ಫೆಬ್ರುವರಿ ೨೭ ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ)-ಬಿಜೆಪಿ ಒಕ್ಕೂಟವನ್ನು ಮರಳಿ ಅಧಿಕಾರಕ್ಕೆ ತಂದ ನಾಗಾಲ್ಯಾಂಡ್‌ನಲ್ಲಿ ರಾಜ್ಯದ ಭವಿಷ್ಯವು ಕೇಂದ್ರ ಸರ್ಕಾರದೊಂದಿಗಿನ ಸಂಬಂಧದ ಜೊತೆ ಆಳವಾಗಿ ತಳಕು ಹಾಕಿಕೊಂಡಿದೆ. ದೆಹಲಿಯಲ್ಲಿ ಅಧಿಕಾರದಲ್ಲಿರುವ ಪಕ್ಷವು ರಾಜ್ಯದ ರಾಜಕೀಯದಲ್ಲಿ ಮಹತ್ವದ ಸ್ಥಾನವನ್ನು ಪಡೆಯುತ್ತದೆ. ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟವು ಕ್ರಮವಾಗಿ ೪೦ - ೨೦ ಸ್ಥಾನಗಳಲ್ಲಿ ಸ್ಪರ್ಧಿಸಿ ಒಟ್ಟು ೩೭ ಸ್ಥಾನಗಳನ್ನು ಗೆದ್ದುಕೊಂಡಿದೆ. ಉಳಿದ ಸ್ಥಾನಗಳನ್ನು ಹಲವಾರು ಪಕ್ಷಗಳು ಹಂಚಿಕೊಂಡಿವೆ. ಉದಾಹರಣೆಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು ಏಳು ಸ್ಥಾನಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ನಾಗಾಲ್ಯಾಂಡ್‌ನ ರಾಜಕೀಯದಲ್ಲಿ ಯಾರೂ ವಿರೋಧ ಪಕ್ಷದಲ್ಲಿರಲು ಬಯಸಿಲ್ಲ. ಆಯ್ಕೆಯಾದ ಎಲ್ಲ ಶಾಸಕರೂ ಈಗ ಎನ್‌ಡಿಪಿಪಿ-ಬಿಜೆಪಿ ಸರ್ಕಾರಕ್ಕೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಇದು ಆರೋಗ್ಯಕರ ರಾಜಕೀಯ ಐಕ್ಯತೆಯ ಸಂಕೇತವಲ್ಲ. ವಿಧಾನಸಭೆಯಲ್ಲಿ ಪ್ರತಿಪಕ್ಷವೇ ಇಲ್ಲದಿರುವುದು ಶಾಸಕಾಂಗ ಹೊಣೆಗಾರಿಕೆಯ ದೃಷ್ಟಿಯಲ್ಲಿ ರಾಜ್ಯವನ್ನು ಪಾತಾಳಕ್ಕೆ ತಳ್ಳಿದೆ. ಹಿಂದಿನ ವಿಧಾನಸಭೆಯಲ್ಲಿ ಪ್ರಾರಂಭವಾದ ಈ ಸಮಸ್ಯಾತ್ಮಕ ಏಕತೆಗೆ ಆಗ ಕೊಟ್ಟ ಕಾರಣ ಇಂಡೋ-ನಾಗಾ ರಾಜಕೀಯ ಸಮಸ್ಯೆಯನ್ನು ಪರಿಹರಿಸಲು ಜಂಟಿಯಾಗಿ ಕೆಲಸ ಮಾಡುವ ಅಗತ್ಯ. ಆದರೆ ವಾಸ್ತವದಲ್ಲಿ ಇದು ಅಧಿಕಾರದಲ್ಲಿ ತಮ್ಮ ಪಾಲಿಗೆ ಎಲ್ಲರೂ ನಡೆಸುತ್ತಿರುವ ಪೈಪೋಟಿಯಷ್ಟೇ.
ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರ ವಹಿಸಿಕೊಂಡಿರುವ ನೆಫಿಯು ರಿಯೊ ಅವರು ಮಂತ್ರಮಂಡಲದಲ್ಲಿ ಐದು ಸ್ಥಾನ ಪಡೆದಿರುವ ಬಿಜೆಪಿಯ ವಿಶ್ವಾಸ ಉಳಿಸಿಕೊಂಡಿದ್ದಾರೆ. ೨೦೦೩ರಲ್ಲಿ ಕಾಂಗ್ರೆಸ್‌ನಿಂದ ರಿಯೊ ಅವರು ಎನ್‌ಪಿಎಫ್‌ಗೆ ಪಕ್ಷಾಂತರ ಮಾಡಿ ಮುಖ್ಯಮಂತ್ರಿ ಆದಾಗ ಕಾಂಗ್ರೆಸ್ ನೆಲಕಚ್ಚಿತ್ತು. ಈ ಬಾರಿಯ ವಿಧಾನಸಭೆಯಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಇಬ್ಬರು ಮಹಿಳಾ ಸದಸ್ಯರು ಆಯ್ಕೆ ಆಗಿದ್ದು, ಅದರಲ್ಲಿ ಒಬ್ಬರು ಮಂತ್ರಿಯೂ ಆಗಿದ್ದಾರೆ. ನಾಗಾಲ್ಯಾಂಡ್‌ನ ಪಿತೃಪ್ರಧಾನ ಗುಣವನ್ನು ಪರಿಗಣಿಸಿದರೆ ಇದು ಗಮನಾರ್ಹವಾಗಿದೆ. ೨೦೨೨ರಲ್ಲಿ ಎನ್‌ಪಿಎಫ್‌ನಿಂದ ಎನ್‌ಡಿಪಿಪಿಗೆ ತೆರಳಿದ ಮಾಜಿ ಮುಖ್ಯಮಂತ್ರಿ ಟಿ.ಆರ್. ಝೆಲಿಯಾಂಗ್ ಅವರು ಈ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾರೆ. ಈ ಬಾರಿ ಮಂತ್ರಿಮಂಡಲದಲ್ಲಿ ಪ್ರಾಂತೀಯ ಮತ್ತು ಪ್ರಮುಖ ನಾಗಾ ಸಮುದಾಯಗಳ ಪ್ರಾತಿನಿಧ್ಯವು ಹೆಚ್ಚು ಸಮತೋಲಿತವಾಗಿದೆ. ರಾಜ್ಯವು ಗಂಭೀರ ಅಭಿವೃದ್ಧಿ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಆಡಳಿತದ ಕೊರತೆಯು ತೀವ್ರವಾಗಿದೆ. ಇದಕ್ಕೆ ಬಹುವರ್ಷಗಳ ಕಾಲ ರಾಜ್ಯವು ಉಗ್ರವಾದ ಮತ್ತು ಸುಲಿಗೆಯಿಂದ ನರಳಿದ್ದು ಕಾರಣ ಎಂದು ಹೇಳಲಾಗಿದೆಯಾದರೂ, ಇದು ಅರ್ಧಸತ್ಯ ಮಾತ್ರ. ಸತ್ಯಕ್ಕೆ ಹತ್ತಿರವಾದ ಸಂಗತಿಯೆಂದರೆ ರಾಜಕೀಯ ಪಕ್ಷಗಳು ಸಹ ಈ ಬಿಕ್ಕಟ್ಟಿನಲ್ಲಿಯೇ ತಮ್ಮ ಹಿತಾಸಕ್ತಿಯನ್ನು ಕಂಡುಕೊಂಡಿವೆ. ಪೂರ್ವ ನಾಗಾಲ್ಯಾಂಡ್‌ನ ಆರು ಜಿಲ್ಲೆಗಳು ಪ್ರತ್ಯೇಕ ರಾಜ್ಯವಾಗಬೇಕೆಂಬ ಬೇಡಿಕೆಯು ಹೊಸ ಸಮಸ್ಯೆಯನ್ನು ಹುಟ್ಟುಹಾಕಿದೆ. ಈ ಜಿಲ್ಲೆಗಳ ಒಟ್ಟು ೨೦ ಸ್ಥಾನಗಳಲ್ಲಿ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟವು ೯ ಸ್ಥಾನಗಳನ್ನು ಗೆದ್ದಿದೆ. ಪ್ರತಿಪಕ್ಷವಿಲ್ಲದ ವಿಧಾನಸಭೆಯಲ್ಲಿ ಸರ್ಕಾರವನ್ನು ಆಡಳಿತದ ವೈಫಲ್ಯಗಳಿಗೆ ಹೊಣೆಗಾರನನ್ನಾಗಿ ಮಾಡುವುದು ದುಸ್ತರ. ಒಟ್ಟಾರೆ ನಾಗಾಲ್ಯಾಂಡ್‌ನಲ್ಲಿ ಜನರ ನಂಬಿಕೆಗೆ ರಾಜಕಾರಣಿಗಳು ದ್ರೋಹವೆಸಗಿದ್ದಾರೆ.
This editorial has been translated from English, which can be read here.
COMMents
SHARE