ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿಗಳು ನಡೆಯುತ್ತಿವೆ ಎಂಬ ವದಂತಿಗಳು ಮತ್ತು ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಡುತ್ತಿದ್ದಂತೆ, ಅಧಿಕಾರಿಗಳು ಮಧ್ಯಪ್ರವೇಶಿಸಿ ಕಾರ್ಮಿಕರಿಗೆ ಸುರಕ್ಷತೆಯ ಭರವಸೆ ನೀಡಿದ್ದಾರೆ. ವಲಸೆ ಕಾರ್ಮಿಕರ ಎರಡು ಗುಂಪುಗಳ ನಡುವಿನ ಹಿಂಸಾಚಾರದ ವೀಡಿಯೊ ತುಣುಕೊಂದನ್ನು ಸ್ಥಳೀಯರು ವಲಸೆ ಕಾರ್ಮಿಕರ ಮೇಲೆ ನಡೆಸಿದ ದಾಳಿ ಎಂದು ವ್ಯಾಖ್ಯಾನಿಸಿದ ವೀಡಿಯೊ ವೈರಲ್ ಆಗುತ್ತಿದ್ದಂತೆ ಅನೇಕ ವಲಸೆ ಕಾರ್ಮಿಕರು, ಮುಖ್ಯವಾಗಿ ಬಿಹಾರಿಗಳು, ತಮ್ಮ ತವರು ರಾಜ್ಯಕ್ಕೆ ಹೊರಡಲು ರೈಲ್ವೆ ನಿಲ್ದಾಣಗಳತ್ತ ಮುಖ ಮಾಡಿದ್ದಾರೆ. ಅದರಲ್ಲಿ ಹಲವರು ಹೋಳಿ ಹಬ್ಬಕ್ಕೆ ತವರಿಗೆ ಮರಳುವವರಿದ್ದರು. ಸಮಸ್ಯೆ ಮತ್ತಷ್ಟು ದೊಡ್ಡದಾಗುವ ಮುನ್ನವೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೊತೆ ಮಾತುಕತೆ ನಡೆಸಿದರು. ಇತ್ತ ತಮಿಳುನಾಡು ಪೊಲೀಸರು ದೈನಿಕ್ ಭಾಸ್ಕರ್ ಪತ್ರಿಕೆಯ ಸಂಪಾದಕರನ್ನೂ ಒಳಗೊಂಡಂತೆ ಇತರ ಹಲವರ ವಿರುದ್ಧ ವದಂತಿಗಳನ್ನು ಹರಡಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಬಿಹಾರದ ಜಮುಯಿ ಜಿಲ್ಲೆಯಲ್ಲಿ ದಾರಿತಪ್ಪಿಸುವ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಿಹಾರ ಪೊಲೀಸರು ಕೆಲವು ವೀಡಿಯೊಗಳು ಮತ್ತು ವರದಿಗಳನ್ನು ಸುಳ್ಳು ಎಂದು ಹೇಳಿದ್ದಾರೆ. ಬಿಹಾರ ಮತ್ತು ಜಾರ್ಖಂಡ್‌ನ ಅಧಿಕಾರಿಗಳು ವಲಸೆ ಕಾರ್ಮಿಕರು ಹೆಚ್ಚಿರುವ ಕೊಯಮತ್ತೂರು ಮತ್ತು ತಿರುಪ್ಪೂರುಗಳಿಗೆ ಭೇಟಿ ನೀಡಿದ್ದಾರೆ. ಉದ್ಯಮದ ಪ್ರತಿನಿಧಿಗಳು ಸಹ ಕಾರ್ಮಿಕರಿಗೆ ಧೈರ್ಯ ತುಂಬಲು ತಮ್ಮ ಪ್ರಯತ್ನ ಮಾಡುತ್ತಿದ್ದಾರೆ.
ದುರದೃಷ್ಟವಶಾತ್ ಈ ವಿಷಯವು ತಮಿಳುನಾಡು ಮತ್ತು ಬಿಹಾರದಲ್ಲಿ ಕೆಟ್ಟ ರಾಜಕೀಯ ಧ್ರುವೀಕರಣಕ್ಕೆ ದಾರಿ ಮಾಡಿಕೊಟ್ಟಿದೆ. ವಲಸೆ ಕಾರ್ಮಿಕರು ತಮಿಳುನಾಡಿನ ಆರ್ಥಿಕ ಚಟುವಟಿಕೆಯ ವಿವಿಧ ಕ್ಷೇತ್ರಗಳಲ್ಲಿ, ಅದರಲ್ಲೂ ವಿಶೇಷವಾಗಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ವಹಿಸುವ ದೊಡ್ಡ ಪಾತ್ರವು ಎಲ್ಲರಿಗೂ ತಿಳಿದಿರುವಂಥದ್ದೆ. ಕ್ರೆಡಾಯ್ ತಮಿಳುನಾಡು ಪ್ರಕಾರ ಶೇ. ೮೫ರಷ್ಟು ಬೃಹತ್ ಯೋಜನೆಗಳು, ಶೇ. ೭೦ರಷ್ಟು ಮಧ್ಯಮ ಪ್ರಮಾಣದ ಯೋಜನೆಗಳಲ್ಲಿ ವಲಸೆ ಕಾರ್ಮಿಕರೇ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಉತ್ಪಾದನೆ, ಜವಳಿ ಮತ್ತು ಹೋಟೆಲ್ ಉದ್ಯಮಗಳಲ್ಲೂ ಕೂಡ ಅವರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ೨೦೧೫ರ ತಮಿಳುನಾಡು ಕಾರ್ಮಿಕ ಇಲಾಖೆಯ ಸಮೀಕ್ಷೆಯು ರಾಜ್ಯದಲ್ಲಿ ಸುಮಾರು ೧೧.೫ ಲಕ್ಷ ವಲಸೆ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಿದೆ. ವಲಸೆ ಕಾರ್ಮಿಕರ ಬಗ್ಗೆ ಮಾತಾಡುವಾಗ ರಾಜಕಾರಣಿಗಳು ಎಚ್ಚರಿಕೆ ಮತ್ತು ಸಂಯಮ ಪಾಲಿಸಬೇಕು ಎಂದು ಈ ಘಟನೆ ಎತ್ತಿ ತೋರಿಸಿದೆ. ಸ್ಥಳೀಯ ಜನರ ಹಿತಾಸಕ್ತಿಗಳನ್ನು ರಕ್ಷಿಸುವ ನೆಪದಲ್ಲಿ, ಅನೇಕ ರಾಜಕಾರಣಿಗಳು ಆಗಾಗ್ಗೆ ವಲಸೆ ಕಾರ್ಮಿಕರನ್ನು ನಿಂದಿಸಿದ್ದಾರೆ ಮತ್ತು ಸ್ಥಳೀಯರು ಎದುರಿಸುತ್ತಿರುವ ನಿರುದ್ಯೋಗದಂತಹ ಸಮಸ್ಯೆಗಳಿಗೆ ಅವರನ್ನು ದೂರಿದ್ದಾರೆ. ನಿತೀಶ್ ಕುಮಾರ್ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ಸ್ಟಾಲಿನ್ ಅವರು “ರಾಜ್ಯದ ಅಭಿವೃದ್ಧಿಗೆ ಸಹಾಯ ಮಾಡುವ ಕಾರ್ಮಿಕರೆಲ್ಲರೂ ನಮ್ಮ ಕಾರ್ಮಿಕರು” ಎಂದು ಹೇಳಿದ್ದಾರೆ. ಈ ಸಂದೇಶವನ್ನು ಎಲ್ಲ ರಾಜಕೀಯ ಪಕ್ಷಗಳೂ ಅಂತರ್ಗತ ಮಾಡಿಕೊಳ್ಳಬೇಕು. ಅದೇ ಸಮಯದಲ್ಲಿ, ವಲಸೆ ಕಾರ್ಮಿಕರ ಸಮುದಾಯಕ್ಕಾಗಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿರುವ ಸರ್ಕಾರವು ‘ಒಂದು ದೇಶ ಒಂದು ಪಡಿತರ ಚೀಟಿ’ ಕಾರ್ಯಕ್ರಮದಡಿ ನೀಡುತ್ತಿರುವ ಆಹಾರಧಾನ್ಯಗಳ ಜೊತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ರಿಯಾಯಿತಿ ದರದಲ್ಲಿ ಬೇಳೆಕಾಳುಗಳು ಮತ್ತು ಅಡುಗೆ ಎಣ್ಣೆಯನ್ನು ಸಹ ಪೂರೈಸಬೇಕು. ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಒಂದು ವಿಶೇಷ ವಿಭಾಗವನ್ನು ರಚಿಸಬಹುದು. ಸರ್ಕಾರವು ವಲಸೆ ಕಾರ್ಮಿಕರ ಬಗ್ಗೆ ಹೊಸ ಸಮಗ್ರ ಅಧ್ಯಯನವನ್ನು ಕೈಗೊಂಡು ಸ್ಥಳೀಯ ಸಮುದಾಯದೊಂದಿಗೆ ಅವರನ್ನು ಮಿಳಿತಗೊಳಿಸಲು ಸಹಾಯ ಮಾಡಬೇಕು. ಅದು ಅವರು ಮನೆಯಲ್ಲಿರುವಂತ ಭಾವವನ್ನು ಮೂಡಿಸುವಂತಿರಬೇಕು.
This editorial has been translated from English, which can be read here.
COMMents
SHARE