ಭಾನುವಾರ ಕೇಂದ್ರದಿಂದ ನೇಮಕಗೊಂಡ ಹೊಸ ರಾಜ್ಯಪಾಲರ ಪಟ್ಟಿಯಲ್ಲಿ ಭಾರತದ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಮತ್ತು ಭಾರತೀಯ ಸೇನೆಯ ನಿವೃತ್ತ ಕಮಾಂಡರ್ ಕೂಡಾ ಇದ್ದಾರೆ. ಹಲವಾರು ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್-ಗವರ್ನರ್‌ಗಳನ್ನು ಸಹ ಬದಲಾಯಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜಾರ್ಖಂಡ್, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ರಾಜ್ಯಪಾಲರು ರಾಜಕೀಯದಲ್ಲಿ ಮೂಗು ತೋರಿಸುತ್ತಿದ್ದು ವಿವಾದಗಳ ಸರಣಿಯನ್ನೇ ಹುಟ್ಟು ಹಾಕಿದ್ದಾರೆ. ಸೇನೆ ಮತ್ತು ನ್ಯಾಯಾಂಗದ ಪಾತ್ರಗಳು, ವಿಶೇಷವಾಗಿ ಕಾರ್ಯಾಂಗದೊಂದಿಗಿನ ಅವರ ಸಂಬಂಧ, ಸದ್ಯ ಚರ್ಚೆಯ ವಿಷಯವಾಗಿದೆ. ನ್ಯಾಯಾಯಧೀಶರ ನೇಮಕಾತಿಯನ್ನು ನಿಯಂತ್ರಿಸುವ ಸರ್ಕಾರದ ಉತ್ಸುಕತೆ ಸ್ಪಷ್ಟವಾಗಿದೆ. ಕೊಲಿಜಿಯಂ ಮಾಡಿದ ಶಿಫಾರಸ್ಸುಗಳ ಪೈಕಿ ತನಗೆ ಬೇಕಾದವರನ್ನು ಕೂಡಲೇ ನೇಮಿಸಿ, ತನಗೆ ಬೇಡದವರ ನೇಮಕಾತಿಯನ್ನು ವಿಳಂಬಿಸಿ, ನ್ಯಾಯಾಂಗದ ನೇಮಕಾತಿಯಲ್ಲಿ ತನಗಿಲ್ಲದ ಅಧಿಕಾರವನ್ನು ಸರ್ಕಾರ ಚಲಾಯಿಸುತ್ತಿದೆ. ಭಾರತೀಯ ಜನತಾ ಪಕ್ಷದ ಮೇಲೆ ಈ ಹಿಂದೆಯೂ ತನ್ನ ರಾಜಕೀಯಕ್ಕೆ ಸಶಸ್ತ್ರ ಪಡೆಗಳನ್ನು ಬಳಸಿದ ಆರೋಪ ಇದೆ. ಈ ಹಿಂದೆಯೂ ನಿವೃತ್ತ ಪೊಲೀಸ್ ಮತ್ತು ಗುಪ್ತಚರ ಅಧಿಕಾರಿಗಳು ರಾಜಭವನಗಳನ್ನು ಅಲಂಕರಿಸಿದ್ದರು. ಆದರೆ ೨೦೧೪ರಲ್ಲಿ ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿಯೊಬ್ಬರನ್ನು ರಾಜ್ಯಪಾಲರಾಗಿಸಿದ್ದು ಹೊಸ ಪರಂಪರೆಯನ್ನು ಹುಟ್ಟು ಹಾಕಿತು. ಮತ್ತೊಬ್ಬ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದು ಹುಬ್ಬೇರುವಂತೆ ಮಾಡಿತ್ತು.
ರಾಜ್ಯಪಾಲರ ಹುದ್ದೆಯು ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತ ವ್ಯವಸ್ಥೆಯ ಪಳೆಯುಳಿಕೆಯಾಗಿದೆ. ಸಂವಿಧಾನ ರಚನಾಸಭೆಯಲ್ಲಿ ಪ್ರಜಾಪ್ರಭುತ್ವದಲ್ಲಿ ನಾಮನಿರ್ದೇಶಿತ ರಾಜ್ಯಪಾಲರ ನ್ಯಾಯಸಮ್ಮತತೆಯ ಕುರಿತು ಬಿಸಿಯಾದ ಚರ್ಚೆಯಾಯಿತಾದರೂ ನೂತನ ಗಣರಾಜ್ಯದಲ್ಲಿ ಅದನ್ನು ಮುಂದುವರೆಸಲಾಯಿತು. ಕೇಂದ್ರ ಮತ್ತು ರಾಜ್ಯಗಳ ನಡುವಿನ ಕ್ರಿಯಾತ್ಮಕ ಕೊಂಡಿಯಾಗಿ ರಾಜ್ಯಪಾಲರು ಕಾರ್ಯನಿರ್ವಹಿಸಬಹುದು ಎಂದು ತೀರ್ಮಾನಿಸಲಾಯಿತು. ಆದರೆ ಸಂವಿಧಾನದಕರ್ತರಿಗೆ ಈ ಹುದ್ದೆಗಳು ಅಲಂಕಾರಿಕವಾಗಿರಬೇಕು ಎಂಬ ಬಗ್ಗೆ ಸ್ಪಷ್ಟತೆ ಇತ್ತು. ಅತ್ಯಂತ ಸಂಕುಚಿತವಾಗಿ ವ್ಯಾಖ್ಯಾನಿಸಲಾದ ಸಂದರ್ಭಗಳಲ್ಲಿ ಮಾತ್ರ ಅವರಿಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿವೇಚನೆಗೆ ಅವಕಾಶ ನೀಡಲಾಗಿದೆ. ಹಲವು ದಶಕಗಳಿಂದ ಕೇಂದ್ರ-ರಾಜ್ಯ ಸಂಬಂಧಗಳು ಮತ್ತು ಒಟ್ಟಾರೆ ಪ್ರಜಾಪ್ರಭುತ್ವದಲ್ಲಿಯೇ ರಾಜ್ಯಪಾಲರ ಅತಿಕ್ರಮಣವು ಗಂಭೀರ ಪ್ರಶ್ನೆಯಾಗಿ ಉದ್ಭವಿಸಿದೆ. ೨೦೧೪ರಿಂದೀಚೆಗೆ ಕೇಂದ್ರದಲ್ಲಿ ಬಿಜೆಪಿ ಪ್ರಾಬಲ್ಯವು ಕೇಂದ್ರ-ರಾಜ್ಯ ಸಂಬಂಧಗಳಲ್ಲಿ ಹೆಚ್ಚು ಉದ್ವಿಗ್ನಗೊಳಿಸಿದೆ. ಬಿಜೆಪಿಯ ರಾಷ್ಟ್ರೀಯ ಏಕತೆಯ ದೃಷ್ಟಿ ಪ್ರಾದೇಶಿಕ ಗುಂಪುಗಳಲ್ಲಿ ಆತಂಕ ಮೂಡಿಸುತ್ತದೆ. ರಾಜ್ಯಪಾಲರ ಹುದ್ದೆಯ ಘನತೆಯು ಅದನ್ನು ಅಲಂಕರಿಸುವವರಿಂದ ಹೆಚ್ಚಬೇಕಿತ್ತು. ಆದರೆ ತಮ್ಮ ಪ್ರಸ್ತುತ ಪಾತ್ರಗಳಲ್ಲಿ ನಿಷ್ಪಕ್ಷಪಾತವಾಗಿರಬೇಕಿರುವ ಅಗತ್ಯ ಇರುವವರನ್ನು ನಿವೃತ್ತರಾದ ಕೂಡಲೇ ರಾಜ್ಯಪಾಲರಾಗಿ ನೇಮಿಸುವುದು ಅವರ ಪ್ರಸ್ತುತ ಹುದ್ದೆ ಮತ್ತು ರಾಜ್ಯಪಾಲರ ಹುದ್ದೆ ಎರಡರ ಘನತೆಯನ್ನೂ ಕಿರಿದುಗೊಳಿಸುತ್ತದೆ.
This editorial has been translated from English, which can be read here.
COMMents
SHARE