ಕಾನೂನು ಮತ್ತು ಮಾನವ ಹಕ್ಕುಗಳ ಘೋರ ಉಲ್ಲಂಘನೆಗಳು ಬಹಿರಂಗವಾಗಿಯೇ ನಡೆಯುತ್ತಿದ್ದು ವ್ಯವಸ್ಥೆ ಮಧ್ಯೆಪ್ರವೇಶಿಸುವಷ್ಟರಲ್ಲಿ ಕೆಲವೊಮ್ಮೆ ತೀರ ತಡವಾಗಿಬಿಟ್ಟಿರುತ್ತದೆ ಅನ್ನುವುದು ನಂಬಲು ಕಷ್ಟವಾದರೂ ಸತ್ಯ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಅನ್ಬು ಜ್ಯೋತಿ ಆಶ್ರಮ ಪ್ರಕರಣದಲ್ಲಿ ಆಕಸ್ಮಿಕವಾಗಿ ಪುನರ್ವಸತಿ ಕೇಂದ್ರದೊಳಗಿನ ಕರಾಳ ರಹಸ್ಯಗಳು ಬಯಲಾಗುದ್ದು ಇದಕ್ಕೆ ನಿದರ್ಶನ. ವ್ಯಕ್ತಿಯೊಬ್ಬ ಕಾಣೆಯಾದ ದೂರಿನ ಎಳೆಯ ಜಾಡು ಹಿಡಿದು ಪೊಲೀಸರು ಹೊರಟಾಗ ಈ ವಿಷಯ ಬೆಳಕಿಗೆ ಬಂದಿದೆ. ನಂತರ ಲೈಂಗಿಕ ಮತ್ತು ದೈಹಿಕ ಕಿರುಕುಳ, ಅಲ್ಲಿರುವವರನ್ನು ಹೆದರಿಸಿಟ್ಟುಕೊಳ್ಳಲು ಬಳಸಲಾದ ವಿಲಕ್ಷಣವಾದ ತಂತ್ರಗಳು ಮತ್ತು ಕಳ್ಳಸಾಗಣೆ ಸೇರಿದಂತೆ ಒಂದರ ನಂತರ ಒಂದರಂತೆ ಭಯಾನಕ ಸಂಗತಿಗಳು ಬೆಳಕಿಗೆ ಬಂದವು. ‘ಪ್ರೀತಿಯ ಜ್ಯೋತಿ’ ಎಂಬ ಹೆಸರಿನ ಪರವಾನಗಿ ಪಡೆಯದ ಈ ಪುನರ್ವಸತಿ ಕೇಂದ್ರವು ದೈಹಿಕವಾಗಿ ಮತ್ತು ಸಾಮಾಜಿಕವಾಗಿ ಬೆಂಬಲದ ಅಗತ್ಯವಿರುವ ಸಮಾಜದ ಅಂಚಿನಲ್ಲಿರುವ ವ್ಯಕ್ತಿಗಳಿಗೆ ಆಶ್ರಯ ನೀಡುತ್ತಿತ್ತು. ಇದು ನಿರ್ಗತಿಕ ಮಹಿಳೆಯರು, ಪರಿತ್ಯಕ್ತ ಹಿರಿಯ ನಾಗರಿಕರು, ಭಿಕ್ಷುಕರು, ಮದ್ಯ ವ್ಯಸನಿಗಳು ಮತ್ತು ಬುದ್ಧಿಮಾಂದ್ಯ ಅಥವಾ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆಶ್ರಯ ನೀಡಿತ್ತು. ಈಗ ರಕ್ಷಿಸಲ್ಪಟ್ಟ ನಿವಾಸಿಗಳು ಭಯ, ಕ್ರೌರ್ಯ ಮತ್ತು ವಿಕೃತತೆಯ ಮೂಲಕ ಅವರನ್ನು ಹೇಗೆ ಹಿಡಿದಿಟ್ಟುಕೊಳ್ಳಲಾಗಿತ್ತು ಎಂದು ಹೇಳುತ್ತಿದ್ದಾರೆ. ಮಾಲೀಕರು ಅವರನ್ನು ಭಯಭೀತಗೊಳಿಸಲು ಮಂಗಗಳನ್ನು ಬಳಸುತ್ತಿದ್ದರಂತೆ. ಪರವಾನಿಗೆ ಇಲ್ಲದೆ ಕೇಂದ್ರವನ್ನು ನಡೆಸುತ್ತಿದ್ದಕ್ಕಾಗಿ ನಾಲ್ವರು ಉದ್ಯೋಗಿಗಳನ್ನು ಬಂಧಿಸಲು ಕಳೆದ ವಾರ ಪೊಲೀಸರು ಮೊದಲ ಬಾರಿಗೆ ಅದರ ಆವರಣದೊಳಗೆ ಕಾಲಿಡುವಷ್ಟರಲ್ಲಿ ಈ ಕೇಂದ್ರವು ಅನೇಕ ವರ್ಷಗಳ ಕಾಲ ಅಸ್ತಿತ್ವದಲ್ಲಿತ್ತು. ಈಗ ಒಟ್ಟು ೧೪೨ ನಿವಾಸಿಗಳನ್ನು ರಕ್ಷಿಸಲಾಗಿದೆ. ತರುವಾಯ, ಕೇಂದ್ರದ ನಿವಾಸಿಗಳಾಗಿದ್ದ ಅನೇಕ ಮಹಿಳೆಯರು ಮಾಲೀಕ ಜುಬಿನ್ ಬೇಬಿ ಮತ್ತು ಅವರ ಪತ್ನಿ ಮಾರಿಯಾ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಚಿತ್ರಹಿಂಸೆಯ ಆರೋಪಗಳನ್ನು ಮಾಡಿದ್ದರಿಂದ, ಪೊಲೀಸರು ದಂಪತಿಯನ್ನು ಬಂಧಿಸಿದರು. ಪುದುಚೇರಿ ಬಳಿ ಅವರು ನಡೆಸುತ್ತಿದ್ದ ಮತ್ತೊಂದು ಘಟಕವನ್ನು ಮುಚ್ಚಲಾಯಿತು ಮತ್ತು ಅಲ್ಲಿಂದ ೨೦ಕ್ಕೂ ಹೆಚ್ಚು ನಿವಾಸಿಗಳನ್ನು ರಕ್ಷಿಸಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗವು ರಕ್ಷಿಸಲ್ಪಟ್ಟ ಮಹಿಳೆಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ ಮತ್ತು ತನಿಖೆಯನ್ನು ಸಿಬಿ-ಸಿಐಡಿಗೆ ಹಸ್ತಾಂತರಿಸಲಾಗಿದೆ.
ಕಾನೂನು ಒದಗಿಸಿದ ಸುರಕ್ಷತಾ ಕ್ರಮಗಳು ಮತ್ತು ರಾಜ್ಯವು ರೂಪಿಸಿದ ಮತ್ತು ಜಾರಿಗೊಳಿಸಿದ ನಿಯಮಗಳನ್ನು ಗಮನಿಸಿದರೆ ಅನ್ಬು ಜೋತಿ ಆಶ್ರಮ ಪ್ರಕರಣವು ಸಂಭವಿಸಲೇಬಾರದಿತ್ತು. ಕಾನೂನಿನ ಪ್ರಕಾರ ಪುನರ್ವಸತಿ ಕೇಂದ್ರಗಳನ್ನು ನೋಂದಾಯಿಸಬೇಕು ಮತ್ತು ಕಾಲಕಾಲಕ್ಕೆ ಅವುಗಳ ಮೌಲ್ಯಮಾಪನ ಮಾಡಬೇಕು. ಹಾಗಾದರೆ ಈ ಸಂಸ್ಥೆಯು ವ್ಯವಸ್ಥೆಯ ಬಿರುಕುಗಳ ನಡುವೆ ಹೇಗೆ ತಪ್ಪಿಸಿಕೊಂಡಿತು? ಅಸಹಾಯಕರಿಗೆ ಸೇವೆ ಒದಗಿಸುವ ಸಾಮಾಜಿಕ ವಲಯದಲ್ಲಿನ ಕಾನೂನು ವ್ಯವಸ್ಥೆ ಯಾವುದೇ ಲೋಪದೋಷಗಳು, ಬಿರುಕುಗಳನ್ನು ಹೊಂದಿರಬಾರದು. ಕಾಲಕಾಲಕ್ಕೆ ಪುನರ್ವಸತಿ ಕೇಂದ್ರಗಳ ಪರಿಶೀಲನೆ, ದಾಳಿ ಮತ್ತು ಮಾರ್ಗಸೂಚಿಗಳ ಹೊರತಾಗಿಯೂ ಈ ಪ್ರಕರಣ ಸಂಭವಿಸಿದೆಯೆಂದರೆ ಈ ವಲಯದಲ್ಲಿನ ದೀರ್ಘಕಾಲೀನ ನಿರ್ಲಕ್ಷ್ಯವನ್ನಷ್ಟೆ ಇದು ತೋರುತ್ತದೆ. ಸಾಮಾಜಿಕ ವಲಯದಲ್ಲಿ ಶೋಷಣೆಯು ಬೇಲಿಯೇ ಎದ್ದು ಹೊಲ ಮೆಯ್ದಂತೆ. ಆದ್ದರಿಂದ ಇದು ಒಪ್ಪಲು ಆಗದ್ದು. ಈ ವಲಯದಲ್ಲಿ ನಿಗಾ ಮತ್ತು ಮೇಲ್ವಿಚಾರಣೆ ಭ್ರಷ್ಟಾಚಾರ ಮುಕ್ತವಾಗಿರಬೇಕು. ಅಧಿಕಾರಿಗಳು ಆಶ್ರಮದಲ್ಲಿ ನಡೆದ ಪ್ರತಿ ಉಲ್ಲಂಘನೆಯನ್ನು ದಾಖಲಿಸುವುದು ಮಾತ್ರವಲ್ಲದೆ, ಪ್ರಸ್ತುತ ಪ್ರಕರಣದಲ್ಲಿ ತೆಗೆದುಕೊಳ್ಳುವ ನಿರ್ದಾಕ್ಷಿಣ್ಯ ಕ್ರಮವು ಇತರರಿಗೆ ಎಚ್ಚರಿಕೆಯ ಘಂಟೆಯಾಗುವಂತೆ ಮಾಡಬೇಕು.
This editorial has been translated from English, which can be read here.
Published - February 21, 2023 10:44 am IST