ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವ ವಿಷಯವನ್ನು ಪರಾಮರ್ಷೆಯನ್ನು ಸಂವಿಧಾನ ಪೀಠಕ್ಕೆ ಒಪ್ಪಿಸುವ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ಶಾಸಕಾಂಗದ ವ್ಯಾಪ್ತಿಯನ್ನು ಅತಿಕ್ರಮಿಸುತ್ತಿದೆ ಎಂಬ ಆತಂಕದ ನಡುವೆಯೂ ಲಿಂಗ ಸಮಾನತೆಯೆಡೆಗೆ ಪ್ರಮುಖ ಹೆಜ್ಜೆಯಾಗಿ ನೋಡಬಹುದು. ಸಲಿಂಗಿಗಳ ನಡುವಿನ ಮದುವೆಗೆ ಕಾನೂನು ಮಾನ್ಯತೆ ನೀಡುವುದು ಸಲಿಂಗಕಾಮವು ಅಪರಾಧವಲ್ಲ ಎಂಬ ೨೦೧೮ರ ಸುಪ್ರೀಂ ಕೋರ್ಟ್ ತೀರ್ಪಿನ ಸಹಜ ಮುಂದುವರಿಕೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಆದರೆ ಸರ್ಕಾರವು ಮದುವೆ ಎನ್ನುವುದು ಗಂಡು ಹೆಣ್ಣಿನ ನಡುವೆ ನಡೆಯುವಂಥದ್ದು ಎಂಬ ತಿಳುವಳಿಕೆಯಿಂದ ದೂರ ಸರಿಯುವ ಅಗತ್ಯ ಇಲ್ಲ ಮತ್ತು ಒಂದೊಮ್ಮೆ ಅಂತಹ ಬದಲಾವಣೆ ಆಗಬೇಕಾದರೂ ಅದು ಶಾಸಕಾಂಗದಿಂದ ಆಗಬೇಕು ಎಂದು ವಾದಿಸಿದೆ. ಭಾರತದಲ್ಲಿನ ವಿವಾಹ ಕಾನೂನುಗಳ ನಿಬಂಧನೆಗಳನ್ನು, ವಿಶೇಷವಾಗಿ ವಿಶೇಷ ವಿವಾಹ ಕಾಯಿದೆ, ೧೯೫೪, ಸಲಿಂಗ ದಂಪತಿಗಳ ನಡುವಿನ ವಿವಾಹಗಳಿಗೆ ಅವಕಾಶ ನೀಡುತ್ತದೆಯೇ ಇಲ್ಲವೇ ಎಂದು ವಿಮರ್ಶಿಸಬೇಕಾ ಎಂಬುದು ಸದ್ಯ ನ್ಯಾಯಾಲಯದ ಮುಂದಿರುವ ಪ್ರಶ್ನೆಯಾಗಿದೆ. ಈ ಕಾಯ್ದೆಯು ಯಾವುದೇ ಇಬ್ಬರು ವ್ಯಕ್ತಿಗಳ ನಡುವಿನ ವಿವಾಹವನ್ನು ಊರ್ಜಿತಗೊಳಿಸುತ್ತದೆ. ಸಾಧಾರಣವಾಗಿ ಅವರ ಕೋಮುಗಳ ವೈಯಕ್ತಿಕ ಕಾನೂನುಗಳಡಿ ತಮ್ಮ ವಿವಾಹವನ್ನು ನೋಂದಾಯಿಸಲು ಸಾಧ್ಯವಾಗದವರು ಈ ಕಾಯ್ದೆಯನ್ನು ಬಳಸುತ್ತಾರೆ. ಒಂದೇ ಲಿಂಗದ ವಯಸ್ಕರ ನಡುವಿನ ಸಮ್ಮತದ ಸಂಬಂಧಗಳ ನಿರಪರಾಧೀಕರಣವು ಸಲಿಂಗಕಾಮಕ್ಕೆ ಅಂಟಿಕೊಂಡಿದ್ದ ಕಳಂಕವನ್ನು ತೊಡೆದುಹಾಕಿದೆ, ಆದರೆ ಅವರಿಗೆ ಮದುವೆಯ ಹಕ್ಕು ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿದೆ. ಮತ್ತು ಗಂಡು ಹೆಣ್ಣಿನ ನಡುವಿನ ಮದುವೆಗಳಿಗೆ ಮಾತ್ರ ಕಾನೂನು ಮಾನ್ಯತೆ ನೀಡುವ ಹಕ್ಕು ಸರ್ಕಾರಕ್ಕಿದೆ ಎಂದು ಅದು ವಾದಿಸಿದೆ. ಸಲಿಂಗ ದಂಪತಿಗಳನ್ನು ಮದುವೆಯ ವ್ಯಾಖ್ಯಾನದಿಂದ ಹೊರಗಿಡುವಲ್ಲಿ ಅವರ ವಿರುದ್ಧ ಯಾವುದೇ ತಾರತಮ್ಯ ಎಸಗಿದಂತಾಗುವುದಿಲ್ಲ ಎಂದು ಅದು ಹೇಳಿದೆ.
ಸಮಾನತೆಯ ಮಾನದಂಡದ ಆಧಾರದ ಮೇಲೆ ನೋಡುವುದಾದರೆ ಈ ವಿಷಯದ ಕೇಂದ್ರ ಪ್ರಶ್ನೆಯು ತುಂಬಾ ಸಂಕೀರ್ಣವಾದುದೇನೂ ಅಲ್ಲ. ವಿವಾಹಿತ ಭಿನ್ನಲಿಂಗೀಯ ದಂಪತಿಗಳಿಗೆ ಲಭ್ಯವಿರುವ ಯಾವುದೇ ನಾಗರಿಕ ಹಕ್ಕನ್ನು ಸಲಿಂಗಿ ಸಂಗಾತಿಗಳಿಗೆ ನಿರಾಕರಿಸಬಾರದು. ಆಸ್ತಿ ಮತ್ತು ಉತ್ತರಾಧಿಕಾರದ ವಿಷಯಗಳಲ್ಲಿ ಇದೇನೂ ದುಸ್ತರ ಅಡೆ -ತಡೆಗಳನ್ನು ನಿರ್ಮಿಸುವುದಿಲ್ಲ. ಸಲಿಂಗ ವಿವಾಹಗಳನ್ನು ಗುರುತಿಸುವುದನ್ನು ವಿರೋಧಿಸಲು ಸರ್ಕಾರ ಎತ್ತಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ಪ್ರಶ್ನೆ ದುರ್ಬಲವೂ ಅಸಮರ್ಪಕವೂ ಆಗಿದೆ. ಇದು ನಂಬಿಕೆಯನ್ನು ಅಥವಾ ಸಾಮಾಜಿಕ ಮೌಲ್ಯಗಳನ್ನು ಹಾಳುಮಾಡುತ್ತದೆ ಎಂದು ವಾದಿಸುವುದು ವ್ಯರ್ಥ. ಅನೇಕ ಜನರು ಗಂಡು ಹೆಣ್ಣಿನ ನಡುವಿನ ಮದುವೆಯನ್ನು ಪವಿತ್ರ ಒಕ್ಕೂಟವೆಂದು ಪರಿಗಣಿಸುತ್ತಾರೆಂದ ಮಾತ್ರಕ್ಕೆ ಸಲಿಂಗಿ ಜನರು ಒಂದಾಗುವುದಕ್ಕೆ ಸಮಾನ ಸ್ಥಾನಮಾನ ನಿರಾಕರಿಸಲು ಅಥವಾ ಸಾಮಾಜಿಕ ಮತ್ತು ಆರ್ಥಿಕ ಒಪ್ಪಂದವಾಗಿ ಮದುವೆಯ ಪಾತ್ರವನ್ನು ದುರ್ಬಲಗೊಳಿಸಲು ಬರುವುದಿಲ್ಲ. ಇದಕ್ಕೆ ಪರಿಹಾರವು ಸಲಿಂಗ ವಿವಾಹಗಳನ್ನು ಮಾನ್ಯ ಮಾಡುವುದಾ ಮತ್ತು ಹಾಗಿದ್ದಲ್ಲಿ ಅದು ನ್ಯಾಯಾಂಗದ ಹಸ್ತಕ್ಷೇಪದಿಂದ ಆಗಬೇಕೆ ಇಲ್ಲ ಶಾಸಕಾಂಗದ ಮೂಲಕ ಆಗಬೇಕೆ ಎಂಬುದು ಈಗಿರುವ ಪ್ರಶ್ನೆಯಾಗಿದೆ. ಎಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳ ಮೇಲೆ ಪರಿಣಾಮ ಬೀರುವ ದೂರಗಾಮಿ ಬದಲಾವಣೆಗಳನ್ನು ತರುವ ಈ ಪ್ರಶ್ನೆಯನ್ನು ಶಾಸಕಾಂಗವೇ ಕೈಗೆತ್ತಿಕೊಳ್ಳಬೇಕು ಎಂಬುದು ಒಪ್ಪತಕ್ಕ ನಿಲುವು. ಇದನ್ನು ನೀತಿಯ ವಿಷಯವಾಗಿ ನೋಡಬಯಸುವ ಮತ್ತು ನ್ಯಾಯಾಂಗಕ್ಕೆ ತನ್ನ ವ್ಯಾಪ್ತಿಯನ್ನು ಅತಿಕ್ರಮಿಸಲು ಬಿಡಲಿಚ್ಚಿಸದ ಸರ್ಕಾರವು ಲಿಂಗಭೇಧವಿಲ್ಲದೆ ಮದುವೆಯಾಗಲು, ಕುಟುಂಬ ಹೂಡಲು ಇಚ್ಚಿಸುವ ಇಬ್ಬರು ವ್ಯಕ್ತಿಗಳ ಹಕ್ಕನ್ನು ಪರಿಗಣಿಸುವ ಕೆಲಸ ಕೈಗೆತ್ತಿಕೊಳ್ಳಬೇಕು. ಜ್ವಲಂತ ಸಾಮಾಜಿಕ ಸಮಸ್ಯೆಗಳ ಬಗ್ಗೆ ಶಾಸಕಾಂಗದ ನಿಷ್ಕ್ರಿಯತೆಯು ನ್ಯಾಯಾಂಗದ ಹಸ್ತಕ್ಷೇಪವನ್ನು ಆಹ್ವಾನಿಸುತ್ತದೆ ಮತ್ತು ಮಾನ್ಯ ಮಾಡುತ್ತದೆ.
This editorial has been translated from English, which can be read here.
COMMents
SHARE