗೆಯಲ್ಲಿನ ಹಲವು ಬದಲಾವಣೆಗಳೊಂದಿಗೆ ಮಧ್ಯಮ ವರ್ಗವನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದಾಯ ತೆರಿಗೆ ಮತ್ತು ಆಮದು ಸುಂಕ ನಿಯಮಗಳಿಗೆ ಮಾಡಿರುವ ಬದಲಾವಣೆಗಳ ಕಾರಣ ಸರ್ಕಾರವು ₹೩೭ ಸಾವಿರ ಕೋಟಿಯಷ್ಟು ನೇರ ತೆರಿಗೆ ಆದಾಯವನ್ನು ಕಳೆದುಕೊಳ್ಳುತ್ತದೆ. ಈ ಕೆಲವು ಬದಲಾವಣೆಗಳು ಸಂಬಳದಾರರು ಮತ್ತು ಪಿಂಚಣಿದಾರರ ಕೈಯಲ್ಲಿ ಹೆಚ್ಚಿನ ಹಣವನ್ನು ಉಳಿಸುವ ಗುರಿಯನ್ನು ಹೊಂದಿವೆ. ಆಯವ್ಯಯಕಾರರು ಈ ಹಣವು ಉಳಿಕೆ ಅಥವ ಪ್ರಮುಖ ಬಳಕೆಯ ಮೇಲೆ ಹೆಚ್ಚಿದ ಖರ್ಚಿನ ರೂಪದಲ್ಲಿ ತಿರುಗಿ ಬರುತ್ತದೆ ಎಂದು ಆಶಿಸುತ್ತಾರೆ. ಆದರೆ ಆದಾಯ ತೆರಿಗೆ ಬದಲಾವಣೆಗಳ ಅತ್ಯಂತ ದೊಡ್ಡ ಫಲಾನುಭವಿಗಳು ಅತಿ ಹೆಚ್ಚಿನ ಆದಾಯದ ವಲಯದಲ್ಲಿರುವವರು. ಅವರಿಗೆ ಪರಿಣಾಮಕಾರಿ ಆದಾಯ ತೆರಿಗೆ ದರವನ್ನು ಶೇ. ೩.೭೪ ರಷ್ಟು ಕಡಿತಗೊಳಿಸಲಾಗಿದೆ. ಇದು, ಈ ಸರ್ಕಾರವು ಶ್ರೀಮಂತರ ಪರವಾಗಿದೆ ಎಂಬ ಗ್ರಹಿಕೆಯನ್ನು ಬಲಪಡಿಸುತ್ತದೆ.

This editorial has been translated from English, which can be read here.

Top News Today

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.