ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣದುಬ್ಬರ ನಿಯಂತ್ರಣದಲ್ಲಿರುವ ಲಕ್ಷಣಗಳನ್ನು ತೋರುತ್ತಿದ್ದು ಅನಿಯಂತ್ರಿತ ಏರಿಕೆಯ ದಿನಗಳು ಮುಗಿದಿವೆ ಎಂದು ಹೇಳಿದ ಐದು ದಿನಗಳ ನಂತರ, ಸೋಮವಾರದ ಜನವರಿಯ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಅಂದಾಜು ಬೆಲೆಗಳಲ್ಲಿ ಕಳವಳಕಾರಿ ಏರಿಕೆಯನ್ನು ತೋರಿದೆ. ೨೦೨೨ರ ಕೊನೆಯ ತ್ರೈಮಾಸಿಕದಲ್ಲಿ ಸೆಪ್ಟೆಂಬರ್‌ನ ಐದು ತಿಂಗಳ ಗರಿಷ್ಠವಾದ ಶೇ. ೭.೪ ರಿಂದ ಕಡಿಮೆಯಾಗುತ್ತಾ ಬಂದಿದ್ದ ಚಿಲ್ಲರೆ ಹಣದುಬ್ಬರವು, ಕಳೆದ ತಿಂಗಳು ೮೦ ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಾಗಿ ಶೇ. ೬.೫ಕ್ಕೆ ಏರಿದೆ. ಈ ಏರಿಕೆಯನ್ನು ೧೭೫ ಬೇಸಿಸ್-ಪಾಯಿಂಟ್‌ಗಳ ಜಿಗಿತ ಕಂಡಿರುವ ಆಹಾರದ ಬೆಲೆಗಳು ಚಲಾಯಿಸುತ್ತಿದೆ. ಗ್ರಾಹಕ ಆಹಾರದ ಬೆಲೆ ಸೂಚ್ಯಂಕದಿಂದ ಅಳೆದರೆ, ಹಣದುಬ್ಬರವು ಡಿಸೆಂಬರ್‌ನ ಶೇ. ೪.೧೯ ರಿಂದ ಈ ತಿಂಗಳು ಶೇ. ೫.೯೪ಕ್ಕೆ ಏರಿದೆ. ಜನವರಿ ೨೦೨೨ ರಲ್ಲಿ ಹಣದುಬ್ಬರವು ಶೇ. ೬ರಷ್ಟಿತ್ತು. ಇದು ವರ್ಷದಿಂದ ವರ್ಷಕ್ಕೆ ಹಣದುಬ್ಬರದ ಏರಿಕೆಯು ಬೇಸ್-ಎಫ್ಫೆಕ್ಟ್ ಇಂದ ಅಲ್ಲದೆ ಸಂಪೂರ್ಣವಾಗಿ ಬೆಲೆಗಳ ಮೇಲ್ಮುಖ ಚಲನೆಯಿಂದಲೇ ಆಗಿದೆ ಎಂದು ತೋರಿಸುತ್ತದೆ. ಇದು ಆತಂಕ ಮೂಡಿಸುತ್ತದೆ. ಸಿಪಿಐ ಸೂಚ್ಯಂಕದ ಲೆಕ್ಕಕ್ಕೆ ಪರಿಗಣಿಸಲಾಗುವ ೧೨ ಆಹಾರ ಸಾಮಗ್ರಿಗಳ ಪೈಕಿ ತರಕಾರಿಯ ಬೆಲೆಗಳು ಮಾತ್ರ ವರ್ಷದಿಂದ ವರ್ಷಕ್ಕೆ ಶೇ. ೧೧.೭ರಷ್ಟು ಹಣದುಬ್ಬರವಿಳಿತವನ್ನು ದಾಖಲಿಸಿದೆ. ಇದು ಚಳಿಗಾಲದ ಪೂರೈಕೆಯು ಬೇಡಿಕೆಯನ್ನು ಮೀರಿದ ಪರಿಣಾಮ. ಅಕ್ಕಿ ಮತ್ತು ಗೋಧಿಯನ್ನು ಒಳಗೊಂಡಿರುವ, ಸಿಪಿಐ ಅನ್ನು ಗುಣಿಸಲು ಅತಿ ಹೆಚ್ಚು ಶೇ. ೧೦ರಷ್ಟು ತೂಕ ಹೊಂದಿರುವ, ಧಾನ್ಯಗಳ ಉಪ-ಗುಂಪು ಬೆಲೆಗಳಲ್ಲಿ ಶೇ. ೧೬.೧ ರಷ್ಟು ಜಿಗಿತವನ್ನು ದಾಖಲಿಸಿದೆ. ಇನ್ನು ಎರಡನೇ ಅತಿ ಹೆಚ್ಚು ತೂಕ ಹೊಂದಿರುವ ಹಾಲು ಮತ್ತು ಡೈರಿ ಉತ್ಪನ್ನಗಳು ಶೇ. ೮.೭೯ರಷ್ಟು ಜಿಗಿತ ಕಂಡವು. ನೀತಿ ನಿರೂಪಕರು ನಿರ್ದಿಷ್ಟವಾಗಿ ಧಾನ್ಯಗಳ ಬೆಲೆಯಲ್ಲಿ ತಿಂಗಳಿಂದ ತಿಂಗಳಿಗೆ ಶೇ. ೨.೬ರಷ್ಟು ಏರಿಕೆ ಆಗಿರುವ ಬಗ್ಗೆ ಚಿಂತಿತರಾಗಿದ್ದಾರೆ. ಏಕೆಂದರೆ ತಮ್ಮ ಆದಾಯದ ಹೆಚ್ಚಿನ ಪಾಲನ್ನು ಆಹಾರಕ್ಕಾಗಿ ಖರ್ಚು ಮಾಡುವ ಗ್ರಾಮೀಣ ಕುಟುಂಬಗಳ ಮೇಲೆ ಇದು ತೀವ್ರ ಪರಿಣಾಮ ಬೀರುತ್ತದೆ. ಗ್ರಾಮೀಣ ಬಳಕೆಯ ಬುಟ್ಟಿಯಲ್ಲಿ ಶೇ. ೧೨.೪ರಷ್ಟು ತೂಕ ಇರುವ ಧಾನ್ಯಗಳ ಬೆಲೆಗಳು ಜನವರಿಯ ಒಟ್ಟಾರೆ ಗ್ರಾಮೀಣ ಹಣದುಬ್ಬರವನ್ನು ಇನ್ನೂ ವೇಗವಾಗಿ ಶೇ. ೬.೮೫ಕ್ಕೆ ಏರಿಸಿದೆ.
ಬೆಲೆಯ ಪ್ರವೃತ್ತಿಗಳಲ್ಲಿನ ಆಶ್ಚರ್ಯಕರ ಏರಿಕೆಯು ಆರ್ಥಿಕತೆಯಲ್ಲಿ ಹಣದುಬ್ಬರದ ನಿರೀಕ್ಷೆಗಳು ಯಾವುದೇ ಮಿತಿಯಲ್ಲಿ ಇಲ್ಲ ಮತ್ತು ರಿಸರ್ವ್ ಬ್ಯಾಂಕ್ ಮತ್ತು ಹಣಕಾಸು ವ್ಯವಸ್ಥೆ ಈ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂಬುದನ್ನು ತೋರಿಸುತ್ತದೆ. ಕಳೆದ ವಾರ ಶಕ್ತಿಕಾಂತ ದಾಸ್ ಅವರು ಕೇವಲ ೨೫ ಬೇಸಿಸ್ ಪಾಯಿಂಟ್ಗಳಿಂದ ಬಡ್ಡಿ ದರವನ್ನು ಏರಿಸಿದ್ದು ಮಾತ್ರವಲ್ಲದೆ ಸುಸ್ಥಿರ ಹಣದುಬ್ಬರವಿಳಿತಕ್ಕೆ ಪೂರಕವಾಗುವ ನೀತಿ ಜಾರಿಗೆ ತರಲು ರಿಸರ್ವ್ ಬ್ಯಾಂಕ್ ಬದ್ಧ ಎಂದು ಘೋಷಿಸಿದರು. ಆಹಾರ ಮತ್ತು ಇಂಧನ ಬೆಲೆಗಳ ಪ್ರಭಾವವನ್ನು ತೊಡೆದು ಹಾಕುವ ಮೂಲ ಹಣದುಬ್ಬರವೂ ಶೇ. ೬ಕ್ಕಿಂತ ಹೆಚ್ಚೇ ಇದೆ ಮತ್ತು ಅದು ಡಿಸೆಂಬರ್‌ನ ಶೇ. ೬.೨೨ ಇಂದ ಕಳೆದ ತಿಂಗಳು ಶೇ. ೬.೨೩ಗೆ ಏರಿದೆ. ಇದರೊಂದಿಗೆ ನೀತಿ ನಿರೂಪಕರು, ಸಾಲ ವೆಚ್ಚವನ್ನು ಹೆಚ್ಚಿಸುವ ಮತ್ತು ಬೇಡಿಕೆಯನ್ನು ತಗ್ಗಿಸುವ ಮೂಲಕ ನಿಯಂತ್ರಿಸಬಹುದಾದ ಘಟಕಗಳನ್ನು ಗುರಿಯಾಗಿಸಿ ಹಣದುಬ್ಬರದ ಮೇಲೆ ಹಿಡಿತ ಸಾಧಿಸುವ ಸವಾಲು ಎದುರಿಸುತ್ತಿದ್ದಾರೆ. ಆರೋಗ್ಯ ಮತ್ತು ವೈಯಕ್ತಿಕ ಆರೈಕೆ ಸೇರಿದಂತೆ ಹಲವಾರು ಪ್ರಮುಖ ಸೇವೆಗಳ ಹಣದುಬ್ಬರವು ಆರ್ಬಿಐನ ಗರಿಷ್ಠ ಮಿತಿ ಶೇ. ೬ಕ್ಕಿಂತ ಹೆಚ್ಚು ಇದ್ದು, ಬೆಲೆಗಳು ಮತ್ತಷ್ಟು ಏರುತ್ತಲೇ ಇವೆ. ಹಾಗಾಗಿ ಕೇಂದ್ರ ಮತ್ತು ರಾಜ್ಯಗಳು ಹಣದುಬ್ಬರದ ಹೊರೆಯನ್ನು ತಗ್ಗಿಸಲು ಜಿಎಸ್ಟಿ ದರಗಳ ಸರಳೀಕರಣಗೊಳಿಸುವುದೂ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳಬೇಕು. ಈ ವರ್ಷ ಸಾಗರೋತ್ತರ ಬೇಡಿಕೆಯು ದುರ್ಬಲವಾಗಿರುವುದರಿಂದ, ಅನಿಯಂತ್ರಿತ ಹಣದುಬ್ಬರವು ದೇಶೀಯ ಬಳಕೆಗೆ ಮತ್ತು ಆ ಮೂಲಕ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಹೊಡೆತ ನೀಡುತ್ತದೆ.
This editorial has been translated from English, which can be read here.
Published - February 15, 2023 10:07 am IST