ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಆವೃತ್ತಿ ಆಡಳಿತ ಮತ್ತು ವಿರೋಧ ಪಕ್ಷಗಳ ಹಗ್ಗಜಗ್ಗಾಟದಲ್ಲಿ ಬಿಕ್ಕಟ್ಟು ಎದುರಿಸುತ್ತಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಕುಸಿಯುತ್ತಿರುವ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇತ್ತೀಚಿಗೆ ಲಂಡನ್‌ನಲ್ಲಿ ನೀಡಿದ ಹೇಳಿಕೆಗಳಿಗೆ ಕ್ಷಮೆ ಕೇಳುವಂತೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಪಟ್ಟುಹಿಡಿದಿದೆ; ಅದಾನಿ ಉದ್ದಿಮೆಗಳ ಸಮೂಹ ನಡೆಸಿದೆ ಎಂದು ಆರೋಪಿಸಲಾಗಿರುವ ಸಂಶಯಾಸ್ಪದ ಆರ್ಥಿಕ ಚಟುವಟಿಕೆಗಳು ಮತ್ತು ಅಪ್ರಾಮಾಣಿಕ ವ್ಯವಹಾರಗಳ ವಿರುದ್ಧ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಲು ಕಾಂಗ್ರೆಸ್ ಆಗ್ರಹಿಸುತ್ತಿದೆ. ಪ್ರಜಾಪ್ರಭುತ್ವಕ್ಕೆ ಒದಗಿರುವ ಸವಾಲುಗಳನ್ನು ಆಂತರಿಕವಾಗಿ ನಿವಾರಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಸ್ಪಷ್ಟವಾಗಿ ಹೇಳಿರುವ ಹಾಗೂ ಇದಕ್ಕಾಗಿ ಯಾವುದೇ ವಿದೇಶಿ ಸಂಸ್ಥೆಗಳ ಪಾತ್ರವನ್ನು ತಳ್ಳಿಹಾಕಿರುವುದನ್ನು ಲಭ್ಯವಿರುವ ಸಾಕ್ಷ್ಯಗಳು ಸೂಚಿಸುತ್ತವೆ. ಅನಿವಾಸಿ ಭಾರತೀಯರ ಸಂಖ್ಯೆ ಬೆಳೆಯುತ್ತಿದ್ದಂತೆ, ಭಾರತದೊಳಗಿನ ರಾಜಕೀಯದ ಅಲೆಗಳು ದೇಶದ ಭೌಗೋಳಿಕ ಗಡಿಗಳನ್ನು ದಾಟಿ ತಟ್ಟುವುದು ಅನಿವಾರ್ಯವಾಗಿದೆ. ಅಲ್ಲದೆ, ಭಾರತದ ಭೌಗೋಳಿಕತೆಗೆ ಸೀಮಿತವಾಗದ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಬಿಜೆಪಿ ದೀರ್ಘಕಾಲದಿಂದ ನಂಬಿಕೊಂಡುಬಂದಿದೆ. ಜಗತ್ತಿನಾದ್ಯಂತ ಪ್ರೇಕ್ಷಕರೆದುರು ಮೋದಿ ರಾಷ್ಟ್ರೀಯ ರಾಜಕೀಯವನ್ನು ಚರ್ಚಿಸಿದ್ದಾರೆ. ಪ್ರಜಾಪ್ರಭುತ್ವದ ಬಗೆಗಿನ ವಿಮರ್ಶೆಗಳನ್ನೂ ಸೇರಿದಂತೆ, ಟೀಕೆಗಳಿಗೆ ಅವಕಾಶಕೊಡದ ಪ್ರಜಾಪ್ರಭುತ್ವ ವೈರುಧ್ಯವೆನಿಸಿಕೊಳ್ಳುತ್ತದೆ. ತಮ್ಮ ಹೇಳಿಕೆಗಳ ಬಗ್ಗೆ ವಿವರಣೆ ನೀಡಲು ರಾಹುಲ್ ಗಾಂಧಿಯವರಿಗೆ ಸಂಸತ್ತಿನಲ್ಲಿ ಮಾತನಾಡಲು ಸಾಧ್ಯವಾಗಿಲ್ಲ; ಏತನ್ಮಧ್ಯೆ ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿಯವರನ್ನು ರದ್ದುಪಡಿಸಲು ಬಿಜೆಪಿ ಸದಸ್ಯರೊಬ್ಬರು ಕಾರ್ಯೋನ್ಮುಖರಾಗಿದ್ದಾರೆ. ಇದು ವಿವೇಕವಿಲ್ಲದ ನಡೆಯಾಗಿದ್ದ, ಒಂದು ಪಕ್ಷ ಕಾರ್ಯಗತವಾದರೆ, ಭಾರತದಲ್ಲಿ ಪ್ರಜಾಪ್ರಭುತ್ವದ ಕೊರತೆಯ ಬಗೆಗಿನ ಆತಂಕಗಳು ಇನ್ನಷ್ಟು ಉಲ್ಬಣಗೊಳ್ಳಲಿವೆ.
ರಾಹುಲ್ ಗಾಂಧಿಯವರು ಕ್ಷಮೆ ಕೇಳಬೇಕೆಂದು ಪಟ್ಟುಹಿಡಿದಿರುವ ಬಿಜೆಪಿ ಸಚಿವರು ಅದಾನಿ ಸಮೂಹಕ್ಕೆ ಸರ್ಕಾರ ನೀಡಿರುವ ಪೋಷಣೆಯ ಬಗೆಗಿನ ಪ್ರಶ್ನೆಗಳ ಬಗ್ಗೆ ನುಣುಚಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ವಲಯದ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅದಾನಿ ಸಮೂಹದ ನಡುವಿನ ಬೆಸುಗೆಯ ಬಗ್ಗೆ ಸರ್ಕಾರದಿಂದ ಕಾಂಗ್ರೆಸ್ ಉತ್ತರಗಳನ್ನು ನಿರೀಕ್ಷಿಸುತ್ತಿದೆ. ಸರ್ಕಾರ ಮತ್ತು ಸಾರ್ವಜನಿಕ ಹಾಗೂ ಖಾಸಗಿ ವಲಯಗಳ ವ್ಯಾಪ್ತಿಗೆ ಬರುವ ಗಂಭೀರ ಆಡಳಿತಾತ್ಮಕ ವಿಷಯಗಳ ಬಗ್ಗೆ ಬಿಜೆಪಿ ಮತ್ತು ಸರ್ಕಾರ ಮೌನ ಮುಂದುವರಿಸಿವೆ. ನಿರ್ಧಾರನ್ನು ತೆಗೆದುಕೊಳ್ಳುವುದರಲ್ಲಿ ನಿಯಮಗಳನ್ನು ಪಾಲಿಸದೆ ಇರುವುದು, ಮುಂದುವರಿದು ಉತ್ತರದಾಯಿತ್ವದ ಕೊರತೆ ಇವೆಲ್ಲವೂ ಒಳಸಂಚು ಅಲ್ಲದಿದ್ದರೂ, ಆಡಳಿತದ ವೈಫಲ್ಯವನ್ನು ಸೂಚಿಸುತ್ತವೆ. ಅದಾನಿ ವಿವಾದದಲ್ಲಿ ಎದ್ದಿರುವ ವಿಷಯಗಳ ಚರ್ಚೆಗೆ ಸರ್ಕಾರ, ರಾಜ್ಯಸಭಾ ಅಧ್ಯಕ್ಷ ಮತ್ತು ಲೋಕಸಭಾ ಸ್ಪೀಕರ್ ವಿರೋಧ ಪಕ್ಷಗಳ ಜೊತೆಗೆ ಕೆಲಸ ಮಾಡಬೇಕಿದೆ. ಈ ವಿಷಯದಲ್ಲಿ ತಮ್ಮ ಪಾರದರ್ಶಕತೆಯನ್ನು ಸಾಬೀತುಪಡಿಸಿಕೊಳ್ಳುವುದು, ಸರ್ಕಾರದ ವಿಶ್ವಾಸಾರ್ಹತೆ, ನಿಯಂತ್ರಣದ ವಾತಾವರಣ ಮತ್ತು ಖಾಸಗಿ ವಲಯವನ್ನು ಉಳಿಸಿಕೊಳ್ಳಲು ಪ್ರಮುಖವಾಗಿದೆ. ಈ ಹಿಂದೆ ಆರ್ಥಿಕ ಹಗರಣಗಳ ತನಿಖೆಗೆ ಜೆಪಿಸಿ ರಚಿಸಿರುವ ಪೂರ್ವನಿದರ್ಶನಗಳಿವೆ. ಸಂಸದೀಯ ನಿಯಮಗಳನ್ನು ಪಾಲಿಸದೆ ತಪ್ಪಿಸಿಕೊಳ್ಳುವುದಕ್ಕೆ ಬಿಜೆಪಿಯ ಬಳಿ ಸಂಖ್ಯಾಬಲವಿದ್ದರೂ, ಈ ಪ್ರಲೋಭನೆಯನ್ನು ಮೀರಿ ಆಡಳಿತದ ಕಾಳಜಿಯಿರುವ ನಿಜ ಪಕ್ಷವಾಗಿ ಅದು ಹೊರಹೊಮ್ಮಬೇಕಿದೆ. ಉತ್ತರದಾಯಿತ್ವವನ್ನು ಸರಿಪಡಿಸಲು ಸಂಸತ್ತಿಗೆ ತನ್ನದೇ ಆದ ಪಾತ್ರವಿದೆ, ಮತ್ತು ಇದರಿಂದ ಬಿಜೆಪಿ ನುಣುಚಿಕೊಳ್ಳಬಾರದು ಹಾಗೂ ಕಾರ್ಯಾಂಗದ ತಪ್ಪಿಗೆ ಶ್ರೀರಕ್ಷೆ ನೀಡಿ ಇನ್ನೂ ದೊಡ್ಡ ಮಟ್ಟದಲ್ಲಿ ದ್ರೋಹ ಬಗೆಯಬಾರದು.
This editorial has been translated from English, which can be read here.
COMMents
SHARE